spot_img
Friday, January 17, 2025
spot_img

ಕಾಂಗ್ರೆಸ್‌ನ ಹೊಸ ಹುಟ್ಟು ರಾತ್ರೋರಾತ್ರಿ ಆಗುವುದಿಲ್ಲ…

ಅನಿಶ್ಚಿತತೆಯನ್ನು ಮೀರಿ ಹೊರಬಂದರೂ ಪಕ್ಷದ ಮುಂದೆ ಸುದೀರ್ಘ ಪಯಣವಿದೆ  !

ಕಾಂಗ್ರೆಸ್ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿಯೂ  ಸುಧಾರಿಸುವ ಸಾಧ್ಯತೆ ಕಡಿಮೆ ಎಂದು ಹೇಳುವ ಒಂದು ವರ್ಗವಿದೆ. ಆದಾಗ್ಯೂ, ಇನ್ನೊಂದು ವರ್ಗದ ಜನರು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 100-120ರ ಗಡಿ ದಾಟುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ ಎಂದು ಬಲವಾಗಿ  ಪ್ರತಿಪಾದಿಸುತ್ತಾರೆ. ಆದರೆ ಒಂದಂತೂ ಖಚಿತ ಕೇಂದ್ರದಲ್ಲಿ ಸ್ವಂತವಾಗಿ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಸದ್ಯಕ್ಕಿಲ್ಲ. ಕಾಂಗ್ರೆಸ್‌ ತನ್ನ ರಾಜಕೀಯ ಸುದೀರ್ಘ ಅನುಭವದ ದಯನೀಯ ಸ್ಥಿತಿಯಲ್ಲಿದೆ.  50 ವರ್ಷಗಳಿಗೂ ಹೆಚ್ಚು ಕಾಲ ದೇಶದ ರಾಜಕೀಯ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದಿದ್ದು ಇದೇ ಕಾಂಗ್ರೆಸ್. ಕಾಂಗ್ರೆಸ್‌ ಕಾಲಾಂತರದಲ್ಲಿ ತನ್ನೊಳಗೆ ತಾನು ಕಂಡ ಆಂತರಿಕ ಕಲಹ ಮತ್ತು ವೈಫಲ್ಯದ ಕಾರಣದಿಂದ ಹಂತ ಹಂತವಾಗಿ ತನ್ನ ವಿಶ್ವಾಸವನ್ನು ಕಳೆದುಕೊಂಡು ಬೆಳೆಯಬೇಕಾಯಿತು. ಇಂತಹದ್ದೊಂದು ವಿಷಮ ಸ್ಥಿತಿಯಲ್ಲೂ ಕಾಂಗ್ರೆಸ್ ಮನಮೋಹನ್ ಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು 10 ವರ್ಷಗಳ ಕಾಲ ನಡೆಸಿತು. ಆದರೆ, ನರೇಂದ್ರ ಮೋದಿ, ಹಿಂದುತ್ವದ ಅಲೆ ಹಾಗೂ ಅಸಾಧಾರಣ ನಾಯಕತ್ವ ಎಂದು ʼಬಲವಂತವಾಗಿ ಬಿಂಬಿಸಿರುವʼ ವಾತಾವರಣದ ನಡುವೆ ಕಾಂಗ್ರೆಸ್‌ ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಳ್ಳಬೇಕಾಯಿತು. ಸದ್ಯ ರಾಜಕೀಯದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಾಬಲ್ಯ ಹೇಗಿದೆ ಎಂದರೆ ಕಾಂಗ್ರೆಸ್ ಸ್ವಂತವಾಗಿ ಸರ್ಕಾರ ರಚಿಸುವುದು ಕನಸಿನ ಮಾತಿನಂತೆಯೇ ಕಾಣುತ್ತಿದೆ.

ಕಾಂಗ್ರೆಸ್‌ ತೋರಿದ ಭರವಸೆ :

ಪ್ರಸ್ತುತ, ಮೂರು ರಾಜ್ಯಗಳಲ್ಲಿ ಸರ್ಕಾರಗಳನ್ನು ಹೊಂದಿರುವ ಕಾಂಗ್ರೆಸ್, ದೇಶದ ಶೇ. 19 ರಷ್ಟು ಮತ ಹಂಚಿಕೆಯ ಹೊರತಾಗಿಯೂ ಕಾಂಗ್ರೆಸ್ ನಿಜವಾಗಿಯೂ ಅಸ್ತಿತ್ವದ ಬಿಕ್ಕಟ್ಟಿನಲ್ಲಿ ಹೆಣಗಾಡುತ್ತಿದೆ. ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲು ಕಾಂಗ್ರೆಸ್‌ ತನ್ನನ್ನು ತಾನು ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಪಡಿಸಿಕೊಳ್ಳುವ ಅಗತ್ಯವಿದೆ. ಇಂದು, ಇದು ಮರೀಚಿಕೆಯಂತೆ ಕಾಣುತ್ತದೆ, ಆದರೆ 2024ರ ಚುನಾವಣೆಗಾಗಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ನೋಡಿದಾಗ ಭರವಸೆಯ ಮಿನುಗು ಕಾಂಗ್ರೆಸ್‌ನಲ್ಲಿದೆ ಎನ್ನುವ ವಿಚಾರವನ್ನು ತಳ್ಳಿಹಾಕಲಾಗುವುದಿಲ್ಲ. ಕಾಂಗ್ರೆಸ್ ತನ್ನ ಹೊಸ ಸಾಮಾಜಿಕ ನೆಲೆಯನ್ನು ಮರಳಿ ಪಡೆಯಲು ಯಾವ ದಿಕ್ಕಿನಲ್ಲಿ ಸಾಗಲು ಯೋಜಿಸುತ್ತಿದೆ ಎಂಬುದರ ಕುರಿತು ಅಂತಿಮವಾಗಿ ಸ್ಪಷ್ಟತೆಯನ್ನು ಪಡೆದುಕೊಂಡಂತೆ ಕಾಣಿಸುತ್ತಿದೆ.

1989ರ ಚುನಾವಣೆಯ ನಂತರ ಒಂದು ಹಂತದಲ್ಲಿ ಕಾಂಗ್ರೆಸ್‌ನ ಅವನತಿ ಪ್ರಾರಂಭವಾಯಿತು. ಮೂರು ಘಟನೆಗಳು ಪಕ್ಷದ ಭವಿಷ್ಯವನ್ನು ಬಲವಾಗಿ ಕಾಡಿವೆ ಎಂದರೇ ತಪ್ಪಿಲ್ಲ. ಅವುಗಳೆಂದರೇ, ಬೋಫೋರ್ಸ್ ಹಗರಣ, ವಿ.ಪಿ. ಸಿಂಗ್‌ ನೇತೃತ್ವದ ಸರ್ಕಾರದಿಂದ ಅನುಷ್ಠಾನಕ್ಕೆ ಬಂದ ಮಂಡಲ್ ಆಯೋಗ, ಮತ್ತು ಬಿಜೆಪಿ ನೇತೃತ್ವದ ರಾಮಮಂದಿರ ಚಳವಳಿ. ಇಂದಿರಾ ಗಾಂಧಿಯವರ ದುರಂತ ಹತ್ಯೆಯ ನಂತರ 404 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ 1989ರಲ್ಲಿ ಒಂದು ಹಂತಕ್ಕೆ ಹೀನಾಯವಾಗಿ ಕುಸಿಯಿತು. ಶೇ. 39.53ರಷ್ಟು ಮತಗಳೊಂದಿಗೆ 197 ಕ್ಷೇತ್ರಗಳನ್ನು ಗೆಲ್ಲುವುದಕಷ್ಟೇ ಸಾಧ್ಯವಾಯಿತು. ರಾಜೀವ್ ಗಾಂಧಿಯವರ ನಿಧನದ ನಂತರ, ಕಾಂಗ್ರೆಸ್ ಎರಡು ಬಾರಿ ಸರ್ಕಾರವನ್ನು ರಚಿಸಿತು. ಒಮ್ಮೆ 1991ರಲ್ಲಿ, ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿ, ಮತ್ತು 2004ರಲ್ಲಿ ಮನಮೋಹನ್ ಸಿಂಗ್ ಅವರು 10 ವರ್ಷಗಳ ಕಾಲ ಸಂಪುಟವನ್ನು ಮುನ್ನಡೆಸಿದರು. ರಾಜೀವ್ ಆಳ್ವಿಕೆಯಲ್ಲಿನ ಬೋಫೋರ್ಸ್ ಹಗರಣದಿಂದಾಗಿ, ಕಾಂಗ್ರೆಸ್‌ನ ಪರವಾಗಿದ್ದ ಬಹುಪಾಲು ಮತದಾರರ ವರ್ಗ ಒಂದು ದೊಡ್ಡ ಮಟ್ಟದ ಭ್ರಮನಿರಸನಕ್ಕೊಳಗಾಯಿತು. ಆ ಮತದಾರರ ವರ್ಗ ಕಾಂಗ್ರೆಸ್ ತೊರೆದು ಬಿಜೆಪಿಯತ್ತ ವಾಲಿತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕಾಂಗ್ರೆಸ್‌ನ ರಾಜಕೀಯ ಸೋಲುಗಳು :

ಸರ್ಕಾರಿ ಉದ್ಯೋಗಗಳಲ್ಲಿ ಶೇ.27ರಷ್ಟು ಮೀಸಲಾತಿಯನ್ನು ಕಡ್ಡಾಯಗೊಳಿಸುವ ಮಂಡಲ್ ಆಯೋಗದ ವರದಿಯ ಬಗ್ಗೆ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಲು ಕಾಂಗ್ರೆಸ್‌ನ ಅಸಮರ್ಥತೆಯು ಮೇಲ್ಜಾತಿಗಳನ್ನು ಮಾತ್ರವಲ್ಲದೆ ದಲಿತರು ಮತ್ತು ಇತರ ಹಿಂದುಳಿದ ಜಾತಿಗಳನ್ನು (ಒಬಿಸಿ), ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ದೂರವಿಟ್ಟಿತು. ಈ ರಾಜ್ಯಗಳಲ್ಲಿ ಒಬಿಸಿ ಮತ್ತು ದಲಿತ ನಾಯಕತ್ವ ಮುಂಪಕ್ತಿಗೆ ಬರಲಾರಂಭಿಸಿದಾಗ ಕಾಂಗ್ರೆಸ್ ಅವನತಿಗೆ ನಾಂದಿ ಆಯ್ತು. ಮುಲಾಯಂ ಸಿಂಗ್ ಯಾದವ್, ಕಾನ್ಶಿರಾಮ್, ಮಾಯಾವತಿ, ಲಾಲು ಯಾದವ್, ನಿತೀಶ್ ಕುಮಾರ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಈ ಎರಡು ಉತ್ತರ ಭಾರತದ ರಾಜ್ಯಗಳಲ್ಲಿ ಮುಂದಿನ ಎರಡು ದಶಕಗಳಲ್ಲಿ ಪ್ರಾಬಲ್ಯ ಸಾಧಿಸಿದರು. ಬಾಬರಿ ಮಸೀದಿ ಧ್ವಂಸ ಪ್ರಕರಣ ಕಾಂಗ್ರೆಸ್‌ನಿಂದ ಮುಸ್ಲೀಂ ಸಮುದಾಯದ ತುಸು ದೂರ ಉಳಿಯುವಂತಾಯಿತು. 1992ರಲ್ಲಿ ನಡೆದ ರಾಮ ಮಂದಿರ ಧ್ವಂಸ ಪ್ರಕರಣ, ಅಂದು ಇದ್ದ ಪಿ.ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಮುಸ್ಲಿಂ ಸಮುದಾಯ ಸಿಟ್ಟಾಯ್ತು ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಎಲ್.ಕೆ ಅಡ್ವಾಣಿ ಅವರ ನೇತೃತ್ವದಲ್ಲಿ ನಡೆದ ರಾಮಮಂದಿರ ಆಂದೋಲನವು ವಿಶೇಷವಾಗಿ ಉತ್ತರ ಭಾರತದಲ್ಲಿ ಹೊಸ ಹಿಂದೂ ಮತದಾರರ ದೊಡ್ಡ ವಲಯದ ಸೃಷ್ಟಿಗೆ ನೇರಾನೇರ ಕಾರಣವಾಯಿತು. ʼಕಾಂಗ್ರೆಸ್ ಹುಸಿ ಜಾತ್ಯತೀತತೆಯನ್ನು ಅನುಸರಿಸುತ್ತಿದೆʼ ಮತ್ತು  ʼಮುಸ್ಲಿಮರನ್ನು ಓಲೈಸುತ್ತಿದೆʼ ಎಂಬ ಬಿಜೆಪಿಯ ʼಸಿನಿ ಶೈಲಿʼಯ ಆರೋಪ ಕಾಂಗ್ರೆಸ್‌ ಪಾಲಿಗೆ ದೊಡ್ಡ ಮರ್ಮಾಘಾತವಾಗಿಯೇ ಪರಿಣಮಿಸಿತು. ವರ್ಚಸ್ವಿ ನಾಯಕರ ಕೊರತೆ ಕಾಂಗ್ರೆಸ್ ಅನ್ನು ಮತ್ತಷ್ಟು ದುರ್ಬಲಗೊಳಿಸಿತು. ಸೋನಿಯಾ ಗಾಂಧಿಯವರು ʼಸ್ಟಾಪ್‌ಗ್ಯಾಪ್ʼ ವ್ಯವಸ್ಥೆಯಂತೆ ಅಷ್ಟೇ ಆಗಿ ಉಳಿದರು. ಇನ್ನು, ಗೊತ್ತೇ ಇರುವ ಹಾಗೆ, ಕಾಂಗ್ರೆಸ್ ನ 2014ರ ನಂತರದ ದೊಡ್ಡ ಸೋಲು ಮರಳಿ ಚೇತರಿಸಿಕೊಳ್ಳುವುದಕ್ಕೆ ಆಗದೇ ಇರುವಷ್ಟರ ಮಟ್ಟಿಗಿನ ಪ್ರಪಾತಕ್ಕೆ ಕಾಂಗ್ರೆಸ್‌ ಅನ್ನು ಕೊಂಡೊಯ್ದಿತು.

ಕಾಂಗ್ರೆಸ್‌ಗೆ 2019 ವೇಕ್-ಅಪ್ ಕಾಲ್ ಆಗಿತ್ತು :

2019ರ ಲೋಕಸಭಾ ಚುನಾವಣೆಯ ಸೋಲು ಪಕ್ಷಕ್ಕೆ ಎಚ್ಚರಿಕೆಯ ಗಂಟೆಯಾಗಿತ್ತು. ಬಿಜೆಪಿ ತುಂಬಾ ಪ್ರಬಲವಾಗಿದೆ ಎಂದು ಕಾಂಗ್ರೆಸ್ ನಿಧಾನವಾಗಿ ಅರಿತುಕೊಂಡಿತು ಮತ್ತು ಕಾಂಗ್ರೆಸ್ ತನ್ನ ಕಳೆದುಹೋದ ವರ್ಚಸ್ಸನ್ನು ಮರಳಿ ಪಡೆಯುವ ಸಾಹಸಕ್ಕೆ ಮುಂದಾಯಿತು. ರಾಹುಲ್ ಅವರ ಎರಡು ಭಾರತ್ ಜೋಡೋ ಯಾತ್ರೆಗಳು ಈ ಸಾಹಸವನ್ನು ಬಿಂಬಿಸುವಂತೆ ಮೂಡಿಬಂದವು. ರಾಹುಲ್‌ ಗಾಂಧಿ ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು ಮತ್ತು ಮುಸ್ಲಿಂ, ಹಿಂದುಳಿದ ವರ್ಗದ ಮತದಾರರನ್ನು ಕಾಂಗ್ರೆಸ್‌ನತ್ತ ಮತ್ತಷ್ಟು ಆಕರ್ಷಿಸುವ ಪ್ರಯತ್ನ ಮಾಡಿದರು. ಕರ್ನಾಟಕ ಮತ್ತು ತೆಲಂಗಾಣದಲ್ಲಿ ರಾಗಾ ಯಾತ್ರೆಯ ಕಾರಣದಿಂದ ಗೆಲುವು ಸಾಧಿಸಿದೆ ಎಂದು ಕಾಂಗ್ರೆಸ್ ತನ್ನ ತಾನೆ ಬೆನ್ನು ತಟ್ಟಿಕೊಂಡಿತು. ರಾಗಾ ಯಾತ್ರೆಯ ಪ್ರಭಾವವೂ ಈ ಎರಡು ರಾಜ್ಯಗಳ ಚುನಾವಣೆಯಲ್ಲಿ ದೊಡ್ಡ ಮಟ್ಟಿಗೆ ಬೀರಿತ್ತು ಎನ್ನುವ ಮಾತನ್ನು ಅಲ್ಲಗಳೆಯುವಂತಿಲ್ಲ.

ಆದಾಗ್ಯೂ, ಉತ್ತರ ಭಾರತ ಕಾಂಗ್ರೆಸ್‌ ಪಾಲಿಗೆ ರಾಜಕೀಯ ಸಮರ ಭೂಮಿಯಾಗಿ ಉಳಿಯಿತು. ಸಂಸತ್‌ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಬಿಜೆಪಿ ಶೇ. 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿತು. ಪ್ರಾಬಲ್ಯದ ಮೇಲ್ಜಾತಿ ಮತಗಳು ಹೆಚ್ಚಾಗಿ ಬಿಜೆಪಿಗೆ ಒಲಿದವು. ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ ಡಿ ಎಸ್) ಸಮೀಕ್ಷೆಯ ಪ್ರಕಾರ, ಬ್ರಾಹ್ಮಣರು, ಠಾಕೂರ್‌ ಮತ್ತು ಬನಿಯಾ ಸಮುದಾಯಗಳು ಸೇರಿದಂತೆ ಶೇ. 80 ಕ್ಕಿಂತ ಹೆಚ್ಚು ಮೇಲ್ವರ್ಗದ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ. ಒಬಿಸಿ ಮತ್ತು ದಲಿತರ ಮತಗಳನ್ನೂ ಒಲಿಸಿಕೊಳ್ಳುವುದಕ್ಕೂ ಬಿಜೆಪಿ ಪ್ರಯತ್ನದ ಹಾದಿ ಹಿಡಿದಿತ್ತು. ಇದೇ ಕಾರಣದಿಂದಾಗಿ ಕಾಂಗ್ರೆಸ್ ತನ್ನ ಸಾಮಾಜಿಕ ನೆಲೆಯನ್ನು ಮರುಶೋಧಿಸಿಕೊಳ್ಳುವ ಅಗತ್ಯವಿದೆ ಎಂದು ಅರಿತುಕೊಂಡಿತು. ʼಸಾಮಾಜಿಕ ನ್ಯಾಯವನ್ನು ಒಳಗೊಂಡಿರುವ ರಾಜಕೀಯʼ ಮಾತ್ರ ಬಿಜೆಪಿಯ ಹಿಂದುತ್ವವನ್ನು ಎದುರಿಸಬಲ್ಲದು ಎಂದು ಕಾಂಗ್ರೆಸ್ ಅರ್ಥಮಾಡಿಕೊಂಡು ಬೆಳೆಯುವುದಕ್ಕೆ ಮುಂದಾಯಿತು. ಆದರೇ, ಅಂದೇ ಪರಿಣಾಮಕಾರಿಯಾಗಿ ಕಾಂಗ್ರೆಸ್‌ ಅಡಿ ಇಟ್ಟಿಲ್ಲ.

ಸಾಮಾಜಿಕ ನ್ಯಾಯದತ್ತ ಕಾಂಗ್ರೆಸ್‌ !? 

ನಿತೀಶ್ ಕುಮಾರ್ ಅವರ ಜಾತಿಗಣತಿ ಸೂಚನೆಯನ್ನು ತೆಗೆದುಕೊಂಡ ರಾಹುಲ್ ಗಾಂಧಿ ಅವರು ಜಾತಿ ಗಣತಿಗಾಗಿ ಪ್ರತಿಪಾದಿಸಲು ಪ್ರಾರಂಭಿಸಿದರು. ಕರ್ನಾಟಕದ ಕೋಲಾರದಲ್ಲಿ ನಡೆದ ಸಭೆಯೊಂದರಲ್ಲಿಯೂ ರಾಹುಲ್ ಗಾಂಧಿ ಜನಗಣತಿಗೆ ಒತ್ತಾಯಿಸಿರುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ಅದಕ್ಕೂ ಮುಂಚೆಯೇ, ಇಂತಹದ್ದೊಂದು ಸಾಹಸಕ್ಕೆ ಪಕ್ಷದೊಳಗೆ ಒಂದು ಪ್ರಯತ್ನಕ್ಕೆ ಕೈ ಹಾಕಿತ್ತು ಎನ್ನುವುದಿಲ್ಲಿ ಉಲ್ಲೇಖಾರ್ಹ. ಪಂಜಾಬ್‌ನ ಮುಖ್ಯಮಂತ್ರಿಯಾಗಿ ಚರಣ್ ಸಿಂಗ್ ಚನ್ನಿ ಎಂಬ ದಲಿತನನ್ನು ನೇಮಿಸಿತು.  ಕಳೆದ ಡಿಸೆಂಬರ್ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೂ ಮೊದಲಿದ್ದ ಕಾಂಗ್ರೆಸ್‌ನ ಮೂವರು ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್(ರಾಜಸ್ಥಾನ), ಭೂಪೇಶ್ ಬಾಘೇಲ್(ಛತ್ತೀಸ್‌ಗಡ) ಮತ್ತು ಸಿದ್ದರಾಮಯ್ಯ(ಈಗಲೂ ಕರ್ನಾಟಕದ ಮುಖ್ಯಮಂತ್ರಿ) ಹಿಂದುಳಿದ ಜಾತಿಗಳಿಗೆ ಸೇರಿದವರು ಎಂಬ ಅಂಶದಲ್ಲಿ ಕಾಂಗ್ರೆಸ್ ಹೆಮ್ಮೆಪಡುತ್ತದೆ. ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಧ್ಯಕ್ಷರನ್ನಾಗಿಸಿ ದಲಿತರಿಗೂ ನಾವು ನ್ಯಾಯ ಕೊಡುತ್ತೇವೆ ಎನ್ನುವ ಪರೋಕ್ಷ ಸಂದೇಶ ರವಾನೆ ಮಾಡಿತು.

ಆದಾಗ್ಯೂ, ಸಾರ್ವತ್ರಿಕ ಚುನಾವಣೆಗಳಿಗೆ ಇತ್ತೀಚೆಗೆ ಬಿಡುಗಡೆಗೊಳಿಸಿದ ಪ್ರಣಾಳಿಕೆ ʼನ್ಯಾಯಪತ್ರʼದಲ್ಲಿ, ಇದು ಸಾಮಾಜಿಕ ನ್ಯಾಯದ ಗುರಿಯನ್ನು ಹೊಂದಿರುವ ಮೂರು ಪ್ರಮುಖ ಭರವಸೆಗಳ ಮೇಲೆ ಕೇಂದ್ರೀಕರಿಸುತ್ತದೆ. ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿಗಾಗಿ ಶೇ.50 ಮಿತಿಯನ್ನು ವಿಸ್ತರಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಸರ್ಕಾರ ರಚಿಸಲು ಅವಕಾಶ ಸಿಕ್ಕರೆ ಜಾತಿ ಗಣತಿ ನಡೆಸುವುದಾಗಿಯೂ ಪಕ್ಷ ಭರವಸೆ ನೀಡಿದೆ.  ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡುವ ಮೂಲಕ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ವಿಧಾನಸಭೆ ಮತ್ತು ಸಂಸತ್ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಜಾರಿಗೆ ತರಲು ಪಣ ತೊಟ್ಟಿದೆ. ನಾರಿ ನ್ಯಾಯ್ ಗ್ಯಾರಂಟಿಯ ಅಡಿಯಲ್ಲಿ, ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

ನಿಸ್ಸಂದೇಹವಾಗಿ, ಇವುಗಳು ಕಾಂಗ್ರೆಸ್‌ನ ತನ್ನ ಕಷ್ಟ ಕಾಲದಲ್ಲಿ ತೆಗೆದುಕೊಂಡ ದಿಟ್ಟ ಹೆಜ್ಜೆಗಳು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಡುವೆ ಕಾಂಗ್ರೆಸ್ ಸಾಂಸ್ಥಿಕವಾಗಿ ತುಂಬಾ ದುರ್ಬಲವಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕರು ಹೊಸ ಪೀಳಿಗೆಗೆ ಜಾಗ ಬಿಟ್ಟುಕೊಡಲು ಸಿದ್ಧರಿಲ್ಲ. ಈ ಹಿರಿಯ ನಾಯಕರು ವರ್ಚಸ್ವಿ ವ್ಯಕ್ತಿಗಳ ನೆರಳಿನಲ್ಲಿ ಅರಳಿದವರೇ ಆಗಿದ್ದಾರೆ. ಈ ನಾಯಕರೆಲ್ಲಾ ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಲು ಹೆಣಗಾಡುತ್ತಿದ್ದಾರೆ ಮತ್ತು ರಾಗಾ ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸುವ ಬದಲು, ಆಗಾಗ್ಗೆ ಅವರ ನಾಯಕತ್ವದಲ್ಲಿ ದೋಷಗಳನ್ನೇ ಎತ್ತಿ ಹಿಡಿಯುತ್ತಾರೆ.

ಇನ್ನು, ಕಾಂಗ್ರೆಸ್‌ ಸಾಮಾಜಿಕವಾಗಿ ಮರು ಚೇತರಿಸಿಕೊಳ್ಳುವ ಮುಖವಾಗಿ ಮಹತ್ತರ ದಾಪುಗಾಲು ಇಟ್ಟಿರುವುದು ಪ್ರಶಂಸನೀಯ. ಆದಾಗ್ಯೂ, ಸಾಮಾಜಿಕ ನ್ಯಾಯದ ಧ್ವನಿಯನ್ನು ಇನ್ನೂ ಪರಿಣಾಮಕಾರಿಯಾಗಿ ಎತ್ತಬೇಕಿತ್ತು ಎನ್ನುವುದು ಎಲ್ಲಾ ಕಾಂಗ್ರೇಸಿಗರ ಅಭಿಪ್ರಾಯವೂ ಹೌದು. ಬಿಜೆಪಿ ಪ್ರಸ್ತುತ ಹ್ಯಾಟ್ರಿಕ್‌ ಗೆಲುವಿನತ್ತ ಮುಖಮಾಡಿದೆ. ಅಂತಿಮವಾಗಿ ಕಾಂಗ್ರೆಸ್‌ ತನ್ನ ಹತ್ತು ವರ್ಷಗಳ ಅನಿಶ್ಚಿತತೆ ಮತ್ತು ಗೊಂದಲದ ನಂತರ ಒಂದು ಸ್ಪಷ್ಟವಾದ ಮಾರ್ಗವನ್ನು ಕಂಡುಕೊಂಡಿದೆ ಎಂದು ಅದರ ಪ್ರಣಾಳಿಕೆ ಸೂಚಿಸುತ್ತದೆ. ಆದರೆ ಕಾಂಗ್ರೆಸ್‌ನ ಮುಂದೆ ಇನ್ನೂ ಸುದೀರ್ಘ ಪ್ರಯಾಣವಿದೆ. ಕಾಂಗ್ರೆಸ್‌ನ ಹೊಸ ಹುಟ್ಟು ರಾತ್ರೋರಾತ್ರಿ ಅಥವಾ ಒಂದೇ ಚುನಾವಣೆಯಲ್ಲಿ ಆಗುವುದಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!