Sunday, September 8, 2024

ಇವಿಎಂ, ವಿವಿಪ್ಯಾಟ್‌ : ಆರೋಪಗಳು, ಸುಪ್ರೀಂ ಕೋರ್ಟ್‌ ಪ್ರಶ್ನೆ, ಇಸಿಐ ಸಮರ್ಥನೆ !

ದೇಶದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. ಇವಿಎಂ ಬಗ್ಗೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಿವೆ. ಒಂದಿಷ್ಟು ಜನ ಇವಿಎಂ ಬದಲಿಗೆ ಮತ ಪತ್ರಗಳನ್ನು ತರಬೇಕು ಎಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಈ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ವ್ಯವಸ್ಥೆಯನ್ನು ಕೆಡವಲು ಪ್ರಯತ್ನಿಸಬೇಡಿ, ನಾವು ಯಾರನ್ನಾದರೂ ಒಬ್ಬರನ್ನು ನಂಬಬೇಕು. ಬ್ಯಾಲಟ್‌ ವೋಟಿಂಗ್‌ ಇದ್ದಾಗ ಏನಾಗಿದೆ ಎಂಬುದು ನಮಗೆ ಗೊತ್ತಿದೆ ಎಂದು ಸುಪ್ರೀಂ ಕೋರ್ಟ್‌ ಚಾಟಿ ಬೀಸಿದೆ.

ಇವಿಎಂ ಮತಗಳ ಜತೆಗೆ ಶೇ.100ರಷ್ಟು ವಿವಿಪ್ಯಾಟ್‌(ವೋಟರ್‌ ವೆರಿಫೈಯೇಬಲ್‌ ಪೇಪರ್‌ ಆಡಿಟ್‌)ಗೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾ| ಸಂಜೀವ್‌ ಖನ್ನಾ ಮತ್ತು ನ್ಯಾ| ದೀಪಂಕರ್‌ ದತ್ತಾ ಅವರಿದ್ದ ನ್ಯಾಯಪೀಠವು, ಇವಿಎಂ ವ್ಯವಸ್ಥೆಯ ಅಸಲಿಯತ್ತು ಕುರಿತು ಪ್ರಶ್ನಿಸಲಾಗುತ್ತಿರುವ ವಾದಗಳನ್ನೇ ಪ್ರಶ್ನಿಸಿತು. ಇವಿಎಂಗಳನ್ನು ಜನರು ನಂಬುತ್ತಿಲ್ಲ ಎಂಬ ಖಾಸಗಿ ಅಂಕಿ ಸಂಖ್ಯೆಗಳನ್ನು ನಂಬಬೇಕಿಲ್ಲ ಎಂದು ಹೇಳಿತು.

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಪ್ರಶಾಂತ್‌ ಭೂಷಣ್‌ “ಸ್ಟಡಿ ಆಫ್ ಡೆವಲ್‌ಪಿಂಗ್‌ ಸೊಸೈಟಿಸ್‌ (ಸಿಎಸ್‌ಡಿಎಸ್‌) ನಡೆಸಿದ ಸಮೀಕ್ಷೆಯ ಮಾಹಿತಿಯನ್ನು ಮುಂದಿಟ್ಟರು. ಇವಿಎಂಗೆ ಪರ್ಯಾಯವಾಗಿ ಬ್ಯಾಲೆಟ್‌ ಪೇಪರ್‌ ವ್ಯವಸ್ಥೆಗೆ ಮರಳುವುದು ಸೂಕ್ತ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಪೀಠವು, ಬ್ಯಾಲೆಟ್‌ ಪೇಪರ್‌ ವ್ಯವಸ್ಥೆ ಇದ್ದಾಗ ಏನೆಲ್ಲ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತು ಎಂದು ಅಭಿಪ್ರಾಯ ಪಟ್ಟಿದೆ.

ಇನ್ನು, ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ನ್ಯಾಯ ಪೀಠ, ಎಲ್ಲಾ ವಿವಿಪ್ಯಾಟ್‌ಗಳನ್ನು ಇವಿಎಂಗಳೋಂದಿಗೆ ತಾಳೆ ಮಾಡಿ ನೋಡಲು ಇರುವ ತೊಡಕುಗಳೇನು ? ಎಂದು ಪ್ರಶ್ನಿಸಿದ್ದಲ್ಲದೇ ಒಂದು ವಿವಿ ಪ್ಯಾಟ್‌ನಲ್ಲಿನ ಚೀಟಿಗಳನ್ನು ಎಣಿಕೆ ಮಾಡಲು ಐದು ತಾಸು ಬೇಕು ಎಂದ ಚುನಾವಣಾ ಆಯೋಗಕ್ಕೆ, ಐದರಿಂದ ಆರು ಸಾವಿರ ಚೀಟಿಗಳನ್ನು ಎಣಿಕೆ ಮಾಡಲು ಐದು ತಾಸು ಬೇಕೆ ಎಂದು ಪ್ರಶ್ನಿಸಿತ್ತು, ಇದಕ್ಕೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗ, ವಿವಿ ಪ್ಯಾಟ್‌ ನಲ್ಲಿ ಚೀಟಿ ಮುದ್ರಿಸಲು ಬಳಸುವ ಕಾಗದವು ಅತ್ಯಂತ ತೆಳುವಾಗಿರುತ್ತದೆ  ಹಾಗೂ ಕೈಗೆ ಅಂಟಿಕೊಳ್ಳುತ್ತದೆ. ಅವು ಮಾನುವಲ್‌ ಆಗಿ  ಎಣಿಕೆಗೆ ಬಳಸುವಂತಹ ಕಾಗದಗಳಲ್ಲ. ಹೀಗಾಗಿ ಅದನ್ನು ಎಣಿಕೆ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ . ಹೀಗಾಗಿ ಎಲ್ಲಾ ವಿವಿ ಪ್ಯಾಟ್‌ಗಳನ್ನು ಎಣಿಕೆ ಮಾಡುವುದು ಕಷ್ಟ ಎಂದು ಉತ್ತರಿಸಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಈ ನಡುವೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಡೆಸಲಾದ ಅಣಕು ಮತದಾನದ ವೇಳೆ ವಿದುನ್ಮಾನ ಮತ ಯಂತ್ರ ಅಥವಾ ಇವಿಎಂ ಪ್ಯಾಟ್‌ ನಲ್ಲಿ ದಾಖಲಾದ ಮತವು ತಪ್ಪಾಗಿ ಬಿಜೆಪಿ ಅಭ್ಯರ್ಥಿಗೆ ಹೋಗುತ್ತಿದೆ ಎಂದು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಗಂಭೀರ ಆರೋಪ ಮಾಡಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಎಲ್‌ಡಿಎಫ್‌ ಹೇಳಿಕೆ ನೀಡಿದೆ. ಈ ಸಂಬಂಧಿಸಿದಂತೆ ಮಾತನಾಡಿರುವ ಸಿಪಿಐ(ಎಂ) ಹಿರಿಯ ನಾಯಕ ಕೆ.ಪಿ. ಸತೀಶ್‌ ಚಂದ್ರನ್‌, ಬುಧವಾರ ನಡೆದ ಅಣಕು ಮತದಾನದ ಸಂದರ್ಭದಲ್ಲಿ ಎರಡು ಮೂರು ಮತಯಂತ್ರಗಳಲ್ಲಿ ಈ ರೀತಿಯ ದೋಷಗಳು ಕಾಣಸಿಕ್ಕಿವೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಕೂಡ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ಇವಿಎಂ ಹಾಗೂ ವಿವಿಪ್ಯಾಟ್‌ ಗಳು ಈಗ ಮತ್ತೆ ಚರ್ಚೆಯ ವಿಷಯವಾಗಿದೆ, ಹಾಗಾದರೇ, ಇವಿಎಂ ಏನು ? ಹೇಗೆ ಕೆಲಸ ಮಾಡುತ್ತದೆ, ಈ ಬಗ್ಗೆ ಚುನಾವಣಾ ಆಯೋಗ ಹೇಳಿರುವುದೇನು ? ಎಂಬೆಲ್ಲದರ ಬಗ್ಗೆ ಒಂದು ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನವಿದು.

ಇವಿಎಂ ಎಂದರೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್. ಇದು ಚುನಾವಣೆಯಲ್ಲಿ ಚಲಾವಣೆಯಾಗುವ ಮತಗಳನ್ನು ವಿದ್ಯುನ್ಮಾನವಾಗಿ ದಾಖಲಿಸಲು ಮತ್ತು ಎಣಿಸಲು ಬಳಸುವ ಸಾಧನವಾಗಿದೆ. 1982 ರಲ್ಲಿ ಕೇರಳದ ಪರೂರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬ್ಯಾಲೆಟ್ ಯುನಿಟ್ (ಬಿಯು) ಮತ್ತು ಕಂಟ್ರೋಲ್ ಯೂನಿಟ್ (ಸಿಯು) ಒಳಗೊಂಡಿರುವ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂಗಳು) ಮೊದಲ ಬಾರಿಗೆ ಬಳಸಲಾಯಿತು.

ವಿದ್ಯುನ್ಮಾನ ಮತಯಂತ್ರ (EVM) ವ್ಯವಸ್ಥೆಯನ್ನು ECI-EVM ಎಂದೂ ಕರೆಯುತ್ತಾರೆ,  EVM specifically designed, manufactured and used for Elections as per election procedure and rules framed by Election Commission of India.

2013 ರಲ್ಲಿ ನಾಗಾಲ್ಯಾಂಡ್‌ನ ನೋಕ್ಸೆನ್ ಅಸೆಂಬ್ಲಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಇವಿಎಂನೊಂದಿಗೆ ವೋಟರ್‌ ವೆರಿಫೈಯೇಬಲ್‌ ಪೇಪರ್‌ ಅಥವಾ ವಿವಿಪ್ಯಾಟ್ ಆಡಿಟ್ ಟ್ರಯಲ್ ಅನ್ನು ಬಳಸಲಾಯಿತು. VVPAT ಗಾಗಿ ಕಾನೂನು ಚೌಕಟ್ಟನ್ನು ಅಥವಾ ಲೀಗಲ್ ಫ್ರೇಮ್ ವರ್ಕ್ ಅನ್ನು 14 ಆಗಸ್ಟ್ 2013 ರಂದು ಪರಿಚಯಿಸಲಾಯಿತು. ತದನಂತರದ ಎಲ್ಲಾ ಚುನಾವಣೆಗಳಲ್ಲಿ ಇವಿಎಂ ವಿವಿಪ್ಯಾಟ್‌ ಗಳನ್ನು ಬಳಸಲಾಗುತ್ತಿದೆ. ಈ ಇವಿಎಂ ಹಾಗೂ ವಿವಿಪ್ಯಾಟ್‌ ಗಳ ಬಗ್ಗೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಿವೆ. ಒಂದಿಷ್ಟು ಜನ ಇವಿಎಂ ಬದಲಿಗೆ ಮತ ಪತ್ರಗಳನ್ನು ತರಬೇಕು ಎಂದು ಒತ್ತಾಯವೂ ಮಾಡಿದವು, ಮೊದಲೇ ವಿವರಿಸಿದ ಹಾಗೆ ಸುಪ್ರೀಂ ಕೋರ್ಟ್‌ ಮೆಟ್ಟಿಲೂ ಏರಿದವು. ಸುಪ್ರೀಂ ಕೋರ್ಟ್‌ ಏನು ಹೇಳಿದೆ ಎನ್ನುವುದನ್ನು ನಾವು ಈಗಾಗಲೇ ತಿಳಿಸಿದ್ದೇವೆ.

ECI – EVM ಮೆಷಿನ್‌ ಏನಿದೆಯಲ್ವಾ ಅದು, ಬ್ಯಾಲೆಟ್ ಯೂನಿಟ್ (BU), ಕಂಟ್ರೋಲ್ ಯೂನಿಟ್ (CU) ಮತ್ತು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (VVPAT) ಗಳನ್ನು ಒಳಗೊಂಡಿದೆ. ಇವಿಎಂಗಳು ಡಿಆರ್‌ಇ ವೋಟಿಂಗ್ ಮಷಿನ್‌ಗಳ ಅಡಿಯಲ್ಲಿ ಬರುತ್ತವೆ, ಅಥವಾ ಡಿಆರ್‌ಇ ಅಂದರೇ ಡೈರೆಕ್ಟ್ ರೆಕಾರ್ಡಿಂಗ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಸಿಸ್ಟಮ್‌ಗಳು, ಇದು ವಿಶ್ವಾದ್ಯಂತ ಲಭ್ಯವಿರುವ ಹಲವು ವೋಟಿಂಗ್‌ ಮಾಡೆಲ್ಗಳಲ್ಲಿ ಅಥವಾ ವೋಟಿಂಗ್‌ ಸಿಸ್ಟಮ್‌ಗಳಲ್ಲಿ ಒಂದಾಗಿದೆ. ECI-EVM ಗಳನ್ನು ಪೇಪರ್ ಬ್ಯಾಲೆಟ್‌ಗಳಿಗಿಂತ ಹೆಚ್ಚು ಪರಿಣಾಮಕಾರಿ ಮತ್ತು ನಿಖರವೆಂದು ಪರಿಗಣಿಸಲಾಗುತ್ತದೆ, ಇವಿಎಂ ಮತಗಳು ಅಮಾನ್ಯವಾಗುವುದನ್ನು ತಡೆಗಟ್ಟುತ್ತದೆ. ಮತ ಎಣಿಕೆಯ ಸಮಯವನ್ನು ಕಡಿಮೆಗೊಳಿಸುತ್ತದೆ. ಮತದಾರರು ಚಲಾಯಿಸಿದ ಮತಗಳು ಯಾವ ಅಭ್ಯರ್ಥಿಗೆ ಚಲಾವಣೆಯಾಗಿದೆ ಎನ್ನುವುದನ್ನು ಅದ ಕೂಡಲೇ ಖಚಿತಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ.

ECI-EVM ಮತದಾನ ವ್ಯವಸ್ಥೆಯ ಪ್ರಯೋಜನಗಳು

(i) ಪೇಪರ್ ಬ್ಯಾಲೆಟ್ ಮತದಾನದ ವ್ಯವಸ್ಥೆಯಲ್ಲಿ ಆಗುವ ಸಮಸ್ಯೆಗಳನ್ನು ಮತ್ತು ಮತಗಳು ಅಮಾನ್ಯವಾಗುವುದನ್ನು ನಿವಾರಿಸುತ್ತದೆ.

(ii) Booth capturing has been eliminated by technology used in EVMs and administrative procedures ಮತ್ತು ಇವಿಎಂ ಮತದಾನ ವ್ಯವಸ್ಥೆಯು ಯಾವುದೇ ಸಂದರ್ಭದಲ್ಲೂ ಪ್ರತಿ ನಿಮಿಷಕ್ಕೆ 4 ಮತಗಳಿಗಿಂತ ಹೆಚ್ಚಿನದನ್ನು ಅನುಮತಿಸುವುದಿಲ್ಲ. ಹಾಗಾಗಿ ಮತಗಳನ್ನು ಕದಿಯುವುದಕ್ಕೆ ಸಾಧ್ಯವಿಲ್ಲ ಎಂದು ಎಲೆಕ್ಶನ್‌ ಕಮಿಷನ್‌ ಆಫ್‌ ಇಂಡಿಯಾ ಹೇಳುತ್ತದೆ.

(iv) ಇದು ತ್ವರಿತ, ದೋಷ ಮುಕ್ತ ಮತ್ತು ಮಿಸ್‌ ಚೀಪ್‌ ಫ್ರೀ ವೋಟಿಂಗ್‌ ಮತ್ತು ಎಣಿಕೆಯನ್ನು ಖಚಿತಪಡಿಸುತ್ತದೆ.

(v) VVPAT ನ ಮುದ್ರಿತ ಸ್ಲಿಪ್ ಅನ್ನು ಪರಿಶೀಲಿಸುವ ಮೂಲಕ ಮತದಾರನು ಚಲಾಯಿಸಿದ ಮತಗಳು ಸರಿಯಾಗಿ ಚಲಾವಣೆಯಾಗಿದೆಯೇ ಎಂದು ತಕ್ಷಣವೇ ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ಚುನಾವಣೆ ಆಯೋಗ ಹೇಳುತ್ತದೆ.

ಪ್ರಸ್ತುತ, ECI-EVM ಮತ್ತು VVPAT ನ ಮಾಡೆಲ್3 ಅನ್ನು ಬಳಸಲಾಗುತ್ತದೆ. ಹಿಂದಿನ ಮಾಡೆಲ್‌ ಗಳಂತೆಯೇ, M3 ಅಥವಾ ಮಾಡೆಲ್‌3  EVM ಗಳು / VVPAT ಗಳು ನೆಟ್‌ವರ್ಕ್ನ ಅಗತ್ಯವಿಲ್ಲದೇ, ಅವುಗಳದ್ದೇ ಆದ ಪವರ್-ಪ್ಯಾಕ್‌ಗಳು / ಬ್ಯಾಟರಿಗಳಲ್ಲಿ ಕಾರ್ಯನಿರ್ವಹಿಸುವ ಅದ್ವಿತೀಯ ತಂತ್ರಜ್ಞಾನ ಮಾದರಿಯ ವೋಟಿಂಗ್‌ ಮಾಡೆಲ್‌ ಆಗಿದೆ ಎಂದು ಚುನಾವಣಾ ಆಯೋಗ ವಿವರಿಸುತ್ತದೆ.

ಈ ವಿ.ವಿ ಪ್ಯಾಟ್‌ ಹಾಗೂ ಇವಿಎಂ ಗಳಿಗೆ ತಗಲುವ ವೆಚ್ಚಗಳ ಬಗ್ಗೆಯೂ ಅಪಸ್ವರ ಕೇಳಿ ಬಂದಿತ್ತು, ಇದಕ್ಕೆ ಉತ್ತರವೆಂಬಂತೆ ಚುನಾವಣಾ ಆಯೋಗ, 2019ರ ಲೋಕಸಭಾ ಚುನಾವಣೆಯ ನಂತರ,  ECI ಎಲ್ಲಾ ಚುನಾವಣೆಗಳಲ್ಲಿ M3 ಮಾದರಿಯ EVM ಮತ್ತು VVPAT ಗಳನ್ನು ಮಾತ್ರ ಬಳಸುತ್ತಿದೆ. M3 EVM ಗಳನ್ನು ಮೊದಲ ಬಾರಿಗೆ 2013-14 ರಲ್ಲಿ ಪರಿಚಯಿಸಲಾಯಿತು, ಲೋಕಸಭೆ, 2019 ರ ಅವಧಿಯಲ್ಲಿ, ದೇಶದ ಎಲ್ಲಾ ಮತಗಟ್ಟೆಗಳಲ್ಲಿ VVPAT ಗಳನ್ನು ನಿಯೋಜಿಸಲಾಗಿತ್ತು ಮತ್ತು ಒಟ್ಟು 17.40 ಲಕ್ಷ VVPAT ಯೂನಿಟ್‌ಗಳು ಚುನಾವಣೆಗೆ ಲಭ್ಯವಿವೆ. M3 ಮಾದರಿಯ ಯಂತ್ರಗಳ ಖರೀದಿಗೆ ಖರ್ಚು ಮಾಡಿದ ಹಣವನ್ನು ಗಮನಿಸುವುದಾದರೇ, 2013-14 ರಲ್ಲಿ ನಡೆದ ಚುನಾವಣೆಗೆ 645.75 ಕೋಟಿ, 2017-19 ರ ನಡುವೆ ನಡೆದ ಚುನಾವನೆಗಳಿಗೆ 4876.71 ಕೋಟಿ, 2021-23 ರ ನಡುವೆ ನಡೆದ ಚುನಾವನೆಗಳಿಗೆ 3960.10 ಕೋಟಿ ಒಟ್ಟು 9482.56 ಕೋಟಿ ವ್ಯಯ ಮಾಡಿದೆ. ಈ ಭಾರಿಯ ಲೋಕಸಭಾ ಚುನಾವಣೆಗೆ ಎಷ್ಟು ಮೊತ್ತವನ್ನು ಬಳಸುತ್ತದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ನೀಡಿಲ್ಲ.

ಇನ್ನು, CU, BU ಮತ್ತು VVPAT ವೆಚ್ಚವನ್ನು ಭಾರತ ಸರ್ಕಾರವು ರಚಿಸಿರುವ  Price Negotiation Committee ಅಂತಿಮಗೊಳಿಸುತ್ತದೆ. BU ಅಂದರೆ ಬಾಲೆಟ್‌ ಯೂನಿಟ್‌ ನ ಪ್ರಸ್ತುತ ಬೆಲೆ ರೂ.7,991/-, CU ಅಂದರೇ ಕಂಟ್ರೋಲ್‌ ಯೂನಿಟ್‌ ನ ರೂ.9,812/- ಮತ್ತು VVPAT ನ ಪ್ರಸ್ತುತ ಬೆಲೆ  ರೂ.16,132 ಇದೆ ಎಂದು ಹೇಳಿದೆ. ಮತ್ತು ಇವಿಎಂಗಳನ್ನು ಸರಿಸುಮಾರು 15 ವರ್ಷಗಳ ಕಾಲ ಮರುಬಳಕೆ ಮಾಡಬಹುದು ಎಂದೂ ತಿಳಿಸಿದೆ.

ಇವಿಎಂ ಮತ್ತು ವಿವಿಪ್ಯಾಟ್‌ ಗಳಿಂದ ಮತಗಳು ಆಡಳಿತ ಪಕ್ಷಕ್ಕೆ ಮತ ಹೋಗುವ ಹಾಗೆ ಟ್ಯಾಂಪರಿಂಗ್‌ ಮಾಡಲಾಗುತ್ತದೆ ಎಂಬ ಆರೋಪಗಳನ್ನು ಪ್ರತಿಪಕ್ಷ ಹಲವು ಬಾರಿ ಮಾಡಿವೆ. ಇತ್ತೀಚೆಗಷ್ಟೇ ನ್ಯಾಯಯುತ ಚುನಾವಣೆ ನಡೆಸಿದರೆ, ಇವಿಎಂಗಳನ್ನು ಟ್ಯಾಂಪರಿಂಗ್ ಮಾಡದೆ ಇದ್ದರೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ 180ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ. ಕಾಸರಗೋಡಿನಲ್ಲಿ ಅಣಕು ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಮತಗಳು ಬಿಜೆಪಿಗೆ ಹೋಗುತ್ತಿವೆ ಎಂಬ ಆರೋಪವನ್ನು ಎಲ್‌ಡಿಎಫ್‌ ಆರೋಪ ಮಾಡಿರುವುದನ್ನು ಈ ಮೋದಲೇ ಹೇಳಿದ್ದೇವೆ.

ಈ ಮತಗಳನ್ನು ಟ್ಯಾಂಪರಿಂಗ್‌ ಮಾಡಲಾಗುತ್ತದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ಇವಿಎಂ ಯಂತ್ರಗಳೂ ಕೂಡ ಇತರ ಯಂತ್ರಗಳಂತೆ ಒಮ್ಮೊಮ್ಮೆ ವೈಫಲ್ಯಗಳಿಗೆ ಗುರಿಯಾಗುತ್ತವೆ. ದೋಷಗಳು ಕಂಡುಬಂದಲ್ಲಿ ಯಂತ್ರಗಳನ್ನು  ಆ ಕೂಡಲೇ ನುರಿತ ತಜ್ಞರಿಂದ ಸರಿ ಪಡಿಸಲಾಗುತ್ತದೆ. ಆದಾಗ್ಯೂ, ನಿರ್ದಿಷ್ಟ ಒಬ್ಬ ಅಭ್ಯರ್ಥಿಗೆ ಅನುಕೂಲವಾಗುವಂತೆ ಯಾವುದೇ ಮತ ಯಂತ್ರಗಳನ್ನು ಟ್ಯಾಂಪರಿಂಗ್‌ ಮಾಡುವ ಪ್ರಶ್ನೆಯೇ ಇಲ್ಲ, ಇವಿಎಂ ವಿನ್ಯಾಸದಲ್ಲಿಯೇ ಅಳವಡಿಸಲಾಗಿರುವ ಹಲವು ಸುರಕ್ಷಿತ ತಂತ್ರಜ್ಞಾನಗಳಿಂದ ಮತ ಎಣಿಕೆ ನಡೆಯುತ್ತದೆ. ಯಾವುದೇ ಕಾರಣಕ್ಕೂ ಟ್ಯಾಂಪರಿಂಗ್‌ ಆಗುವ ಸಾಧ್ಯೆತೆಯೇ ಇಲ್ಲ ಎಂದು ತನ್ನನ್ನು ತಾನು ಚುನಾವಣೆ ಆಯೋಗ ಸಮರ್ಥಿಸಿಕೊಂಡಿದೆ.

ಹೀಗೆಲ್ಲಾ ಹೇಳುವ ಪ್ರತಿಪಕ್ಷಗಳೂ ಕೂಡ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದಿವೆ. ಅಲ್ಲಿಯೂ ಇದೇ ಮಾಡೆಲ್‌ ತ್ರಿ ಇವಿಎಂ ವಿವಿಪ್ಯಾಟ್‌ ಯಂತ್ರಗಳನ್ನೇ ಬಳಸಲಾಗಿತ್ತು ಎನ್ನುವುದು ಉಲ್ಲೇಖಾರ್ಹ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!