Sunday, September 8, 2024

ಬ್ರಹ್ಮಾವರದಲ್ಲಿ ಹಲಸು-ಹಣ್ಣು ಮೇಳ ಆರಂಭ: ರಾಶಿ ರಾಶಿ ಹಲಸು-ಮಾವುಗಳ ವೈಭವ

 

ಬ್ರಹ್ಮಾವರ, ಮೇ 31: (ಜನಪ್ರತಿನಿಧಿ ವಾರ್ತೆ) ರೋಟರಿ ಬ್ರಹ್ಮಾವರ, ಸೌತ್ ಕೆನರಾ ಪೋಟೋಗ್ರಾಫರ್‍ಸ್ ಅಸೋಸಿಯೇಶನ್ , ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಬ್ರಹ್ಮಾವರ ವಲಯ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಶಿವಮೊಗ್ಗ ಹಾಗು ಐ.ಸಿ.ಆರ್ ಕೃಷಿ ವಿಜ್ಞಾನ ಕೇಂದ್ರ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಡಿಪ್ಲೋಮಾ ಕೃಷಿ ಮಹಾ ವಿದ್ಯಾಲಯ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಹಲಸು ಮತ್ತು ಹಣ್ಣು ಮೇಳ ಬ್ರಹ್ಮಾವರ ಎಸ್.ಎಮ್,ಎಸ್. ಸಮುದಾಯ ಭವನದಲ್ಲಿ ಆರಂಭಗೊಂಡಿದೆ.

ವಿವಿಧ ತಳಿಯ ಹಲಸು ಹಣ್ಣುಗಳ ಮಾರಾಟ ವಿಶೇಷವಾಗಿ ಗಮನ ಸಳೆಯಿತು. ರಾಜ್ಯದ ಬೇರೆ ಬೇರೆ ಭಾಗದ ಹಲಸು ತಳಿಯ ಪರಿಚಯ, ಕೆಂಪು ಹಲಸು, ರುದ್ರಾಕ್ಷಿ, ಚಂದ್ರ ಚಕ್ಕೆ, ಸರ್ವ‌ಋತು ಹಲಸು , ದೊಡ್ಡ ಗಾತ್ರ ಹಲಸು, ಸ್ಥಳೀಯ ಪ್ರಬೇದ ಹಲಸು ಸೇರಿದಂತೆ ವಿವಿಧ ಜಾತಿಯ ಹಲಸು ಹಣ್ಣುಗಳು ಮೇಳದಲ್ಲಿದ್ದವು.

ದೊಡ್ಡ ಮಟ್ಟದಲ್ಲಿ ಹಲಸು ಹಣ್ಣುಗಳ ಸಂಗ್ರಹವೇ ಮೇಳಕ್ಕೆ ಆಗಮಿಸಿದೆ. ಭರ್ಜರಿ ವ್ಯಾಪಾರವೂ ನಡೆಯುತ್ತಿದೆ. ಹಲಸು ಹಣ್ಣನ್ನು ತೋಳೆ ಬಿಡಿಸಿಯೂ ಮಾರಾಟ ಮಾಡಲಾಗುತ್ತಿದೆ. ಜೊತೆಯಲ್ಲಿ ಹಲಸಿನ ವಿವಿಧ ಮೌಲ್ಯವರ್ದಿತ ಉತ್ಪನ್ನಗಳು, ಹಪ್ಪಳ, ಚಿಪ್ಸ್, ಐಸ್ ಕ್ರೀಂ, ಹಲ್ವ, ಚಾಕಲೇಟ್ ಇತ್ಯಾದಿಗಳ ಮಳಿಗೆಗಳು ಇವೆ. ಹಲಸಿನ ಹಣ್ಣಿನ ವಿವಿಧ ಖಾದ್ಯಗಳು ಇಲ್ಲಿ ಗಮನ ಸಳೆಯುತ್ತಿದೆ. ಹಲಸಿನ ಹಣ್ಣಿನ ದಮ್ ಬಿರಿಯಾನಿ, ಘೀರೈಸ್, ಮಂಚೂರಿ, ಹಲಸಿನ ಹಣ್ಣಿನ ಕೇಸರಿಭಾತ್, ಹಲಸಿನ ಬೋಂಡ, ಬಜೆ, ಪೋಡಿ, ಬಿಸಿಬಿಸಿ ಹಲಸಿನ ಹೋಳಿಗೆಗಳು ಮೇಳದಲ್ಲಿವೆ.

ಜೊತೆಯಲ್ಲಿ ಹಣ್ಣುಗಳ ರಾಜನೆಂದೆ ಕರೆಯಲ್ಪಡುವ ಮಾವಿನ ಹಣ್ಣಿನ ಪ್ರದರ್ಶನ ಮಾರಾಟವೂ ನಡೆಯುತ್ತಿದೆ. ಮಲ್ಲಿಕಾ, ಅಲ್ಫೋನ್ಸೋ, ಅಮ್ರಪಾಲಿ, ಬಾದಾಮಿ, ಬಂಗನಪಲ್ಲಿ, ಬೆನೆಟ್ ಅಲ್ಪೋನ್ಸೋ, ದಾಶೇರಿ, ಡಾಟ್, ನೀಲಂ, ರಸಪುರಿ, ತೋತಾಪುರಿ, ಸಕ್ಕರೆ ಗುಟ್ಟ, ಮಲ್‌ಗೋಬಾ ಸೇರಿದಂತೆ ಸ್ಥಳೀಯ ಜಾತಿಯ ಮಾವಿನ ತಳಿಗಳು ಇಲ್ಲಿವೆ. ಕಾಳಪ್ಪಡಿಯ ಸಣ್ಣ ಗಾತ್ರದ ಮಾವುಗಳು ಇಲ್ಲಿ ಗಮನ ಸಳೆಯುತ್ತಿದೆ.

ಡ್ರ್ಯಾಗನ್ ಫ್ರುಟ್ಸ್, ಫ್ಯಾಶನ್ ಫ್ರುಟ್ಸ್ ಸೇರಿದಂತೆ ವಿದೇಶಿ ಹಣ್ಣುಗಳು ಮೇಳದಲ್ಲಿವೆ. ಕಾಡು ಪ್ರದೇಶದಲ್ಲಿ ಬೆಳೆಯುವ ಹೆಬ್ಬಲಸು ಹಣ್ಣುಗಳು ಕೂಡಾ ಇದೆ. ಹಣ್ಣುಗಳನ್ನು ನೇರ ಕೃಷಿಕರೇ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಬೇರೆ ಬೇರೆ ಜಿಲ್ಲೆಯ ರೈತರು ಇಲ್ಲಿ ಭಾಗವಹಿಸಿ ತಾವು ಬೆಳೆದ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.

ರಾಘವೇಂದ್ರ ಕೊಡ್ಲಾಡಿಯವರ ತರಕಾರಿ ಕಲಾಕೃತಿಗಳು ಗಮನ ಸಳೆಯುತ್ತಿದೆ. ಕಲ್ಲಂಗಡಿಯಲ್ಲಿ ಶ್ರೀರಾಮ, ಸೇರಿದಂತೆ ಪ್ರಸಿದ್ಧ ವ್ಯಕ್ತಿಯ ಚಿತ್ರಗಳು ಗಮನ ಸಳೆಯುತ್ತಿವೆ. ಸ್ಥಳದಲ್ಲಿಯೇ ತರಕಾರಿಯಲ್ಲಿ ಕಲೆ ಅರಳಿಸುತ್ತಾ ಅವರು ಮೇಳದಲ್ಲಿ ಭಾಗವಹಿಸಿದವರ ಮನ ಸಳೆಯುತ್ತಿದ್ದಾರೆ.

ಸ್ಥಳದಲ್ಲಿಯೇ ಹಲಸಿನ ವಿವಿಧ ಖಾದ್ಯಗಳನ್ನು ಪ್ರಾತ್ಯಕ್ಷಿಕ ರೂಪದಲ್ಲಿ ತೋರಿಸಲಾಗುತ್ತಿದೆ. ಹಲಸು ಹಣ್ಣು ಕೇವಲ ಕಡಬು, ದೋಸೆ, ಇಡ್ಲಿ, ಮುಳ್ಕ ಇಷ್ಟಕ್ಕೆ ಸೀಮಿತವಲ್ಲ, ನೂರಾರು ಬಗೆಯ ಖಾದ್ಯವನ್ನು ಹಲಸಿನ ಹಣ್ಣಿನಲ್ಲಿ ಮಾಡಬಹುದು ಎನ್ನುವುದನ್ನು ಇಲ್ಲಿ ಗಮನಿಸಬಹುದು. ದಮ್ ಬಿರಿಯಾನಿ, ಘೀರೈಸ್ ಕೂಡಾ ಇಲ್ಲಿ ತಯಾರಿಸಲಾಗುತ್ತಿದೆ. ಹಲಸಿನ ಪೋಡಿ, ಮುಳ್ಕ, ಹಲಸಿನ ಜಾಮ್, ಹಲಸಿನ ಬೀಜದ ಪತ್ರೋಡೆ, ಹಲಸಿನ ಕಬಾಬ್, ಹಲಸಿನ ಮಂಚೂರಿ, ಹಲಸಿನ ಪಾನಿಪುರಿ, ಹಲಸಿನ ಫಲಾವ್, ಹಲಸಿನ ಕೇಕ್, ಹಲಸಿನ ಚಿಲ್ಲಿ ಹೀಗೆ ನೂರಾರು ಬಗೆಗೆ ತಿನಿಸುಗಳು ಖಾದ್ಯಪ್ರಿಯರ ಮನ ಸೆಳೆಯುತ್ತಿದೆ.

ವಿವಿಧ ತಳಿಯ ಹಣ್ಣಿನ ಹಾಗೂ ಹೂವಿನ ಕಸಿ ಗಿಡಗಳು ಮಾರಾಟ ಬಿರುಸಾಗಿ ನಡೆಯುತ್ತಿದೆ. ಅವಿಭಜಿತ ಜಿಲ್ಲೆಯ ಪ್ರತಿಷ್ಟಿತ ನರ್ಸರಿಗಳು ಮೇಳಕ್ಕೆ ಆಗಮಿಸಿವೆ. ವಿಶೇಷವಾಗಿ ವಿವಿಧ ಜಾತಿಯ ಹಲಸಿನ ಗಿಡಗಳ ಮಾರಾಟ ಭರಾಟೆ ನಡೆಯುತ್ತಿದೆ. ಮುಖ್ಯವಾಗಿ ಕೆಂಪು ಹಲಸು, ಚಂದ್ರ ಹಲಸಿನ ಗಿಡಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಮೇಳದಲ್ಲಿ ನೂರಾರು ಮಳಿಗೆಗಳು, ಹಲವಾರು ತಿನಿಸುಗಳು, ಹಣ್ಣಿನ ಬಗೆಬಗೆಯ ಐಸ್ ಕ್ರೀಂಗಳು, ಹಲಸಿನ ಹೋಳಿಗೆ, ವಿವಿಧ ಹಣ್ಣುಗಳು, ತರಕಾರಿ ಬೀಜಗಳು, ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳ ಮಾರಾಟವೂ ನಡೆಯುತ್ತಿದೆ.

ಬ್ರಹ್ಮಾವರದಲ್ಲಿ ಹಲಸು ಹಾಗೂ ಹಣ್ಣಿನ ಮೇಳ ದೊಡ್ಡ ಜಾತ್ರೆ ವಾತಾವರಣ ಏರ್ಪಟ್ಟಿದೆ. ವ್ಯವಸ್ಥಿಯತವಾಗಿ ಮೇಳವನ್ನು ಸಂಘಟಿಸಲಾಗಿದೆ. ರಾಜ್ಯದ ಬೇರೆ ಬೇರೆ ಪ್ರಸಿದ್ಧ ಹಣ್ಣುಗಳ ಬೆಳೆಗಾರರು, ವಿವಿಧ ವ್ಯಾಪಾರ ಮಳಿಗೆಗಳನ್ನು ಇಲ್ಲಿಗೆ ಕರೆಸಲಾಗಿದೆ.
ಹಲಸು ಹಾಗೂ ಹಣ್ಣಿನ ಮೇಳ ಮೇ 31ರಿಂದ ಜೂನ್ 2ರ ತನಕ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!