Sunday, September 8, 2024

ಟ್ವೆಂಟಿ -20 ವಿಶ್ವಕಪ್ ಕ್ರಿಕೆಟ್ ಸಮರಕ್ಕೆ ಟೀಂ ಇಂಡಿಯಾ ಆಯ್ಕೆಯಲ್ಲಿ ಎಡವಿದ ಸೆಲೆಕ್ಷನ್ ಕಮಿಟಿ ಫಾರ್ಮ್‌ನಲ್ಲಿದ್ದರೂ ಕನ್ನಡಿಗ ರಾಹುಲ್ ಗೆ ತಂಡದಲ್ಲಿ ಸ್ಥಾನ ಇಲ್ಲ

-ಎಸ್. ಜಗದೀಶ್ಚಂದ್ರ ಅಂಚನ್ , ಸೂಟರ್ ಪೇಟೆ

ಕೆಲವು ದಿನಗಳಿಂದ ಕ್ರಿಕೆಟ್​ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದ್ದ ಟ್ವೆಂಟಿ -20 ವಿಶ್ವಕಪ್​ ಕ್ರಿಕೆಟ್‌ ಸಮರಕ್ಕೆ ಟೀಮ್​ ಇಂಡಿಯಾ  ಪ್ರಕಟಗೊಂಡಿದೆ. ದಿನೇ ದಿನೇ ಕುತೂಹಲವನ್ನು ಕೆರಳಿಸುತ್ತಿರುವ ಐಪಿಎಲ್‌ ಟ್ವೆಂಟಿ -20 ಕ್ರಿಕೆಟ್‌ ಪಂದ್ಯಾಟದ ಮಧ್ಯೆಯೇ ಸೆಲೆಕ್ಷನ್ ಕಮಿಟಿ ಈ ಆಯ್ಕೆ ನಡೆಸಿದೆ. ಮೇಲ್ನೋಟಕ್ಕೆ ಬಲಿಷ್ಠ ತಂಡವನ್ನೇ ಸೆಲೆಕ್ಷನ್ ಕಮಿಟಿ ಆಯ್ಕೆ ಮಾಡಿದರೂ  ತಂಡದ ಆಯ್ಕೆಯ ವಿಚಾರದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ.

ಟೀಮ್ ಸೆಲೆಕ್ಷನ್ ಕಮಿಟಿಯ ಅಧ್ಯಕ್ಷ ಅಜಿತ್​ ಅಗರ್ಕರ್ ಹಾಗೂ ಅವರ ಬಳಗ ಅಳೆದು ತೂಗಿ  ತಂಡವನ್ನು ಆಯ್ಕೆ ಮಾಡಿದೆ.ತಂಡವನ್ನು ರೋಹಿತ್​ ಶರ್ಮ ಮುನ್ನಡೆಸಲಿದ್ದು, ಹಾರ್ದಿಕ್​ ಪಾಂಡ್ಯ ಉಪನಾಯನಾಗಿದ್ದಾರೆ. ಇದು ಕ್ರಿಕೆಟ್‌ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಫಾರ್ಮ್ ನಲ್ಲಿಲ್ಲದ ಹಾಗೂ ಬಲಿಷ್ಠ ಮುಂಬೈ ಇಂಡಿಯನ್ಸ್‌ ತಂಡವನ್ನು ಬೇಜವಾಬ್ದಾರಿಯಿಂದ ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಮಣೆ ಹಾಕಿರುವುದು ನಿಜವಾಗಲೂ ಪ್ರಶ್ನಾರ್ಹವಾಗಿದೆ.

ಹಾಗೆಯೇ, ಆಯ್ಕೆಗಾರರು ಎಡವಟ್ಟು ಮಾಡಿಕೊಂಡದ್ದು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಆಯ್ಕೆಯಲ್ಲಿ. ಈ ಬಾರಿಯ ಐಪಿಎಲ್‌ ಪಂದ್ಯಾಟದಲ್ಲಿ ಮೊಹಮ್ಮದ್ ಸಿರಾಜ್ ಎದುರಾಳಿ ದಾಂಡಿಗರಿಂದ ಸಖತ್ ಆಗಿ ದಂಡಿಸಲ್ಪಟ್ಟ ಬೌಲರ್. ಐಪಿಎಲ್‌ ಪಂದ್ಯಾಟವನ್ನೇ ಮಾನದಂಡವಾಗಿಟ್ಟುಕೊಂಡು  ಈ ಆಯ್ಕೆ ನಡೆದಿದ್ದರೆ ಖಂಡಿತವಾಗಿಯೂ  ಮಯಾಂಕ್ ಯಾದವ್ , ಹರ್ಷಲ್ ಪಟೇಲ್ ಅಥವಾ ಖಲೀಲ್ ಅಹ್ಮದ್  ಅವರಿಗೆ ಅವಕಾಶ ನೀಡಬೇಕಿತ್ತು. ಆದರೆ, ಇಲ್ಲೂ ಕೂಡ ಆಯ್ಕೆ ಸಮಿತಿ ಫಾರ್ಮ್‌ನಲ್ಲಿಲ್ಲದ ಮೊಹಮ್ಮದ್ ಸಿರಾಜ್ ಅವರನ್ನು ಅನುಭವದ ಆಧಾರದ ಮೇಲೆ ಆಯ್ಕೆ ಮಾಡಿದೆ.

ರಾಹುಲ್ ಗೆ ಅನ್ಯಾಯ:  ಸೆಲೆಕ್ಷನ್ ಕಮಿಟಿಯ ಆಯ್ಕೆಯನ್ನು ಪ್ರಶ್ನಿಸುವ ಹಲವು ವಿಚಾರಗಳು ಇವೆ. ಮುಖ್ಯವಾಗಿ ಕನ್ನಡಿಗ ಕೆಎಲ್.ರಾಹುಲ್ ವಿಚಾರದಲ್ಲಿ. ಕೆಎಲ್ ರಾಹುಲ್ ಅನೇಕ ಬಾರಿ ಟೀಂ ಇಂಡಿಯಾಕ್ಕೆ ಅಪತ್ಬಾಂಧವನಂತೆ  ಆಡಿದ್ದಾರೆ. ಕಳೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲೂ  ಅಗ್ರ ಕ್ರಮಾಂಕದ ಬ್ಯಾಟರುಗಳು ವಿಫಲರಾದಾಗ ರಾಹುಲ್ ಏಕಾಂಗಿಯಾಗಿ ಹೋರಾಡಿ ತಂಡ ಗೌರವಯುತ ಮೊತ್ತ ಗಳಿಸಲು ಸಹಕಾರಿಯಾಗಿದ್ದರು. ಅವರು  ವಿಕೆಟ್ ಕೀಪರ್ ಆಗಿ  ಜಾಣ್ಮೆಯಿಂದ ಹಾಗೂ ಬ್ಯಾಟರ್ ಆಗಿಯೂ ತಂಡಕ್ಕೆ ನೆರವಾಗಿದ್ದನ್ನು ಭಾರತೀಯ ಅಭಿಮಾನಿಗಳು ಯಾವತ್ತೂ ಮರೆಯುವಂತಿಲ್ಲ. ಅಷ್ಟೂ ಮಾತ್ರವಲ್ಲ ಈ ಬಾರಿಯ ಐಪಿಎಲ್‌ ಪಂದ್ಯಾಟದಲ್ಲೂ ರಾಹುಲ್  400ಕ್ಕೂ ಹೆಚ್ಚು ರನ್ ಗಳಿಸಿದ್ದನ್ನು ಆಯ್ಕೆಗಾರರು ಪರಿಗಣನೆಗೆ ತೆಗೆದುಕೊಳ್ಳದೆ ಕಣ್ಣಿದ್ದು ಕುರುಡರಾಗಿದ್ದಾರೆ. ಯಾವುದೇ ಕ್ರಮಾಂಕದಲ್ಲಿ ಆಡುವ ತಾಕತ್ತು ಇರುವ ಕನ್ನಡಿಗ ರಾಹುಲ್ ರಂತಹ ಉಪಯುಕ್ತ ಆಟಗಾರನನ್ನು ಕೈ ಬಿಟ್ಟಿರುವುದು ಆಯ್ಕೆಗಾರರ ಮೂರ್ಖತನ.

ತಂಡದ ನಾಲ್ಕು ಟಾಪ್ ಬ್ಯಾಟರುಗಳು : ವಿಶ್ವಕಪ್ ಸಮರಾಂಗಣದಲ್ಲಿ ಟೀಂ ಇಂಡಿಯಾದಲ್ಲಿ ನಾಲ್ಕು  ಟಾಪ್  ಬ್ಯಾಟರ್​ಗಳಾಗಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ. ಹಿಟ್​ಮ್ಯಾನ್ ರೋಹಿತ್ ಶರ್ಮ ಜೊತೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಕಿಂಗ್ ವಿರಾಟ್  ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದು,  ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಕಣಕ್ಕಿಳಿಯಲಿದ್ದಾರೆ.  ಇನ್ನೂ ಐದನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಅಥವಾ ಶಿವಂ ದುಬೆಗೆ ಚಾನ್ಸ್ ಸಿಗಬಹುದು.

ಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ವೇಗದ ಬೌಲಿಂಗ್​ನೊಂದಿಗೆ  ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾಗೆ ಸ್ಥಾನ ನೀಡಲಾಗಿದೆ. ಇನ್ನು ಸ್ಪಿನ್ನರ್​ಗಳಾಗಿ ಕುಲ್ದೀಪ್ ಯಾದವ್ ಹಾಗೂ ಯುಜ್ವೇಂದ್ರ ಚಹಲ್ ಸ್ಥಾನ ಪಡೆದರೆ, ಸ್ಪಿನ್ ಆಲ್​ರೌಂಡರ್​ಗಳಾಗಿ ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ. ಹಾಗೆಯೇ ಪಾರ್ಟ್ ಟೈಮ್ ಬೌಲರ್‌ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಕಾಣಿಸಿಕೊಂಡಿದ್ದು ಇವರು ಆಲ್ರೌಂಡರ್ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ.

ಕೀಪರ್ ಗಳ ಕಗ್ಗಾಂಟು : ವಿಕೆಟ್‌ಕೀಪರ್ / ಬ್ಯಾಟರ್ ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ ಮತ್ತು ಜಿತೇಶ್ ಶರ್ಮಾ ಅವರೊಂದಿಗೆ ರಿಷಬ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಸ್ಪರ್ಧೆಯಲ್ಲಿದ್ದರು. ಆದರೆ,  ಐಪಿಎಲ್‌ ಪಂದ್ಯಾಟದುದ್ದಕ್ಕೂ ಸ್ಥಿರ ಪ್ರದರ್ಶನದೊಂದಿಗೆ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್  ಆಯ್ಕೆಗಾರರ ಸ್ಪರ್ಧೆಯನ್ನು ಗೆದ್ದಿದ್ದಾರೆ. ಐಪಿಎಲ್ 2024ರಲ್ಲಿ  ರಾಜಸ್ಥಾನ ರಾಯಲ್ಸ್ ತಂಡದ ನಾಯಕ  ಸಂಜು ಸ್ಯಾಮ್ಸನ್ ಆಡಿದ 9 ಪಂದ್ಯಗಳಿಂದ 385 ರನ್ ಗಳಿಸಿ 7ನೇ ಸ್ಥಾನದಲ್ಲಿದ್ದರೆ, ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ 398 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಹಾಗೆ ನೋಡಿದರೆ ರಾಹುಲ್ 406 ರನ್ ಹೊಡೆದು ಇವರಿಗಿಂತ ( ಲೇಖನ ಬರೆಯುವ ಹೊತ್ತಿಗೆ ) ಮುಂದೆ ಇದ್ದಾರೆ. ಆದರೆ , ರಾಹುಲ್ ನತದೃಷ್ಟ .

ಅಂದಹಾಗೆ , ಈ ಬಾರಿಯ ಟ್ವೆಂಟಿ -20  ವಿಶ್ವಕಪ್ ಪಂದ್ಯಾಟ  ಯುಎಸ್​ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿದೆ. ಜೂನ್ -1ರಂದು ಈ ಪಂದ್ಯಾಟಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಒಂದು ತಿಂಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು  ಜೂನ್ 5ರಂದು ಐರ್ಲೆಂಡ್ ವಿರುದ್ಧ ಆಡಲಿದೆ. 2013ರಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಿರುವ ಟೀಂ ಇಂಡಿಯಾ ಆ ಬಳಿಕ ಮೊದಲ ಐಸಿಸಿ ಟ್ರೋಫಿ ಗೆಲ್ಲಲು ನಡೆಸಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಗಿದೆ. ಕಳೆದ ವರ್ಷ ತವರಿನಲ್ಲೇ ನಡೆದ ಏಕದಿನ ವಿಶ್ವಕಪ್‌ ಟೂರ್ನಿ ಗೆಲ್ಲಲು ವಿಫಲವಾಗಿರುವ ರೋಹಿತ್ ಶರ್ಮ ನಾಯಕತ್ವದ ಟೀಂ ಇಂಡಿಯಾ ಈ ಬಾರಿ ಕಪ್‌ ಗೆಲ್ಲಲು ಶತಾಯ ಗತಾಯ ಪ್ರಯತ್ನ ನಡೆಸಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!