spot_img
Saturday, December 7, 2024
spot_img

ಲೋಕಸಭಾ ಚುನಾವಣೆ : ದ.ಕ ಕ್ಷೇತ್ರದಲ್ಲಿ ಮೋದಿ ಪರಿವಾರವನ್ನು ಸೇರಿದ ಪುತ್ತಿಲ ಪರಿವಾರ | ಚೌಟ ವರ್ಸಸ್‌ ಸೊರಕೆ !?

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈಗ ಚುನಾವಣಾ ಕಾವು ಜೋರಾಗಿದೆ. ಎಲ್ಲಾ ಊಹೆಗೂ ಮೀರಿ ಇಲ್ಲಿ ಬಿಜೆಪಿ ಟಿಕೇಟ್‌ ಘೋಷಿಸಿದೆ. ಕೇಂದ್ರ ಬಿಜೆಪಿ ಅಳೆದುತೂಗಿ ತನ್ನ ಅಭ್ಯರ್ಥಿಯನ್ನು ಇಲ್ಲಿಂದ ಆಯ್ಕೆ ಮಾಡಿದೆ. ಬಿಜೆಪಿಯ  ಸೇಫ್ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವೂ ಒಂದು. ಹಾಲಿ ಸಂಸದ ನಳೀನ್‌ ಕುಮಾರ್‌ ಕಟೀಲ್‌ ಅವರ ವಿರುದ್ಧ ಸ್ವಪಕ್ಷೀಯರಲ್ಲೇ ಇದ್ದ ಅಸಮಧಾನದ ಕಾರಣದಿಂದಾಗಿ ಈಗ ಬಿಜೆಪಿ ಹೊಸ ಮುಖಕ್ಕೆ ಟಿಕೇಟ್‌ ಘೋಷಿಸಿರುವುದು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಷ್ಟೆ ಆದ ಹೊಸ ಪ್ರಮುಖ ಬೆಳವಣಿಗೆಯ ಕಾರಣದಿಂದ ಕಾಂಗ್ರೆಸ್‌ ಲೆಕ್ಕಾಚಾರ ಈ ಕ್ಷೇತ್ರದಲ್ಲೀಗ ಉಲ್ಟಾ ಹೊಡೆದಂತೆ ಕಾಣಿಸುತ್ತಿದೆ.  

ಇಲ್ಲಿ ಬಿಜೆಪಿಗೆ ಬಹುದೊಡ್ಡ ಸಲಾವಾಗಿ ಪರಿಣಮಿಸಿದ್ದ ಪುತ್ತಿಲ ಪರಿವಾರ ಈಗ ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ಬಿಜೆಪಿ ಇಲ್ಲಿಂದ ಅನಾಯಾಸ ಗೆಲುವಿನತ್ತ ಮುಖಮಾಡಿದೆ ಎನ್ನುವುದಕ್ಕೆ ನಾಂದಿ ಸಿಕ್ಕಂತಾಗಿದೆ.  ಫೆಬ್ರವರಿ. 5ರಂದು ನಡೆದ ಪುತ್ತಿಲ ಪರಿವಾರದ ಸಮಾಲೋಚನ ಸಭೆಯಲ್ಲಿ ಸ್ಥಾನಮಾನ, ಪಕ್ಷ ಸೇರ್ಪಡಗೆ ಮೂರು ದಿನಗಳ ಗಡುವು ನೀಡಲಾಗಿತ್ತು. ಬಿಜೆಪಿ ಮುಖಂಡರು ಸಕಾಲದಲ್ಲಿ ಸ್ಪಂದಿಸದ ಕಾರಣ ಅರುಣ್‌ ಕುಮಾರ್‌ ಪುತ್ತಿಲ ಪಕ್ಷೇತರ ಸ್ಪರ್ಧೆಯ ಮುನ್ಸೂಚನೆ ನೀಡಿದ್ದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಅರುಣ್‌ ಕುಮಾರ್‌ ಪುತ್ತಿಲ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರೇ, ಮತ ವಿಭಜನೆಯಾಗಬಹುದು ಎಂಬ ಲೆಕ್ಕಚಾರದಲ್ಲಿ ಕಾಂಗ್ರೆಸ್‌ ಇದ್ದಿತ್ತು. ಆದರೇ, ಈಗ ಕಾಂಗ್ರೆಸ್‌ನ ಲೆಕ್ಕಚಾರ ಉಲ್ಟಾ ಹೊಡೆದಂತಾಗಿದೆ.

ಪುತ್ತೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಪುತ್ತಿಲ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದರಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ 62,458 ಮತ ಗಳಿಸಿದ್ದರು. ಬಿಜೆಪಿ ಸೋಲಿಗೆ, ಕಾಂಗ್ರೆಸ್‌ ಗೆಲುವಿಗೆ ನೇರ ಕಾರಣವಾಗಿದ್ದರು. ಪುತ್ತೂರಿನಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು ಎನ್ನುವುದಿಲ್ಲಿ ಉಲ್ಲೇಖಾರ್ಹ.

ಇನ್ನು, ನಳಿನ್‌ ಕುಮಾರ್‌ ಗೆ ಬಿಜೆಪಿ ಟಿಕೆಟ್‌ ಕೊಟ್ಟರೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯುವ ಎಚ್ಚರಿಕೆಯನ್ನು ಅರುಣ್‌ ಕುಮಾರ್‌ ಪುತ್ತಿಲ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಸೊರಕೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಬಿಲ್ಲವ ಸಮುದಾಯದ ಸೊರಕೆ, ತಮ್ಮ ರಾಜಕೀಯ ವೃತ್ತಿ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡವರು. ಕಳೆದ ಕೆಲವು ವರ್ಷಗಳಿಂದ ರಾಜಕೀಯವಾಗಿಯೂ  ಸೊರಗಿದ್ದ ಸೊರಕೆಯವರು ಲೋಕಸಭಾ ಚುನಾವಣೆಯ ಮೂಲಕ ರಾಜಕೀಯವಾಗಿ ಚೇತರಿಸಿಕೊಳ್ಳಬಹುದು ಎಂದು ಅಂದಾಜಿಸಿದ್ದರು. ಆದರೇ, ಆ ಥರ ಯಾವ ಬದಲಾವಣೆಯೂ ಇಲ್ಲಿಂದ ಅವರ ಪಾಲಿಗೆ ಆಗುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದೇ ಸದ್ಯ ಹೇಳಲಾಗುತ್ತಿದೆ.

ಸದ್ಯ  ಬಿಜೆಪಿ ಇಲ್ಲಿಂದ ಕ್ಯಾಪ್ಟನ್‌ .ಬ್ರಜೇಶ್‌ ಚೌಟರಿಗೆ ಟಿಕೆಟ್‌ ಘೋಷಿಸಿದ್ದು, ಇದರ ಬೆನ್ನಲ್ಲೇ ಪುತ್ತಿಲ ಪರಿವಾರದ ಸೇರ್ಪಡೆಗೆ ಬಿಜೆಪಿ ವಲಯದಲ್ಲಿ ಸಂತಸ ಮೂಡಿದೆ. ಈ ಮೂಲಕ ಪುತ್ತೂರಿನಲ್ಲಿನ ಬಿಜೆಪಿ ಬಣ ತಿಕ್ಕಾಟ ಕೊನೆಕಂಡಂತಾಗಿದೆ.  ಮೋದಿ ಪರಿವಾರದ ಜತೆ ಪುತ್ತಿಲ ಪರಿವಾರ ಕೆಲಸ ಮಾಡಲಿದೆ. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸಲಿದ್ದೇವೆ. ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿಯನ್ನು ದೊಡ್ಡ ಅಂತರದಿಂದ ಗೆಲ್ಲಿಸುವಲ್ಲಿ ನಾವು ಶ್ರಮ ವಹಿಸುತ್ತೇವೆ” ಎಂದು ಅರುಣ್‌ ಕುಮಾರ್‌ ಪುತ್ತಿಲ ಹೇಳಿರುವುದು ಕಾಂಗ್ರೆಸ್‌ ಪಾಳಯಕ್ಕೆ ದೊಡ್ಡ ಆಘಾತವನ್ನೇ ನೀಡಿದೆ.

ಬಿಜೆಪಿ ಈಗಾಗಲೇ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಿ ಪ್ರಚಾರ ಆರಂಭಿಸಿದ್ದು, ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ಒಂದಾಗಿರುವುದು ಪುತ್ತೂರು ಭಾಗದಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡದಲ್ಲಿ ಪಕ್ಷಕ್ಕೆ ಧೈರ್ಯ ಇಮ್ಮಡಿಸಿದೆ. ಇನ್ನೊಂದು ಕಡೆ, ಕಾಂಗ್ರೆಸ್ಸಿನಿಂದ ಇನ್ನೂ ಇಲ್ಲಿಂದ ಟಿಕೇಟ್‌ ಫೈನಲ್‌ ಆಗಿಲ್ಲ. ಕಾಂಗ್ರೆಸ್‌ನಿಂದ ಮೂವರು ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಚಿವ ರಮಾನಾಥ ರೈ,  ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತು ಹಿರಿಯ ವಕೀಲ ಪದ್ಮರಾಜ್ ಹೆಸರು ಮುಂಪಕ್ತಿಯಲ್ಲಿದೆ. ಆದರೂ, ಕಾಂಗ್ರೆಸ್ಸಿನಿಂದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಈ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ದಕಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆಯ ಹಣಾಹಣಿ ಬಂಟ್ಸ್‌ ವರ್ಸಸ್‌ ಬಿಲ್ಲವ ಮತಗಳು ಎಂಬಂತೆ ಆಗುವುದು ಬಹುತೇಕ ನಿಶ್ಚಿತ ಎಂದು ಹೇಳಲಾಗುತ್ತಿದೆ. ಭಾರತೀಯ ಸೇನೆಯ ನಿವೃತ್ತ ಅಧಿಕಾರಿಯಾಗಿರುವ ಮತ್ತು ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿಯಾಗಿರುವ ಬೃಜೇಶ್‌ ಚೌಟ ಸ್ವಯಂ ನಿವೃತ್ತಿಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶೀಯಾಗಿ, ೨೦೨೩ರ ವಿಧಾನನಸಭಾ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾರಿಯಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. 


2015ರಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳ ನಿಷೇಧದ ವಿರುದ್ಧದ ಪ್ರತಿಭಟನೆಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಸ್ಥಳೀಯ ವಿಚಾರದಲ್ಲೂ ಬ್ರಿಜೇಶ್‌ ಚೌಟ ಇಲ್ಲಿನ ಜನರ ಪರಿಚಯದಲ್ಲಿದ್ದಾರೆ. ಇನ್ನು, ಸಂಘ ಪರಿವಾರದ ಹಿನ್ನಲೆಯೂ ಇರುವುದರಿಂದ ಮತ್ತು ಬಂಟ್ಸ್ ಸಮುದಾಯದ ಯುವ ನಾಯಕನಾಗಿ, ಗುರುತಿಸಿಕೊಂಡಿರುವ ಬೃಜೇಶ್ ಚೌಟ ಬಂಟ್ಸ್‌ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಇನ್ನು ತಮ್ಮ ಹುಟ್ಟೂರನ್ನು ಬಿಟ್ಟು ಹಲವು ವರ್ಷಗಳೇ ಕಳೆದಿರುವ ವಿನಯ್‌ ಕುಮಾರ್‌ ಸೊರಕೆ ಮತ್ತೆ ಮರಳಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಣಕ್ಕಿಳಿಯುವ ಲೆಕ್ಕಚಾರದಲ್ಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ಅವರು, ಅಲ್ಲಿನ ಸೋಲಿನ ಬಳಿಕ ಉಡುಪಿ ಜಿಲ್ಲೆಗೆ ಹೋಗಿ ಉಡುಪಿಯಲ್ಲಿ ಸಂಸದರಾಗಿದ್ದರು. ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ಈ ಬಾರಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತರಾಗಿದ್ದಾರೆ. ಇವರು ಕರಾವಳಿಯ ಪ್ರಮುಖ ಸಮುದಾಯವಾಗಿರುವ ಬಿಲ್ಲವ ಸಮುದಾಯಕ್ಕೆ ಸೇರಿದವರು. ಬಿಲ್ಲವ ಮತಗಳು ಹೆಚ್ಚಿರುವ ಈ ಕ್ಷೇತ್ರದಲ್ಲಿ ಸೋರಕೆ ಬಿಲ್ಲವ ಮತಗಳನ್ನು ಕಾಂಗ್ರೆಸ್‌ಗೆ ತರಬಹುದು ಎಂಬ ಲೆಕ್ಕಚಾರವಿದೆ.    

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದರೂ, ಕಳೆದ ಮೂರು ದಶಕಗಳಿಂದ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ಮೂರು ದಶಕಗಳಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಜಯಗಳಿಸುತ್ತಿದ್ದಾರೆ. 1989 ರಲ್ಲಿ ಚುನಾವಣೆಯಲ್ಲಿ ಗೆದ್ದ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಇಲ್ಲ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

-ಶ್ರೀರಾಜ್‌ ವಕ್ವಾಡಿ  

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!