Sunday, September 8, 2024

ಸಮುದಾಯ ತಿಂಗಳ ಓದು ಕಾರ್ಯಕ್ರಮ-“ಬುದ್ಧನ ಬೆಳಕಿನಲ್ಲಿ”

ಕುಂದಾಪುರ: ಸಾಮಾನ್ಯವಾಗಿ ಸಿದ್ದಾರ್ಥ ನಡುರಾತ್ರಿಯಲ್ಲಿ ತನ್ನ ಕಂದ ರಾಹುಲ ಪತ್ನಿ ಯಶೋಧರೆಯನ್ನು ತೊರೆದು ಯಾರಿಗೂ ಹೇಳದೆ ಅರಮನೆಯನ್ನು ತೊರೆದು ಹೋದ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಇದೆ. ಆದರೆ ಸಿದ್ದಾರ್ಥ ಬಾಲ್ಯದಿಂದಲೂ ಕರುಣೆ ಅನುಕಂಪ ಮಾನವೀಯ ಗುಣಗಳೊಂದಿಗೆ ಸತ್ಯ, ಅಹಿಂಸೆ ಹಾಗೂ ನ್ಯಾಯದ ಪರವಾಗಿ ತನ್ನದೇ ಆದ ಪರಿಕಲ್ಪನೆಗಳನ್ನು ರೂಡಿಸಿಕೊಂಡಿದ್ದ. ಸಿದ್ದಾರ್ಥ ದೇಶಾಂತರ ಹೋಗಲು ಕಾರಣವಾದ ಅಂಶವೆಂದರೆ, ರೋಹಿಣಿ ನದಿಯ ವಿವಾದದಲ್ಲಿ ಶಾಕ್ಯ ಸಂಘದ ನಿಯಮದಂತೆ ದೇಶಾಂತರ ಹೋಗುವ ಶಿಕ್ಷೆಯನ್ನು ಆಯ್ದುಕೊಂಡ ಸಿದ್ದಾರ್ಥ ತನ್ನ ಹೆಂಡತಿ ಮತ್ತು ಕುಟುಂಬದ ಸದಸ್ಯರೆಲ್ಲರ ಗಮನಕ್ಕೂ ತಂದು ಎಲ್ಲರನ್ನು ಒಪ್ಪಿಸಿ ಹಾಡು ಹಗಲಿನಲ್ಲೇ ದೇಶಾಂತರ ಹೊರಡುವ ತೀರ್ಮಾನ ಕೈಗೊಳ್ಳುತ್ತಾನೆ. ಇಂತಹ ಸತ್ಯಕ್ಕೆ ವಿರುದ್ಧವಾಗಿ ಕನ್ನಡ ಸಾಹಿತ್ಯದಲ್ಲಿ ಅನೇಕ ತಪ್ಪು ಸಂದೇಶ ನೀಡುವ ಸಂಕಥನಗಳು ಹುಟ್ಟಿಕೊಂಡಿವೆ.ಅದೇ ಸತ್ಯವೆಂದು ನಂಬಿದವರು ಹಾಗೆ ನಂಬುವವರು ಈಗಲೂ ಇದ್ದಾರೆ. ಎಂದು ಉಡುಪಿಯ ವಕೀಲರು ಹಾಗೂ ಸಂಬುದ್ಧ ಟ್ರಸ್ಟ್ ನ ಕಾರ್ಯದರ್ಶಿಯಾಗಿರುವ ಮಂಜುನಾಥ್ ವಿ ಅವರು ಹೇಳಿದರು.

ಅವರು ಸಮುದಾಯ ಕುಂದಾಪುರ ಕಳೆದ ಐದು ವರ್ಷಗಳಿಂದ ಪ್ರತಿ ತಿಂಗಳೂ ಆಯೋಜಿಸುತ್ತಿರುವ ಮೇ “ತಿಂಗಳ ಓದು “ಬುದ್ಧ ಪೂರ್ಣಿಮೆ ಪ್ರಯುಕ್ತ ನಡೆಸಲಾದ ಬುದ್ಧನ ಬೆಳಕಿನಲ್ಲಿ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡುತ್ತಿದ್ದರು.

ಬುದ್ಧ ಬೋಧಿಸಿದ ಪಂಚಶೀಲ ತತ್ವಗಳು, ಅಷ್ಟಾಂಗ ಮಾರ್ಗಗಳು, ಬೌದ್ಧ ಚಿಂತನ ವಿಧಾನಗಳ ಕುರಿತು ಸವಿವರವಾಗಿ ವಿಷಯ ಪ್ರಸ್ತಾವ ಮಾಡಿದರು. ನಂತರ ಮಾತನಾಡಿದ ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎಂ ದಿನೇಶ್ ಹೆಗ್ಡೆ ಅವರು ಸಂವಿಧಾನ ಶಿಲ್ಪಿ ಡಾ. ಬಿ‌ಆರ್ ಅಂಬೇಡ್ಕರ್ ಅವರ ಮೇಲೆ ಬೌದ್ಧ ಚಿಂತನೆಗಳ ಪ್ರಭಾವಗಳನ್ನು ವಿವರಿಸಿದರು. ನಂತರ ವೇದಿಕೆಯಲ್ಲಿ ಉಪಸ್ಥಿತರಿದ್ದ ಭಂಡಾರ್ ರ್ಕಾರ್ಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ರೇಖಾ ಬನ್ನಾಡಿಯವರು ಬುದ್ಧನ ಚಿಂತನೆಗಳು ಇಂದಿಗೂ ಎಷ್ಟು ಪ್ರಸ್ತುತ ಎನ್ನುವ ಕುರಿತು ವಿವರಿಸಿದರು. ನಂತರ ನಡೆದ ಸಂವಾದದಲ್ಲಿ ವಿವಿಧ ಪ್ರಶ್ನೆಗಳ ಕುರಿತು ಚರ್ಚಿಸಲಾಯಿತು.

ಪ್ರಾಸ್ತಾವಿಕ ಮಾತುಗಳಲ್ಲಿ ಸಮುದಾಯದ ಅಧ್ಯಕ್ಷರಾದ ಡಾ.ಸದಾನಂದ ಬೈಂದೂರು ಅವರು ಅಗಲಿದ ಸಾಹಿತಿ ಲಕ್ಕೂರು ಆನಂದ, ಎಸ್ ಎಪ್ ಐ, ಸಮುದಾಯ ಮುಂತಾದ ಪ್ರಗತಿಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಸಾಹಿತಿ ಆರ್ ಜಯಕುಮಾರ್ ಹಾಗೂ ಸ್ಥಳೀಯ ಪರಿಸರ ಪ್ರೇಮಿ ಡಾ.ಎಚ್ ಎಸ್ ಮಲ್ಲಿ ಅವರಿಗೆ ಸಮುದಾಯ ಸಂಘಟನೆಯ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಮರ್ಪಿಸಲಾಯಿತು. ಸಮುದಾಯ ನಡೆದು ಬಂದ ಹಾದಿ, ತಿಂಗಳ ಓದಿನ ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗಣೇಶ್ ಶೆಟ್ಟಿ, ಚಿನ್ನ ಗಂಗೇರ ಹಾಗೂ ಅವಂತಿ ಬುದ್ಧನ ನಲ್ನುಡಿಗಳನ್ನು ವಾಚಿಸಿದರು. ಸ್ಥಳೀಯ ಪ್ರಾಧ್ಯಾಪಕರು ಶಿಕ್ಷಕರು, ವಕೀಲರು, ವೈದ್ಯರು, ಸಮುದಾಯದ ಹಿತೈಷಿಗಳು ಬುದ್ಧಿಷ್ಟ್ ಸೊಸೈಟಿ ಆಫ್ ಇಂಡಿಯಾ, ಕುಂದಾಪುರ ತಾಲೂಕು ದಲಿತ ಸಂಘರ್ಷ ಸಮಿತಿಯ ಸದಸ್ಯರು, ಸಂಬುದ್ಧ ಟ್ರಸ್ಟ್ ನ ಪದಾಧಿಕಾರಿಗಳು, ಕುಂದಾಪುರ ಸಮುದಾಯದ ಹಿತೈಷಿಗಳು ಸದಸ್ಯರು ಉಪಸ್ಥಿತರಿದ್ದರು.

ಪುಸ್ತಕ ಸರಸ್ವತಿ ವತಿಯಿಂದ ಬುದ್ಧನ ಕುರಿತಾದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ತಿಮ್ಮಪ್ಪ ಗುಲ್ವಾಡಿ ನಿರ್ವಹಿಸಿದ್ದರು. ಬಾಲಕೃಷ್ಣ ಕೆ ಎಂ ಹಾಗೂ ವಿಕ್ರಂ ಕೆ ಎಸ್ ಸಹಕರಿಸಿದರು. ಕುಂದಾಪುರ ಸಮುದಾಯದ ಕಾರ್ಯದರ್ಶಿ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!