Wednesday, September 11, 2024

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇವೆ 44,228 ಹುದ್ದೆಗಳು : ಇಲ್ಲಿದೆ ಸಂಪೂರ್ಣ ಮಾಹಿತಿ

ಜನಪ್ರತಿನಿಧಿ (ಬೆಂಗಳೂರು) : ಕೇಂದ್ರ ಸರ್ಕಾರದ ಇಲಾಖೆಗಳ ಅಡಿಯಲ್ಲಿ ಕೆಲಸ ಮಾಡಬೇಕು ಎಂದು ಕನಸು ಕಾಣುತ್ತಿರುವವರಿಗೆ ಈಗ ಸುವರ್ಣ ಅವಕಾಶವೊಂದು ಕಾಯುತ್ತಿದೆ.

ಹೌದು ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆಯಲ್ಲಿ 44,228 ‘ಗ್ರಾಮೀಣ ಅಂಚೆ ಸೇವಕ’ ಹಾಗೂ ‘ಬ್ರಾಂಚ್ ಪೋಸ್ಟ್ ಮಾಸ್ಟರ್’ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಕೇಂದ್ರ ಸರ್ಕಾರ ಸಂವಹನ ಸಚಿವಾಲಯದ ಅಡಿಯಲ್ಲಿ ಬರುವ ಅಂಚೆ ಇಲಾಖೆಯಲ್ಲಿ ದುಡಿದು ಕೇಂದ್ರ ಸರ್ಕಾರದ ಸಂಬಳ ಪಡೆಯಬೇಕೆಂದು ಬಯಸುವವರು ಈ ಖಾಲಿ ಇರುವ ಹುದ್ದೆಗಳತ್ತ ಗಮನಹರಿಸಬಹುದಾಗಿದೆ.

ಗ್ರಾಮೀಣ ಅಂಚೆ ಸೇವಕ (ಜಿಡಿಎಸ್), ಬ್ರಾಂಚ್ ಪೋಸ್ಟ್ ಮಾಸ್ಟ‌ರ್ (ಬಿಪಿಎಂ) ಮತ್ತು ಅಸಿಸ್ಟಂಟ್‌ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತರು ಆನ್‌ಲೈನ್‌ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇದೇ ಆಗಸ್ಟ್ 5 ಕೊನೆಯ ದಿನವಾಗಿದೆ.

23 ಅಂಚೆ ವೃತ್ತಗಳ ವ್ಯಾಪ್ತಿಯಲ್ಲಿ ಈ ನೇಮಕಾತಿ ನಡೆಯುತ್ತಿದ್ದು ಕರ್ನಾಟಕ ಅಂಚೆ ವೃತ್ತಕ್ಕೆ 1,940 ಹುದ್ದೆಗಳಿವೆ. ಅಂಚೆ ಇಲಾಖೆಯಲ್ಲಿ ಕರ್ನಾಟಕ ವೃತ್ತದ ವ್ಯಾಪ್ತಿಯಲ್ಲಿ 37 ವಿಭಾಗಗಳಿವೆ.

ಕನಿಷ್ಠ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನವಾದ ವಿದ್ಯಾರ್ಹತೆ ಹೊಂದಿರುವ ಅರ್ಹ ಪುರುಷ, ಮಹಿಳೆ ಹಾಗೂ ತೃತಿಯ ಲಿಂಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ಕೇವಲ ರೂ. 100 ಇದ್ದು, ಎಸ್‌ಸಿ/ಎಸ್‌ಟಿ, ಮಹಿಳಾ, ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿಯೂ ಇದೆ.

ನೇಮಕಗೊಳ್ಳುವವರು ಖಾಯಂ ನೌಕರರಾಗಿರುವುದಿಲ್ಲ :
ಆಸಕ್ತರು ವೃತ್ತವಾರು ರಾಜ್ಯಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಯಾವುದಾದರೂ ಒಂದು ವಿಭಾಗಕ್ಕೆ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ ಕರ್ನಾಟಕ ವೃತ್ತದ ಅಭ್ಯರ್ಥಿಗಳು ಯಾವುದಾದರು ಒಂದು ತಮ್ಮಿಷ್ಟದ ವಿಭಾಗವನ್ನು ಆಯ್ಕೆ ಮಾಡಿಕೊಂಡು ಹುದ್ದೆಗಳನ್ನು ಗಮನಿಸಿ ಅರ್ಜಿ ಸಲ್ಲಿಸಬೇಕು. ವಿಭಾಗದಲ್ಲಿ ಬಹುತೇಕ ಅಂಚೆ ಸೇವಕ ಹುದ್ದೆಗಳೇ ಇವೆ. ಕೆಲವು ಕಡೆಗೆ ಮಾತ್ರ ಬಿಪಿಎಂ, ಎಬಿಪಿಎಂ ಹುದ್ದೆಗಳು ಖಾಲಿ ಇವೆ.

ಇನ್ನು, ಅಂಚೆ ಸೇವಕ ಹಾಗೂ ಬಿಪಿಎಂ, ಎಬಿಪಿಎಂ ಹುದ್ದೆಗಳಿಗೆ ನೇಮಕವಾಗುವವರು ಇಲಾಖೆಯ ಖಾಯಂ ನೌಕರರಾಗಿರುವುದಿಲ್ಲ. ಮಾಸಿಕ ನಿಗದಿತ ಸಂಭಾವನೆ ಮಾತ್ರ ಇರುತ್ತದೆ.

ಆಸಕ್ತರು ದಿನಕ್ಕೆ ನಾಲೈದು ಗಂಟೆ ಕೆಲಸ ಮಾಡಲು ಸಿದ್ದರಾಗಿರಬೇಕು. ಕೆಲಸ ಮಾಡಲು ಇಚ್ಚಿಸುವ ವಿಭಾಗ ಹಾಗೂ ಆಯಾ ಗ್ರಾಮ, ಪ್ರದೇಶಗಳ ಬಗ್ಗೆ ಉತ್ತಮ ಜ್ಞಾನ, ಸಂಪರ್ಕ, ಸ್ಥಳೀಯ ಭಾಷೆ ಬಲ್ಲವರಾಗಿರಬೇಕು. ಸೈಕಲ್ ಅಥವಾ ದ್ವಿಚಕ್ರ ವಾಹನ ಚಲಾಯಿಸಲು ತಿಳಿದಿರಬೇಕು. ಬೇಸಿಕ್ ಕಂಪ್ಯೂಟರ್ ಜ್ಞಾನವನ್ನು ಪಡೆದಿರುವವರು ಅರ್ಜಿಯನ್ನು ಆರಾಮವಾಗಿ ಸಲ್ಲಿಸಬಹುದಾಗಿದೆ.

ಬಿಪಿಎಂ ಹುದ್ದೆಗಳಿಗೆ ನೇಮಕ ಆಗುವವರಿಗೆ ಮಾಸಿಕ 12,000ರಿಂದ 29,380 ರೂ. ಹಾಗೂ ಅಂಚೆ ಸೇವಕ/ಎಬಿಪಿಎಂ ಹುದ್ದೆಗಳಿಗೆ ನೇಮಕ ಆಗುವವರಿಗೆ 10,000 ರಿಂದ 24,470 ರೂ. ಸಂಭಾವನೆ ಇರಲಿದೆ.

ನೇಮಕಾತಿ ಪ್ರಕ್ರಿಯೆ ಹೇಗಿರಲಿದೆ ?
ವೆಬ್‌ಸೈಟ್‌ ವಿಳಾಸ https://indiapostgdsonline.gov.in/ ಕ್ಕೆ ಭೇಟಿ ನೀಡಿ, ಮೊದಲು ಮೊಬೈಲ್ ಸಂಖ್ಯೆ ನೋಂದಣಿ ಮಾಡಿಸುವ ಮೂಲಕ ಆಸಕ್ತ ಅಭ್ಯರ್ಥಿಗಳು ಯಶಸ್ವಿಯಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸಿ 10 ನೇ ತರಗತಿಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳನ್ನು ಆಧರಿಸಿ ಮೆರಿಟ್ ಹಾಗೂ ಮೀಸಲಾತಿ ಅನುಸಾರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಬಂದ ಅಭ್ಯರ್ಥಿಗಳು ಮೂಲ ದಾಖಲಾತಿ ಹಾಗೂ ಕನಿಷ್ಠ ವೈದ್ಯಕೀಯ ಪರೀಕ್ಷೆ ಪೂರೈಸಿದ ಬಳಿಕ ವಿಭಾಗವಾರು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಇದು ನೇರ ನೇಮಕಾತಿಯಾಗಿದ್ದು ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.

ವಯೋಮಿತಿ :
ಈ ಮೂರೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಪೂರ್ಣಗೊಳಿಸಿರಬೇಕು. ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಒಬಿಸಿ ಅಭ್ಯರ್ಥಿಗಳಿ 3 ವರ್ಷ ಹಾಗೂ ಅಂಗವಿಕಲರಿಗೆ 13 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇದೆ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!