Sunday, September 8, 2024

ಹಾಳು ಕೊಂಪೆಯೋ… ಗಾಂಧಿ ಪಾರ್ಕೋ… | ನಿರ್ವಹಣೆಗೆ ಕಾಯುತ್ತಿದೆ ಕುಂದಾಪುರದ ಗಾಂಧಿ ಪಾರ್ಕ್‌

-ಶ್ರೀರಾಜ್‌ ವಕ್ವಾಡಿ

ಕುಂದಾಪುರದ ಹೃದಯ ಭಾಗದಲ್ಲಿರುವ ಶಾಸ್ತ್ರಿ ಸರ್ಕಲ್ ಕೇವಲ 25೦ ಮೀಟರ್‌ ದೂರದಲ್ಲಿರುವ ಗಾಂಧಿ ಪಾರ್ಕ್‌ ಗೆ ಸುದೀರ್ಘ ಇತಿಹಾಸವಿದೆ. ಸ್ವಾತಂತ್ರ್ಯಪೂರ್ವದ ನೆನಪಿದೆ. ಈಗ ಗಾಂಧಿ ಪಾರ್ಕ್‌ನ ಪಕ್ಕದಲ್ಲೇ ಇರುವ ಗಾಂಧಿ ಮೈದಾನವೆಲ್ಲಾ ಹಿಂದೆ ಒಂದೇ ಆಗಿತ್ತು. 1934ರ ಫೆ. 24-25ರಂದು ಅಂದಿನ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಕುಂದಾಪುರಕ್ಕೆ ಭೇಟಿ ನೀಡಿದ್ದರು.  ಗಾಂಧೀಜಿ ಇಲ್ಲಿನ ನರಿಬ್ಯಾಣ (ನರಿಬೇಣ- ಈಗಿನ ಗಾಂಧಿ ಪಾರ್ಕ್‌ ಹಾಗೂ ಗಾಂಧಿ ಮೈದಾನವನ್ನು ಒಳಗೊಂಡ ಪ್ರದೇಶ) ಮೈದಾನದಲ್ಲಿ ಸಾವಿರಾರು ಜನರು ಸೇರಿದ್ದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ್ದರು. ೧೯೫೬ ಮಾರ್ಚ್‌ ತಿಂಗಳಲ್ಲಿ ರೂಪರಂಗ ಕುಂದಾಪುರದವರು ಗಾಂಧೀಜಿ ಅವರು ಇಲ್ಲಿ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸವಿನೆನಪಿಗಾಗಿ ಹಾಗೂ ಈ ಭಾಗದ ಜನರಿಗೆ ಒಂದು ಸಾಂಸ್ಕೃತಿಕ ವೇದಿಕೆ ಇರಬೇಕು ಎಂಬ ದೃಷ್ಟಿಯಲ್ಲಿ ಒಂದು ಶಾಶ್ವತ ವೇದಿಕೆಯನ್ನು ಕೂಡ ನಿರ್ಮಿಸುತ್ತಾರೆ.

ಗಾಂಧೀಜಿ ಬಂದಿದ್ದ ಕಾರಣಕ್ಕಾಗಿಯೇ ಈ ಪಾರ್ಕ್‌ಗೆ ಗಾಂಧಿ ಪಾರ್ಕ್‌ ಎಂದು ಹೆಸರಿಡಲಾಗಿದೆ. ಪುಣಾಣಿ ಮಕ್ಕಳಿಗೆ ಆಟವಾಡುವುದಕ್ಕೆ, ಹಿರಿಯ ನಾಗರಿಕರಿಗೆ, ಪ್ರೇಮಿಗಳಿಗೆ ವಿಹರಿಸುವುದಕ್ಕೆ ಈ ಪಾರ್ಕ್‌ ಹೇಳಿ ಮಾಡಿಸಿದಂತಿದೆ. ಆದರೇ ಈಗ ಅಸಮರ್ಥ ನಿರ್ವಹಣೆಯಿಂದ ಕುಂದಾಪುರದ ಗಾಂಧಿ ಪಾರ್ಕ್‌ ತನ್ನ ನಿಜವಾದ ಸೌಂದರ್ಯನ್ನು ಕಳೆದುಕೊಂಡಿದೆ.

ಕುಂದಾಪುರದ ಪುರಸಭೆಯ ವ್ಯಾಪ್ತಿಗೆ ಒಳಪಡುವ ಈ ಗಾಂಧಿ ಪಾರ್ಕ್‌ನಲ್ಲಿ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆ. ಮಾತ್ರವಲ್ಲದೇ, ಕಳೆದ ಕೆಲವು ವರ್ಷಗಳಿಂದ ಈ ಗಾಂಧಿ ಪಾರ್ಕ್ ಪುರಸಭೆಯ ಕಸದ ವಾಹನಗಳನ್ನು ನಿಲ್ಲಿಸುವ ತಂಗುದಾಣವೇ ಆಗಿಬಿಟ್ಟಿದೆ. ನಗರವನ್ನು ಸ್ವಚ್ಛ ಕಾರ್ಯಕ್ಕೆ ಬಳಸುವ ಕಸದ ವಾಹನಗಳನ್ನು ಕೆಲವು ವರ್ಷಗಳಿಂದ ಇಲ್ಲಿ ನಿಲ್ಲಿಸಲಾಗುತ್ತಿದೆ. ಕೆಲವು ವಾಹನಗಳನ್ನು ಇಲ್ಲಿಯೇ ತೊಳೆಯಲಾಗುತ್ತದೆ. ಪಾರ್ಕ್‌ಗೆ ಬಂದವರಿಗೆ ಈ ಕಸದ ವಾಹನಗಳ ದರ್ಶನ ನಿಶ್ಚಿತ. ಅಲ್ಲಲ್ಲಿ ಹಾಳು ಕೊಂಪೆಯಂತೆ ಕಸದ ರಾಶಿಗಳು, ಮಣ್ಣಿನ ರಾಶಿಗಳಿಂದ ಅವ್ಯವಸ್ಥೆಯಿಂದ ಕೂಡಿದೆ. ಮಳೆ ನೀರು ಅಲ್ಲಲ್ಲಿ ನಿಂತಿವೆ. ಮಕ್ಕಳ ಆಟಿಕೆಗಳು ತುಕ್ಕು ಹಿಡಿದು ಹಾಳಾಗಿವೆ.

ಸ್ಥಳೀಯ ಲಯನ್ಸ್‌ ಕ್ಲಬ್‌ ಸಂಸ್ಥೆ ಮುತುವರ್ಜಿ ವಹಿಸಿಕೊಂಡು ಕೆಲವು ವರ್ಷಗಳ ಹಿಂದೆ ಗಾಂಧಿ ಪಾರ್ಕ್‌ ನಲ್ಲಿ ಒಂದಿಷ್ಟು ನವೀಕರಣಗೊಳಿಸಿತ್ತು. ಗಾರ್ಡನ್‌ ಅಭಿವೃದ್ಧಿಗೊಳಿಸಿತ್ತು. ಚೆಂದದ ಹೂಗಿಡಗಳನ್ನು ನೆಟ್ಟಿತ್ತು. ಆದರೇ ಈಗ ಹುಲ್ಲುಗಿಡಗಳು, ಕಳೆಗಿಡಗಳಿಂದ ಕೆಲವೆಡೆ ತುಂಬಿ ಕಳಾಹೀನವಾಗಿವೆ. ನಿರ್ವಹಿಸಬೇಕಾದ ಪುರಸಭೆ ಕೈಕಟ್ಟಿ ಕುಳಿತಿದೆ.

ಪಾರ್ಕ್‌ ನಿರ್ವಹಣೆಗೆ ಸಿಬ್ಬಂದಿಯೇ ಇಲ್ಲ : ನಗರ ಪ್ರದೇಶಗಳಲ್ಲಿ ಇಂತಹ ಪಾರ್ಕ್‌ ಇರುವುದು ತೀರಾ ವಿರಳ.  ಪುರಸಭೆ ಈ ಗಾಂಧಿ ಪಾರ್ಕ್‌ ಬಗ್ಗೆ ಕಾಳಜಿ ವಹಿಸಿದ್ದಲ್ಲಿ ಕುಂದಾಪುರಕ್ಕೆ ಒಂದು ಸಚ್ಛ ಸುಂದರ ಉದ್ಯಾನವನವಾಗುವುದರಲ್ಲಿ ಅನುಮಾನವಿಲ್ಲ. ಆದರೇ, ಪಾರ್ಕ್‌ ನಿರ್ವಹಣೆಗೆ ಒಬ್ಬ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಕ್ಕೆ ಆಗದಿರುವಷ್ಟು ಪುರಸಭೆ ಬಡಸ್ತಿಕೆಯಲ್ಲಿದೆ ಎನ್ನುವುದು ದುರಂತವೇ ಸರಿ. ಪಾರ್ಕ್‌ ನಲ್ಲಿರುವ ಒಂದು ಶೌಚಾಲಯದ ಬಾಗಿಲು ತೆಗೆದಿದ್ದನ್ನು ಬಹುಶಃ ಯಾರೂ ಕಂಡಿರಲಿಕ್ಕಿಲ್ಲ. ಶೌಚಾಲಯವಂತೂ ಅಶೌಚದಿಂದ ಕೂಡಿದೆ. ಇನ್ನು, ʼಪಾರ್ಕ್‌ ನ ಸ್ವಚ್ಛತಾ ಕಾರ್ಯಗಳನ್ನು ನಮ್ಮ ಪೌರ ಕಾರ್ಮಿಕರಿಂದಲೇ ಮಾಡಿಸಲಾಗುತ್ತಿದೆʼ ಎಂದು ಸ್ವತಃ ಪುರಸಭೆಯ ಆರೋಗ್ಯ ನಿರೀಕ್ಷರಾದ ರಾಘವೇಂದ್ರ ಎಂ ನಾಯ್ಕ್‌ ಹಾಗೂ ಇಂಜಿನೀಯರ್‌ ಗುರುಪ್ರಸಾದ್‌ ಶೆಟ್ಟಿ ಅವರೇ ಹೇಳುತ್ತಾರೆ. ʼವಾಹನಗಳ ನಿಲುಗಡೆಗೆ ಪುರಸಭೆಯಲ್ಲಿ ಬೇರೆ ಜಾಗವೇ ಇಲ್ಲ. ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಬಗ್ಗೆ ಬೋರ್ಡ್‌ ಮೀಟಿಂಗ್‌ಗಳಲ್ಲಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇರುವುದರಲ್ಲೇ ಸಾಧ್ಯವಾದಷ್ಟು ನಿರ್ವಹಣೆ ಮಾಡುತ್ತಿದ್ದೇವೆʼ ಎಂದು ಅವರು ಅಸಹಾಯಕತೆಯನ್ನು ವ್ಯಕ್ತಪಡಿಸಿಕೊಳ್ಳುತ್ತಾರೆ.

ಬಾಲಭವನದ ಮುಂದೆ ಕಸದ ವಾಹನಗಳ ನಿಲುಗಡೆ :

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಭವನ ಕಟ್ಟಡವೂ ಇದೇ ಗಾಂಧಿ ಪಾರ್ಕ್‌ ನಲ್ಲಿದೆ. ಜಾಗ ಪುರಸಭೆಯದ್ದು, ಕಟ್ಟಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಳಪಟ್ಟಿರುವುದು. ಅಲ್ಲೇ ಪಕ್ಕದಲ್ಲಿದ್ದ ಒಂದು ಖಾಸಗಿ ಕಟ್ಟದಲ್ಲಿದ್ದ ಅಂಗನವಾಡಿಯನ್ನು ಕೆಲ ವರ್ಷಗಳ ಹಿಂದೆ ಪುರಸಭೆಯ ಸ್ಥಳೀಯ ಸದಸ್ಯರ ಕಾಳಜಿಯಿಂದ ಕೆಲ ವರ್ಷಗಳ ಹಿಂದೆ ಈ ಬಾಲಭವನಕ್ಕೆ ಸ್ಥಳಾಂತರಗೊಳಿಸಲಾಗಿದೆ. ಇಲ್ಲಿ ಸದ್ಯ ಸುಮಾರು ಇಪ್ಪತ್ತು ಮಕ್ಕಳಿದ್ದಾರೆ. ಕಸ ವಿಲೇವಾರಿ ಮಾಡಿ ಬಂದ ವಾಹನಗಳನ್ನು ಈ ಬಾಲಭವನದ ಮುಂದೆಯೇ, ಕಿಟಕಿಗಳ ಪಕ್ಕದಲ್ಲೇ ನಿಲುಗಡೆ ಮಾಡಲಾಗುತ್ತಿದೆ. ಕಸದ ವಾಹನಗಳನ್ನು ತೊಳೆದು ಸ್ವಚ್ಛಗೊಳಿಸಿ ತಂದಿಟ್ಟರೂ ಕಸದ ವಾಸನೆ ಸಂಪೂರ್ಣವಾಗಿ ಹೋಗುವುದಿಲ್ಲ. ಈ ವಾಸನೆಯಿಂದ ಬಾಲಭವನದಲ್ಲಿರುವ ಮಕ್ಕಳು ಮುಗು ಮುಚ್ಚಿಕೊಂಡು ಕಲಿಯುವ ಸ್ಥಿತಿ ಇದೆ.

ಕಸದ ವಾಹನಗಳನ್ನು ನಿಲ್ಲಿಸಲು ಬೇರೆ ಜಾಗವೇ ಪುರಸಭೆಯಲ್ಲಿ ಲಭ್ಯವಿಲ್ಲ. ಹಾಗಾಗಿ ಗಾಂಧಿ ಪಾರ್ಕ್‌ನ ಒಳಗಡೆಯೇ ನಿಲ್ಲಿಸಲಾಗುತ್ತಿದೆ ಎಂದು ಸಬೂಬು ನೀಡುವ ಪುರಸಭೆ ಕನಿಷ್ಠ ಪ್ರಾಥಮಿಕ ಹಂತದಲ್ಲಿ ಮಾಡಬೇಕಾದ ಸ್ವಚ್ಛತೆಯನ್ನು ಮಾಡಿಲ್ಲ ಎಂದು ಬಾಲಭವನದಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರು ಹಾಗೂ ಸ್ಥಳೀಯರು ಆರೋಪ ಮಾಡುತ್ತಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಬಗ್ಗೆ ಪುರಸಭೆಗೆ ಪತ್ರವನ್ನು ನೀಡಲಾಗಿದೆಯಾದರೂ ಪುರಸಭೆ ಇದಕ್ಕೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸ್ಥಳ ಸೂಚಿಸುವುದಕ್ಕೆ ಪುರಸಭೆಗೆ ಮನವಿ ಮಾಡಿಕೊಂಡಾಗ ನಿವೇಶನ ಇಲ್ಲ ಎಂಬ ಪ್ರತಿಕ್ರಿಯೆ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ. ಸದ್ಯಕ್ಕಂತೂ ಸ್ಥಳ ಒಬ್ಬರದ್ದು, ಕಟ್ಟಡ ಇನ್ನೊಬ್ಬರದ್ದಾಗಿದ್ದು ಇದೊಂದು ಗೊಂದಲ ಸೃಷ್ಟಿಯಾಗಿದ್ದು, ಇದರ ನಿರ್ವಹಣೆಯೂ ಗೋಜಲಾಗಿದೆ.

ಗೆದ್ದಲು ಪಾಲಾಗುತ್ತಿರುವ ರೇಡಿಯೋ ಗೋಪುರ :

ಇಲ್ಲೇ ಇರುವ ಸುಮಾರು ಆರು ಏಳು ದಶಕಗಳ ಇತಿಹಾಸವಿರುವ ರೇಡಿಯೋ ಗೋಪುರವೂ ಕೂಡ ಗೆದ್ದಲು ಹಿಡಿದಿದೆ. ಇದು ಕೂಡ ನಿರ್ವಹಣೆಗಾಗಿಯೇ ಕಾಯುತ್ತಿದೆ. ಮಂಗಳೂರು ಆಕಾಶವಾಣಿಯ ಮೂಲಕ ಪ್ರಸಾರವಾಗುತ್ತಿದ್ದ ಬಹುತೇಕ ಎಲ್ಲಾ ಕಾರ್ಯಕ್ರಮಗಳನ್ನು ಇಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಸಾರ ಮಾಡಲಾಗುತ್ತಿತ್ತು. ಇದೊಂದು ಐತಿಹಾಸಿಕ ಗೋಪುರ. ಸೈರನ್‌ ಗೋಪುರವೂ ಅಲ್ಲೇ ಪಕ್ಕದಲ್ಲೇ ಇದೆ. ಖಾಸಗಿಯವರು ನಿರ್ಮಿಸಿಕೊಟ್ಟ ಈ ರೇಡಿಯೋ ಗೋಪುರ ಮತ್ತು ಸೈರನ್‌ ಸ್ಥಂಬ ಈಗ ಶಿಥಿಲಾವಸ್ಥೆಯಲ್ಲಿವೆ. ಈ ಬಗ್ಗೆ ಯಾವುದೇ ಹಳೆಯ ಕಡತಗಳಲ್ಲಿ ದಾಖಲೆಯಿಲ್ಲ ಎಂಬ ಬೇಜಾವಬ್ದಾರಿಯ ಉತ್ತರ ನೀಡುತ್ತಾರೆ ಪುರಸಭೆಯ ಅಧಿಕಾರಿಗಳು. ಈ ಗೋಪುರದ ಎದುರಲ್ಲೇ ಇರುವ ವೇದಿಕೆ ನಿರ್ಮಾಣವಾಗಿದ್ದು ೧೯೫೬ರಲ್ಲಿ ಅದನ್ನು ಅಂದಾಜಿಸಿ ನೋಡುವುದಾದರೇ ಈ ರೇಡಿಯೋ ಗೋಪುರವನ್ನು ಅದೇ ಸಂದರ್ಭದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಯಬಹುದಾಗಿದೆ. ಈಗ ಈ ರೇಡಿಯೋ ಗೋಪುರ ಪೌರ ಕಾರ್ಮಿಕರ ಸ್ವಚ್ಛತಾ ಸಲಕರಣೆಗಳನ್ನು ಇಡುವ ಕೊಠಡಿಯಾಗಿದೆ ಎನ್ನುವುದು ದುಃಖಕರ ಸಂಗತಿ. ಇಂತಹ ಐತಿಹಾಸಿಕ ಸ್ಮಾರಕಗಳನ್ನು ಉಳಿಸಿಕೊಳ್ಳುವ ಪ್ರಾಥಮಿಕ ಪ್ರಯತ್ನವನ್ನೂ ಪುರಸಭೆ ಮಾಡಿಲ್ಲ ಎನ್ನುವುದು ವಿಷಾದನೀಯ.

ಗಾಂಧಿಪಾರ್ಕ್‌ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೋರ್ಡ್‌ ಮೀಟಿಂಗ್‌ ಗಳಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಪುರಸಭೆ ವಾಹನ ನಿಲುಗಡೆಗೆ ಪ್ರತ್ಯೇಕ ಜಾಗಕ್ಕೆ ಕಂದಾಯ ಇಲಾಖೆಗೆ ಈಗಾಗಲೇ ಮನವಿ ಮಾಡಿದ್ದೇವೆ. ಪುರಸಭೆಯಲ್ಲಿ ಜಾಗವೇ ಇಲ್ಲ. ಕಂದಾಯ ಇಲಾಖೆ ನೆಹರೂ ಮೈದಾನವನ್ನು ಪುರಸಭೆಗೆ ಹಸ್ತಾಂತರ ಮಾಡಿದರೇ ಪುರಸಭೆಯ ವಾಹನಗಳ ತಂಗುದಾಣಕ್ಕೆ ವ್ಯವಸ್ಥೆ ಮಾಡಿಕೊಳ್ಳಬಹುದು. ಶೀಘ್ರವಾಗಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.

-ಮಂಜುನಾಥ
ಪುರಸಭೆ ಮುಖ್ಯಾಧಿಕಾರಿಗಳು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!