Sunday, October 13, 2024

ಮಳೆಯಿಂದ ಆಗಬಹುದಾದ ಅನಾಹುತ ತಪ್ಪಿಸಲು ಈಗಿಂದಲೇ ಸಜ್ಜಾಗಿ | ಸಾರ್ವಜನಿಕರ ದೂರು ನಿರ್ಲಕ್ಷ್ಯ ಮಾಡದಂತೆ ಅಧಿಕಾರಿಗಳಿಗೆ ಶಾಸಕ ಗಂಟಿಹೊಳೆ ಸೂಚನೆ

ಜನಪ್ರತಿನಿಧಿ (ಬೈಂದೂರು): ಮಳೆಗಾಲದಲ್ಲಿ ಸಂಭವಿಸಬಹುದಾದ ಹಾನಿ ತಡೆಯುವ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಬೇಕು ಮತ್ತು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಡೆಸಬೇಕು. ಸಾರ್ವಜನಿಕರಿಂದ ಯಾವುದೇ ದೂರು ಬಂದರು ನಿಲಕ್ಷ್ಯ ಮಾಡಬಾರದು ಎಂದು ಅಧಿಕಾರಿಗಳಿಗೆ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಸೂಚನೆ ನೀಡಿದರು.

ಬೈಂದೂರು ತಾಲೂಕು ಪಂಚಾಯತಿ ಕಚೇರಿಯಲ್ಲಿ ಮಳೆಗಾಲ ಪೂರ್ವ ಸಿದ್ಧತೆ ಹಾಗೂ ಮಳೆಗಾಲದ ಪ್ರಾಕೃತಿಕ ವಿಕೋಪ ಮುಂಜಾಗೃತ ಕ್ರಮಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಅಧಿಕಾರಿಗಳಿಗೆ ಕೆಲವು ಸೂಚನೆ ನೀಡಿದರು.
ಕ್ಷೇತ್ರವಾಪ್ತಿಯ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆದು ತಕ್ಷಣವೇ ತೆರವು ಮಾಡಬೇಕು. ಅಪಾಯಕಾರಿ ಮರಗಳಿಂದ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಮೆಸ್ಕಾಂ, ಅರಣ್ಯ ಇಲಾಖೆ ಸಹಿತ ವಿವಿಧ ಇಲಾಖೆಗಳು ಸಮನ್ವಯೊಂದಿಗೆ ಈ ಕಾರ್ಯ ಮಾಡಬೇಕು ಎಂದರು.

ಮೆಸ್ಕಾಂ ಸಿದ್ಧವಾಗಿಲ್ಲ ಏಕೆ?
ಮಳೆಗಾಲ ಬೈಂದೂರಿಗೆ ಹೊಸತಲ್ಲ. ಪ್ರತಿ ವರ್ಷವೂ ಬರುತ್ತದೆ. ಆದರೆ, ಮೆಸ್ಕಾಂ ಅಧಿಕಾರಿಗಳು ಮಾತ್ರ ಇದಕ್ಕೆ ಸಿದ್ಧವಾಗಿರುವುದಿಲ್ಲ ಏಕೆ? ಮಳೆಗಾಲಕ್ಕೆ ಬೇಕಾದ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ಸಣ್ಣ ಮಳೆಗೂ ಗ್ರಾಮೀಣ ಭಾಗದಲ್ಲಿ ಕರೆಂಟ್ ಹೋದರೆ ಒಂದೆರೆಡು ದಿನ ಬರುವುದಿಲ್ಲ ಎಂಬ ಆರೋಪ ಇದೆ. ಮೆಸ್ಕಾ ಅಧಿಕಾರಿಗಳು ಮಳೆಗಾಲ ಎದುರಿಸಲು ಎಲ್ಲ ರೀತಿಯಲ್ಲಿ ಸನ್ನದ್ಧರಾಗಬೇಕು ಎಂದರು.

ಪರಿಶೀಲಿಸಿ ವರದಿ ಪಡೆಯಿರಿ
ಶಾಲಾ ಕಟ್ಟಡ ಸಹಿತ ಯಾವುದೇ ಅಪಾಯಕಾರಿ ಕಟ್ಟಡಗಳು ಇದ್ದರೆ ಅದರ ಮಾಹಿತಿ ಪಡೆಯಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಅಪಾಯಕಾರಿ ಕೊಠಡಿಯ ಒಳಗೆ ಪಾಠಕೇಳುವ ಸ್ಥಿತಿ ಇರಬಾರದು. ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕರಿಂದ ವರದಿ ಪಡೆದು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ
ಡೆಂಗ್ಯೂ, ಮಲೇರಿಯಾ ಸೇರಿದಂತೆ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲ ಪಂಚಾಯತಿಗಳ ಪಿಡಿಒಗಳು ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಜಾಗೃತಿ, ಅರಿವು ಮೂಡಿಸುವ ಕಾರ್ಯ ಮಾಡಬೇಕು. ಪಿಡಿಒಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಮೇಲಾಧಿಕಾರಿಗಳ ಗಮನಕ್ಕೆ ತನ್ನಿ
ನರೇಗಾದಡಿ ಕಳೆದ ಬಾರಿ ಕಾಲುಸಂಕ ನಿರ್ಮಿಸಲು ಅವಕಾಶ ನೀಡಿದ್ದರು. ಈ ವರ್ಷ ಅವಕಾಶ ಏಕೆ ನೀಡಿಲ್ಲ? ಕೇಂದ್ರ ಸರ್ಕಾರ ನಿಯಮ ಬದಲಾವಣೆ ಮಾಡಿಲ್ಲ. ರಾಜ್ಯ ಸರ್ಕಾರ ಯಾಕೆ ಹೀಗೆ ಮಾಡಿದೆ? ಇಲ್ಲಿಯ ಸಮಸ್ಯೆಯ ಗಂಭೀರತೆಯನ್ನು ಮೇಲಾಧಿಕಾರಿಗಳಿಗೆ ಮುಟ್ಟಿಸುವ ಪ್ರಯತ್ನವನ್ನು ನೀವುಗಳು ಮಾಡಬೇಕು. ನನ್ನ ನೆಲೆಯಲ್ಲಿ ಈ ಬಗ್ಗೆ ಯಾವ ರೀತಿಯ ಹೋರಾಟ ಮಾಡಬೇಕೋ ಅದನ್ನು ಮಾಡಿಯೇ ಮಾಡುತ್ತೇನೆ ಎಂದರು.

ಜಾಗೃತಿ ಮೂಡಿಸಿ
ಮಳೆಗಾಲದಲ್ಲಿ ದೋಣಿ ದುರಂತ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಮೀನುಗಾರಿಗೆ ಲೈಫ್ ಜಾಕೆಟ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಹಿಂದಿನ ಪ್ರಕರಣಗಳ ಪರಿಹಾರ ಬಾಕಿ ಇದ್ದರೆ ತಕ್ಷಣವೇ ನೀಡಬೇಕು. ಈ ಬಾರಿ ಯಾವುದೇ ಅನಾಹುತ ಆಗದಂತೆ ಜಾಗೃತಿ, ಅರಿವು ಮೂಡಿಸುವ ಜತೆಗೆ ಲೈಫ್ ಜಾಕೆಟ್ ಒದಗಿಸುವ ಕಾರ್ಯ ಮಾಡಬೇಕು ಎಂದರು.

ಕಂದಾಯ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬೈಂದೂರು ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆ, ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮೀ, ಬೈಂದೂರು ಹಾಗೂ ಕುಂದಾಪುರ ಕಾರ್ಯನಿರ್ವಹಣಾಧಿಕಾರಿಗಳಾದ ಎನ್. ಭಾರತಿ, ಶಶಿಧರ್, ಬೈಂದೂರು ವೃತ್ತ ನಿರೀಕ್ಷಕರು, ಪಿಡಿಒಗಳು, ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!