Wednesday, September 11, 2024

ಅರುಣ್ ಕುಮಾರ್ ಸೇವೆಯಿಂದ ನಿವೃತ್ತಿಯಾದರೂ ಸಹಕಾರಿಗಳ ಮನಸ್ಸಿನಲ್ಲಿ ಶಾಶ್ವತ-ಡಾ.ಎಂ.ಎನ್.ರಾಜೇಂದ್ರ ಕುಮಾರ್

ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ ಅವರಿಗೆ ಜಿಲ್ಲಾ ಮಟ್ಟದ ಅದ್ದೂರಿಯ ಅಭಿನಂದನೆ

ಕುಂದಾಪುರ, ಜೂ.30: ವೃತ್ತಿ ಪ್ರೀತಿಯಿಂದ ಕೆಲಸ ಮಾಡಿದಾಗ ಸೇವೆ ಅರ್ಥಪೂರ್ಣವೆನಿಸಿಕೊಳ್ಳುತ್ತದೆ. ತನ್ನ ಮುಂದೆ ಮೂರು ಉದ್ಯೋಗವಕಾಶಗಳಿದ್ದರೂ ಕೂಡಾ ಸಹಕಾರಿ ಕ್ಷೇತ್ರವನ್ನೇ ಆಯ್ದುಕೊಂಡ ಅರುಣ್ ಕುಮಾರ್ ಇವತ್ತು ಸಹಕಾರ ರಂಗ, ಸಹಕಾರ ಇಲಾಖೆಯನ್ನು ಬೆಳೆಸಿದ್ದಾರೆ. ಅವರು ಸೇವೆಯಿಂದ ನಿವೃತ್ತರಾದರೂ ಕೂಡಾ ಸಹಕಾರಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಅವರು ಕೋಟೇಶ್ವರದ ಸಹನಾ ಕನ್ವನ್ಶನ್ ಹಾಲ್‌ನಲ್ಲಿ ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಇಂದು (ಜೂನ್ ೩೦) ನಿವೃತ್ತರಾಗಲಿರುವ ಅರುಣ್ ಕುಮಾರ್ ಎಸ್.ವಿ ಅವರನ್ನು ಅಭಿನಂದಿಸುವ ಜಿಲ್ಲಾ ಮಟ್ಟದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.

ಸಹಕಾರ ಕ್ಷೇತ್ರದ ಬಗ್ಗೆ ಅಪಾರವಾದ ಆಸಕ್ತಿ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿರುವ ಅರುಣ್ ಕುಮಾರ್ ಅವರಲ್ಲಿ ಸಹಕಾರ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು. ಸಹಕಾರ ಸಂಘಗಳ ಬೆಳವಣಿಗೆ ಪ್ರೋತ್ಸಾಹ ನೀಡಿದ್ದಾರೆ. ಕೆಲಸವನ್ನು ಅವರು ಅಷ್ಟು ಅಭಿಮಾನದಿಂದ ಮಾಡಿರುವುದರಿಂದ ಇವತ್ತು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಹಕಾರಿಗಳು ಒಂದಾಗಿ ಅವರನ್ನು ಅಭಿನಂದಿಸುತ್ತಿರುವುದು. ನನ್ನ ಸಹಕಾರಿ ಜೀವನದಲ್ಲಿ ಸರಕಾರಿ ಅಧಿಕಾರಿಯೋರ್ವರನ್ನು ಇಷ್ಟೊಂದು ಅದ್ದೂರಿಯಾಗಿ ಅಭಿನಂದಿಸುವುದನ್ನು ನಾನು ನೋಡಿದ್ದು ಇದೇ ಮೊದಲು ಎಂದು ಅಭಿಪ್ರಾಯ ಪಟ್ಟರು.

ಅರುಣ್ ಕುಮಾರ್ ಅವರು ಕೃಷಿ ಪತ್ತಿನ ಸಹಕಾರ ಸಂಘ, ಬೇರೆ ಬೇರೆ ಸಹಕಾರ ಸಂಘಗಳ ಸಹಕಾರಗಳ ಬೆಳವಣಿಗೆಯಲ್ಲಿ ಸಹಕಾರ ನೀಡುತ್ತಾ ಬಂದವರು. ಅವರ ಸೇವೆ ಇನ್ನೂ ಅಗತ್ಯವಿತ್ತು. ಇವತ್ತು ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು ಲಾಭದಲ್ಲಿವೆ. ಉತ್ತಮ ಸೇವೆ ನೀಡುತ್ತಿದರೆ ಅದರ ಹಿನ್ನೆಲೆಯಲ್ಲಿ ಇಲಾಖ ಮಟ್ಟದಲ್ಲಿ ಅರುಣ್ ಕುಮಾರ್ ಅವರ ಸಹಕಾರವಿದೆ ಎಂದು ಅವರು ಹೇಳಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕುಂದಾಪುರ ಸಹಕಾರ ಇಲಾಖೆಯಲ್ಲಿ ದಕ್ಷತೆ, ಪ್ರಾಮಾಣಕತೆಯ ಮೂಲಕ ಸೇವೆ ಸಲ್ಲಿಸಿದ ಅರುಣ್ ಕುಮಾರ್ ಅವರ ಸೇವೆಯನ್ನು ಈ ಭಾಗದ ಸಹಕಾರ ಕ್ಷೇತ್ರ ಸದಾ ಸ್ಮರಿಸಿಕೊಳ್ಳುತ್ತದೆ. ಸರಕಾರಿ ಅಧಿಕಾರಿಗಳಿಗೆ ಮಾದರಿಯ ಸೇವೆನಡೆಯನ್ನು ಇವರು ಹಾಕಿಕೊಟ್ಟಿದ್ದಾರೆ ಎಂದರು.

ಉಡುಪಿ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಮಾತನಾಡಿ ಅರುಣ್ ಕುಮಾರ್ ಅವರ ಸೇವೆ ಯಾವ ರೀತಿ ಇತ್ತು ಎನ್ನುವುದಕ್ಕೆ ಇಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿ. ಮುಂದಿನ ಯುವ ಪೀಳಿಗೆಗೆ ಇವರ ಸೇವೆಯ ನಡೆ ಮಾರ್ಗದರ್ಶಿಯಾಗಬೇಕು. ಸಹಕಾರ ಕ್ಷೇತ್ರ ಇವತ್ತು ಎದುರಿಸುತ್ತಿರುವ ಸಿಬ್ಬಂದಿಗಳ ಕೊರತೆ ವಿಚಾರವನ್ನು ಸರ್ಕಾರ ಮಟ್ಟದಲ್ಲಿ ಪರಿಹರಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಇದು ಬಿಳ್ಕೋಡುಗೆಯಲ್ಲ ಅಭಿನಂದನಾ ಕಾರ್ಯಕ್ರಮ. ಅರುಣ್ ಕುಮಾರ್ ಅವರ ಮಾರ್ಗದರ್ಶನ ನಿರಂತರವಾಗಿ ಸಹಕಾರ ವ್ಯವಸ್ಥೆಗೆ ಇರಲೇಬೇಕು. ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇಂಥಹ ಗೌರವ ಸಿಗುತ್ತದೆ ಎನ್ನುವುದಕ್ಕೆ ಅರುಣ ಕುಮಾರ್ ಸಾಕ್ಷಿಯಾಗಿದ್ದಾರೆ. ಇವರ ಸೇವೆ ಮುಂದಿನ ಯುವ ಸರಕಾರಿ ನೌಕರರಿಗೆ ಅನುಕರಣೆಯಾಗಬೇಕು. ಜನ ಗುರುತಿಸಿ, ನೆನಪಿನಲ್ಲಿ ಇರಿಸಿಕೊಳ್ಳುವಂತಹ ಕೆಲಸವನ್ನು ಅರುಣ್ ಕುಮಾರ್ ಮಾಡಿದ್ದಾರೆ. ಸರಕಾರಿ ನೌಕರರು ಬರುವಾಗ ಅದ್ದೂರಿ ಸ್ವಾಗತ ಸಹಜ ಆದರೆ ವಯೋನಿವೃತ್ತಿ ಹೊಂದುವಾಗ ಅಭಿನಂದಿಸುವ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಸೇರಿರುವುದು ಇವರ ಸೇವಾವೈಖರಿಗೆ ಸಾಕ್ಷಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ ಅವರು, ೩ಸಾವಿರ ಸಂಬಳದ ಕೆಲಸ ನನ್ನ ಕೈಯಲ್ಲಿತ್ತು. ಆದರೆ ತಂದೆ, ಮನೆಯವರ ಒತ್ತಾಯಕ್ಕೆ ೯೦೦ ರೂ ಮಾಸಿಕ ಸಂಬಳದ ಸಹಕಾರ ಇಲಾಖೆಯ ಕೆಲಸಕ್ಕೆ ನಿಯುಕ್ತಿಗೊಂಡೆ. ನಾನು ಕೆಲಸ ಮಾಡುವ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಬೇಕು, ವೃತ್ತಿಗೆ ಗೌರವ ತಂದುಕೊಡಬೇಕು, ಅದರಿಂದ ಜನರಿಗೆ ಅನುಕೂಲವಾಗಬೇಕು ಮನೋಭಾವದಿಂದ ಕೆಲಸ ಆರಂಭಿಸಿದೆ. ನಾನೊಬ್ಬ ಸರಕಾರಿ ನೌಕರನಾಗಿ ಸೇವೆ ಮಾಡಿದ್ದೇನೆ. ಸಿಟ್ಟು ಮಾಡಲಿಲ್ಲ, ನನ್ನಿಂದಾದ ಕೆಲಸವನ್ನು ಮಾಡಿಕೊಟ್ಟಿದ್ದೇನೆ. ನಾನು ಕೆಲಸಕ್ಕೆ ಸೇರುವಾಗ ೫ಸಾವಿರ ಕೃಷಿ ಸಾಲ ಇತ್ತು. ನಂತರ ನಾವೆಲ್ಲ ಒಟ್ಟು ಸೇರಿ ಸಮಗ್ರ ಬೈಲಾ ತಿದ್ದುಪಡಿ ಮಾಡಿದೆವು. ಇದರಿಂದ ಕೃಷಿಸಾಲ ಹೆಚ್ಚಳವಾಯಿತು. ಕೃಷಿಯೇತರ ಸಾಲ ನೀಡುವಿಕೆಯ ಮೂಲಕವೂ ಸಹಕಾರ ಕ್ಷೇತ್ರ ಬೆಳೆಯಿತು. ವಿವಿಧ ನಿಧಿಗಳ ಉಪಯೋಗ, ಬಳಕೆ, ಸದುಪಯೋಗದ ಮೂಲಕ ಕಟ್ಟಡ ನಿಧಿ ಇತ್ಯಾದಿಗಳ ಬಳಕೆಯಿಂದ ಕೃಷಿಪತ್ತಿನ ಸಹಕಾರಿ ಸಂಘಗಳು, ಹಾಲು ಉತ್ಪಾಕರ ಸಹಕಾರ ಸಂಘಗಳ ಸ್ವಂತ ಕಟ್ಟಡ ರಚನೆ ಮಾಡಲು ಸಹಕಾರವಾಯಿತು. ನಾನೊಬ್ಬ ಸರಕಾರಿ ನೌಕರನಾಗಿ ಸಹಕಾರ ಇಲಾಖೆಯಲ್ಲಿ ಸಂತೃಪ್ತಿ ಕಂಡಿದ್ದೇನೆ ಎಂದರು.

ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಬಿ.ಅಪ್ಪಣ್ಣ ಹೆಗ್ಡೆ, ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್, ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಎಂ.ಮಹೇಶ್ ಹೆಗ್ಡೆ, ರಾಜೇಶ್ ರಾವ್, ಅಶೋಕ್ ಕುಮಾರ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ,  tapcmc ಅಧ್ಯಕ್ಷ ಹರಿಪ್ರಕಾಶ್ ಶೆಟ್ಟಿ ಕಾನ್ಮಕ್ಕಿ ರವಿರಾಜ ಹೆಗ್ಡೆ, ಸಹಕಾರಿ ಯೂನಿಯನ್ ಉಪಾದ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.

ಅರುಣ್ ಕುಮಾರ್ ಎಸ್.ವಿ ಹಾಗೂ ಜಯಲಕ್ಷ್ಮೀ ಎಂ.ವಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ, ಬಂಗಾರ ಹಾರ, ಸ್ಮರಣಿಕೆ, ಬೃಹತ್ ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು. ದ.ಕ ಜಲ್ಲಾ ಕೇಂದ್ರ ಬ್ಯಾಂಕ್ ವತಿಯಿಂದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಸನ್ಮಾನಿಸಿದರು. ಜಿಲ್ಲೆಯ ವಿವಿಧ ಸಹಕಾರಿ ಸಂಘಗಳು ಅಭಿನಂದಿಸಿ, ಗೌರವಿಸಿದರು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜು ಪೂಜಾರಿ ಸ್ವಾಗತಿಸಿದರು. ದ.ಕ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಗಾಯತ್ರಿ ಪ್ರಕಾಶ್ ಐತಾಳ್ ಪ್ರಾರ್ಥನೆ ಮಾಡಿದರು. ವಿಶ್ವೇಶ್ವರ ಐತಾಳ್ ಪಟ್ಟಿ ವಾಚಿಸಿದರು. ಉದಯ ಕುಮಾರ ಹಟ್ಟಿಯಂಗಡಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿ ಜಿಲ್ಲೆಯ ಎಲ್ಲಾ ವಿಧದ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು,ಆಡಳಿತ ಮಂಡಳಿಯ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಕಾರ್ಯಕ್ರಮದ ಪೂರ್ವದಲ್ಲಿ ಯುವ ಭಾಗವತೆ ಶ್ರೀರಕ್ಷಾ ಹೆಗಡೆ ಮತ್ತು ಬಳಗದವರಿಂದ ಯಕ್ಷನಾಟ್ಯ ವೈಭವ ಪ್ರದರ್ಶನಗೊಂಡಿತು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!