spot_img
Saturday, December 7, 2024
spot_img

ಶಿವಮೊಗ್ಗ ಲೋಕಸಭಾ ಚುನಾವಣೆ | ಮಾಜಿ ಮುಖ್ಯಮಂತ್ರಿಗಳ ಎರಡನೇ ತಲೆಮಾರಿನ ಜಿದ್ದಾಜಿದ್ದಿನ ಕಣ

ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಹವಾ ಜೋರಾಗಿದೆ. 2009ರಿಂದಲೂ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಕುಟುಂಬಸ್ಥರು ಚುನಾವಣೆಯಲ್ಲಿ ಮುಖಾಮುಖಿ ಆಗುತ್ತಿರುವ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಈ ಬಾರಿಯೂ ಅದೇ ಪಾಲಿಟಿಕಲ್‌ ವೈಬ್‌ ಕಾಣಿಸಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್ ನಿಂದ ಅಖಾಡಕ್ಕಿಳಿದಿದ್ದರೇ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪುತ್ರ ಬಿ. ವೈ ರಾಘವೇಂದ್ರ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

ಬಹಳ ಪ್ರಮುಖವಾಗಿ ನಾವಿಲ್ಲಿ ಗಮನಿಸಬೇಕಾದ ವಿಚಾರ ಏನಂದ್ರೆ… ಕರ್ನಾಟಕದ ರಾಜಕೀಯದಲ್ಲಿ ಬಂಗಾರಪ್ಪ ಮತ್ತು ಯಡಿಯೂರಪ್ಪ ಇಬ್ಬರೂ ಬಗರ್ ಹುಕುಂ ಜಮೀನು, ಬಂಧಿತ ಕಾರ್ಮಿಕರು, ಶರಾವತಿ ನದಿ ತೆರವು ಹಾಗೂ ಜಿಲ್ಲೆಯ ಒಣಪ್ರದೇಶದಳಿಗೆ ನೀರಾವರಿಯಂತಹ ಜನರ ಸಮಸ್ಯೆಗಳಿಗಾಗಿ ಹೋರಾಡಿ ರಾಜ್ಯ ರಾಜಕಾರಣಕ್ಕೆ ಕಾಲಿಟ್ಟವರು. ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಬೆಳವಣಿಗೆಗೆ ಮಾಜಿ ಮುಖ್ಯಮಂತ್ರಿ ದ್ವಯರ ಗಣನೀಯ ಕೊಡುಗೆ ಇದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಸದ್ಯ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಕುಂಟುಂಬದ ಎರಡನೇ ತಲೆಮಾರುಗಳು ಲೋಕಸಭಾ ಕಣದಲ್ಲಿವೆ.

ಗೀತಾ ಶಿವರಾಜ್ಕುಮಾರ್ ಎರಡನೇ ಬಾರಿಗೆ ಲೋಕಸಭೆಗೆ ಸ್ಪರ್ಧಿಸಲು ಅಣಿಯಾಗಿದ್ದಾರೆ. ಈ ಮೊದಲು, 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು.  2009ರಿಂದಲೂ ಲೋಕಸಭಾ ಕ್ಷೇತ್ರದ ಪರಿಚಯವಿರುವ ಬಿ. ವೈ ರಾಘವೇಂದ್ರರಿಗೆ ಇದು ನಾಲ್ಕನೇ ಚುನಾವಣೆ. 2009 ರಿಂದ ಸ್ಪರ್ಧಿಸಿದ ಎಲ್ಲಾ ಮೂರು ಸಂಸತ್ ಚುನಾವಣೆಗಳಲ್ಲಿ ಸತತವಾಗಿ ಅವರು ಗೆದ್ದಿದ್ದಾರೆ. ಅವರು 2018 ರ ಉಪಚುನಾವಣೆ ಹಾಗೂ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರನ್ನು ಎರಡು ಬಾರಿ ಸೋಲಿಸಿದರು.   ಬಿಜೆಪಿಯಿಂದ ಈ ಬಾರಿಯೂ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಕಣದಲ್ಲಿದ್ದಾರೆ, ಇದೀಗ 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಸಹೋದರ ಸಚಿವ ಮಧು ಬಂಗಾರಪ್ಪ ಅವರನ್ನು ಮಣಿಸಿದ್ದ ಬಿ.ವೈ ರಾಘವೇಂದ್ರ ವಿರುದ್ಧ ಸೆಣಸಲು ಗೀತಾ ಶಿವರಾಜ್ ಕುಮಾರ್ ಸಜ್ಜಾಗಿದ್ದಾರೆ.

ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಭಾರಿ ಹುರುಪಿನಲ್ಲಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೂ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ವಿಶ್ವಾಸ ಹೆಚ್ಚಿಸಿವೆ. ಬಿಜೆಪಿ ಕೂಡ ಎಂದಿನಂತೆ ಮೋದಿ ಹವಾದೊಂದಿಗೆ ಚುನಾವಣೆ ಪ್ರಚಾರದಲ್ಲಿ ತೊಡಗಿದೆ. ಶ್ರೀರಾಮ ಮಂದಿರ ಲೋಕಾರ್ಪಣೆ ಬಹಳ ದೊಡ್ಡ ಮಟ್ಟದ ಯಶಸ್ಸು ತಂದುಕೊಡಲಿದೆ ಎಂಬ ನಂಬಿಕೆಯಲ್ಲಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಉಭಯ ಪಕ್ಷಗಳ ಪ್ರಚಾರ ಜೋರಾಗಿದೆ. ಅಲ್ಲಲ್ಲಿ ಕಾರ್ಯಕರ್ತರ ಸಭೆ, ಚುನಾವಣಾ ಪ್ರಚಾರಗಳನ್ನು ನೋಡಿದರೇ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ಆಗಬಹುದು ಎಂಬ ಲಕ್ಷಣಗಳು ಕಾಣಿಸುತ್ತಿವೆ. ಬಂಡಾಯ ಸ್ಪರ್ಧೆಗೆ ಮುಂದಾದ ಮಾಜಿ ಸಚಿವ ಈಶ್ವರಪ್ಪ ಅವರಿಂದ ವಿಭಜನೆಯಾಗುವ ಮತಗಳು ಕಾಂಗ್ರೆಸ್ ನಲ್ಲಿ ಮತ್ತಷ್ಟು ಹುರುಪು ಮೂಡಿಸಿದೆ ಎಂದರೇ ತಪ್ಪಿಲ್ಲ. ಇನ್ನು, ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮರಳಿದ್ದು, ಇಲ್ಲಿ ಬಂಟ್ಸ್ ಮತಗಳು ಕೂಡ ಸ್ವಲ್ಪ ಪ್ರಮಾಣದಲ್ಲಿ ಕಾಂಗ್ರೆಸ್ ಕಡೆಗೆ ವಾಲಬಹುದು ಎಂಬ ಲೆಕ್ಕಚಾರವಿದೆ. ಇನ್ನು, ಬೈಂದೂರಿನಲ್ಲಿ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಹಾಗೂ ಬಿ.ಎಂ ಸುಕುಮಾರ ಶೆಟ್ಟಿ ಅವರು ಒಂದಾಗಿದ್ದು, ಗೋಪಾಲ ಪೂಜಾರಿ ಅವರ ಹಿಂದಿರುವ ಬಿಲ್ಲವ ಹಾಗೂ ಸುಕುಮಾರ ಶೆಟ್ಟಿ ಅವರ ಹಿಂದಿರುವ ಬಂಟ್ಸ್ ಮತಗಳು ಈ ಬಾರಿ ಕಾಂಗ್ರೆಸ್ ಕಡೆ ಬರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಆದರೂ, ಪಕ್ಷದ ಮೇಲೆ ನಿಷ್ಠೆ ಇರುವ ಮತದಾರರು ತಮ್ಮ ನಿಲುವು ಬದಲಾಯಿಸದೇ ಉಳಿದರೇ ಇಲ್ಲಿ ಇರುವ ನಿರೀಕ್ಷೆ ಸುಳ್ಳಾಗಬಹುದುಕೂಡ.

ವಿಧಾನಸಭಾ ಚುನಾವಣೆಯಲ್ಲಿ ಗುರುರಾಜ್ ಶೆಟ್ಟಿ ಗಂಟಿಹೊಳೆ ಬಿಜೆಪಿಯಿಂದ ಬೈಂದೂರಿನಲ್ಲಿ ಕಣದಲ್ಲಿ ಇದ್ದಿದ್ದರಿಂದ ಬಂಟ್ಸ್ ಮತಗಳು ಬಿಜೆಪಿಗೆ ಒಲಿದಿದ್ದವು. ಆದರೇ ಇದು ಲೋಕಸಭಾ ಚುನಾವಣೆ ಮಾಜಿ ಶಾಸಕ ಸುಕುಮಾರ ಶೆಟ್ಟಿ ಅವರು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವುದರಿಂದ ಬಂಟ್ಸ್ ಮತಗಳು ಹಾಗೂ ಸುಕುಮಾರ ಶೆಟ್ಟರನ್ನು ಬೆಂಬಲಿಸುವ ಮತಗಳು ಕಾಂಗ್ರೆಸ್ ಗೆ ಬಂದರೇ ಜೊತೆಗೆ ಗೋಪಾಲ ಪೂಜಾರಿ ಅವರಿಗೆ ಬರುವ ಮತಗಳು ಹಾಗೂ ಬಿಲ್ಲವ ಮತಗಳೂ ಸೇರಿದರೇ ಕಾಂಗ್ರೆಸ್ ಗೆ ಪ್ಲಸ್ ಎನ್ನುವ ಲೆಕ್ಕಚಾರವಿದೆ. ಶಿವಮೊಗ್ಗದಲ್ಲಿಯೂ ಕೂಡ ಇದೇ ಥರದ ಲೆಕ್ಕಾಚಾರವಿದೆ. ಇನ್ನು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಜಿಲ್ಲೆಯ ಉಸ್ತುವಾರಿ ಆಗಿ ಸಚಿವ ಮಧು ಬಂಗಾರಪ್ಪ ಇದ್ದಾರೆ. ಸಾಗರ, ಸೊರಬ ಹಾಗೂ ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ, ಉಳಿದ ತೀರ್ಥಹಳ್ಳಿ, ಶಿಕಾರಿಪುರ, ಶಿವಮೊಗ್ಗ ನಗರದಲ್ಲಿ ಬಿಜೆಪಿ ಶಾಸಕರು ಹಾಗೂ ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್ ಶಾಸಕರಿದ್ದಾರೆ.

ಕಾಂಗ್ರೆಸ್ ಗೆದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಮತ ಬರುವುದು ನಿಶ್ಚಿತ. ಇನ್ನು, ಈಶ್ವರಪ್ಪ ಅವರ ಬಂಡಾಯ ಸ್ಪರ್ಧೆ ಇರುವುದರಿಂದ ಬಿಜೆಪಿ ಮತ್ತು ಜೇಡಿಎಸ್ ಗೆದ್ದ ಕ್ಷೇತ್ರಗಳ ಮತಗಳು ವಿಭಜನೆಯಾದರೇ, ಗೀತಾ ಶಿವರಾಜ್ ಕುಮಾರ್ ಗೆ ಪ್ಲಸ್ ಆಗುವ ಸಾಧ್ಯತೆ ಹೆಚ್ಚಿದೆ. ಬೈಂದೂರಿನಲ್ಲಿ ಈ ಬಾರಿಯೂ ಬಿಜೆಪಿಯ ಶಾಸಕರಿದ್ದರೂ ಕೂಡ ಮಾಜಿ ಶಾಸಕರಿಬ್ಬರೂ ಜೊತೆಗೂಡಿರುವುದರಿಂದ‌ ಕಾಂಗ್ರೆಸ್ ಗೆ ಆನೆ ಬಲಬಂದಂತಾಗಿದೆ ಎನ್ನುವ ಮಾತುಗಳಿವೆ.

ಇನ್ನು, ನಟ ಶಿವರಾಜ್ ಕುಮಾರ್ ಪತ್ನಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರದಲ್ಲಿದ್ದಾರೆ. ಮಧು ಬಂಗಾರಪ್ಪ ಸೇರಿ ಕಾಂಗ್ರೆಸ್ ನ ಘಟಾನುಘಟಿ ನಾಯಕರೆಲ್ಲಾ ಜೊತೆಗೂಡಿದ್ದಾರೆ. ಇತ್ತ ಕ್ಷೇತ್ರದ ಬಿಜೆಪಿಯಲ್ಲಿ ಸದ್ಯ ಬಿರುಕಿದೆ. ಈಶ್ವರಪ್ಪ ಅವರು ಯಡಿಯೂರಪ್ಪ ಹಾಗೂ ಅವರ ಪುತ್ರರ ಮೇಲೇ ಹೊರಿಸಿರುವ ಬಹಿರಂಗ ಆರೋಪ ಬಿಜೆಪಿಗೆ ಡ್ಯಾಮೇಜ್ ಮಾಡುತ್ತದೆ ಎಂಬ ಮಾತಿದೆ. ಮೋದಿ ಕ್ಷೇತ್ರಕ್ಕೆ ಬಂದು ಚುನಾವಣಾ ಹವಾ ಬೀಸಿದ್ದಾರಾದರೂ ಮೋದಿ ಭಕ್ತ ಎಂದು ಕರೆಸಿಕೊಳ್ಳುವ ಈಶ್ವರಪ್ಪ ಅವರ ಮನವೊಲಿಕೆ ಸಾಧ್ಯವಾಗಿಲ್ಲ ಎನ್ನುವುದು ಇಲ್ಲಿ ಗಮನಾರ್ಹ. ಒಟ್ಟಿನಲ್ಲಿ ಈ ಬಾರಿಯ ಶಿವಮೊಗ್ಗ ಲೋಕಸಭಾ ಚುನಾವಣೆ ಹಲವು ಅಚ್ಚರಿಗಳಿಗೆ ಕಾರಣವಾಗಬಹುದು ಎಂಬ ನಿರೀಕ್ಷೆ  ಹುಟ್ಟಿದೆ.

2009ರಿಂದ ಸ್ಪರ್ಧೆ ವಿವರ:

2009 – ಎಸ್.ಬಂಗಾರಪ್ಪ vs ಬಿ.ವೈ.ರಾಘವೇಂದ್ರ

2014 – ಗೀತಾ ಶಿವರಾಜ್ಕುಮಾರ್ vs ಬಿ.ಎಸ್.ಯಡಿಯೂರಪ್ಪ

2018 – ಮಧು ಬಂಗಾರಪ್ಪ vs ಬಿ. ವೈ.ರಾಘವೇಂದ್ರ (ಉಪ ಚುನಾವಣೆ)

2019 – ಮಧು ಬಂಗಾರಪ್ಪ vs ಬಿ.ವೈ.ರಾಘವೇಂದ್ರ

2024 – ಗೀತಾ ಶಿವರಾಜ್ಕುಮಾರ್ vs ಬಿ. ವೈ. ರಾಘವೇಂದ್ರ

_______________________________________

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!