Sunday, September 8, 2024

ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು | ಕೃತಿಗೆ ಬರಬೇಕಾದ ‘ನಾರಿ ಶಕ್ತಿ ವಂದನ್ ಅಧಿನಿಯಮ್’

ಭಾರತಕ್ಕೆ ಸ್ವಾತಂತ್ರ್ಯ ದೊರೆತು 76 ವರ್ಷಗಳು ಕಳೆದಿವೆ, ಆದರೇ, 17ನೇ ಲೋಕಸಭೆ 543 ಸಂಸದರ ಪೈಕಿ 78 ಮಹಿಳಾ ಸಂಸದರನ್ನು ಮಾತ್ರ ಹೊಂದಿತ್ತು. ವಿಪರ್ಯಾಸವೆಂದರೆ,  1947 ರಿಂದ ಈಚೆಗಿನ ಲೋಕಸಭೆಯಲ್ಲಿ ಇದೇ ಮಹಿಳೆಯರ ಅತ್ಯಧಿಕ ಶೇಕಡಾವಾರು ಪ್ರಮಾಣವಾಗಿದೆ, ಅಂದರೇ, ಶೇ. 14.3ರಷ್ಟು ಮಾತ್ರ. 2024ರ ಸಾರ್ವತ್ರಿಕ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ, ನಾವು ಈ ಬಗ್ಗೆ ಯೋಚನೆ ಮಾಡಲೇಬೇಕಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳೆರಡರಲ್ಲೂ ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಮೀಸಲಿಡುವ ಮಸೂದೆ, ಮಹಿಳಾ ಮೀಸಲಾತಿ ಜಾರಿಯಲ್ಲಿದ್ದರೂ ಪ್ರಮುಖ ರಾಜಕೀಯ ಪಕ್ಷಗಳು ಇಲ್ಲಿಯವರೆಗೆ ಮೀಸಲಾತಿಯಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯಾಕೆ ಮನಸ್ಸು ಮಾಡಿಲ್ಲ ಎನ್ನುವ ಪ್ರಶ್ನೆ ಮುಂದಿದೆ.

ಮಹಿಳೆ ಅಶಕ್ತೆ, ಸಾಮರ್ಥ್ಯ ಕಡಿಮೆ ಎಂಬ ಕಾರಣಕ್ಕೆ ಮೀಸಲಾತಿ ನೀಡುವುದಕ್ಕಿಂತ ಆಕೆ ಸಮರ್ಥಳು, ಎಲ್ಲವನ್ನೂ ನಿಭಾಯಿಸುವ ಛಲಗಾತಿ ಎನ್ನುವುದನ್ನು ಅರಿತು ರಾಜಕೀಯದಲ್ಲಿ ಅವಕಾಶ ಕಲ್ಪಿಸಬೇಕು ಎನ್ನುವ ಕೂಗಿಗೆ ಹಲವು ದಶಕಗಳೇ ಆಗಿವೆಯಾದರೂ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಮಹಿಳೆ ಮುಖದ ಮೇಲೆ ಪರದೆ ಹಾಕಿಕೊಂಡಿದ್ದಳು. ರಾಜಕೀಯದಲ್ಲಿ ಸ್ಥಾನಮಾನ ಇರಲಿಲ್ಲ. ಕುಟುಂಬ ವ್ಯವಸ್ಥೆ, ವಿವಾಹ ಪದ್ಧತಿ ಆಕೆಯನ್ನು ಮನೆಯಲ್ಲಿ ಬಂಧಿಸಿತ್ತು. ಈಗ ಎಲ್ಲೆಗಳನ್ನು ಮೀರಿ ಮಹಿಳೆ ಹೊರಗೆ ಬಂದಿದ್ದಾಳೆ. ರಾಜಕೀಯದಲ್ಲಿ ಮಾತ್ರ ಸೂಕ್ತ ಸ್ಥಾನ ಸಿಗುತ್ತಿಲ್ಲ. ದೇಶದ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಸಾಧ್ಯವಾಗಿದ್ದು ಮೀಸಲಾತಿ ಮೂಲಕ ಮಾತ್ರ. ಲೋಕಸಭೆ, ರಾಜ್ಯ ವಿಧಾನಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33.33ರಷ್ಟು ಮೀಸಲಾತಿ ನೀಡಬೇಕು ಎಂಬುದು ಹಲವು ದಶಕಗಳ ಬೇಡಿಕೆ.

15%ರಷ್ಟು ಮಹಿಳಾ ಪ್ರಾತಿನಿಧ್ಯವಿರುವ ಸಂಸತ್ತಿನಲ್ಲಿ ಮೀಸಲಾತಿ ಅಗತ್ಯವಿತ್ತು. ಈ ಮೀಸಲಾತಿಯ ಮೂಲಕ ಮಹಿಳೆಯರ ಪ್ರಾತಿನಿಧ್ಯವು ಶೇ.33ಕ್ಕೆ ಜಿಗಿಯಲಿದೆ. ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ದ್ವಿಗುಣಗೊಳಿಸಿದರೆ, ನಾವು ನೀತಿ ರಚನೆ ಮತ್ತು ಲಿಂಗ ಸೂಕ್ಷ್ಮ ನೀತಿಗಳಲ್ಲಿ ದೊಡ್ಡ ಬದಲಾವಣೆಯನ್ನು ನಿರೀಕ್ಷಿಸಬಹುದು. “ಭಾರತದ ವಿವಿಧ ಭಾಗಗಳಿಂದ ಹೆಚ್ಚಿನ ಮಹಿಳಾ ನಾಯಕರು ಹೊರಹೊಮ್ಮುತ್ತಾರೆ, ಆ ಮಸೂದೆಯು ಸುಸೂತ್ರವಾಗಿ ಕಾರ್ಯರೂಪಕ್ಕೆ ಬರುತ್ತದೆ ಎಂಬ ನೀರೀಕ್ಷೆ ಆರಂಭದ ಹಂತದಲ್ಲೇ ಸುಳ್ಳಾಗಿದೆ ಎಂಬಂತೆ ಕಾಣಿಸುತ್ತಿದೆ.

ಒಂದು ವರದಿಯ ಪ್ರಕಾರ, ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ 85 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪ್ರಥಮ ಬಾರಿಗೆ ಚುನಾವಣೆಯಲ್ಲಿ ಭಾಗಿಯಾಗಿ ಮತ ಚಲಾಯಿಸಲಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಮತ್ತು ಕೆಲವು ರಾಜ್ಯಗಳಲ್ಲಿನ ಪ್ರಾದೇಶಿಕ ಸರ್ಕಾರಗಳು ಮಹಿಳೆಯರನ್ನು ಓಲೈಸಲು ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಿವೆ. ಉಚಿತ ಸಾರ್ವಜನಿಕ ಸಾರಿಗೆ ಸೌಲಭ್ಯ, ಉಚಿತ ವಿದ್ಯುತ್, ಉಚಿತ ಪಡಿತರ ಮತ್ತು ಗ್ಯಾಸ್ ಸಿಲಿಂಡರ್‌ಗಳು, ಉದ್ಯೋಗಗಳು, ಬ್ಯಾಂಕ್ ಖಾತೆಗಳಲ್ಲಿ ಹಣ ಹೀಗೆ ಪಟ್ಟಿಗೆ ಅಂತ್ಯವಿಲ್ಲ. ಭಾರತದ ಸುಮಾರು 47.1 ಕೋಟಿ ಮಹಿಳಾ ಮತದಾರರನ್ನು ತಮ್ಮಡೆಗೆ ಸೆಳೆಯಲು ರಾಜಕೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಆದರೆ ಅವರನ್ನೇ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವ ವಿಚಾರ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳ ದಾಖಲೆ ಶೂನ್ಯವಾಗಿದೆ.

ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಂಕಿಅಂಶಗಳ ಪ್ರಕಾರ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ 8,054 ಅಭ್ಯರ್ಥಿಗಳಲ್ಲಿ ಕೇವಲ 726 ಅಭ್ಯರ್ಥಿಗಳು ಅಂದರೆ, ಒಟ್ಟು ಅಭ್ಯರ್ಥಿಗಳ ಪೈಕಿ ಕೇವಲ  ಶೇ.9ರಷ್ಟು ಮಹಿಳೆಯರು ಕಣದಲ್ಲಿದ್ದರು. ಇದರಲ್ಲಿ ಮೂರನೇ ಒಂದು ಭಾಗವನ್ನು ಯಾವುದೇ ರಾಜಕೀಯ ಪಕ್ಷದಿಂದ ಕಣಕ್ಕಿಳಿಸಿರಲಿಲ್ಲ. 2014ರಲ್ಲಿ ಒಟ್ಟು 8,251 ಅಭ್ಯರ್ಥಿಗಳ ಪೈಕಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕೇವಲ 668 ಆಗಿತ್ತು ಎನ್ನುವುದು ಉಲ್ಲೇಖಾರ್ಹ.

1992ರಲ್ಲಿ 73ನೇ ಸಾಂವಿಧಾನಿಕ ತಿದ್ದುಪಡಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ನಿಬಂಧನೆಗಳನ್ನು ಮಾಡಿದ್ದು, ತಳಮಟ್ಟದಲ್ಲಿ ಪರಿವರ್ತಕ ಪರಿಣಾಮವನ್ನು ಬೀರಿತ್ತು ಮತ್ತು ಇದುವರೆಗೆ 1.4 ಮಿಲಿಯನ್ ಮಹಿಳೆಯರನ್ನು ನಾಯಕತ್ವಕ್ಕೇರಿಸುವಂತೆ ಇದು ಮಾಡಿದೆ. ಮೀಸಲಾತಿ ನೀತಿಗಳು ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಸುಧಾರಿಸಿದೆ ಎಂದು ಹೇಳಲು ಸಾಕಷ್ಟು ಪುರಾವೆಗಳಿವೆ.

ಇನ್ನು, ಸೆಪ್ಟೆಂಬರ್ 21, 2023ರಂದು, ಭಾರತದ ಸಂಸತ್ತು ಐತಿಹಾಸಿಕ ಮತ್ತು ದೀರ್ಘಕಾಲದಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆ ಅಥವಾ ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಅನ್ನು ಅಂಗೀಕರಿಸಿತು, ಇದು ಮಹಿಳೆಯರಿಗೆ ಶಾಸಕಾಂಗ ಸ್ಥಾನಗಳ ಮೂರನೇ ಒಂದು ಭಾಗದ ಮೀಸಲಾತಿಯನ್ನು ಕಡ್ಡಾಯಗೊಳಿಸಿತು. ಆದಾಗ್ಯೂ, ಇದರ ಅನುಷ್ಠಾನವು ಜನಗಣತಿ ಮತ್ತು ಡಿಲಿಮಿಟೇಶನ್  ನಡೆಸುವುದು ಸೇರಿದಂತೆ ಬಹು ಅಂಶಗಳ ಮೇಲೆ ಅವಲಂಬಿತವಾಗಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಇವೆಲ್ಲಾ ಸಾಧ್ಯತೆಗಳನ್ನು ಅಷ್ಟು ಸುಲಭವಾಗಿ ತಲುಪದ ಸಂಕೀರ್ಣ ವಿಷಯಗಳಾಗಿವೆ, ಮಾತ್ರವಲ್ಲದೇ 2029ರ ಚುನಾವಣೆಯ ಮೊದಲು ಜಾರಿಗೆ ತರಲು ಅಸಾಧ್ಯ ಅನ್ನಿಸುತ್ತಿದೆ. ಸಂಸತ್ತಿನಲ್ಲಿ ಮಸೂದೆಯನ್ನು ಪರಿಚಯಿಸಿದಾಗ, ಎಲ್ಲಾ ಪಕ್ಷಗಳು ಸರ್ವಾನುಮತದಿಂದ ಬೆಂಬಲಿಸಿದ್ದವು. ಆದರೆ  ಲೋಕಸಭಾ ಚುನಾವಣಾ ಅಭ್ಯರ್ಥಿಗಳ ವಿಚಾರ ಬಂದಾಗ ಮಹಿಳೆಯರಿಗೆ ಇಷ್ಟಾಗಿಯೂ ಸ್ಥಾನಮಾನ ನೀಡದೇ ಇರುವುದು ವಿಪರ್ಯಾಸವೇ ಸರಿ.

ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯ ದರ ಶೇ. 37ರಷ್ಟು. ವಕೀಲರು, ವೈದ್ಯರು, ಮಾಧ್ಯಮ ವೃತ್ತಿಪರರು, ಶಾಲಾ ಶಿಕ್ಷಕರು, ಆರೋಗ್ಯ ಕಾರ್ಯಕರ್ತರು, ಐಟಿ ವೃತ್ತಿಪರರು ಹೀಗೆ ರಾಜಕೀಯವನ್ನು ಹೊರತಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಹಿಳೆಯರು ಸಾಮಾನ್ಯವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಕೌಂಟೆನ್ಸಿ, ತೆರಿಗೆ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕೂಡ ಅಸಾಧಾರಣವಾಗಿ ಹೆಚ್ಚಾಗಿದೆ. ಆದಾಗ್ಯೂ, ವರ್ಲ್ಡ್ ಎಕನಾಮಿಕ್ ಫೋರಮ್‌ನ ಗ್ಲೋಬಲ್ ಜೆಂಡರ್ ಗ್ಯಾಪ್ ವರದಿ 2023ರಲ್ಲಿ, ಭಾರತವು 127ನೇ ಸ್ಥಾನದಲ್ಲಿದೆ ಎನ್ನುವುದು ಉಲ್ಲೇಖಾರ್ಹ.

ಭಾರತದಲ್ಲಿ ಮಹಿಳಾ ಪ್ರಾತಿನಿಧ್ಯ ದೊರಕದೇ ಇರುವುದು ಹೆಚ್ಚಿನಂಶ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿಯೇ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಮಂತ್ರಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.  ಭಾರತದಲ್ಲಿ ಹೆಚ್ಚಿನ ಮಹಿಳೆಯರು ರಾಜಕೀಯವನ್ನು ತಮ್ಮ ಆಸಕ್ತ ಕ್ಷೇತವೆಂದು ಪರಿಗಣಿಸಿಲ್ಲ. ಬೇರೆ ಬೇರೆ ಪಕ್ಷದ ಟಿಕೆಟ್‌ಗಳನ್ನು ಪಡೆದು ಸಂಸದೀಯ ಸ್ಥಾನಗಳನ್ನು ಗೆಲ್ಲುವ ಅನೇಕ ಮಹಿಳೆಯರು ರಾಜಕೀಯೇತರ ಹಿನ್ನಲೆಯಿಂದ ಬಂದವರೇ ಆಗಿದ್ದಾರೆ. ಅವುಗಳಲ್ಲಿ ಹೆಚ್ಚಿನವರು ಸಿನೆಮಾ ಕ್ಷೇತ್ರದಿಂದ ಬಂದವರೇ ಹೆಚ್ಚು ಎನ್ನುವುದು ಗಮನಾರ್ಹ.

“ಯಾವುದೇ ರಾಜಕೀಯ ಪಕ್ಷಗಳು ಮಹಿಳೆಯರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಯಾವುದೇ ತರದ ಸರಿಯಾದ ಪ್ರಯತ್ನವನ್ನು ಮಾಡಿಲ್ಲ. ಮೇಲಾಗಿ, ಯಾವುದೇ ಪ್ರೋತ್ಸಾಹವಿಲ್ಲ. ಮಹಿಳೆಯರು ರಾಜಕೀಯದಲ್ಲಿ ಇದ್ದರೂ ಕೂಡ ಮಹಿಳೆಯರಿಗೆ ಸಂಬಂಧಿಸಿದ ಇಲಾಖೆಗಳ ಸಚಿವರಾಗಿಯೇ ಕಾಣಿಸಿಕೊಳ್ಳುತ್ತಾರೆ ಹೊರತು ಉನ್ನತ ಇಲಾಖೆಗಳ ಸಚಿವರಾಗಿ ಗುರುತಿಸಿಕೊಂಡ ಮಹಿಳೆಯರು ತೀರಾ ಅಪರೂಪಕ್ಕೊಬ್ಬರನ್ನು ಕಾಣಬಹುದು ಅಷ್ಟೆ.

ರಾಜಕೀಯದಲ್ಲಿ ಪಶ್ಚಿಮ ಬಂಗಾಳವು ಮಹಿಳೆಯರಿಗೆ ಸ್ವಲ್ಪ ಪ್ರಾತಿನಿಧ್ಯವನ್ನು ನೀಡಿದೆ ಎನ್ನುವುದನ್ನು ನಾವು ಇಲ್ಲಿ ಉಲ್ಲೇಖಿಸಬಹುದು. ಅಲ್ಲಿ ಮಹಿಳೆಯೇ ಮುಖ್ಯಮಂತ್ರಿ ಕೂಡ. ಹೆಚ್ಚಿನ ಪ್ರಮುಖ ಮಹಿಳಾ ನಾಯಕರು ಚಲನಚಿತ್ರ ಅಥವಾ ಸಂಗೀತ ಕ್ಷೇತ್ರದಿಂದ ಬಂದವರೇ ಆಗಿದ್ದಾರೆ. ಸಿನೆಮಾ ವರ್ಚಸ್ಸಿನಲ್ಲಿ ರಾಜಕೀಯ ಕಣಕ್ಕಿಳಿದವರೇ ಆಗಿದ್ದಾರೆ. ಅಲ್ಲಿಯೂ ರಾಜಕೀಯದ ಹಿನ್ನಲೆಯಿಂದ ಬಂದವರು ಇವರು ಎನ್ನುವವರು ತೀರಾ ಕಡಿಮೆಯೇ ಇದ್ದಾರೆ.

ಇತರ ಕ್ಷೇತ್ರಗಳಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ತಾರತಮ್ಯ ಕಡಿಮೆಯಾಗುತ್ತಿರುವಾಗ ರಾಜಕೀಯದಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ಲಿಂಗ ತಾರತಮ್ಯ ಯಾಕೆ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂಬುದು ನಿಜಕ್ಕೂ ಗೊಂದಲದ ಸಂಗತಿಯಾಗಿದೆ. ಮಹಿಳೆಯರ ಸಾಕ್ಷರತ ಪ್ರಮಾಣವು ಉದ್ಯೋಗಗಳಲ್ಲಿ ಹೆಚ್ಚಿನ ತೊಡಗಿಕೊಳ್ಳುವಿಕೆ, ಸ್ವಾವಲಂಬನೆ ಜೀವನಕ್ಕೆ ತನ್ನನ್ನು ತಾನು ಪರಿವರ್ತಿಸಿಕೊಳ್ಳುತ್ತಿರುವುದು ಮಾತ್ರವಲ್ಲದೆ ಹೆಚ್ಚಿನ ರಾಜಕೀಯ ಅರಿವು ಮಹಿಳೆಯರಲ್ಲಿ ಮೂಡಿದೆ. ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯೂ ಹೋಂದುತ್ತಿದ್ದಾಳಾದರೂ, ಕೌಟುಂಬಿಕ ಬದ್ಧತೆಗಳು, ಅವಮಾನದ ಭಯ, ಹಿಂಸೆ, ನಿಂದೆ ಮತ್ತು ರಾಜಕೀಯ ಕೆಸರೆರಚಾಟಗಳಿಂದಾಗಿ ಚುನಾವಣಾ ರಾಜಕೀಯದ ಬೇಡಿಕೆಗಳನ್ನು ನಿಭಾಯಿಸಲು ಮಹಿಳೆಯರಿಗೆ ಕಷ್ಟಕರವಾದ ವಾತಾವರಣವಿದೆ.

ಒಡಿಶಾ ಮಾತ್ರ ಮಹಿಳೆಯರಿಗೆ ಆರೋಗ್ಯಕರ ಪ್ರಾತಿನಿಧ್ಯವನ್ನು ನೀಡಿದೆ. ರಾಜ್ಯದ 21 ಲೋಕಸಭಾ ಸದಸ್ಯರಲ್ಲಿ ಏಳು ಮಹಿಳೆಯರಿದ್ದಾರೆ. ಒಟ್ಟು ಮೂರನೇ ಒಂದು ಭಾಗ  ಮಹಿಳೆಯರಿದ್ದಾರೆ. ಇದಕ್ಕೆ ವಿರುದ್ಧವಾಗಿ, 13 ರಾಜ್ಯಗಳಲ್ಲಿ, ಶೇ.10ಕ್ಕಿಂತ ಕಡಿಮೆ ಮಹಿಳಾ ಸಂಸದರಿದ್ದಾರೆ. ಇದರಲ್ಲಿ ತಮಿಳುನಾಡು ಮತ್ತು ಕೇರಳವೂ ಸೇರಿದೆ. ತೃಣಮೂಲ ಕಾಂಗ್ರೆಸ್ ಮತ್ತು ಬಿಜು ಜನತಾ ದಳವು 2019 ಕ್ರಮವಾಗಿ ಶೇ. 37ರಷ್ಟು ಮತ್ತು ಶೇ. 33ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ ತಾನು ಸ್ಪರ್ಧಿಸುತ್ತಿದ್ದ ಕ್ಷೇತ್ರಗಳಲ್ಲಿ ಕೇವಲ ಶೇ. 12.5ರಷ್ಟು ಮಹಿಳೆಯರನ್ನು ಹೊಂದಿದ್ದರೆ, ಕಾಂಗ್ರೆಸ್ ಶೇ. 12.8 ರಷ್ಟು ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಉಳಿದ ರಾಜ್ಯಗಳಿಗೆ ಹೋಲಿಸಿದರೇ, ಒಡಿಶಾದಲ್ಲಿ ಮಹಿಳಾ ಸಬಲೀಕರಣವು ಬಹಳ ಹಿಂದಿನಿಂದಲೂ ಆದ್ಯತೆಯಾಗಿದೆ ಎಂಬುವುದನ್ನು ನಾವು ಗಮನಿಸಬಹುದು. ಅಲ್ಲಿನ ಮಾಜಿ ಮುಖ್ಯಮಂತ್ರಿ ದಿವಂಗತ ಬಿಜು ಪಟ್ನಾಯಕ್ ಅವರು ಮೊದಲು ರಾಜ್ಯದಲ್ಲಿ ತ್ರಿಸ್ತರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಶೇ. 33 ಸೀಟುಗಳ ಮೀಸಲಾತಿಯನ್ನು ಜಾರಿಗೆ ತಂದರು. ತರುವಾಯ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ. 50ಕ್ಕೆ ಹೆಚ್ಚಿಸಿದರು. ತರುವಾಯ, 2019ರ ಚುನಾವಣೆಯಿಂದ ಮಹಿಳೆಯರಿಗೆ ಲೋಕಸಭೆಯಲ್ಲಿ ಶೇ. 33ರಷ್ಟು ಪ್ರಾತಿನಿಧ್ಯವನ್ನು ನೀಡಲಾಗಿದೆ ಎಂಬ ಅಂಕಿಅಂಶಗಳು ನಮಗೆ ದೊರಕುತ್ತವೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಭಾರತೀಯ ಮಹಿಳೆಯರು ದಶಕಗಳಿಂದ ತಮ್ಮ ರಾಜಕೀಯ ಸ್ಥಾನಮಾನಗಳಿಗಾಗಿ ಕಾಯುತ್ತಿದ್ದಾರೆ. ಅವರು ಇನ್ನೂ ಎಷ್ಟು ವರ್ಷ ಕಾಯಬೇಕು? ಭಾರತೀಯ ಮಹಿಳೆಯರೊಂದಿಗೆ ಈ ವರ್ತನೆ ಸೂಕ್ತವೇ? ಈ ಮಸೂದೆ ಕಾನೂನಾಗಲು ಇನ್ನೂ ಕಾಯಬೇಕಿದೆ ಎಂದು ಹೇಳಲಾಗುತ್ತಿದೆ. ಕೃತಿಗೆ ಬರಬೇಕಾದ ಎಷ್ಟೋ ವಿಷಯಗಳು ನಮ್ಮ ನಡುವೆ ಇವೆ. ಮಹಿಳಾ ಮೀಸಲಾತಿ ಮಸೂದೆಯ ಕ್ರೆಡಿಟ್‌ಗಾಗಿ ಎನ್‌ಡಿಎ ಮತ್ತು ʼಇಂಡಿಯಾʼ ಒಕ್ಕೂಟ ಬಡಿದಾಡುವುದನ್ನು ಬಿಟ್ಟು ಅಭ್ಯರ್ಥಿಗಳ ಘೋಷಣೆಯಲ್ಲಾದರೂ ಪ್ರಯತ್ನ ಪಟ್ಟಿದ್ದರೇ, ಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟಾಗಿಯೇ ಉಳಿಯಲಿದೆಯೇ ಎನ್ನುವ ಪ್ರಶ್ನೆ ಮುಂದಿದೆ.  ಇನ್ನು, ಇಂದಲ್ಲದಿದ್ದರೂ ನಾಳೆಯಾದರೂ ಜಾರಿಗೆ ಬರುವ ಈ ಮೀಸಲಾತಿಯೂ ಮಡಿವಂತಿಕೆಯಿಂದಲೇ ಕೂಡಿದರೇ, ಅದರಷ್ಟು ದುರಂತ ಮತ್ತೊಂದು ಬಹುಷಃ ಕಾಣುವುದಕ್ಕೆ ಸಾಧ್ಯವಿಲ್ಲ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!