Tuesday, October 8, 2024

ರಾಹುಲ್‌ ʼಹಿಂದೂ….ʼ ಹೇಳಿಕೆಗೆ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತಶ್ವರಾನಂದ ಬೆಂಬಲ

ಜನಪ್ರತಿನಿಧಿ (ನವದೆಹಲಿ) : ಹಿಂದೂ ಧರ್ಮದಲ್ಲಿ ಹಿಂಸೆಗೆ ಯಾವುದೇ ಅವಕಾಶವಿಲ್ಲ. ಅಷ್ಟಲ್ಲದೇ ಹಿಂಸಾಚಾರ ಮಾಡುವವರು ಹಿಂದೂಗಳಲ್ಲ ಎಂದು ಲೋಕಸಭೆಯ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತಶ್ವರಾನಂದ ಅವರು ಬಹಿರಂಗ ಬೆಂಬಲ ಸೂಚಿಸಿದ್ದಾರೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಪೂರ್ಣ ಭಾಷಣವನ್ನು ಕೇಳಿದ್ದೇವೆ. ಹಿಂದೂ ಧರ್ಮದಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಅವರು(ರಾಹುಲ್‌) ಹೇಳಿದ್ದಾರೆ. ಅವರು ಎಲ್ಲಿಯೂ ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಏನನ್ನೂ ಹೇಳಿಲ್ಲ. ಅವರ ಹೇಳಿಕೆಯ ಆಯ್ದ ಭಾಗವನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗುತ್ತಿದೆ. ಇದು ಅಪರಾಧ’ ಎಂದು ಸ್ವಾಮಿ ಹೇಳಿಕೆ ನೀಡಿದ್ದಾರೆ.

ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರಾನಂದ ಅವರು ಮಾತನಾಡಿರುವ ವಿಡಿಯೊವನ್ನು ಕಾಂಗ್ರೆಸ್ ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದೆ.

ಅವಿಮುಕೇಶ್ವರಾನಂದ ಅವರ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಯೆದ್ದಿದೆ. ರಾಹುಲ್‌ ಗಾಂಧಿ ಹೇಳಿಕೆಯ ವಿರುದ್ಧವೂ ಬಿಜೆಪಿ ದೇಶದಾದ್ಯಂತ ವಿರೋಧ ವ್ಯಕ್ತ ಪಡಿಸಿತ್ತು.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ  ರಾಹುಲ್‌ ಪಾಲ್ಗೊಂಡಿದ್ದರು. ಸದನವನ್ನು ಉದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಅವರು ಆಡಳಿತರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದರು.

‘ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ’ ಎಂದು ರಾಹುಲ್ ಟೀಕಿಸಿದ್ದರು. ಈ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು.

ರಾಹುಲ್ ಹೇಳಿಕೆಗೆ ಪ್ರತಿಯಾಗಿ ಆಕ್ಷೇಪಿಸಿದ್ದ ಪ್ರಧಾನಿ ಮೋದಿ, ‘ಇಡೀ ಹಿಂದೂ ಸಮಾಜವು ಹಿಂಸಾಪ್ರವೃತ್ತಿಯಿಂದ ಕೂಡಿದೆ ಎಂದು ಕರೆಯುವುದು ತುಂಬಾ ಗಂಭೀರ ವಿಷಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆಡಳಿತ ಪಕ್ಷ ಹಾಗೂ ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ ಮೇಲೆ ಕಾಂಗ್ರೆಸ್‌ ನಾಯಕನ ಮೊನಚಾದ ದಾಳಿಗೆ ಪ್ರಧಾನಿ ಎರಡು ಸಲ ಮಧ್ಯಪ್ರವೇಶಿಸಿ ಆಕ್ಷೇಪಿಸಿದ್ದರು. ಮೋದಿ ರಾಹುಲ್‌ ಅವರ ಹೇಳಿಕೆಯನ್ನು ತಿರುಚುತ್ತಿದ್ದಾರೆ ಎನ್ನುವ ಆಕ್ರೋಶವೂ ಪ್ರತಿಪಕ್ಷಗಳಿಂದ ಕೇಳಿಬಂತು.

ರಾಹುಲ್ ಭಾಷಣಕ್ಕೆ ಆಡಳಿತ ಪಕ್ಷದ ಸಂಸತ್ ಸದಸ್ಯರು ಅಡ್ಡಿಪಡಿಸಿದ್ದರು. 6-7 ಸಚಿವರು ಎದ್ದು ನಿಂತು ರಾಹುಲ್‌ ಗಾಂಧಿ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದರು. ಆಗ ರಾಹುಲ್ ಜೋರಾಗಿ, ‘ನಾನು ಹಿಂದೂ ಸಮುದಾಯದ ಬಗ್ಗೆ ಹೇಳಿಲ್ಲ. ಹಿಂದೂ ಯಾವತ್ತೂ ದ್ವೇಷ ಹಾಗೂ ಹಿಂಸೆಯನ್ನು ಹರಡುವುದಿಲ್ಲ. ಮೋದಿ ಎಂದರೆ ಇಡೀ ಹಿಂದೂ ಸಮಾಜವಲ್ಲ, ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ. ಆರ್‌ಎಸ್ಎಸ್ ಎಂದರೇ ಇಡೀ ಹಿಂದೂ ಸಮಾಜವಲ್ಲ. ಮೋದಿ ಎಂದರೇ ಇಡೀ ಹಿಂದೂ ಸಮಾಜವಲ್ಲ ಎಂದು  ಹೇಳಿದ್ದಲ್ಲದೇ, ಬಿಜೆಪಿ ದ್ವೇಷ ಹಾಗೂ ಹಿಂಸಾಚಾರವನ್ನು ಹರಡುತ್ತದೆ’ ಎಂದು ತಿರುಗೇಟಿನ ಮೂಲಕ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ರಾಹುಲ್‌ ʼಹಿಂದೂ….ʼ ಹೇಳಿಕೆಗೆ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತಶ್ವರಾನಂದ ಸ್ವಾಮಿ ಬೆಂಬಲ

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!