Wednesday, September 11, 2024

ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿರುವುದು ಬಿಜೆಪಿ ದುರ್ದೈವ, ಬಿಜೆಪಿ ಶುದ್ಧೀಕರಣವೇ ನನ್ನ ಗುರಿ-ಕೆ.ಎಸ್ ಈಶ್ವರಪ್ಪ

 

ಬೈಂದೂರು: ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಕಾಂಗ್ರೆಸ್‌ನ ಕುಟುಂಬ ರಾಜಕೀಯ ಮುಕ್ತವಾಗಬೇಕು ಎಂದು ಕರೆ ಕೊಡುತ್ತಾರೆ. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪನವರ ಕುಟುಂಬ ರಾಜಕೀಯ ನಡೆಯುತ್ತಿದೆ. ಇದನ್ನು ಮುಕ್ತ ಮಾಡುವುದೇ ನನ್ನ ಗುರಿ. ಹಿಂದುತ್ವ, ಕಾರ್ಯಕರ್ತರೇ ದೇವರಿಗೆ ಸಮಾನ ಎಂದು ಭಾವಿಸಿದವ ನಾನು. ಪ್ರಮಾಣ ಮಾಡಿ ಹೇಳುತ್ತೇನೆ ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿಲಿರುವ ಕೆ.ಎಸ್ ಈಶ್ವರಪ್ಪ ಹೇಳಿದರು.

ರಾಷ್ಟ್ರಭಕ್ತರ ಬಳಗ ಬೈಂದೂರು ವತಿಯಿಂದ ಉಪ್ಪುಂದ ಪರಿಚಯ ಸಭಾಂಗಣದಲ್ಲಿ ನಡೆದ ಬೈಂದೂರು ಹೋಬಳಿ ಮಟ್ಟದ ಕಾರ್ಯಕರ್ತರ   ಸಮಾವೇಶದಲ್ಲಿ ಮಾತನಾಡಿದರು.

ಕರ್ನಾಟಕದಲ್ಲಿಂದು ಬಿಜೆಪಿಯ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಇಂಥ ಪರಿಸ್ಥಿತಿ ಬಿಜೆಪಿಗೆ ಬಂದಿರುವುದು ದುರ್ದೈವ. ಬಿಜೆಪಿಯ ಶುದ್ಧೀಕರಣದ ಉದ್ದೇಶದಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ. ಈ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿಯರ ಕೈ ಬಲ ಪಡಿಸುತ್ತೇನೆ. ರಾಜ್ಯದಲ್ಲಿ ಕುಟುಂಬ ರಾಜಕೀಯದಿಂದ ಕರ್ನಾಟಕ ಬಿಜೆಪಿ ಮುಕ್ತವಾಗಿಯೇ ಆಗುತ್ತದೆ ಎಂದರು.

ಹಿಂದುತ್ವದ ಪರವಾಗಿ ಹೋರಾಟ ಮಾಡಿ, ಪಕ್ಷ ಸಂಘಟನೆಯಲ್ಲಿ ಹಲವು ದಶಕಗಳಿಂದ ಕೆಲಸ ಮಾಡಿದ ನನಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೇ ಮಾಡುವ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಲಕ್ಷಾಂತರ ಮಂದಿ ಕಾರ್ಯಕರ್ತರು ಕೂಡಾ ನೋವು ಅನುಭವಿಸುತ್ತಿದ್ದಾರೆ. ವಿಧಿ ಇಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

ರಾಜ್ಯ ಬಿಜೆಪಿ ರಾಜಕೀಯದಲ್ಲಿ ಏನಾಗುತ್ತಿದೆ ಎಂದು ರಾಜ್ಯದ ಜನತೆ ನೋಡುತ್ತಿದ್ದಾರೆ. ಯಡಿಯೂರಪ್ಪ ಆಪ್ತರಿಗೆ ಕಾರ್ಯಕರ್ತರ ವಿರೋಧ ಇದ್ದರೂ ಟಿಕೆಟು ಸಿಗುತ್ತದೆ. ಪಕ್ಷಕ್ಕಾಗಿ, ಹಿಂದುತ್ವಕ್ಕಾಗಿ ಹೋರಾಟ ಮಾಡಿದವರನ್ನು ಮೂಲೆಗುಂಪು ಮಾಡಲಾಗುತ್ತದೆ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡದೆ ಕುಟುಂಬ ರಾಜಕಾರಣವನ್ನು ಮುಂದುವರಿಸುವ ಪರಿಪಾಠ ಅಪಾಯಕಾರಿಯಾದುದು ಎಂದು ಹೇಳಿದ ಅವರು ಎಪ್ರಿಲ್ ೧೨ರಂದು ನಾಮಪತ್ರ ಲ್ಲಿಕೆ ಮಾಡಲಿದ್ದೇನೆ. ಆ ದಿನ ೧೫-೨೦ ಸಾವಿರ ಜನ ಸೇರುವ ನಿರೀಕ್ಷೆ ಇದೆ. ಎ.೧೯ರಂದು ನನ್ನ ಚಿಹ್ನೆ ಲಭಿಸಲಿದೆ ಎಂದರು.

ಕಾರ್ಯಕ್ರಮ ಸಂಚಾಲಕ ಶ್ರೀಧರ ಬಿಜೂರು ಮಾತನಾಡಿ ಬಿಜೆಪಿ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದೆ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರುವುದಕ್ಕೆ ಕಾರಣ. ಹಿಂದುಳಿದ ವರ್ಗದವರಿಗೆ ಒತ್ತು ನೀಡಿ ಅವರನ್ನು ನಾಯಕರನ್ನಾಗಿಸುವುದು ಯಾರಿಗೂ ಇಷ್ಟವಿಲ್ಲ. ನಾಯಕರ ಜೊತೆ ಗುರುತಿಸಿಕೊಂಡ ನಾಲ್ಕಾರು ಮಂದಿಗಷ್ಟೇ ಅವಕಾಶ ಸಿಗುತ್ತಿದೆ. ಸಾವಿರಾರು ಕೋಟಿ ಅನುದಾನಗಳು ಇವತ್ತು ನೇರ ಎಜೆನ್ಸಿಗಳ ಮೂಲಕ ಹೋಗುತ್ತಿದೆ. ಮರವಂತೆ ಮೀನುಗಾರರ ಸಮಸ್ಯೆಗೆ ಸ್ಪಂದಿಸುವ ಕೆಲಸ ಆಗಿಲ್ಲ. ಗಂಗೊಳ್ಳಿ ಮೀನುಗಾರಿಕಾ ಜಟ್ಟಿಯಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ರಾಜ್ಯ ಸರ್ಕಾರಕ್ಕೆ ಪರಿಹಾರ ನೀಡಲು ಆಗುತ್ತದೆ, ಆದರೆ ಮರವಂತೆಯಲ್ಲಿ ೫-೬ ಕೋಟಿ ನಷ್ಟ ಸಂಭವಿಸಿದಾಗ ಒಂದು ಪೈಸೆಯ ಪರಿಹಾರ ಕೊಡಲು ಅಂದು ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲವೇ? ಮೂರು ಚುನಾವಣೆಯಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದೇವೆ. ಈ ಬಾರಿ ಮೋದಿ ಪೋಟೋ ಬಿಟ್ಟು ಬರಲಿ ಎಂದರು.

ತಾ.ಪಂ.ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು. ಯಶವಂತ ಗಂಗೊಳ್ಳಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸುವರ್ಣ ಪೂಜಾರಿ, ಗಣೇಶ ರಾವ್, ಗೋಪಾಲ ಗಾಣಿಗ, ಮಂಜುನಾಥ್ ರಾವ್, ವಿನಯ ನೈರಿ, ಪ್ರದೀಪ ಉಪಸ್ಥಿತರಿದ್ದರು,

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!