Sunday, September 8, 2024

ನೀರು ತುಂಬುವ ಅಸುರಕ್ಷಿತ ಹೊಂಡಗಳು: ನಿಗಾ ಇರಲಿ

ಮಳೆಗಾಲ ಬಂತೆಂದರೆ ಕೆಲವು ವರ್ಷಗಳ ಹಿಂದೆ ಹಟ್ಟಿಯಂಗಡಿ ಸಮೀಪ ಸಂಭವಿಸಿದ ದುರ್ಘಟನೆ ಇನ್ನೂ ಮರೆಯುವಂತಿಲ್ಲ. ಆ ಬಳಿಕ ಅಂತಹದ್ದೆ ಹಲವು ಘಟನೆಗಳು ನಡೆದವು. ಆ ನಂತರವೇ ಸರ್ಕಾರ, ಸಂಬಂಧಪಟ್ಟ ಇಲಾಖೆಗಳು ಒಂದಿಷ್ಟು ಜಾಗೃತವಾದವು. ಆದರೆ ಈ ಜಾಗೃತಿ ಎನ್ನುವುದು ಒಂದೊಂದು ದುರ್ಘಟನೆ ಸಂಭವಿಸಿದಾಗ ಮಾತ್ರ ಎಚ್ಚರವಾಗುವುದು ದುರಾದೃಷ್ಟಕರ. ನಮ್ಮ ವ್ಯವಸ್ಥೆಗಳು ಹೇಗಿದೆಯೆಂದರೆ ಅವಘಡ ಸಂಭವಿಸುವ ತನಕ ಎಚ್ಚೆತ್ತುಕೊಳ್ಳದೆ ಇರುವುದು. ಅಸುರಕ್ಷಿತವಾಗಿರುವ ಹೊಂಡಗಳ ಬಗ್ಗೆ ಪೂರ್ವ ಮಾಹಿತಿ ಇದ್ದರೂ ಕೂಡಾ ಅದಕ್ಕೊಂದು ಕನಿಷ್ಠ ತಡೆಬೇಲಿ ನಿರ್ಮಿಸುವುದು ಕೂಡಾ ಸಂಬಂಧಪಟ್ಟವರಿಗೆ, ಸ್ಥಳೀಯ ವ್ಯವಸ್ಥೆಗಳಿಗೆ ಸಾಧ್ಯವಿಲ್ಲವೇ? ಈಗ ಅಲ್ಲಲ್ಲಿ ಮದಗಳು, ಕೃಷಿ ಹೊಂಡಗಳ ನಿರ್ಮಾಣವಾಗುತ್ತದೆ. ಆವುಗಳಿಗೆ ತಡೆಬೇಲಿಯನ್ನು ಆ ಗುತ್ತಿಗೆದಾರರ ಮೂಲಕವೇ ಮಾಡಿಸಲು ಅವಕಾಶವಿದೆ. ಇನ್ನೂ ಹಳ್ಳಿ ಹಳ್ಳಿಗಳಲ್ಲಿ ಕೆರೆಗಳ ಹೂಳೆತ್ತುವ ಕಾರ್ಯವೂ ನಡೆಯುತ್ತದೆ. ಅಲ್ಲಿಯೂ ಕೂಡಾ ತಡೆಬೇಲಿ ಇರುವುದಿಲ್ಲ. ಕಲ್ಲು ಗಣಿಗಾರಿಕೆ ನೆಡೆಸುವ ಕಲ್ಲು ಕೋರೆಗಳದ್ದು ಇನ್ನೊಂದು ರೀತಿ. ಅಲ್ಲಿ ಕೂಡಾ ಕಲ್ಲು ತಗೆದು ಹೊಂಡಗಳು ೫೦ರಿಂದ ನೂರು ಅಡಿಗಳಿಗೂ ಆಳ ಹೋಗುತ್ತದೆ. ಶಿಲೆಗಲ್ಲು ಕೊರೆಗಳಲ್ಲಿಯೂ ಕೂಡಾ ಪ್ರತೀವರ್ಷ ಮಳೆಗಾಲದಲ್ಲಿ ನಿಂತ ನೀರಿಗೆ ಪ್ರಾಣ ಬಲಿಯಾಗುತ್ತದೆ. ಕೆಲವೆಡೆ ಸುದ್ಧಿಯಾಗುತ್ತದೆ. ಇನ್ನೂ ಕೆಲವೆಡೆ ಸುದ್ಧಿಯೇ ಆಗುವುದಿಲ್ಲ. ಕೊಜೆ ಹೊಂಡ, ಕೆಂಪು ಕಲ್ಲು ಗಣಿಗಾರಿಕೆ ನಡೆಸುವ ಹೊಂಡ ಮಾತ್ರವಲ್ಲ ಸಾರ್ವಜನಿಕ ಹಾಗೂ ಖಾಸಗಿ ವ್ಯಕ್ತಿಗಳ ಸ್ವಾಧೀನದಲ್ಲಿರುವ ತೆರೆದ ಹೊಂಡಗಳು ಮಳೆಗಾಲದಲ್ಲಿ ನೀರು ತುಂಬಿರುತ್ತದೆ. ಅಸುರಕ್ಷಿತವಾದ ಹೊಂಡಗಳಿಂದ ಅನಾಹುತ ಸಂಭವಿಸಿದರೆ ಅದಕ್ಕೆ ಸಂಬಂಧಪಟ್ಟವರ ಬೇಜಬ್ದಾರಿಗೆ ಸೂಕ್ತ ಕ್ರಮವಾಗಬೇಕು. ಆಗ ಕಾನೂನು, ವ್ಯವಸ್ಥೆಯ ಬಗ್ಗೆ ಭಯ ಆರಂಭವಾಗುತ್ತದೆ. ಅಸುರಕ್ಷಿತವಾದ ಹೊಂಡಗಳಿಗೆ ತಡೆಬೇಲಿಯನ್ನು ತನ್ನಿಂತಾನೇ ಮಾಡುತ್ತಾರೆ. ಒಂದೊಂದು ಪ್ರಾಣವೂ ಕೂಡಾ ಅಮೂಲ್ಯ, ಅದರ ಅರಿವು ಎಲ್ಲರಿಗೂ ಇರಬೇಕು. ಹೊಣೆಗಾರಿಕೆ ಸಡಿಲವಾಗಬಾರದು. ಸಡಿಲವಾಗಲು ಮೇಲಾಧಿಕಾರಿಗಳು ಬಿಡಬಾರದು. ಮಳೆಗಾಲದ ದಿನಗಳು ಯಾವುದೇ ಅನಾಹುತಗಳನ್ನು ನಿರ್ಮಾಣ ಮಾಡದೇ ಇರಲಿ, ಮಾನವನ ಆಚಾತುರ್ಯದಿಂದ ಸಂಭವಿಸುವ ಹಾನಿಗೆ ನಿಯಂತ್ರಣ ಆಗಬೇಕು. ಅಧಿಕಾರಿಗಳು, ಸಾರ್ವಜನಿಕರು, ಜವಬ್ದಾರಿಯುತ ಸ್ಥಾನದಲ್ಲಿರುವ ಪ್ರತೀಯೋರ್ವರು ಕೂಡಾ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!