Sunday, September 8, 2024

ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ್ ರಾವ್ ಇನ್ನಿಲ್ಲ

ಕುಂದಾಪುರ, ಜು.5: ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ಆರು ದಶಕಗಳ ಕಾಲ ಸೇವೆ ಸಲ್ಲಿಸಿ ಪ್ರಸಿದ್ಧ ಕಲಾವಿದ ಕುಂಬ್ಳೆ ಶ್ರೀಧರ್ ರಾವ್ (76ವ) ಇನ್ನಿಲ್ಲ. ಅವರು ತೀವ್ರ ಹೃದಯಾಘಾತದಿಂದ ಜುಲೈ 5ರಂದು ನಿಧನರಾದರು. ಶುಕ್ರವಾರ ಬೆಳಿಗ್ಗೆ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೆಂಕುತಿಟ್ಟು ಯಕ್ಷಗಾನ ಕ್ಷೇತ್ರ ಬಹುದೊಡ್ಡ ಸಾಧನೆ ಮಾಡಿದ ಇವರು ಸ್ತ್ರೀವೇಷಗಳ ಮೂಲಕವೇ ಪ್ರಸಿದ್ಧಿಗೆ ಬಂದವರು. ಧರ್ಮಸ್ಥಳ ಮೇಳವೊಂದರಲ್ಲಿಯೇ ತಮ್ಮ ಜೀವಿತ ಸುದಿರ್ಘಾವಧಿ ಸೇವೆ ಸಲ್ಲಿಸಿದ್ದಾರೆ. ಪೌರಾಣಿಕ ಪ್ರಸಂಗದ ಪ್ರಮುಖ ಹಾಗೂ ಪೋಷಕ ಸ್ತ್ರೀ ಪಾತ್ರಗಳಿಗೆ ಅದ್ಭುತವಾದ ತಳಪಾಯ ಹಾಕಿಕೊಟ್ಟ ಇವರು ವಯಸ್ಸಾದ ಕಾರಣ ಸ್ತ್ರೀ ಭೂಮಿಕೆಯಿಂದ ಪುರುಷ ಪಾತ್ರಗಳತ್ತ ವಾಲಿದರು. ಪುರುಷ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವುದರ ಮೂಲಕ ಅಲ್ಲೂ ಕೂಡಾ ತಮ್ಮ ಛಾಪು ಛಾಪಿಸಿದ್ದರು. ಅತ್ಯಂತ ಲಾಲಿತ್ಯಪೂರ್ಣವಾದ ಮಾತುಗಾರಿಕೆಯ ಮೂಲಕ ಪ್ರೇಕ್ಷಕರ ಮನ ಗೆದ್ದವರು. ಅವರು ಮಾತುಗಾರಿಕೆ, ಧ್ವನಿಯ ಮೂಲಕವೇ ಪ್ರೇಕ್ಷಕರು ಗುರುತಿಸುತ್ತಿದ್ದರು. ಧರ್ಮಸ್ಥಳ ಮೇಳದಿಂದಲೇ ಅವರು ವೃತ್ತಿ ತಿರುಗಾಟದಿಂದ ನಿವೃತ್ತಿ ಪಡೆದಿದ್ದರು. ಆದರೂ ಕೂಡಾ ಧರ್ಮಸ್ಥಳ ಮೇಳದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು.

ಮಾಲಿಂಗ ಮುಕಾರಿ ಮತ್ತು ಕಾವೇರಿ ದಂಪತಿಗಳ ಪುತ್ರರಾಗಿ ಜುಲೈ 23-1948ರಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆಯ ಸಮೀಪ ಜನಿಸಿದ ಅವರು 1962 ರಲ್ಲಿ ಕುಂಡಾವು ಮೇಳಕ್ಕೆ ಸೇರುವ ಮೂಲಕ ತಮ್ಮ ಬದುಕಿನ ಕಲಾಯಾತ್ರೆ ಆರಂಭಿಸಿದ್ದರು.

ಕುಂಡಾವು, ಕೂಡ್ಲು, ಮೂಲ್ಕಿ, ಕರ್ನಾಟಕ, ಧರ್ಮಸ್ಥಳ ಮೇಳಗಳಲ್ಲಿ ತಿರುಗಾಟ ಮಾಡಿದ್ದರು. ದಾಕ್ಷಾಯಿಣಿ, ದಮಯಂತಿ, ಸತ್ಯಾವತಿ, ಅಮ್ಮು ಬಲ್ಲಾಳ್ತಿ, ಸತ್ಯಭಾಮೆ, ಸುಭದ್ರೆ, ಶಶಿಪ್ರಭೆ, ಚಿತ್ರಾಂಗದೆ, ಹೀಗೆ ಎಲ್ಲಾ ರೀತಿಯ ಸ್ತ್ರೀಪಾತ್ರಗಳನ್ನು ಸಮರ್ಥವಾಗಿ ಅವರು ನಿಭಾಯಿಸಿದ್ದರು. ಯಕ್ಷರಂಗದ ಅತಿರಥ ಮಹಾರಥ ಕಲಾವಿದರ ಜೊತೆಗೂ ಪಾತ್ರ ನಿರ್ವಹಿಸಿ ಅನುಭವ ಪಡೆದಿದ್ದರು. ಸವ್ಯಸಾಚಿ ಕಲಾವಿದರಾಗಿ ಮೂಡಿಬಂದ ಇವರು ಸ್ತೀಪಾತ್ರ ಮಾಡುವುದನ್ನು ಬಿಟ್ಟು ಪ್ರಸಂಗದ ಪ್ರಮುಖ ಪುರುಷ ವೇಷಗಳನ್ನು ಅದ್ಬುತವಾಗಿ ನಿರ್ವಹಿಸುತ್ತಿದ್ದರು.

ಈಶ್ವರ, ಭೀಷ್ಮ, ವಿಷ್ಣು, ನಾರದ, ಕೃಷ್ಣ, ಮುಂತಾದ ತನಗೆ ಲಭಿಸಿದ ಯಾವುದೇ ಪಾತ್ರವಾದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಧರ್ಮಸ್ಥಳ ಒಂದೇ ಮೇಳದಲ್ಲಿ ನಾಲ್ಕು ದಶಕಗಳಷ್ಟು ಸೇವೆ ಸಲ್ಲಿಸಿರುವುದು ಇವರ ಹಿರಿಮೆಯಾಗಿತ್ತು.

ಪತ್ನಿ ಸುಲೋಚನಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!