Sunday, September 8, 2024

ಬಂದರು ನಗರಿಯನ್ನು ಬೆಚ್ಚಿಬೀಳಿಸಿದ್ದ ಖತರ್ನಾಕ್‌ ʼಚಡ್ಡಿಗ್ಯಾಂಗ್‌ʼ ಅಂದರ್‌ | ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

ಜನಪ್ರತಿನಿಧಿ(ಮಂಗಳೂರು) : ಬಂದರು ನಗರಿ ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು(ಮಂಗಳವಾರ) ನಸುಕಿನ ಜಾವ ಸುಮಾರು 4-೦೦ ಗಂಟೆಗೆ ಖತರ್ನಾಕ್ ಚಡ್ಡಿಗ್ಯಾಂಗ್‌ನ  ನಾಲ್ವರು ಕಳ್ಳರು ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ವಿಕ್ಟರ್ ಮೆಂಡೋನ್ಸಾ ಎಂಬವರ ಮನೆಯ ಕಿಟಕಿಯ ಗ್ರಿಲ್ ಮುರಿದು ಒಳ ಪ್ರವೇಶಿಸಿ ದರೋಡೆ ಮಾಡಿ ಕಪಾಟಿನ ಲಾಕರ್ ಒಳಗೆ ಇರಿಸಿದ್ದ ಸುಮಾರು 12 ಲಕ್ಷ ರೂ ಮೌಲ್ಯದ ಚಿನ್ನ, ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು ರೂ 1 ಲಕ್ಷ ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ 3೦೦೦/- ನಗದು ಹಣವನ್ನು ಹಾಗೂ ಮನೆಯ ವೆರಾಂಡದಲ್ಲಿದ್ದ ವಿಕ್ಟರ್ ಮೆಂಡೋನ್ಸಾ ಅವರ ಕಾರಿನ ಸಮೇತ ಪರಾರಿಯಾಗಿದ್ದರು.

ಘಟನೆಯ ಬೆನ್ನಲ್ಲೇ ಮಂಗಳೂರು ಪೊಲೀಸರು ಬಿರುಸಿನ ಚಡ್ಡಿಗ್ಯಾಂಗ್‌ಗಾಗಿ ಬಲೆ ಬಿಸಿದ ಕೆಲವೇ ಗಂಟೆಯೊಳಗೆ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಡ್ಡಿಗ್ಯಾಂಗ್‌ನ ಕಳ್ಳರು ಮಧ್ಯಪ್ರದೇಶದ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತರನ್ನು ರಾಜು (24 ವರ್ಷ), ಸಿಂಗ್ವಾನಿಯ ಮಯೂರ್ (30 ವರ್ಷ), ಬಾಲಿ (22 ವರ್ಷ), ವಿಕ್ಕಿ (21 ವರ್ಷ) ಎಂದು ಗುರುತಿಸಲಾಗಿದೆ.

ಪ್ರಕರಣ ಬೆಳಕಿಗೆ ಬಂದ ಕೂಡಲೇ ಉರ್ವ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಯವರು ತಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದ ಮಾಹಿತಿಯನ್ನು ನಗರ ನಿಸ್ತಂತು ಕೊಠಡಿಗೆ ನೀಡಿದ್ದು, ಮುಲ್ಕಿ ಬಸ್ಸು ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಳವು ಮಾಡಲ್ಪಟ್ಟ ಸದರಿ ಕಾರನ್ನು ಪತ್ತೆಮಾಡಿ ವಶಕ್ಕೆ ಪಡೆದು ಸ್ಥಳದ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ಆರೋಪಿಗಳು ಮಂಗಳೂರು ಕಡೆಗೆ ಪ್ರಯಾಣಿಸಿರುವ ವಿಚಾರ ತಿಳಿದು ಬಂದಿತ್ತು.

ಕೆ.ಎಸ್.ಅರ್.ಟಿ.ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ಬೆಳಗಿನ ಜಾವ ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಕೆ.ಎಸ್.ಅರ್.ಟಿ.ಸಿ ಬಸ್ಸುಗಳ ಮಾಹಿತಿ ಪಡೆಯಲಾಯಿತು. ಬಳಿಕ ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದ ಒಂದು ಕೆ.ಎಸ್.ಅರ್.ಟಿ.ಸಿ ಬಸ್ಸಿನ ನಿರ್ವಾಹಕರು ಅವರ ಬಸ್ಸಿನಲ್ಲಿ ಮುಲ್ಕಿಯಿಂದ 4 ಜನರು ಒಟ್ಟಿಗೆ ಪ್ರಯಾಣಿಸಿದ ಮಾಹಿತಿ ತಿಳಿಸಿದ್ದು ಆ ವ್ಯಕ್ತಿಗಳು ಅವರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ ಬಗ್ಗೆ ತಿಳಿಸಿದ್ದರು ಅವರ ಮಾಹಿತಿಯಂತೆ ಮಂಗಳೂರಿನಿಂದ ಬೆಂಗಳೂರಿಗೆ ಹೋದ ಬಸ್ಸಿನ ಬಗ್ಗೆ ವಿವರ ಪಡೆದ ಪೊಲೀಸರು ಬಸ್ಸಿನ ನಂಬರ್ ಕೆಎ-19-ಎಫ್-3575 ದ ನಿರ್ವಾಹಕರನ್ನು ಸಂಪರ್ಕಿಸಿ ಅವರು ತಿಳಿಸಿದ ಮಾಹಿತಿಯಂತೆ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಿದ್ದಾರೆ. ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿಗಳ ತಂಡ ಸಕಲೇಶಪುರ ಸಮೀಪ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಅವರು ಕೃತ್ಯವೆಸಗಿದ ಬಗ್ಗೆ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ. ‌

ಬಳಿಕ ಅವರನ್ನು ಮಂಗಳೂರು ನಗರದಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಗಳು ಹಾಗೂ ಹಣವನ್ನು ಅಮಾನತ್ತು ಪಡಿಸಿ ಉರ್ವಾ ಪೊಲೀಸ್ ಅಧಿಕಾರಿಗಳಿಗೆ ವಶಕ್ಕೆ ನೀಡಿದ್ದಾರೆ.

ಕೃತ್ಯ ನಡೆದ ಕೇವಲ 5 ಗಂಟೆ ಗಳ ಒಳಗೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಈ ಕಾರ್ಯಾಚರಣೆಯನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ರವರ ಮಾರ್ಗದರ್ಶನದಂತೆ, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್ ಗೋಯಲ್ ಹಾಗೂ ಅಪರಾಧ ವಿಭಾಗದ ಡಿಸಿಪಿ ಬಿ.ಪಿ ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಮಂಗಳೂರು ಕೇಂದ್ರ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ತೋರಟ್, ಉರ್ವ ಠಾಣೆಯ ನಿರೀಕ್ಷಕರಾದ ಭಾರತೀ ಜಿ. ರವರ ನೇತೃತ್ವದಲ್ಲಿ ಉರ್ವ ಪೊಲೀಸ್ ಠಾಣೆಯ ಎಸ್.ಐ ಹರೀಶ ಹೆಚ್.ವಿ , ಅನಿತಾ ಹೆಚ್.ಬಿ, ಎ.ಎಸ್.ಐ ವಿನಯ್ ಕುಮಾರ್, ವೇಣುಗೋಪಾಲ್ ಸಿಬ್ಬಂದಿಗಳಾದ ಪುಷ್ಪರಾಜ್, ಪ್ರಮೋದ್, ನಾರಾಯಣ, ಸತೀಶ್, ಪೀಟರ್, ರಾಮಚಂದ್ರ ವೆಂಕಟೇಶ್, ಅಭಿಷೇಕ್, ಪ್ರಜ್ವಲ್ ರವರು ನಡೆಸಿರುತ್ತಾರೆ.

ಈ ಶೀಘ್ರ ಪತ್ತೆ ಕಾರ್ಯಕ್ಕೆ ಹಾಸನ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಮಹಮ್ಮದ್ ಸುಜೀತಾ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ತಮ್ಮಯ್ಯ ಎಮ್ .ಕೆ , ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ ಪ್ರಮೋದ್ ಬಿ., ಸಕಲೇಶಪುರ ನಗರ ಪಿ.ಎಸ್.ಐ ಪ್ರಮೋದ್ ಕೆ.ಎಸ್ ಮತ್ತು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಸದಾಶಿವ ತಿಪ್ಪರೆಡ್ಡಿ, ಸಿಬ್ಬಂದಿಗಳಾದ ಖಾದರ್ ಆಲಿ, ಸುನಿಲ್, ಜಗದೀಶ್, ಯೋಗಿಶ್, ಮೂಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ ವಿನಾಯಕ್ ಬಾವಿಕಟ್ಟೆ, ಸಿಬ್ಬಂದಿಗಳಾದ ಹರೀಶೇಖರ್ ಎ.ಎಸ್.ಐ ಕಿಶೋರ್ ಕೋಟ್ಯಾನ್ , ಚಂದ್ರಶೇಖರ್ ಹಾಗೂ ಶಶಿಧರ್ ಸಹಕರಿಸಿದ್ದಾರೆ.

ದಕ್ಷಿಣ ಕನ್ನಡ ಕರಾವಳಿಯ ಜನರಲ್ಲಿ ಆತಂಕ ಮೂಡಿಸಿದ್ದ ಖತರ್ನಾಕ್‌ ಚಡ್ಡಿಗ್ಯಾಂಗ್‌ ಅನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!