Sunday, September 8, 2024

ನಂದ್ರೋಳಿ: ಕೆರೆಯಲ್ಲಿ ಮುಳುಗಿ ಮಕ್ಕಳಿಬ್ಬರು ಸಾವು

ಕುಂದಾಪುರ: ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ನಂದ್ರೋಳ್ಳಿ ಚಿಕ್ಕನಬೆಟ್ಟು ಎಂಬಲ್ಲಿ ಕೆರೆಯಲ್ಲಿ ಮುಳುಗಿ ಮಕ್ಕಳಿಬ್ಬರು ಸಾವನ್ನಪ್ಪಿದ ಘಟನೆ ಜೂ.29ರ ಮಧ್ಯಾಹ್ನ ನಡೆದಿದೆ.

ಧನರಾಜ್ (13ವ), ಛಾಯಾ (7ವ) ಮೃತ ದುರ್ದೈವಿಗಳು. ಕೆರೆಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಮುಂದಾದ ತಾಯಿ ಶೀಲ (40ವ) ಅವರ ಸ್ಥಿತಿಯೂ ಗಂಭೀರವಾಗಿದೆ. ಈ ಇಬ್ಬರು ವಿದ್ಯಾರ್ಥಿಗಳು ವಂಡ್ಸೆ ಶಾಲೆಯ ವಿದ್ಯಾರ್ಥಿಗಳಾಗಿದ್ದು ಶನಿವಾರ ಆದ್ದರಿಂದ ಮಧ್ಯಾಹ್ನ ಮನೆಗೆ ಬಂದಿದ್ದರು. ಶಾಲಾ ವಾಹನದಿಂದ ಇಳಿದ ಮಕ್ಕಳನ್ನು ತಾಯಿ ಮನೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಸುಮಾರು 3.30ಯ ನಂತರ ಈ ಘಟನೆ ಘಟಿಸಿರಬಹುದೆಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಕಾರಿನಲ್ಲಿ ಹೋಗುತ್ತಿದ್ದಾಗ ರಸ್ತೆಯ ಪಕ್ಕದಲ್ಲಿದ್ದ ತೆರೆದ ಕೆರೆಯಲ್ಲಿನ ದೃಶ್ಯ ಕಂಡು ಕೂಡಲೆ ಸ್ಥಳೀಯರನ್ನು ಕರೆದು ಕಾರ್ಯಾಚರಣೆಗೆ ಮುಂದಾಗಿದ್ದರು. ಶೀಲಾ ಹಾಗೂ ಧನರಾಜ್ ರನ್ನು ಕೆರೆಯಿಂದ ಮೇಲೆತ್ತಿ ಚಿತ್ತೂರಿನ ಮದರ್ ಅಂಬುಲೆನ್ಸ್ ಮೂಲಕ ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಮಾರ್ಗಮಧ್ಯೆ ಧನರಾಜ್ ಸಾವನ್ನಪ್ಪಿದ್ದ. ಛಾಯಾಳನ್ನು ಮೇಲೆತ್ತಲಾಯಿತಾದರೂ ತಕ್ಷಣ ಕರೆದೊಯ್ಯಲು ಅಂಬುಲೆನ್ಸ್ ಇರಲಿಲ್ಲ. ನೆಟ್ ವರ್ಕ ಕೂಡ ಇರಲಿಲ್ಲ. ಆಗ ಸ್ಥಳದಲ್ಲಿದ್ದ 112 ಪೊಲೀಸ್ ವಾಹನದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ದಾರಿ ಮಧ್ಯೆ ಮಗು ಸಾವನ್ನಪ್ಪಿದೆ. ತಾಯಿ ಶೀಲ ಸತೀಶ್ ಮಡಿವಾಳ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೇಲ್ನೋಟಕ್ಕೆ ಮಕ್ಕಳು ಸಹಜವಾಗಿ ನೀರಿನಲ್ಲಿ ಆಟವಾಡಲು ಕೆರೆಯತ್ತ ತೆರಳಿದ್ದು ಛಾಯ ಕಾಲು ಜಾರಿ ನೀರಿಗೆ ಬಿದ್ದಾಗ ಧನರಾಜ್ ಆಕೆಯ ರಕ್ಷಣೆಗೆ ಹೋಗಿ ಆತನು ಮುಳುಗಿರಬಹುದು. ಆಗ ತಾಯಿ ಮಕ್ಕಳನ್ನು ರಕ್ಷಿಸಲು ಕೆರೆಗೆ ಹಾರಿರಬಹುದು ಎಂದು ಅಂದಾಜಿಸಲಾಗಿದೆ.

ಖಚಿತವಾಗಿ ಘಟನೆ ಹೇಗೆ ಸಂಭವಿಸಿತು ಎನ್ನುವುದನ್ನು ಚಿಕಿತ್ಸೆ ಪಡೆಯುತ್ತಿರುವ ತಾಯಿ ಚೇತರಿಸಿಕೊಂಡ ಬಳಿಕವಷ್ಟೇ ತಿಳಿಸಬೇಕಾಗಿದೆ.
ಮೃತ ಪಟ್ಟ ಧನರಾಜ 7ನೇ ತರಗತಿ ವಿದ್ಯಾರ್ಥಿಯಾಗಿದ್ದು ಪ್ರತಿಭಾನ್ವಿತನಾಗಿದ್ದ. ಕಳೆದ ಬಾರಿ ಪ್ರತಿಭಾ ಕಾರಂಜಿಯಲ್ಲಿ ಮಿಮಿಕ್ರಿಯ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಎನ್ನಲಾಗಿದೆ. ಪುಟಾಣಿ ಛಾಯಾ ಈ ವರ್ಷ 1ನೇ ತರಗತಿಗೆ ಸೇರಿದ್ದಳು. ಆಕೆಯೂ ಕೂಡಾ ಚುರುಕಿನ ವಿದ್ಯಾರ್ಥಿನಿಯಾಗಿದ್ದಳಂತೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗುವನ್ನು ರಕ್ಷಿಸಲು ಪೊಲೀಸರ ಹರಸಾಹಸ:
ಧನರಾಜ್ ಹಾಗೂ ಶೀಲಾ ಅವರನ್ನು ಕೆರೆಯಿಂದ ಮೇಲೆತ್ತಿದ ತಕ್ಷಣ ಮದರ್ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಛಾಯಳನ್ನು ಮೇಲೆತ್ತು ತುಸು ತಡವಾಯಿತು. ಆಗ ಬೇರೆ ಅಂಬುಲೆನ್ಸ್ ಇರಲಿಲ್ಲ. ಕರೆ ಮಾಡಲು ಕೂಡಾ ಆ ಸ್ಥಳದಲ್ಲಿ ನೆಟ್ ವರ್ಕ ಇರಲಿಲ್ಲ. ಮಗುವನ್ನು ಹೇಗಾದರೂ ಮಾಡಿ ಉಳಿಸಬೇಕೆಂಬ ಹಠದಿಂದ 112 ಪೊಲೀಸ್ ವಾಹನದಲ್ಲಿ ಮಗುವನ್ನು ಆಸ್ಪತ್ರೆಗೆ ಸಾಗಿಸಲು ಚಾಲಕರಾದ ದಿನೇಶ್ ಹಾಗೂ ಹೆಡ್ ಕಾನ್ಸಸ್ಟೇಬಲ್ ಮುಂದಾದರು. ಮಗುವನ್ನು ಹಿಡಿದುಕೊಂಡು ವೇಗವಾಗಿ ಆಸ್ಪತ್ರೆಯತ್ತ ಧಾವಿಸಿತ್ತಾದರೂ ಆಗಲೇ ವಾಂತಿ ಮಾಡುತ್ತಿದ್ದ ಮಗು ದಾರಿ ಮಧ್ಯೆ ಅಸುನೀಗಿತು.

ಕರುಳು ಹಿಂಡುವ ಘಟನೆ:
ಕುಂದಾಪುರ ಆಸ್ಪತ್ರೆ ಎದುರು ಕುಟುಂಬಸ್ಥರು, ಪರಿಸರದವರು, ಶಾಲೆಯ ಶಿಕ್ಷಕವೃಂದದವರು ನೆರೆದಿದ್ದರು. ವಂಡ್ಸೆಯ ಶಾಲೆಯ ಶಿಕ್ಷಕರು ಆಸ್ಪತ್ರೆಗೆ ಹೊರಗೆ ನಿಂತು ಕಂಬನಿ ಸುರಿಸುತ್ತಿರುವ ದೃಶ್ಯ ಕಂಡು ಬಂತು. ಮಾಜಿ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ, ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಂಡಬಳ್ಳಿ ಜಯರಾಮ ಶೆಟ್ಟಿ ಮೊದಲಾದವರು ಆಸ್ಪತ್ರೆಗೆ ಆಗಮಿಸಿದ್ದರು.

ಮನೆ ನಿರ್ಮಿಸುತ್ತಿದ್ದರು:
ಶೀಲಾ ಸತೀಶ್ ಮಡಿವಾಳ ದಂಪತಿಗಳು ಹೊಸ ಮನೆ ನಿರ್ಮಿಸುತ್ತಿದ್ದರು. ಮನೆ ನಿರ್ಮಾಣದ ಕಾರ್ಯ ಅಂತಿಮ ಹಂತದಲ್ಲಿತ್ತು. ಶೀಲಾ ಗೃಹಿಣಿಯಾಗಿದ್ದರು. ಸತೀಶ ಮಡಿವಾಳ ದಾವಣಗೆರೆಯಲ್ಲಿ ಹೋಟೆಲ್ ಕಾರ್ಮಿಕರಾಗಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!