Saturday, October 12, 2024

ಆಮೆಗತಿಯಲ್ಲಿ ಸಾಗುತ್ತಿರುವ ಪೇಜಾವರ ವಿಶ್ವೇಶ ತೀರ್ಥರ ಸ್ಮೃತಿವನ ಕಾಮಗಾರಿ

ನೀಲಾವರದಲ್ಲಿ ವಿಶ್ವೇಶ ತೀರ್ಥರ ಗೌರವಾರ್ಥ ಸ್ಮೃತಿವನ | ನಿರ್ಮಿತಿ ಕೇಂದ್ರದ ಬೇಜವಾಬ್ದಾರಿ ಧೋರಣೆ

 -ಶ್ರೀರಾಜ್‌ ವಕ್ವಾಡಿ

ಉಡುಪಿಯ ಅಷ್ಠಮಠಗಳಲ್ಲಿ ಒಂದಾದ ಪೇಜಾವರ ಮಠದ ವಿಶ್ವಸಂತ ವಿಶ್ವೇಶ ತೀರ್ಥ ಸ್ವಾಮಿಗಳು ಕೀರ್ತಿಶೇಷರಾಗಿ ಈಗ ನಾಲ್ಕು ವರ್ಷಗಳು ಪೂರ್ಣಗೊಂಡು ಐದನೇ ವರ್ಷ.

ವಿಧಾನ ಮಂಡಲದ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಹಾಗೂ ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸ್ಮರಣಾರ್ಥ ಸ್ಮೃತಿವನ ನಿರ್ಮಾಣಕ್ಕೆ  ತಲಾ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಆ ಬಳಿಕ ಮಾಜಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮೃತಿವನ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆಯೂ ಮಾಡಿದ್ದರು. ತುಮಕೂರಿನಲ್ಲಿ ಶಿವಕುಮಾರ ಸ್ವಾಮಿಗಳ ಗೌರವಾರ್ಥ ಸ್ಮೃತಿವನ ನಿರ್ಮಾಣವಾಗಿ ನಿಂತಿದೆ. ಆದರೇ, ಉಡುಪಿಯ ಪೇಜಾವರ ಮಠದ ಕೀರ್ತಿಶೇಷ ವಿಶ್ವೇಶ ತೀರ್ಥ ಶ್ರೀಪಾದರ ಸ್ಮೃತಿವನದ ನಿರ್ಮಾಣ ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗುತ್ತಿದೆ ಎನ್ನುವುದು ವಿಷಾದನೀಯ.


(ಅರ್ಧಂಬರ್ಧ ಕಾಮಗಾರಿಯಾಗಿರುವ ವಿಶ್ವೇಶತೀರ್ಥ ಸ್ವಾಮಿಗಳ ಗೌರವಾರ್ಥ ಸ್ಮೃತಿವನ)


(ಸ್ಮೃತಿವನ ನಿರ್ಮಾಣಗೊಳ್ಳುತ್ತಿರುವ ಜಾಗದಲ್ಲಿ ಬೆಳೆದುಕೊಂಡಿರುವ ಗಿಡಗಂಟಿ ಪೊದೆಗಳು)

ಉಡುಪಿ ಜಿಲ್ಲೆಯ ನೀಲಾವರ ಗ್ರಾಮದಲ್ಲಿ(ಗೋಶಾಲೆ ಸಮೀಪ) ಸ್ಮೃತಿವನ ನಿರ್ಮಿಸಲಾಗುತ್ತಿದೆ. ಪರಿಸರದ ಬಗ್ಗೆ ವಿಶೇಷವಾದ ಕಾಳಜಿ ಹೊಂದಿದ್ದ ವಿಶ್ವೇಶತೀರ್ಥರ ಹೆಸರಲ್ಲಿ ಈ ಸ್ಮೃತಿವನ ನಿರ್ಮಾಣವಾಗುತ್ತಿರುವುದು ಪರಿಸರ ಪ್ರಿಯರಲ್ಲಿ ಹರ್ಷ ಮೂಡಿತ್ತು. ಅರಣ್ಯ ಇಲಾಖೆಯ ಮೂಲಕ ಈ ಸ್ಮೃತಿವನ ನಿರ್ಮಾಣ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಉಡುಪಿಯ ಸರ್ಕಾರಿ ಗುತ್ತಿಗೆ ಸಂಸ್ಥೆ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿಯನ್ನು ಒಪ್ಪಿಸಿ ಎರಡು ವರ್ಷಗಳಾಗಿವೆ. ಮೇ ೮, ೨೦೨೨ರಂದು ಸ್ಮೃತಿವನ ನಿರ್ಮಾಣ ಕಾರ್ಯಕ್ಕೆ ಅಂದಿನ ಅರಣ್ಯ ಇಲಾಖೆಯ ಸಚಿವ ಉಮೇಶ್‌ ಕತ್ತಿ ಶಂಕು ಸ್ಥಾಪನೆ ಮಾಡಿದ್ದರು. ಸ್ಮೃತಿವನದ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡ ನಿರ್ಮಿತಿ ಕೇಂದ್ರ, ಕೇವಲ ಎರಡು ಕೋಟಿ ವೆಚ್ಚದ ಕಾಮಗಾರಿಯನ್ನೂ ಇನ್ನೂ ಪೂರ್ಣಗೊಳಿಸದೆ ತನ್ನ ಬೇಜವಾಬ್ದಾರಿ ಧೋರಣೆಯನ್ನು ತೋರಿಸಿದೆ.

ಬ್ರಹ್ಮಾವರ ತಾಲೂಕಿನ ನೀಲಾವರದ ಗೋಶಾಲೆಯ ಪಕ್ಕದಲ್ಲೇ ನಿರ್ಮಾಣವಾಗುತ್ತಿರುವ ಪೇಜಾವರ ಶ್ರೀಗಳ ಸ್ಮೃತಿವನದಲ್ಲಿ ಅಂದಾಜು ೮೫ ಲಕ್ಷ ವೆಚ್ಚದಲ್ಲಿ ಮುಖ್ಯ ಕಟ್ಟಡ, ಆರ್ಟ್‌ ಗ್ಯಾಲರಿ, ಧ್ಯಾನ ಮಂದಿರ, ೧೩ ಲಕ್ಷ ವೆಚ್ಚದಲ್ಲಿ ಕೆಫೆಟೇರಿಯಾ, ೧೦ ಲಕ್ಷ ವೆಚ್ಚದಲ್ಲಿ ಪಾಥ್‌ ವೇ ಹಾಗೂ ಲ್ಯಾಂಡ್‌ ಸ್ಕೇಪಿಂಗ್, ೧೦ ಲಕ್ಷದಲ್ಲಿ ಪೇಜಾವರ ಶ್ರೀಗಳ ಕಂಚಿನ ಪ್ರತಿಮೆ ಸೇರಿ ಉಳಿದ ಕೆಲವು ಶಿಲ್ಪಕಲೆಗಳನ್ನು ನಿರ್ಮಾಣ ಮಾಡಿಕೊಡಬೇಕೆಂದು ಅರಣ್ಯ ಇಲಾಖೆ ನಿರ್ಮತಿ ಕೇಂದ್ರ ಉಡುಪಿಯೊಂದಿಗೆ  ಗುತ್ತಿಗೆಯ ಒಪ್ಪಂದ ಮಾಡಿಕೊಂಡಿದೆ. ಅಂದಾಜು ಒಂದು ಕೋಟಿ ಹದಿನೆಂಟು ಲಕ್ಷದಲ್ಲಿ ಸ್ಮೃತಿವನದ  ಈ ಮೇಲೆ ಉಲ್ಲೇಖಿಸಿದ ಕಾರ್ಯಗಳು ಹಾಗೂ ಉಳಿದ ಮೊತ್ತದಲ್ಲಿ ರಾಶಿವನ ಹಾಗೂ ಔಷಧೀಯ ಸಸ್ಯಗಳ ಉದ್ಯಾನವನದ ರಚನೆ, ಮಕ್ಕಳು ಆಡಲು ಅನುಕೂಲವಾಗುವ ಉಪಕರಣಗಳ ಅಳವಡಿಕೆ, ಕುಡಿಯುವ ನೀರಿನ ಸೌಲಭ್ಯ, ವಿರಳ ಪ್ರದೇಶಗಳಲ್ಲಿ ವಿವಿಧ ಜಾತಿಗಳ ಗಿಡಗಳನ್ನು ನೆಡುವುದನ್ನು ಒಳಗೊಂಡು ಇತರೆ ಕಾರ್ಯಗಳಿಗೆ ಮೀಸಲಿಡಲಾಗಿದೆ ಎಂದು ಉಪ ಅರಣ್ಯಾಧಿಕಾರಗಳ ಕಚೇರಿ ಮಾಹಿತಿ ನೀಡಿದೆ. ಸರ್ಕಾರದಿಂದ ಬಂದ ಅನುದಾನವನ್ನು ನಿರ್ಮಿತಿ ಕೇಂದ್ರಕ್ಕೆ ಸಂಪೂರ್ಣವಾಗಿ ಹಸ್ತಾಂತರಿಸಿಯೂ ವರ್ಷ ಕಳೆದಿದೆ. ಆದರೇ, ಸ್ಮೃತಿವನದ ಕಾರ್ಯ ಅರ್ಧಂಬರ್ದವಾಗಿ ಮಳೆಯಲ್ಲಿ ನೆನೆಯುತ್ತಿದೆ ಎನ್ನುವುದು ದುರಂತವೇ ಸರಿ.

ನಿರ್ಮಿತಿ ಕೇಂದ್ರದ ಬೇಜವಾಬ್ದಾರಿ ಧೋರಣೆ :
ಉಡುಪಿಯ ಸರ್ಕಾರಿ ಸ್ವಾಮ್ಯದ ನಿರ್ಮಿತಿ ಕೇಂದ್ರ ಉಡುಪಿ ಜಿಲ್ಲೆಯ ಬಗ್ಗೆ ಯಾರಲ್ಲೂ ಒಳ್ಳೆಯ ಅಭಿಪ್ರಾಯವಿಲ್ಲ. ಅತ್ಯಂತ ಭ್ರಷ್ಟ ಸರ್ಕಾರಿ ಗುತ್ತಿಗೆ ಸಂಸ್ಥೆ ಎಂಬ ಅಪಖ್ಯಾತಿಯೂ ನಿರ್ಮಿತಿ ಕೇಂದ್ರ ಉಡುಪಿಗೆ ಇದೆ. ಇದೇ ನಿರ್ಮಿತಿ ಕೇಂದ್ರ ಪೇಜಾವರ ಶ್ರೀಗಳ ಸ್ಮೃತಿವನವನ್ನೂ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದೆ. ಅನುದಾನ ಸಂಪೂರ್ಣ ಬಿಡುಗಡೆಗೊಂಡಿದ್ದರೂ, ನಿರ್ಮಾಣ ಕಾರ್ಯ ಸಂಪೂರ್ಣಗೊಳಿಸದಿರುವುದಕ್ಕೆ ಏನು ಸಮಸ್ಯೆ ಎನ್ನುವ ಪ್ರಶ್ನೆ ಮುಂದಿದೆ. ಸ್ಥಳವಕಾಶದ ತಾಂತ್ರಿಕ ಕಾರಣಗಳ ನೆಪ ಹೇಳುವ ನಿರ್ಮಿತಿ ಕೇಂದ್ರ ಉಡುಪಿ ಜಿಲ್ಲೆಯ ಯೋಜನಾಧಿಕಾರಿ ಅರುಣ್‌ ಕುಮಾರ್‌ ಮೇಲಿರುವ ಆರೋಪಗಳ ಪಟ್ಟಿ ದೊಡ್ದದಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಸ್ಮೃತಿವನ ನಿರ್ಮಾಣಕ್ಕೆ ಬೇಕಾಗಿ ಅರಣ್ಯ ಇಲಾಖೆ ಸ್ಥಳಾವಕಾಶವನ್ನು ನೀಡಿದೆ. ಅದಕ್ಕೆ ಪೇಜಾವರ ಮಠದ ಬೆಂಬಲವೂ ಇದೆ. ಪೇಜಾವರ ಶ್ರೀಗಳ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಆರ್ಡರ್‌ ಕೊಟ್ಟಿರುವುದೇ ಕಳೆದ ಫೆಬ್ರವರಿಯಲ್ಲಿ ಎಂಬ ಮಾಹಿತಿಯೂ ಇದೆ. ಪ್ರತಿಮೆ ಮಾಡುತ್ತಿರುವ ಶಿಲ್ಪಿ ಜನಾರ್ಧನ ಹಾವಂಜೆ ಅವರಿಗೆ ಇನ್ನೂ ಪೂರ್ಣ ಹಣ ಪಾವತಿ ಮಾಡಿಲ್ಲ. ನೀಲಾವರದ ಗೋಶಾಲೆಯ ಪಕ್ಕದಲ್ಲೇ ಇರುವ ಸುಮಾರು ಎರಡು ಎಕರೆ ಭೂಮಿ ಈ ನಿರ್ಮಿತಿ ಕೇಂದ್ರದ ಬೇಜಾವಾಬ್ದಾರಿಯಿಂದಾಗಿ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ, ಇನ್ನೂ, ಶೇ. ೫೦ರಷ್ಟು ಕಾಮಗಾರಿ ಆಗಿಲ್ಲ. ನಿರ್ಮಿತಿ ಕೇಂದ್ರ ಅತ್ಯಂತ ಭ್ರಷ್ಟ ಸಂಸ್ಥೆ ಎಂದು ಗಂಭೀರ ಆರೋಪ ಮಾಡುತ್ತಾರೆ ಹೆಸರು ಹೇಳುವುದಕ್ಕೆ ಬಯಸದ ಮಠಕ್ಕೆ ಸಂಬಂಧಿಸಿದವರೊಬ್ಬರು.

ʼಶ್ರೀಗಳ ಪ್ರತಿಮೆ ಕಾರ್ಯ ನಡೆಯುತ್ತಿದೆ. ರೂಫ್‌ ಫ್ಯಾಬ್ರಿಕೇಶನ್‌ ವರ್ಕ್‌ ಅದೇ ಕಾರಣಕ್ಕಾಗಿ ನಿಲ್ಲಿಸಲಾಗಿದೆ, ಕಟ್ಟಡ ನಿರ್ಮಾಣ ಜಾಗದಲ್ಲಿ ಕಲ್ಲು ಬಂತು ಅದಕ್ಕಾಗಿ ನಿರ್ಮಾಣ ಕಾರ್ಯಕ್ಕೆ ಅಡಚಣೆಯಾಯಿತು, ಮಳೆಯ ಕಾರಣಕ್ಕೆ ಕಾಮಗಾರಿ ನಿಲ್ಲಿಸಲಾಗಿದೆʼ ಎಂದು ನಿರ್ಮಿತಿ ಕೇಂದ್ರದ ಇಂಜಿನೀಯರ್‌ ಸಚಿನ್‌ ವೈ. ಸಬೂಬು ನೀಡುತ್ತಾರೆ. ಒಂದೆಡೆ ಫೆಬ್ರವರಿಯಲ್ಲಿ ಪ್ರತಿಮೆಯ ವರ್ಕ್‌ ಆರ್ಡರ್‌ ನೀಡಲಾಗಿದೆ. ಶಿಲ್ಪಿಗೆ ಹಣ ಪಾವತಿಯನ್ನು ಒಂದು ವಾರದಲ್ಲಿ ಮಾಡುತ್ತೇವೆ ಎಂದು ಅವರೇ ಸ್ವತಃ ಒಪ್ಪಿಕೊಳ್ಳುತ್ತಾರೆ. ಇದರಲ್ಲೇ ನಿರ್ಮಿತಿ ಕೇಂದ್ರದ ಬೇಜವಾಬ್ದಾರಿತನ ಬಯಲಾಗುತ್ತದೆ.

ಈ ನಿರ್ಮಿತಿ ಕೇಂದ್ರ ನಿರ್ಮಿಸಿದ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನ ಹಣೆಬರಹ ಜಗಜ್ಜಾಹೀರಾಗಿದೆ. ರಾಜಕೀಯ ಲಾಭಕ್ಕಾಗಿ ಅಲ್ಲಿನ ಶಾಸಕರ ರಾಜಕೀಯ ಒತ್ತಡದಿಂದ ಅನುದಾನ ಪೂರ್ಣ ಬಿಡುಗಡೆ ಆಗದೇ ಇದ್ದಾಗಲೂ ವರ್ಕ್ ಆರ್ಡರ್‌ ಆದ ಕೆಲವೇ ತಿಂಗಳಲ್ಲಿ ಪರಶುರಾಮ ಥೀಂ ಪಾರ್ಕ್‌ನನ್ನು ನಿರ್ಮಿಸಿದ ನಿರ್ಮಿತಿ ಕೇಂದ್ರಕ್ಕೆ ಅನುದಾನ ಪೂರ್ಣ ಬಿಡುಗಡೆಯಾಗಿದ್ದರೂ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸದಿರುವುದಕ್ಕೆ ಏನು ಸಮಸ್ಯೆ ಎನ್ನುವುದೇ ತಿಳಿಯದಾಗಿದೆ.‌

ಬ್ರಹ್ಮಾವರ ತಾಲೂಕಿನಲ್ಲೊಂದು ಪ್ರೇಕ್ಷಣೀಯ ಸ್ಥಳ :
ವಿಶ್ವೇಶತೀರ್ಥರ ಶಿಷ್ಯರು ಹಾಗೂ ಹಾಲಿ ಪೇಜಾವರ ಮಠಾಧೀಶರಾದ  ವಿಶ್ವಪ್ರಸನ್ನ ತೀರ್ಥರಿಗೆ ಕೀರ್ತಿಶೇಷ ಗುರುಗಳಾದ ವಿಶ್ವೇಶತೀರ್ಥರ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಮೃತಿವನ ನೀಲಾವರ ಗೋಶಾಲೆಯ ಆಸುಪಾಸಿನಲ್ಲೇ ನಿರ್ಮಾಣವಾದರೆ ಗೋಶಾಲೆಯನ್ನು ನೋಡಲು ಬರುವವರಿಗೆ ಸ್ಮೃತಿವನವನ್ನೂ ನೋಡುವ ಅವಕಾಶ ಸಿಗುತ್ತದೆ ಎಂಬ ಅಭಿಲಾಷೆಯಲ್ಲಿ ಅರಣ್ಯ ಇಲಾಖೆಯು ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರ ಸ್ಮೃತಿವನವನ್ನು ನೀಲಾವರ ಗೋಶಾಲೆಗೆ ಅಂಟಿಕೊಂಡೇ ಇರುವ ಸುಮಾರು ಎರಡು ಎಕರೆ ಸರ್ಕಾರಿ ಭೂಮಿಯಲ್ಲಿ ನಿರ್ಮಾಣ ಮಾಡುವುದಕ್ಕೆ ಒಪ್ಪಿಕೊಂಡಿತ್ತು. ಈ ಕಾರ್ಯ ಪೂರ್ಣಗೊಂಡರೇ, ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಗೆ ಸ್ಮೃತಿವನವೂ ಸೇರ್ಪಡೆಯಾಗುತ್ತದೆ ಮಾತ್ರವಲ್ಲದೇ, ಬ್ರಹ್ಮಾವರ ತಾಲೂಕಿನ ಅಭಿವೃದ್ಧಿಯೂ ಆದಂತಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಸ್ಮೃತಿವನದಲ್ಲಿ ಏನೆಲ್ಲಾ ಇವೆ ? :
ಕೀರ್ತಿಶೇಷ  ಶ್ರೀ ಪೇಜಾವರ ಸ್ವಾಮೀಜಿಯ ನೆನಪುಗಳನ್ನು ಜೀವಂತವಾಗಿಡಲು ನಿರ್ಮಾಣ ಮಾಡುತ್ತಿರುವ ಉದ್ಯಾನವನ ಇದಾಗಿದೆ. ಸ್ವಾಮಿಗಳ ನೆನಪಿನಾರ್ಥವಾಗಿ ನೆಡುತೋಪುಗಳನ್ನು ರಚಿಸಿ ಜನರು ಸ್ಥಳೀಯವಾಗಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಮಾಡುವ ಪ್ರಧಾನ ಉದ್ದೇಶದೊಂದಿಗೆ ನಗರ ಪ್ರದೇಶಗಳಲ್ಲಿ ಪರಿಸರ ಸುಧಾರಣೆ ಮತ್ತು ಮಾಲಿನ್ಯ ತಗ್ಗಿಸುವಿಕೆಗಾಗಿ ನಗರ ಅರಣ್ಯ ಅಥವಾ ಹಸಿರು ಶ್ವಾಸಕೋಶವನ್ನು ರಚಿಸುವುದು, ಪರಿಸರ ಸ್ನೇಹಿ ಹಸಿರು ಪ್ರದೇಶವನ್ನು ರಚಿಸುವ ಗುರಿಯೊಂದಿಗೆ ಸ್ಮೃತಿವನದಲ್ಲಿ ಪೇಜಾವರ ಸ್ವಾಮಿಗಳ ಪ್ರತಿಮೆ ಸ್ಥಾಪನೆ, ಶ್ರೀಗಳ ಜೀವನ ಹಾಗೂ ಬೋದನೆಗಳನ್ನು, ತತ್ವಾದರ್ಶಗಳನ್ನು ವಿವರಿಸುವ ಫ್ಲೆಕ್ಸ್‌ ನೊಂದಿಗೆ ಪೇಜಾವರ ಸ್ವಾಮಿಯವರ ಸ್ಮಾರಕ, ಶ್ರೀಗಳ ಸಾಮಾಜಿಕ ಕೊಡುಗೆಗಳನ್ನು ಪ್ರದರ್ಶಿಸುವ ಮ್ಯೂಸಿಯಂ, ಗ್ಯಾಲರಿ, ವಾಕಿಂಗ್‌ ಪಾಥ್‌, ರಾಶಿವನ, ಔಷಧೀಯ ಸಸ್ಯಗಳ ಉದ್ಯಾನವನ, ನಾಲ್ಕು ಕಡೆಗಳಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ಕುಟೀರಗಳು, ಮಕ್ಕಳ ಆಟದ ವಿಭಾಗಗಳನ್ನು ಕರಾವಳಿಯ ಶೈಲಿಯಲ್ಲಿ ನಿರ್ಮಿಸಲು ಅರಣ್ಯ ಇಲಾಖೆ ನಿರ್ಮಿತಿ ಕೇಂದ್ರಕ್ಕೆ ನೀಲಿನಕ್ಷೆ ಕೊಟ್ಟು ಎರಡು ವರ್ಷಗಳು ಕಳೆದಿವೆ. ಆದರೇ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಉಡುಪಿ ಜಿಲ್ಲೆಯಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಬ್ರಹ್ಮಾವರ ಭಾಗದಲ್ಲಿ ಈ ಸ್ಮೃತಿವನ ಒಂದು ಪ್ರೇಕ್ಷಣೀಯ ಸ್ಥಳವಾಗಿ ಮೂಡಿ ಬರಲಿದೆ.‌ ಜಿಲ್ಲೆಯ ಪ್ರವಾಸೋದ್ಯಮದ ನೆಲೆಯಲ್ಲಿಯೂ ಸರ್ಕಾರದ ಮಹತ್ವದ ಕೊಡುಗೆ ಇದು. ನಿರ್ಮಿತಿ ಕೇಂದ್ರ ಇನ್ನಾದರೂ ಇದನ್ನು ಅರ್ಥೈಸಿಕೊಂಡು ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಿ ಎನ್ನುವುದೇ ನಮ್ಮ ಆಶಯ, ಅವರ ಶೀಷ್ಯ ವೃಂದದವರ, ಸಾರ್ವಜನಿಕರ ಆಶಯವೂ ಅದೇ ಆಗಿದೆ.

ಶೀಘ್ರದಲ್ಲೇ ಲೋಕಾರ್ಪಣೆ : ಕೆಲವು ಅಡೆಚಣೆಗಳಿಂದ ಕಾಮಗಾರಿ ಪೂರ್ಣವಾಗಿಲ್ಲ. ಈ ಬರುವ ಸಪ್ಟೆಂಬರ್‌ ಅಂತ್ಯದೊಳಗೆ ಪೇಜಾವರ ವಿಶ್ವೇಶತೀರ್ಥ ಶ್ರೀಗಳ ಸ್ಮೃತಿವನವನ್ನು ಲೋಕಾರ್ಪಣೆ ಮಾಡುತ್ತೇವೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ಮಾರ್ಗದರ್ಶನದೊಂದಿಗೆಯೇ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಪ್ರತಿಮೆಯೂ ಅವರ ಬೇಡಿಕೆಯಂತೆ ಶಿಲ್ಪಿ ಜನಾರ್ಧನ ಹಾವಂಜೆ ಅವರಿಗೆ ನೀಡಲಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ.
-ಡಾ. ಕೆ. ವಿದ್ಯಾಕುಮಾರಿ
ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ಮತ್ತು
ಅಧ್ಯಕ್ಷರು, ನಿರ್ಮಿತಿ ಕೇಂದ್ರ, ಉಡುಪಿ ಜಿಲ್ಲೆ

ಸರ್ಕಾರದ ಮಹತ್ವದ ಯೋಜನೆ ಇದು. ನಿರ್ಮಿತಿ ಕೇಂದ್ರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಗುತ್ತಿಗೆ ಪಡೆದ ನಿರ್ಮಿತಿ ಕೇಂದ್ರ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲಿ. ಹದಿನೈದು ದಿನಗಳಲ್ಲಿ ಕಾಮಗಾರಿ ಆರಂಭಿಸದೇ ಇದ್ದಲ್ಲಿ ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ.

-ಮಹೇಂದ್ರ ಕುಮಾರ್‌
ಗ್ರಾಮ ಪಂಚಾಯತ್‌ ಸದಸ್ಯರು, ನೀಲಾವರ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!