Sunday, September 8, 2024

ಲೋಕಸಭಾ ಚುನಾವಣೆ : ನಾನು ಹೇಳದೇ ಇರುವುದನ್ನು ಹೇಳಿದ್ದೇನೆ ಎನ್ನುವವರು ದಾಖಲೆ ನೀಡಲಿ : ಜಯಪ್ರಕಾಶ್‌ ಹೆಗ್ಡೆ

ಜನಪ್ರತಿನಿಧಿ (ಉಡುಪಿ ) : ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಿಂದಿ ಭಾ಼ಷೆ ಬರುವುದಿಲ್ಲ ಎಂದು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ ಎನ್ನುವ ವಿಚಾರ ರಾಜ್ಯ ಮಟ್ಟದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದು ಹೆಗ್ಡೆ ಹಾಗೂ ಪೂಜಾರಿ ಅವರ ನಡುವೆ ʼಭಾಷಾ ಸಮರʼಕ್ಕೂ ಕಾರಣವಾಗಿತ್ತು. ಈ ಬಗ್ಗೆ ಹೆಗ್ಡೆ ಅವರು ಸ್ಪಷ್ಟನೆಯನ್ನೂ ನೀಡಿದ್ದರು.

ಈ ಬಗ್ಗೆ ಉಡುಪಿಯಲ್ಲಿ ವರದಿಗಾರರ ಪ್ರಶ್ನೆಗೆ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮದ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ತುಸು ಖಾರವಾಗಿಯೇ ಉತ್ತರಿಸಿದ ಹೆಗ್ಡೆ ಅವರು, ನಾನು ಹೇಳದ ವಿಷಯಕ್ಕೆ ಪುನಃ ಪುನಃ ಸ್ಪಷ್ಟೀಕರಣ ನೀಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಹೇಳದೇ ಇರುವುದನ್ನು ಹೇಳಿದ್ದೇನೆ ಎನ್ನುವವರು ದಾಖಲೆ ನೀಡಲಿ ಎಂದು ತಿರುಗೇಟು ನೀಡಿದ್ದಾರೆ.

ನಾನು ಬಿಜೆಪಿ ಅಭ್ಯರ್ಥಿಗೆ ಹಿಂದಿ ಬರುವುದಿಲ್ಲ ಎಂದು ಹೇಳಿದ್ದೇನೆ ಎನ್ನುವುದು ಎಲ್ಲಿದೆ ? ನಾನು ಹೇಳಿದ್ದೇನೆ ಎನ್ನುವವರು ದಾಖಲೆ ಸಮೇತ ನೀಡಿದರೇ ಅದಕ್ಕೆ ನಾನು ಉತ್ತರಿಸುತ್ತೇನೆ. ದಾಖಲೆ ಸಮೇತ ಬರಲಿ ನಾನು ಅವರೊಂದಿಗೆ ಚರ್ಚೆ ಮಾಡುವುದಕ್ಕೂ ಕೂಡ ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.

ನಾನುಎಂದಿಗೂ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಯಾರ ಬಗ್ಗೆಯೂ ಕೀಳಾಗಿ ಮಾತನಾಡಿಲ್ಲ. ಅವರ ಪಕ್ಷದವರೇ ಸೃಷ್ಟಿಸಿಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಬಿಟ್ಟರೇ, ನಾನು ಶ್ರೀನಿವಾಸ ಪೂಜಾರಿ ಅವರಿಗೆ ಹಿಂದಿ ಬರುವುದಿಲ್ಲ ಎಂದು ಹೇಳಿಲ್ಲ. ನಾನು ೧೯೯೪ ನೇ ಇಸವಿಯಲ್ಲಿ  ವಿಧಾನಸಭೆಗೆ ಹೋಗಿದ್ದು, ಅಂದಿನಿಂದ ಇಂದಿನವರೆಗೆ ನಾನು ಆಡಿದ ಶಬ್ದಗಳನ್ನು ಕಡತದಿಂದ ತೆಗೆದು ಹಾಕಿಲ್ಲ. ನಾನು ಯಾವತ್ತೂ ಯಾರನ್ನೂ ಟೀಕೆ ಮಾಡಿ ಮಾತನಾಡಿಲ್ಲ. ಈವರೆಗೆ ಚುನಾವಣೆಯಲ್ಲೂ ಸಮೇತ ಎದುರಾಳಿಯ ಬಗ್ಗೆ ಟೀಕೆ ಮಾಡಿಲ್ಲ. ಎದುರಾಳಿಯ ಬಗ್ಗೆ ಅಪಪ್ರಚಾರ ಮಾಡುವುದು, ಟೀಕೆ ಮಾಡುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಇದೊಂದು ಆರೋಗ್ಯಕರ ಚುನಾವಣೆ ಆಗುತ್ತದೆ ಎಂದು ನಾನು ಆರಂಭದಲ್ಲೇ ಹೇಳಿದ್ದೇನೆ. ಒಂದು ವೇಳೆ ನಾನು ಹಾಗೆ ಹೇಳಿರುವುದರ ಬಗ್ಗೆ ಏನಾದರೂ ದಾಖಲೆ ಇದ್ದರೇ ಬರಲಿ, ಚರ್ಚೆ ಮಾಡೋಣ. ಬೇರೆ ಬೇರೆ ಭಾಷೆಗಳನ್ನು ಕಲಿತುಕೊಳ್ಳುವುದು ತಪ್ಪಲ್ಲ. ಅಗತ್ಯಕ್ಕೆ ತಕ್ಕ ಹಾಗೆ ಭಾಷೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ನಾವು ಇಲ್ಲಿ ತ್ರಿಭಾಷಾ ಸೂತ್ರವನ್ನು ಬಳಸುತ್ತೇವೆ. ನಾವು ಎಂದಿಗೂ ಸಂವಿಧಾನದ ಆಶಯಕ್ಕೆ ತಕ್ಕ ಹಾಗೆ ನಡೆದುಕೊಳ್ಳಬೇಕಾಗುತ್ತದೆ. ಅದನ್ನು ಬಿಟ್ಟು ನಾನು ಹೇಳದೇ ಇರುವುದನ್ನು ಹೇಳಿದ್ದೇನೆ ಎಂದು ಟೀಕೆ ಅಪಪ್ರಚಾರ ಮಾಡಿ ಲಾಭ ಪಡೆದುಕೊಳ್ಳುವುದು ತಪ್ಪಾಗುತ್ತದೆ. ಚುನಾವಣೆಗೋಸ್ಕರ ಇಲ್ಲಸಲ್ಲದ ಟೀಕೆ ಮಾಡುವುದು ತಪ್ಪ ಎಂದು ಅವರು ಹೇಳಿದ್ದಾರೆ.

ಹೆಗ್ಡೆ ಅವರು ಹೇಳಿದ್ದೇನು ?

ಇನ್ನು, ಬ್ರಹ್ಮಾವರದಲ್ಲಿ  ಮಾತನಾಡುವಾಗ ಲೋಕಸಭೆಯಲ್ಲಿ ಭಾಷಾಂತರಕಾರರು ಇರುವುದರಿಂದ ಕನ್ನಡದಲ್ಲಿಯೂ ಮಾತನಾಡಬಹುದು. ಆದರೆ, ಅಧಿಕಾರಿಗಳು ಹಾಗೂ ಕಚೇರಿಗಳಲ್ಲಿ ಕೆಲಸ ಮಾಡುವಾಗ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗಳ ಜ್ಞಾನ ಅಗತ್ಯ ಎಂದು ಹೇಳಿದ್ದರು.

ಈ ಹೇಳಿಕೆಯನ್ನು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಿಂದಿ ಬರುವುದಿಲ್ಲ ಎಂದು ಹೆಗ್ಡೆ ಅವರು ಹೇಳಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವಿಚಾರ ಉಭಯ ಪಕ್ಷಗಳ ವಾದ ಪ್ರತಿವಾದಕ್ಕೂ ಕಾರಣವಾಗಿತ್ತು. ಈ ವಿಚಾರ ರಾಜ್ಯ ಮಟ್ಟದಲ್ಲಿ ಹಬ್ಬಿದಾಗ ಹೆಗ್ಡೆ ಅವರು ಅದಕ್ಕೆ ಸ್ಪಷ್ಟನೆ ನೀಡಿ, ಸಂಸದನಾಗಿ ಸೇವೆ ಸಲ್ಲಿಸಿದ ಅನುಭವದಲ್ಲಿ ಹೇಳಿಕೆ ನೀಡಿದ್ದೇನೆಯೇ ಹೊರತು ಯಾರನ್ನೂ ಉದ್ದೇಶಿಸಿ ಹೇಳಿಲ್ಲ. ಹೇಳಿಕೆಯನ್ನು ತಿರುಚಿ ಮತ್ತೊಬ್ಬರ ಹೆಸರಿಗೆ ಜೋಡಿಸುವ ಚಾಳಿ ನಿಲ್ಲಿಸಬೇಕು. ರಾಜಕೀಯ ಜೀವನದಲ್ಲಿ ಚುನಾವಣೆಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಎದುರಿಸಿದ್ದೇನೆ. ಎದುರಾಳಿಗಳನ್ನು ಸೌಜನ್ಯಯುತ ಹಾಗೂ ಗೌರವದಿಂದ ಕಂಡಿದ್ದೇನೆ. ಅಪಪ್ರಚಾರ ಹಾಗೂ ವದಂತಿ ಮಾಡಿಲ್ಲ’ ಎಂದು ತಿಳಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!