Saturday, October 12, 2024

ನೀಟ್‌-ಯುಜಿ ಪೇಪರ್‌ ಸೋರಿಕೆ ಪ್ರಕರಣ : ಪಾಟ್ನಾದ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಸಿಬಿಐ

ಜನಪ್ರತಿನಿಧಿ (ಪಾಟ್ನಾ) : ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೂವರು ವೈದ್ಯಕೀಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದೆ.

ಅವರ ಮೊಬೈಲ್ ಫೋನ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಕೂಡ ತನಿಖಾ ಸಂಸ್ಥೆ ವಶಪಡಿಸಿಕೊಂಡಿದೆ. 2021ರ ಬ್ಯಾಚ್‌ಗೆ ಸೇರಿದ ವಿದ್ಯಾರ್ಥಿಗಳನ್ನು ನಿನ್ನೆ(ಬುಧವಾರ) ತಡರಾತ್ರಿ ಅವರ ಹಾಸ್ಟೆಲ್‌ನಿಂದ ಕರೆತಂದ ಬಳಿಕ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ತನಿಖೆಯಲ್ಲಿರುವ ವಿದ್ಯಾರ್ಥಿಗಳ ಕೊಠಡಿಗಳನ್ನು ಸೀಲ್ ಮಾಡಲಾಗಿದ್ದು, ಇನ್‌ಸ್ಟಿಟ್ಯೂಟ್‌ನಲ್ಲಿರುವ ಇತರ ವಿದ್ಯಾರ್ಥಿಗಳು ಸಂಪೂರ್ಣ ಆಘಾತಕ್ಕೊಳಗಾಗಿದ್ದಾರೆ.

ಪಾಟ್ನಾಹಾಗೂ ಹಜಾರಿಬಾಗ್ ಮೂಲದ ಇಬ್ಬರು ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್ ಅಲಿಯಾಸ್ ಆದಿತ್ಯ ಹಾಗೂ ರಾಜು ಸಿಂಗ್ ಅವರ ವಿಚಾರಣೆಯ ನಂತರ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಗ್ಯಾಂಗ್‌ನೊಂದಿಗೆ ಏಮ್ಸ್-ಪಾಟ್ನಾ ವಿದ್ಯಾರ್ಥಿಗಳು ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

ಜಾರ್ಖಂಡ್‌ನ ಹಜಾರಿಬಾಗ್‌ನಿಂದ ಪಡೆದ ಪ್ರಶ್ನೆಗಳನ್ನು ಪರಿಹರಿಸಲು ನಳಂದದ ಸಂಜೀವ್ ಕುಮಾರ್ ಸಿಂಗ್ ಅಲಿಯಾಸ್ ಲುಟನ್ ಮುಖಿಯಾ ನೇತೃತ್ವದ ‘ಸಾಲ್ವರ್ಸ್ ಗ್ಯಾಂಗ್’ ಸದಸ್ಯರಿಗೆ ಏಮ್ಸ್ ವಿದ್ಯಾರ್ಥಿಗಳು ಸಹಾಯ ಮಾಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಜಾರ್ಖಂಡ್‌ನ ಬೊಕಾರೊ ನಿವಾಸಿ ಪಂಕಜ್ ಕುಮಾರ್ ಅವರನ್ನು ಮೇ 5 ರಂದು ನಡೆದ ಪರೀಕ್ಷೆಗೆ ಮುನ್ನ ಹಜಾರಿಬಾಗ್‌ನಲ್ಲಿ ಎನ್‌ಟಿಎ ಟ್ರಂಕ್‌ನಿಂದ ಪ್ರಶ್ನೆ ಪತ್ರಿಕೆ ಕದ್ದ ಆರೋಪದ ಮೇಲೆ ಪಾಟ್ನಾದಲ್ಲಿ ಬಂಧಿಸಲಾಗಿದೆ. ಪಂಕಜ್ ಅಲಿಯಾಸ್ ಆದಿತ್ಯ ಅವರು ಜಮ್ಶೆಡ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ 2017-ಬ್ಯಾಚ್ ಸಿವಿಲ್ ಎಂಜಿನಿಯರ್ ಆಗಿದ್ದಾರೆ.

ಎರಡನೇ ಆರೋಪಿಯನ್ನು ರಾಜು ಸಿಂಗ್ ಎಂದು ಗುರುತಿಸಲಾಗಿದ್ದು, ಕಟ್ಕಮ್‌ಡಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಹಜಾರಿಬಾಗ್‌ನ ರಾಮನಗರ ಪ್ರದೇಶದಲ್ಲಿರುವ ಅತಿಥಿ ಗೃಹದಿಂದ ಬಂಧಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪಂಕಜ್‌ಗೆ ಸಹಾಯ ಮಾಡಿದ ಆರೋಪ ಅವರ ಮೇಲಿದೆ. ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ರಾಜು ಸಿಂಗ್ ಬಂಧಿತ ನಾಲ್ಕನೇ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಈ ಹಿಂದೆ 14 ಜನರನ್ನು ಬಂಧಿಸಿತ್ತು.

ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಲ್ಲಿಯವರೆಗೆ ಏಳು ರಾಜ್ಯಗಳ 42 ಜನರನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!