Tuesday, October 8, 2024

ಬಿಜೆಪಿ ಪ್ರಣಾಳಿಕೆಯಲ್ಲಿನ ಜುಮ್ಲಾಗಳನ್ನು ಪಟ್ಟಿ ಮಾಡಿದ ಸಿಎಂ | ಮೋದಿಗೆ ದಮ್ಮು, ತಾಕತ್ತಿದ್ದರೇ ಈಡೇರಿಸಿದ ಭರವಸೆಗಳ ಪಟ್ಟಿ ಒದಗಿಸಲಿ : ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಮತ್ತೆ ಹರಿಹಾಯದ್ದಿದ್ದು, ಮತ್ತೆ ತಮ್ಮ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ಸರಣಿ ಟ್ವೀಟ್‌ ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಿಡುಗಡೆಗೊಳಿದ ಪ್ರಣಾಳಿಕೆಯ ಬಗ್ಗೆ ʼಬಿಜೆಪಿ ಬಂಡಲ್‌ ಇದು ಮತ್ತೊಂದು ಜುಮ್ಲಾ ಪ್ರಣಾಳಿಕೆʼ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಹಾಗೂ ಪ್ರಧಾನಿ ವಿರುದ್ಧ ಆಕ್ರೋಶ ಹೊರ ಹಾಕುವುದರ ಮೂಲಕ ʼಬಿಜೆಪಿ ಜುಮ್ಲಾಗಳʼ ದೊಡ್ಡ ಪಟ್ಟಿಯನ್ನೇ ಬಟಾಬಯಲುಗೊಳಿಸಿದ್ದಾರೆ.

ಭಾರತೀಯ ಜನತಾ ಪಕ್ಷ ಕಾದು ಕಾದು ಅಳೆದು ತೂಗಿ ಕೊನೆಗೂ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಪತ್ರವನ್ನು ಬಿಡುಗಡೆ ಮಾಡಿದೆ. ಅದರೊಳಗೇನಿದೆ ಎಂದು ಇಣುಕಿದರೆ ದೊಡ್ಡ ಚೊಂಬು.

ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಪಕ್ಷಕ್ಕೆ ದಮ್ಮು ಮತ್ತು ತಾಕತ್ ಇದ್ದರೆ ಹಿಂದಿನ ಎರಡು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ? ಎನ್ನುವ ಲೆಕ್ಕವನ್ನು ಮತದಾರರ ಮುಂದಿಡಬೇಕು ಎಂದು ಸಿಎಂ ತಾಕೀತು ಮಾಡಿದ್ದಾರೆ.

ನಾನು ನುಡಿದಂತೆ ನಡೆದವನು. ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಮಾಡಿದ ಕೆಲಸದ ಲೆಕ್ಕವನ್ನು ಜನರ ಮುಂದೆ ಇಟ್ಟಿದ್ದೆ. ಈ ಬಾರಿಯೂ ಈ ಕೆಲಸ ಮುಂದುವರಿಸುತ್ತಿದ್ದೇನೆ. ಈ ಕಾರಣಕ್ಕೆ ನರೇಂದ್ರ ಮೋದಿಯವರಲ್ಲಿ ಲೆಕ್ಕ ಕೇಳುವ ನೈತಿಕ ಅಧಿಕಾರ ನನಗಿದೆ ಎಂದು ತಿಳಿದುಕೊಂಡಿದ್ದೇನೆ ಎಂದು ಹೇಳುವುದರೊಂದಿಗೆ ʼಮೋದಿ ಸರ್ಕಾರದ ಜುಮ್ಲಾʼಗಳ ಪಟ್ಟಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯ ಪ್ರಣಾಳಿಕೆಯಿಂದ ಗುರುತಿಸಿದ ಎಂಟು ಜುಮ್ಲಾಗಳು :

ಜುಮ್ಲಾ 1.

ನರೇಂದ್ರ ಅವರೇ,  ಪ್ರಧಾನಮಂತ್ರಿ “ಸೂರ್ಯ ಘರ್ ಮುಫ್ತ್ ಬಿಜಲಿ” ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಸುತ್ತೇವೆ ಎನ್ನುವುದು ಪ್ರಣಾಳಿಕೆಯಲ್ಲಿನ ಭರವಸೆ.

ವಾಸ್ತವ ಸಂಗತಿ ಏನೆಂದರೆ,

ಈ ಯೋಜನೆಯನ್ನು ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದು ಸಂಪೂರ್ಣ ಉಚಿತ ಅಲ್ಲ. 1 ಕಿಲೋ ವ್ಯಾಟ್‌ ಉತ್ಪಾದಿಸುವ ರೂಫ್‌ಟಾಪ್‌ ಸೋಲಾರ್‍‌ ಪ್ಯಾನೆಲ್‌ಗೆ 50,000 ರೂ. ವೆಚ್ಚವಾಗುತ್ತದೆ. ಇದರಲ್ಲಿ 40% ಹಣವನ್ನು ಖರೀದಿಸುವ ಕುಟುಂಬವೇ ಭರಿಸಬೇಕಾಗುತ್ತದೆ. ಬ್ಯಾಂಕ್‌ಗಳಿಂದ ಸಾಲ ಕೊಡಿಸಲಾಗುತ್ತಿದೆ. ಅಂದರೆ ಸೋಲಾರ್ ಪ್ಯಾನೆಲ್‌ ಅಳವಡಿಸುವ ವೆಚ್ಚದ ಹೊರೆ ಬಡ ಕುಟುಂಬದ ಮೇಲೆ ಹೊರಿಸಲಾಗಿದೆ. ಇದು ಯಾವ ಸೀಮೆಯ ಉಚಿತ ಹೇಳಿ?

ಜುಮ್ಲಾ 2:

70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್‌ ಸೇವೆ ವಿಸ್ತರಿಸಲಾಗುವುದು ಎನ್ನುವುದು ಬಿಜೆಪಿ ಪ್ರಣಾಳಿಕೆಯಲ್ಲಿನ ಭರವಸೆ.

ವಾಸ್ತವ ಸಂಗತಿ ಎಂದರೆ,

ಆಯುಷ್ಮಾನ್‌ ಯೋಜನೆಯ ಆರೋಗ್ಯ ವಿಮೆಯಲ್ಲಿ ಅಕ್ರಮ ನಡೆದಿರುವುದನ್ನು ಸಿಎಜಿಯೇ ವರದಿ ಮಾಡಿದೆ. 8.2 ಲಕ್ಷ ರೋಗಿಗಳು ಆಧಾರ್, ಬಯೋಮೆಟ್ರಿಕ್‌ ದಾಖಲೆಗಳಿಲ್ಲದೆ ಎರಡಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆ ಪಡೆದಿದ್ದನ್ನು ವರದಿ ಗುರುತಿಸಿತ್ತು. ನಕಲಿ ವಿಮೆಗಳಿಗೆ ರೂ.1,697 ಕೋಟಿ ವರೆಗೆ ಸರ್ಕಾರದಿಂದ ಹಣ ನೀಡಲಾಗಿದೆ!

ಜುಮ್ಲಾ 3:

ಮೂರು ಕೋಟಿ ಲಖ್‌ಪತಿ ದೀದಿಗಳನ್ನು ಮಾಡಲಾಗುವುದು. ಈಗಾಗಲೇ 1 ಕೋಟಿ ಮಹಿಳೆಯರನ್ನು ಲಖ್‌ಪತಿ ದೀದಿಗಳನ್ನಾಗಿ ಮಾಡಿದ್ದು, ಮೂರು ಕೋಟಿ ಗ್ರಾಮೀಣ ಮಹಿಳೆಯರನ್ನು ಲಖ್‌ಪತಿ ದೀದಿಗಳನ್ನಾಗಿ ಸಬಲೀಕರಿಸಲಾಗುವುದು ಎನ್ನುವುದು ಬಿಜೆಪಿ ಪ್ರಣಾಳಿಕೆಯ ಇನ್ನೊಂದು ಭರವಸೆ.

ವಾಸ್ತವ ಸಂಗತಿ ಎಂದರೆ ಸ್ವಸಹಾಯ ಗುಂಪುಗಳಲ್ಲಿರುವ ಮಹಿಳೆಯರಿಗೆ ನೀಡಲಾಗಿದೆ ಎಂದು ಹೇಳಲಾದ ಈ ನೆರವನ್ನು ಪಡೆದ ಒಬ್ಬರೇ ಒಬ್ಬ ಕರ್ನಾಟಕದ ಮಹಿಳೆಯ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಜುಮ್ಲಾ 4:

ನಮ್ಮ ಮಹಿಳೆಯರು ಕ್ರೀಡೆಯಲ್ಲಿ ದೇಶಕ್ಕೆ ಗೌರವ ತಂದಿದ್ದಾರೆ. ಮಹಿಳಾ ಕೇಂದ್ರಿತ ಕ್ರೀಡಾ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಕ್ರೀಡೆಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆಯನ್ನು  ಪ್ರೋತ್ಸಾಹಿಸಲಾಗುವುದು ಎನ್ನುವುದು ಬಿಜೆಪಿ ಪ್ರಣಾಳಿಕೆಯಲ್ಲಿನ ಭರವಸೆ.

ವಾಸ್ತವ ಸಂಗತಿ ಎಂದರೆ,

ಕುಸ್ತಿ ಫೆಡರೇಷನ್‌ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಸಿಂಗ್‌ ವಿರುದ್ಧ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಲೈಂಗಿಕ ಶೋಷಣೆಯ ಆರೋಪ ಮಾಡಿದಾಗ, ಸರ್ಕಾರ ಯಾವುದೇ ಕ್ರಮಕೈಗೊಳ್ಳಲಿಲ್ಲ. ವರ್ಷಗಳ ಶ್ರಮದ ಫಲವಾದ ಪದಕವನ್ನು ಗಂಗಾ ನದಿಗೆ ಅರ್ಪಿಸಲು ಮುಂದಾಗುವಷ್ಟು ನೊಂದಿದ್ದ ಯುವತಿಯರಿಗೆ ನರೇಂದ್ರ ಮೋದಿ ಅವರ ಸರ್ಕಾರ ಸಾಂತ್ವನ ಹೇಳಲಿಲ್ಲ.

ಜುಮ್ಲಾ 5:

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕ ರೂ.6,000 ಸಹಾಯಧನವನ್ನು ನೀಡುತ್ತಿದ್ದು, ರೈತರಿಗೆ ಆರ್ಥಿಕ ಬೆಂಬಲ ನೀಡುವುದಕ್ಕೆ ಬದ್ಧರಾಗಿದ್ದೇವೆ ಎನ್ನುವುದು ಬಿಜೆಪಿ ಪ್ರಣಾಳಿಕೆಯಲ್ಲಿನ ಭರವಸೆ.

ವಾಸ್ತವ ಸಂಗತಿ ಎಂದರೆ,

ಕಳೆದ ಐದು ವರ್ಷಗಳಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಲ್ಲಿ 11 ಕೋಟಿ ರೈತರಿಗೆ ಸಹಾಯ ಧನ ನೀಡಲಾಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಆದರೆ, ಕೃಷಿ ಸಚಿವರೇ ರಾಜ್ಯಸಭೆಯಲ್ಲಿ 4 ಲಕ್ಷ ಅನರ್ಹ ರೈತರಿಗೆ ರೂ. 3,000 ಕೋಟಿ ಸಹಾಯ ಧನ ವಿತರಣೆಯಾಗಿದ್ದು, ಮರಳಿ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದ್ದರು.

ದೇಶದಲ್ಲಿ 55% ಭೂ ರಹಿತ ರೈತರಿದ್ದು, ಅವರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದು ಮತ್ತೊಂದು ದುರಂತ!

ಜುಮ್ಲಾ 6:

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ತಂತ್ರಜ್ಞಾನದ ಬಳಕೆಯ ಮೂಲಕ ಮತ್ತಷ್ಟು ಬಲಪಡಿಸಿ ನಿಖರ ಪರಿಶೀಲನೆ ನಡೆಸಿ ಪರಿಹಾರದ ಹಣವನ್ನು ವೇಗವಾಗಿ ಪಾವತಿಸಲಾಗುವುದು ಎನ್ನುವುದು ಬಿಜೆಪಿ ಪ್ರಣಾಳಿಕೆಯಲ್ಲಿನ ಭರವಸೆ.

ವಾಸ್ತವ ಸಂಗತಿ ಎಂದರೆ,

ಹಿಂದಿನ ಅವಧಿಯಲ್ಲಿ 5 ವರ್ಷಗಳಲ್ಲಿ ಈ ಯೋಜನೆಯಿಂದ ರೈತರಿಗೆ ಆದ ಲಾಭಕ್ಕಿಂತ ವಿಮಾ ಕಂಪನಿಗಳಿಗೆ ಆದ ಲಾಭವೇ ಹೆಚ್ಚು. ಕೃಷಿ ಸಚಿವ ತೋಮರ್ ಅವರು ರಾಜ್ಯಸಭೆಯಲ್ಲಿ ಉತ್ತರಿಸಿರುವಂತೆ, 2016-17ರಿಂದ 2021-22ರ ಅವಧಿಯಲ್ಲಿ ರೈತರು ರೂ. 1.59 ಲಕ್ಷ ಕೋಟಿ ಪ್ರೀಮಿಯಂ ಹಣ ಪಾವತಿಸಿದ್ದರು. ಈ ಪೈಕಿ ವಿಮಾ ಕಂಪನಿಗಳು ರೂ. 1.19 ಲಕ್ಷ ಕೋಟಿ ಹಣವನ್ನು ರೈತರಿಗೆ ಪಾವತಿಸಿದ್ದವು. ಅಂದರೆ ರೂ.40,000 ಕೋಟಿಗಳಷ್ಟು ಲಾಭಗಳಿಸಿದ್ದವು ಎಂದು ಅಂಕಿ ಅಂಶ ಹಂಚಿಕೊಂಡಿದ್ದರು.

ಜುಮ್ಲಾ 7:

ರಾಷ್ಟ್ರೀಯ ಕನಿಷ್ಠ ವೇತನವನ್ನು ಕಾಲದಿಂದ ಕಾಲಕ್ಕೆ ಪರಿಷ್ಕರಣೆ ಮಾಡಲಾಗುವುದು ಎನ್ನುವುದು ಬಿಜೆಪಿ ಪ್ರಣಾಳಿಕೆಯಲ್ಲಿನ ಭರವಸೆ.

ವಾಸ್ತವ ಸಂಗತಿ ಎಂದರೆ,

ಹತ್ತು ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಸರ್ಕಾರ ಕನಿಷ್ಠ ವೇತನವನ್ನು ಹೆಚ್ಚಿಸಿದ್ದು ಕೇವಲ 41 ರೂಪಾಯಿಗಳು ಮಾತ್ರ. 2004ರಿಂದ 2014ರ ಅವಧಿಯಲ್ಲಿ ಯುಪಿಎ ಸರ್ಕಾರ ಕನಿಷ್ಠ ವೇತನದ ಮಿತಿಯನ್ನು ರೂ.66 ರಿಂದ ರೂ.137ಕ್ಕೆ ಹೆಚ್ಚಿಸಿತ್ತು. ಬಿಜೆಪಿ ಈ ಮಿತಿಯನ್ನು 2017ರಲ್ಲಿ ರೂ.176 ಕ್ಕೆ ಏರಿಸಿತು. ಮುಂದುವರೆದು 2019ರಲ್ಲಿ ರೂ. 178ಕ್ಕೆ ಹೆಚ್ಚಿಸಿತು. ಆ ನಂತರದ ಐದು ವರ್ಷಗಳಲ್ಲಿ ಒಂದೇ ಒಂದು ರೂಪಾಯಿಯನ್ನೂ ಏರಿಕೆ ಮಾಡಲಿಲ್ಲ.

ಜುಮ್ಲಾ 8:

ಭಯೋತ್ಪಾದನೆಯನ್ನು ಸಹಿಸುವುದಿಲ್ಲ. 2016ರ ಸರ್ಜಿಕಲ್ ದಾಳಿ ಮತ್ತು 2019ರ ಉಗ್ರರ ಮೇಲಿನ ದಾಳಿ ಭಯೋತ್ಪಾದನೆ ನಿಯಂತ್ರಣದ ನಿಟ್ಟಿನಲ್ಲಿ ನಡೆದ ಪ್ರಯತ್ನಗಳಿಗೆ ಉದಾಹರಣೆಗಳು. ಎಲ್ಲ ರೀತಿ ಉಗ್ರವಾದದಿಂದ ಭಾರತವನ್ನು ರಕ್ಷಿಸುವುದಕ್ಕೆ ನಾವು ಬದ್ಧರಾಗಿದ್ದೇವೆ ಎನ್ನುವುದು ಬಿಜೆಪಿ ಪ್ರಣಾಳಿಕೆಯಲ್ಲಿನ ಭರವಸೆ.

ವಾಸ್ತವ ಸಂಗತಿ ಎಂದರೆ,

ಕಾಶ್ಮೀರದ ಉರಿ ಕಣಿವೆಯಲ್ಲಿ 2016ರಲ್ಲಿ ನಡೆದ ದಾಳಿಯ ರೀತಿಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾದವು. 2019ರಲ್ಲಿ ನಡೆದ ಬಾಲಾಕೋಟ್‌ ಪ್ರಕರಣ ತೀವ್ರವಾದ ವಿವಾದಕ್ಕೆ ಕಾರಣವಾಯಿತು. ಈ ದಾಳಿಗಳ ಹಿಂದೆ ರಾಜಕೀಯ ಉದ್ದೇಶಗಳು ಕೆಲಸ ಮಾಡಿರುವುದು ವಿವಾದಕ್ಕೆ ಕಾರಣವಾಯಿತು. ಪುಲ್ವಾಮಾ ದಾಳಿ ಕುರಿತು ಸತ್ಯಪಾಲ್‌ ಮಲಿಕ್‌ ನೀಡಿದ ಹೇಳಿಕೆಯು ನರೇಂದ್ರ ಮೋದಿ ಸರ್ಕಾರದ ಶಂಕಾಸ್ಪದ ನಡೆಗೆ ಕನ್ನಡಿ ಹಿಡಿಯಿತು.

ಇದಲ್ಲದೆ, 2017ರಲ್ಲಿ ಕಾಶ್ಮೀರದಲ್ಲಿ 370ನೇ ವಿಧಿ ಹಿಂಪಡೆದ ನಂತರ ಉಗ್ರರ ಚಟುವಟಿಕೆಗಳು ಕಡಿಮೆಯಾಯಿತು ಎಂದು ಸರ್ಕಾರ ಹೇಳಿಕೊಂಡರೂ ಉಗ್ರರ ದಾಳಿಗಳು ಮುಂದುವರಿದಿವೆ ಎಂದು ಸಿಎಂ ಸಿದ್ದರಾಮಯ್ಯ ಬಹಿರಂಗಗೊಳಿಸಿದ್ದಾರೆ.

https://x.com/siddaramaiah/status/1781598136550785425?t=TwhjsoqJ6T7FSzZ-sOvyEA&s=08

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!