Sunday, September 8, 2024

ಜನ್ಸಾಲೆ: 7ನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಲ್ಲೆ: ಆರೋಪಿಯನ್ನು ಬಂಧಿಸುವಂತೆ ವಿಶ್ವಕರ್ಮ ಸಂಘಟನೆಗಳಿಂದ ಪೊಲೀಸರಿಗೆ ಮನವಿ

ಸಿದ್ದಾಪುರ: ಜನ್ಸಾಲೆ ಹರ್ಷ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಪ್ರಥ್ವಿ (13)ಎಂಬ ಬಾಲಕ ಸೈಕಲ್‌ನಲ್ಲಿ ಆಟಮಾಡುತ್ತಿರುವಾಗ ಆರೋಪಿ ಶಾಂತಾರಾಮ ಶೆಟ್ಟಿ ನಾರುಮಕ್ಕಿ ಎಂಬವನ್ನು ಜೂ.17ರಂದು ಗಂಭೀರವಾಗಿ ಹಲ್ಲೆ ನಡೆಸಿದನ್ನು. ದೂರು ದಾಖಲಾಗಿ ಆರು ದಿನಗಳು ಕಳೆದರು ಆರೋಪಿಯನ್ನು ಪೊಲೀಸರು ಬಂಧಿಸದ ಹಿನ್ನಲೆಯಲ್ಲಿ ರವಿವಾರ ಶಂಕರನಾರಾಯಣ ಪೊಲೀಸ್ ಠಾಣೆಗೆ ವಿಶ್ವಕರ್ಮ ಸಂಘಟನೆಗಳ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸುವಂತೆ ಮನವಿ ನೀಡಿದರು.

ಮನವಿಗೂ ಮೊದಲು ಶಂಕರನಾರಾಯಣ ಪೊಲೀಸ್ ಠಾಣೆಯ ಎದುರು ಸಂಘಟನೆಯ ಮುಖಂಡರು ಸೇರಿ ಸಭೆ ನಡೆಸಿದರು. ಸಭೆಯಲ್ಲಿ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ ಮಾತನಾಡಿ, ಆರೋಪಿ ಶಾಂತರಾಮ ಶೆಟ್ಟಿ ನಾರುಮಕ್ಕಿ ಎಂಬ ವ್ಯಕ್ತಿ ಸಣ್ಣ ಬಾಲಕನ ಮೇಲೆ ಹಲ್ಲೆ ನಡೆಸಿರುವುದು ಹೇಯ ಕೃತ್ಯ. ಕೆಟ್ಟ ಮನಸ್ಥಿತಿ ಇರುವ ವ್ಯಕ್ತಿಗಳು ಮಾಡುವ ಕೃತ್ಯವಾಗಿದೆ. ಈ ಕೃತ್ಯದ ವಿರುದ್ಧ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಕೂಡುವಳಿಯ ಎಲ್ಲಾ ಸಮಾಜದವರು ಮತ್ತು ವಿಶ್ವಕರ್ಮ ಸಮಾಜ ಎಲ್ಲಾ ಸಂಘಟನೆಗಳು ಖಂಡಿಸುತ್ತದೆ. ಆರೋಪಿಯನ್ನು ಅತೀ ಶೀಘ್ರವಾಗಿ ಬಂಧಿಸದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಪೊಲೀಸ್ ಇಲಾಖೆಯನ್ನು ಎಚ್ಚರಿಸಿದರು.

ಹಿಂದೂ ಜಾಗರಣ ವೇದಿಕೆಯ ಮುಖಂಡ ಚಂದ್ರ ಆಚಾರ್ಯ ಶಿರಿಯಾರ ಮಾತನಾಡಿ, ಬಾಲಕನ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿ ಶಾಂತರಾಮ ಶೆಟ್ಟಿ ನಾರುಮಕ್ಕಿ ಬಾಲಕನ ಮೇಲೆ ಹಲ್ಲೆ ಕೇಸಿನಲ್ಲಿ ಎಫ್‌ಐ‌ಆರ್ ದಾಖಲಾಗಿದ್ದರೂ, ಬಾಲಕನ ತಂದೆ ರಾಘವೇಂದ್ರ ಆಚಾರ್ಯ ಅವರು ಕೆಲಸ ಮಾಡುತ್ತಿರುವ ಸ್ಥಳಕ್ಕೆ ಹೋಗಿ ಬೆದರಿಕೆ ಹಾಕಿ ಬಂದಿದ್ದಾನೆ. ಇತಂಹ ವ್ಯಕ್ತಿಯನ್ನು ಪೊಲೀಸರು ಬಂಧಿಸದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

‘ನಮ್ಮ ಭೂಮಿ’ ಸಂಸ್ಥೆಯ ಗಣೇಶ ಶೆಟ್ಟಿ ಅವರು ಮಾತನಾಡಿ, ಆರೋಪಿ ಶಾಂತರಾಮ ಶೆಟ್ಟಿ ಮಾಡಿರುವ ಹಲ್ಲೆ ಮಕ್ಕಳ ಹಕ್ಕಿನ ಉಲ್ಲಂಘನೆಯಾಗಿದೆ. ಇದು ಮಕ್ಕಳ ಮೇಲೆನ ದೌರ್ಜನ್ಯವಾಗಿದೆ. ಮಗು ಆಟಮಾಡುತ್ತಿರುವಾಗ ಮಾಡಿರುವ ಹಲ್ಲೆ ಮತ್ತು ಬೆದರಿಕೆ ಹಾಕಿರುವುದು ಘೋರ ಅಪರಾಧ. ಬಾಲಕನಿಗೆ ದೈಹಿಕ ಹಾಗೂ ಮಾನಸಿಕ ಹಲ್ಲೆಯಾಗಿದೆ. ಈ ಪ್ರಕರಣ ಪೋಕ್ಸೋ ಪ್ರಕರಣದ ಅಡಿಯಲ್ಲಿ ಕೇಸು ದಾಖಲಾಗಬೇಕು. ಮಗುವಿನ ಹಲ್ಲೆ ಪ್ರಕರಣವನ್ನು ಇಡೀ ಕರ್ನಾಟಕಕ್ಕೆ ಗೊತ್ತಾಗಬೇಕು. ಈ ಪ್ರಕರಣವನ್ನು ಹೀಗೇ ಬಿಟ್ಟರೇ ಪದೇ ಪದೇ ಮಕ್ಕಳ ಮೇಲಿನ ಪ್ರಕರಣ ಹೆಚ್ಚಾಗುತ್ತದೆ. ಈ ಪ್ರಕರಣದಲ್ಲಿ ಪೊಲೀಸರು ಒತ್ತಡಕ್ಕೆ ಒಳಗಾಗ ಬಾರದು ಎಂದರು.

ಶಂಕರನಾರಾಯಣ ಪೊಲೀಶ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ನಾಸೀರ್ ಹುಸೇನ್ ಅವರು ಮನವಿಯನ್ನು ಸ್ವೀಕರಿಸಿ ಮಾತನಾಡಿ, ಆರೋಪಿಯನ್ನು ಬಂಧಿಸುವ ಬಗ್ಗೆ ಪೊಲೀಸ್ ತಂಡ ಕಾರ್ಯಾಚರಿಸುತ್ತಿದೆ. ಆರೋಪಿಯ ಮನೆಯನ್ನು ತಲಾಶ್ ಮಾಡಿ, ಮೊಬಲ್‌ನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಯು ಎಲ್ಲೇ ಇದ್ದರೂ, ಕೂಡಲೆ ಬಂಧಿಸುತ್ತೇವೆ ಎಂದರು.

ಈ ಸಂದರ್ಭ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ, ೨ನೇ ಮೊಕ್ತೇಸರ ಪ್ರಭಾಕರ ಆಚಾರ್ಯ ಚಿತ್ತೂರು, ಹಿಂದೂ ಜಾಗರಣಾ ವೇದಿಕೆಯ ಮುಖಂಡ ಚಂದ್ರ ಆಚಾರ್ಯ ಶಿರಿಯಾರ, ನಮ್ಮ ಭೂಮಿ ಸಂಸ್ಥೆಯ ಗಣೇಶ್ ಶೆಟ್ಟಿ, ಶಂಕರನಾರಾಯಣ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಉದಯ ಆಚಾರ್ಯ, ಮಾಗಣಿ ಮೊಕ್ತೇಸರರಾದ ಕೃಷ್ಣಯ್ಯ ಆಚಾರ್ಯ ಜನ್ಸಾಲೆ, ರಾಘವೇಂದ್ರ ಆಚಾರ್ಯ ಉಳ್ಳೂರು-೭೪, ಹಳ್ಳಾಡಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯರಾಮ ಆಚಾರ್ಯ ಹಳ್ಳಾಡಿ, ಅಮಾಸೆಬಲು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಆಚಾರ್ಯ ಕೆಲ, ಶಂಕರನಾರಾಯಣ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಮಂಜುನಾಥ ಆಚಾರ್ಯ ಕಾರೆಬಲು, ನಾಗರಾಜ ಆಚಾರ್ಯ ಗೋಳಿಯಂಗಡಿ, ಪ್ರಕಾಶ್ ಆಚಾರ್ಯ ಕೊಕ್ಕರ್ಣೆ, ಹಲ್ಲೆಗೊಳಗಾದ ಬಾಲಕನ ತಂದೆ ರಾಘವೇಂದ್ರ ಆಚಾರ್ಯ, ತಾಯಿ ಪ್ರತಿಮಾ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!