Sunday, September 8, 2024

ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿಯ ಆಲಯ ಪ್ರವೇಶಿಸಿ ಪಾದ ಸ್ಪರ್ಶಿಸಿದ ಕುಬ್ಜೆ | ದೇವಿಗೆ ನೈಸರ್ಗಿಕ ಅಭಿಷೇಕ

ಜನಪ್ರತಿನಿಧಿ (ಕಮಲಶಿಲೆ) : ಪಶ್ಚಿಮ ಘಟ್ಟದ ತಪ್ಪಲಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಬ್ಜಾ ನದಿ ಉಕ್ಕಿ ಹರಿದು ಶ್ರೀ ಕ್ಷೇತ್ರ ಕಮಲಶಿಲೆಯ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದೇವಸ್ಥಾನದ ಒಳಪ್ರಾಂಗಣಕ್ಕೆ ಪ್ರವೇಶಿಸಿದೆ.

ಉಡುಪಿ ಜಿಲ್ಲೆಯಲ್ಲಿ ರಾತ್ರಿ ಇಡೀ ಭಾರಿ ಮಳೆ ಸುರಿದಿದ್ದು, ಮೈದುಂಬಿ ಹರಿಯುತ್ತಿರುವ ಕುಬ್ಜಾ ನದಿಯಿಂದ ಪ್ರಸಿದ್ದ ಕಮಲಶಿಲೆ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಿಗೆ ನೈಸರ್ಗಿಕ ಪುಣ್ಯಸ್ನಾನ ನಡೆಯಿತು.

ಇಂದು (ಜುಲೈ 4) ನಸುಕಿನ ವೇಳೆಗೆ ಕುಬ್ಜ ನದಿಯ ನೀರು ಗರ್ಭಗುಡಿ ಪ್ರವೇಶಿಸುತ್ತಿದ್ದಂತೆಯೇ, ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ನದಿ ನೀರಿನಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ಪಾವನರಾದರು.

ಸಾಮಾನ್ಯವಾಗಿ, ಮಳೆಗಾಲದ ಸಮಯದ ಒಂದು ದಿನ, ನದಿ ನೀರು ಗರ್ಭಗುಡಿ ಪ್ರವೇಶಿಸಿ ದೇವರ ಚರಣ ಸ್ಪರ್ಷ ಮಾಡುವುದು ತಪ್ಪದೇ ನಡೆಯುತ್ತಿರುವುದು ಇಲ್ಲಿನ ವಿಶೇಷವೂ ಹೌದು.


(ಕುಬ್ಜೆ ತಾಯಿಯ ಪಾದ ಸ್ಪರ್ಶಿಸಿದ ದೃಶ್ಯ, ಮಂಗಳಾರತಿ) 


(ದೇವಾಲಯ ಪ್ರವೇಶಿಸಿದ ಕುಬ್ಜೆ)

ಕುಬ್ಜೆಯ ದೇವಿ ಪಾದದ ಸ್ಪರ್ಶ ಮತ್ತು ಪುರಾಣ ಹಿನ್ನೆಲೆ :
ಸಹ್ಯಾದ್ರಿ ಕಾಂಡದ ಸ್ಕಂದ ಪುರಾಣದ ಪ್ರಕಾರ ಪಿಂಗಳಾ ಎಂಬ ಅಪ್ಸರೆ ಕೈಲಾಸ ಪರ್ವತದಲ್ಲಿ ಶಿವ ಮತ್ತು ಪಾರ್ವತಿ ದೇವಿಯ ಆಸ್ಥಾನದಲ್ಲಿ ನರ್ತಕಿಯಾಗಿದ್ದಳು. ಒಂದೊಮ್ಮೆ ಪಾರ್ವತಿಯ ಬೇಡಿಕೆಯ ಹೊರತಾಗಿ ತನ್ನ ಅಹಂಕಾರದಿಂದ ಅವಳು ನೃತ್ಯ ಮಾಡಲು ನಿರಾಕರಿಸಿದಳು. ಇದರಿಂದ ಕೊಪಗೊಂಡ ಪಾರ್ವತಿ ದೇವಿಯ ಶಾಪ ನೀಡಿದಳು.

ಇದರಿಂದ ಪಿಂಗಳಾ ತನ್ನ ಸೌಂದರ್ಯವನ್ನು ಕಳೆದುಕೊಂಡಳು ಮತ್ತು ಭೂಲೋಕದಲ್ಲಿ ಕುಬ್ಜೆಯಾಗಿ ಜನಿಸಿದಳು. ತನ್ನ ತಪ್ಪಿನ ಅರಿವಾಗಿ ಪಿಂಗಳಾ ಶಾಪದಿಂದ ಮುಕ್ತಿಯನ್ನು ಬೇಡಿಕೊಂಡಾಗ ಪಾರ್ವತಿ ದೇವಿಯು ಖರಾಸುರನ ಎಲ್ಲಾ ದುಷ್ಕೃತ್ಯಗಳನ್ನು ತೊಡೆದು ಹಾಕಲು ಭೂಲೋಕಕ್ಕೆ ಬರುವುದಾಗಿ ಮತ್ತು ಸಂಹಾರದ ಬಳಿಕ ಲಿಂಗದ ಸ್ವರೂಪದಲ್ಲಿ ಕಾಣಿಸಿಕೊಳ್ಳುವುದಾಗಿ ಮಾತು ನೀಡಿದಳು.

ಸಹ್ಯಾದ್ರಿ ಅರಣ್ಯದಲ್ಲಿರುವ ಋಷಿ ಆಶ್ರಮದ ಬಳಿ ಲಿಂಗವು ಕಮಲಶಿಲೆಯ ರೂಪದಲ್ಲಿರುತ್ತದೆ ಎಂದು ಪಾರ್ವತಿ ದೇವಿ ತಿಳಿಸಿದಳು. ಪಾರ್ವತಿ ದೇವಿ ಕುಬ್ಜಳಿಗೆ ಸುಪಾರ್ಶ್ವ ಗುಹೆಯ ಬಳಿ ಹೋಗಿ ದೇವಿಯು ಮೋಕ್ಷವನ್ನು ನೀಡುವವರೆಗೆ ತಪಸ್ಸು ಮಾಡುವಂತೆ ಆಜ್ಞೆ ಮಾಡಿದಳು. ಬಳಿಕ ಕುಬ್ಜೆಯಿಂದ ಸಂತೋಷಗೊಂಡ ಪಾರ್ವತಿ ದೇವಿಯು ಕಮಲಶಿಲೆ (ಲಿಂಗ) ಸ್ವರೂಪದಲ್ಲಿ ಮಹಾಕಾಳಿ, ಮಹಾಲಕ್ಷ್ಮೀ, ಮಹಾ ಸರಸ್ವತಿ ಶಕ್ತಿಯಾಗಿ ರೈಕ್ವಾ ಋಷಿ ಆಶ್ರಮದ ಮುಂಭಾಗದಲ್ಲಿರುವ ಕುಬ್ಜೆ ನದಿ ಮತ್ತು ನಾಗ ತೀರ್ಥದ ಸಂಗಮದಲ್ಲಿ ಕಾಣಿಸಿಕೊಂಡಳು.

ಕುಬ್ಜಳಿಗೆ ಮಥುರಾಕ್ಕೆ ಹೋಗಿ ಶ್ರೀಕೃಷ್ಣನಿಗಾಗಿ ಕಾಯಲು ಹೇಳಲಾಯಿತು ನಂತರ ಶ್ರೀಕೃಷ್ಣನ ಸ್ಪರ್ಶದಿಂದ ಅವಳು ತನ್ನ ಶಾಪವಿಮೋಚನೆಯನ್ನು ಪಡೆಯುತ್ತಾಳೆ. ಸಹ್ಯಾದ್ರಿ ಅರಣ್ಯದಿಂದ ಹುಟ್ಟಿ ಪಶ್ಚಿಮ ಕರಾವಳಿಯ ಕಡೆಗೆ ಹರಿಯುವ ನದಿಗೆ ತನ್ನ (ಕುಬ್ಜೆ) ಹೆಸರಿಡುವಂತೆ ಬೇಡಿಕೊಂಡಳು. ಬಳಿಕ ಪ್ರತಿ ವರ್ಷ ಪ್ರವಾಹ ರೂಪದಲ್ಲಿ ಬಂದು ಲಿಂಗವನ್ನು ಸ್ಪರ್ಶಿಸಿ ಪೂಜಿಸು ಎಂದು ದೇವಿಯು ಕುಬ್ಜೆಗೆ(ಪಿಂಗಳಾ) ಹೇಳಿದಳು ಎನ್ನುವುದನ್ನು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ.

ಪ್ರತಿವರ್ಷ ಆಷಾಡ ಅಥವಾ ಶ್ರಾವಣ ಮಾಸದಲ್ಲಿ ಸುರಿಯುವ ಬಾರಿ ಮಳೆಗೆ ಕುಬ್ಜೆ ಪ್ರವಾಹ ರೂಪದಲ್ಲಿ ಹರಿದು ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿಯ ಆಲಯ ಪ್ರವೇಶಿಸಿ ಪಾದ ಸ್ಪರ್ಶ ಮಾಡಿ ತೆರಳುತ್ತಾಳೆ ಎನ್ನುವ ನಂಬಿಕೆ ಇದೆ.

ಕುಬ್ಜೆ ನದಿಯ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿಯ ಪಾದ ಸ್ಪರ್ಶ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!