Sunday, September 8, 2024

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: 12 ಲಕ್ಷ ರೂ. ಮೌಲ್ಯದ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ

ಉಡುಪಿ: ಸಹಕಾರ ಕ್ಷೇತ್ರದಲ್ಲಿ ಸಾಧನೆಗೆ ಹೆಸರಾಗಿ, ಶತಮಾನೋತ್ಸವವನ್ನು ಆಚರಿಸಿಕೊಂಡು ಮುನ್ನಡೆಯುತ್ತಿರುವ ಉಡುಪಿಯ ಪ್ರತಿಷ್ಠಿತ ಸಹಕಾರ ಸಂಘ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 12 ಲಕ್ಷ ರೂ. ಮೌಲ್ಯದ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಜೂ.೨೨ರಂದು ಉಡುಪಿ ಅಜ್ಜರಕಾಡು ಟೌನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಎ‌ಎಸ್‌ಪಿ ಎಸ್.ಟಿ ಸಿದ್ದಲಿಂಗಪ್ಪ ಪುಸ್ತಕದಲ್ಲಿರುವ ಪಠ್ಯವನ್ನು ಓದಿ ಅಂಕ ಗಳಿಸುವುದು ಅನಿವಾರ್ಯವಾದರೂ ಅದರೊಂದಿಗೆ ಜೀವನದಲ್ಲಿ ಉನ್ನತ ಸ್ಥಾನಮಾನ ಗಿಟ್ಟಿಸಿಕೊಳ್ಳಲು ನಿರಂತರ ಕಲಿಕೆ ಅತ್ಯಗತ್ಯ. ಆಧುನಿಕ ಯುಗದಲ್ಲಿ ವಿದ್ಯಾಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಂಡು ಸುದ್ದಿ ಪತ್ರಿಕೆ, ಸಾಹಿತ್ಯಾದಿ ಪುಸ್ತಕಗಳನ್ನು ಓದಿದಾಗ ಜೀವನಕ್ಕೆ ಬೇಕಾದ ಮೌಲ್ಯ, ಸಾಮರ್ಥ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಉಡುಪಿ ಎ‌ಎಸ್‌ಪಿ ಎಸ್.ಟಿ ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಕೆ. ಗಣಪತಿ ಮಾತನಾಡಿ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇರಿಸಿಕೊಂಡು ಆ ನಿಟ್ಟಿನಲ್ಲಿ ಶ್ರಮಿಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಸಂಘದ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ, ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅತೀ ಮುಖ್ಯ. ಈ ನೆಲೆಯಲ್ಲಿ ಸಂಸ್ಥೆ ಸಾಮಾಜಿಕ ಕಾರ್ಯದೊಂದಿಗೆ ಶಿಕ್ಷಣಕ್ಕೆ ಕೊಡುಗೆ ನೀಡುತ್ತಾ ಬಂದಿದೆ ಎಂದರು. ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ವಿಷಯದ ಕುರಿತು ಉಡುಪಿ ಎಂ.ಜಿ.ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿಯವರು ವಿಶೇಷ ಉಪನ್ಯಾಸ ನೀಡಿದರು.

ನೋಟ್ ಪುಸ್ತಕ, ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ:
ಸಾಧಕ ವಿದ್ಯಾರ್ಥಿಗಳಾದ ಸಂಕೇತಾ ಎಚ್.ಎಸ್, ಸಮರ್ಥ ಜೋಷಿ, ಚಿನ್ಮಯಿ ಪೈ, ಶ್ರೀವತ್ಸ ವಿ. (ಎಸೆಸೆಲ್ಸಿ). ಮಾರ್ಕಸ್ ಫ್ರಾಂಕ್ ಮಾಪ್ರನ್ನಿ, ಸೃಷ್ಟಿ ವಿ, ಅಶ್ವಿನ್ ಪ್ರೇಮ್, ಸಾತ್ವಿಕ್ ವಿ. ಶೆಟ್ಟಿ, ವೈಭವಿ ಆಚಾರ್ಯ, ದೀಪಾಲಿ ಶೇರಿಗಾರ್ (ಪಿಯುಸಿ) ಅವರನ್ನು ಸಮ್ಮಾನಿಸಲಾಯಿತು. ಮಲ್ಪೆ ಕಾರುಣ್ಯ ವಿಶೇಷ ಮಕ್ಕಳ ಶಾಲೆ (ಕಂಪ್ಯೂಟರ್), ಇಂದಿರಾನಗರ ಯು.ಬಿ.ಎಂ ಕ್ರಿಸ್ತ ಕಾರುಣ್ಯ ಚರ್ಚ್ (ವಾಟರ್ ಚಿಲ್ಲರ್), ಮೂಳೂರು ಉಚ್ಚಿಲ ಸಿ.ಎಸ್.ಐ ಯುನಿಟಿ ಪ್ರೌಢ ಶಾಲೆ (ಸಮವಸ್ತ್ರ), ಬ್ರಹ್ಮಾವರ ಕುಮ್ರಗೋಡು ಸ.ಹಿ.ಪ್ರಾ ಶಾಲೆ (ಶಾಲಾ ಕಟ್ಟಡ ನಿರ್ಮಾಣಕ್ಕೆ ಸಹಾಯಧನ), ಬುಡ್ನಾರು ಅನುದಾನಿತ ಹಿ.ಪ್ರಾ ಶಾಲೆ (ಸಮವಸ್ತ್ರ, ಶೈಕ್ಷಣಿಕ ಪರಿಕರ), ಕುಕ್ಕಿಕಟ್ಟೆ ಖಾಸಗಿ ಅನುದಾನಿತ ಹಿ.ಪ್ರಾ ಶಾಲೆ (ಸಹಾಯಧನ) ವಿತರಿಸಲಾಯಿತು. ಜಿಲ್ಲೆಯ ೩೫ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಜಾರ್ಜ್ ಸಾಮ್ಯುವೆಲ್, ಶತಮಾನೋತ್ಸವ ಸಮಿತಿ ಸಂಚಾಲಕರಾದ ಪುರುಷೋತ್ತಮ ಪಿ. ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಸಂಜೀವ ಕಾಂಚನ್, ಎಲ್. ಉಮಾನಾಥ, ಸೈಯ್ಯದ್ ಅಬ್ದುಲ್ ರಜಾಕ್, ವಿನಯ ಕುಮಾರ್ ಟಿ.ಎ, ಪದ್ಮನಾಭ ನಾಯಕ್, ಮನೋಹರ ಎಸ್. ಶೆಟ್ಟಿ, ಸಾಧು ಸಾಲ್ಯಾನ್, ಸದಾಶಿವ ನಾಯ್ಕ್, ಜಯಾ ಶೆಟ್ಟಿ, ಗಾಯತ್ರಿ ಎಸ್. ಭಟ್ ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಮಲ್ಪೆ ಶಾಖಾ ವ್ಯವಸ್ಥಾಪಕಾರದ ನವೀನ್ ಕೆ. ನಿರೂಪಿಸಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!