Sunday, September 8, 2024

ಕಟ್ ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಗೆ ನೂತನ ವಿಗ್ರಹ: ಜೂ.12ರಂದು ರಕ್ತಚಂದನ ಮರ ಶಿಲ್ಪಿಗಳಿಗೆ ಹಸ್ತಾಂತರ

ಕುಂದಾಪುರ: ಉಡುಪಿ ಜಿಲ್ಲೆಯ ಪ್ರಮುಖ ದೈವಸ್ಥಾನಗಳಲ್ಲಿ ಒಂದಾಗಿರುವ ಕಟ್‌ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದ ನೂತನ ಶ್ರೀದೇವಿಯ ವಿಗ್ರಹದ ರಚನೆಗೆ ಅಗತ್ಯವಾಗಿರುವ ರಕ್ತಚಂದನ ಮರವನ್ನು ಜೂ.12 ರಂದು ಶಿವಮೊಗ್ಗದಿಂದ ಕೊಲ್ಲೂರು ಮಾರ್ಗವಾಗಿ ಕಟ್‌ಬೇಲ್ತೂರಿಗೆ ವೈಭವದಿಂದ ತರಲಾಗುವುದು ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭವ್ಯ ಪುರಾಣ ಇತಿಹಾಸವನ್ನು ಹೊಂದಿರುವ ಕಟ್‌ಬೇಲ್ತೂರು ಭದ್ರಮಹಾಕಾಳಿ ಅಮ್ಮನವರ ದೈವಸ್ಥಾನದಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಮೂಡಿದ ಅಭಿಪ್ರಾಯದಂತೆ ಅಮ್ಮನವರಿಗೆ ರಕ್ತಚಂದನ ಮರದಲ್ಲಿ ನೂತನ ವಿಗ್ರಹ ನಿರ್ಮಾಣ ಮಾಡಿ ಪ್ರತಿಷ್ಠಾಪನೆ ಮಾಡಲು ನಿಶ್ಚಯ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅನುಮತಿಯನ್ನು ಕ್ರಮಬದ್ಧವಾಗಿ ಪಡೆದುಕೊಂಡು ಶಿವಮೊಗ್ಗದ ಅರಣ್ಯ ಇಲಾಖೆಯ ಡಿಪೋದಲ್ಲಿ ಇರಿಸಲಾದ ರಕ್ತ ಚಂದನ ಮರವನ್ನು ಜೂ.12 ರಂದು ದೈವಸ್ಥಾನಕ್ಕೆ ತಂದು ವಿಗ್ರಹ ರಚನೆ ಮಾಡಲಿರುವ ಕೋಟೇಶ್ವರದ ಪ್ರಸಿದ್ಧ ಶಿಲ್ಪಿಗಳಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೆ.ಲಕ್ಷ್ಮೀನಾರಾಯಣ‌ಆಚಾರ್ಯ ಹಾಗೂ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರಿಗೆ ವಿದ್ಯುಕ್ತವಾಗಿ ಹಸ್ತಾಂತರಿಸಲಾಗುವುದು.

ಜೂ.೧೨ ರಂದು ಬೆಳಿಗ್ಗೆ ೧೧ ರ ಶುಭ ಮಹೂರ್ತದಲ್ಲಿ ಶಿವಮೊಗ್ಗದಿಂದ ಹೊಸನಗರ, ನಗರ, ಸಂಪೇಕಟ್ಟೆ, ಕೊಲ್ಲೂರು, ಇಡೂರು, ವಂಡ್ಸೆ, ದೇವಲ್ಕುಂದ ಮಾರ್ಗವಾಗಿ ವೈಭವದ ಮೆರವಣಿಗೆಯಲ್ಲಿ ರಕ್ತ ಚಂದನ ಮರವನ್ನು ಕಟ್‌ಬೇಲ್ತೂರು ದೈವಸ್ಥಾನಕ್ಕೆ ತರಲಾಗುವುದು. ಮಾರ್ಗದ ಮಧ್ಯೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಲಾಗುವುದು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಠ್ಠಲ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಆನಂದ ಶೆಟ್ಟಿ, ಮೂರು ಮನೆಯವರು ಹಾಗೂ ಮೂರು ಗ್ರಾಮಸ್ಥರ ಸಮನ್ವಯದಲ್ಲಿ ಪೂರ್ವ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಮೆರವಣಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀದೇವಿಯ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕೆ.ಗೋಪಾಲ ಪೂಜಾರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!