spot_img
Wednesday, January 22, 2025
spot_img

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕ್ರೀಡಾಪಟುಗಳ ಸೃಜಿಸಿದ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಸೇವಾ ನಿವೃತ್ತಿ

 

ಸಂಜಯ ಗಾಂಧಿ ಶಾಲೆಯಲ್ಲಿ ಸಾರ್ಥಕ ಸೇವೆಯ ವಿದಾಯದ ಕ್ಷಣ
ಸಂಜಯ ಗಾಂಧಿ ಶಾಲೆಯಲ್ಲಿ ಸಾರ್ಥಕ ಸೇವೆಯ ವಿದಾಯದ ಕ್ಷಣ
ಸಂಜಯ ಗಾಂಧಿ ಶಾಲೆಯಲ್ಲಿ ಸಾರ್ಥಕ ಸೇವೆಯ ವಿದಾಯದ ಕ್ಷಣ
ಸಂಜಯ ಗಾಂಧಿ ಶಾಲೆಯಲ್ಲಿ ಸಾರ್ಥಕ ಸೇವೆಯ ವಿದಾಯದ ಕ್ಷಣ
  ಒಂದು ತಂಡ ಪ್ರಶಸ್ತಿಯ ಝಲಕ್
ಒಂದು ತಂಡ ಪ್ರಶಸ್ತಿಯ ಝಲಕ್

ಅಂಪಾರು ಸಂಜಯ ಗಾಂಧಿ ಪ್ರೌಢಶಾಲೆ ಕ್ರೀಡೆಯಲ್ಲಿ ತನ್ನದೇಯಾದ ಛಾಪು ಮೂಡಿಸಿದ ವಿದ್ಯಾಸಂಸ್ಥೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಮಿಂಚಿದ್ದಾರೆ. ಅಂಪಾರು ಸುತ್ತಮುತ್ತ ಗ್ರಾಮಗಳ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಸಾಧಕರನ್ನಾಗಿ ರೂಪಿಸಿದ ಶಿಲ್ಪಿ ಬಾಲಕೃಷ್ಣ ಶೆಟ್ಟಿ ಅವರು. 1983ರಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅಂಪಾರು ಸಂಜಯಗಾಂಧಿ ಪ್ರೌಢಶಾಲೆಯಲ್ಲಿ ಸೇವೆ ಆರಂಭಿಸಿದ ಇವರು ಇದೇ ಜೂನ್ 30-2020ರಂದು ಸೇವಾ ನಿವೃತ್ತರಾಗುತ್ತಿದ್ದಾರೆ.

ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾಗಿ, ರಾಷ್ಟ್ರೀಯ ಪ್ರತಿಭೆಗಳನ್ನು ಸಂಪನ್ನಗೊಳಿಸಿದ ಶ್ರೇಷ್ಠ ತರಬೇತುದಾರರಾಗಿ, ಕ್ರೀಡಾ ಅಂಗಣದಲ್ಲಿ ಫಿನಿಕ್ಸ್ ಪಕ್ಷಿಯಂತೆ ಕಾರ್ಯನಿರ್ವಹಿಸುವ ಬಾಲಕೃಷ್ಣ ಶೆಟ್ಟಿ ಅವರ ನಿವೃತ್ತಿ ಪ್ರತಿಯೊಬ್ಬ ಕ್ರೀಡಾಭಿಮಾನಿ, ಅವರ ಶಿಷ್ಯವೃಂದಕ್ಕೆ ಬೇಸರ ತರಿಸುತ್ತದೆ.

ಇವರ ಗರಡಿಯಲ್ಲಿ ಪಳಗಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗಳಿಸಿದ ಕ್ರೀಡಾಪಟುಗಳ ಸಾಲು ಸಾಲು ಹೆಸರುಗಳಿವೆ. ಬಿದಿರು ಕೋಲಿನ ಹುಡುಗಿ ಎಂದೇ ಕರೆಸಿಕೊಂಡ ದೀಪಿಕಾ ಶೆಟ್ಟಿಯನ್ನು ಮರೆಲುಂಟೆ? ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ 2004-05ರಲ್ಲಿ ಕಂಚಿನ ಪದಕ ಹಾಗೂ 2005-06 ರಲ್ಲಿ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದವರು.

ಈಟಿ ಎಸೆತ ಸ್ಪರ್ಧೆಯಲ್ಲಿ 2008.09 ರಲ್ಲಿ ಚಿನ್ನದ ಪದಕ ಗೆದ್ದ ಪ್ರಥ್ವಿ, ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ 2007-08 ರಲ್ಲಿ ಕಂಚಿನ ಪದಕ ಗೆದ್ದ ಕೀರ್ತಿ ಶೆಟ್ಟಿ, ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ2007-08 ರಲ್ಲಿ ಕಂಚಿನ ಪದಕ ಗೆದ್ದ ಅನುಷಾ ಹೀಗೆ ಸಾಲು ಸಾಲು ಸಾಧಕಮಣಿಗಳು ಕಂಗೊಳಿಸುತ್ತವೆ. ಇಂಥಹ ಸಾಧಕರನ್ನು ಸೃಷ್ಟಿಸಿದ್ದು ಇವರೇ ಬಾಲಕೃಷ್ಣ ಶೆಟ್ಟರು.

ನಾರಾಯಣ ಶೆಟ್ಟಿ ಮತ್ತು ಪಾರ್ವತಿ ಶೆಟ್ಟಿ ಅವರ ಪುತ್ರರಾಗಿ ದಿನಾಂಕ 20-01-1961ರಲ್ಲಿ ಜನಿಸಿದ ಬಾಲಕೃಷ್ಣ ಶೆಟ್ಟರು ಸ.ಹಿ.ಪ್ರಾ.ಶಾಲೆ ಹಾಲಾಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಬಿದ್ಕಲ್‍ಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಶಂಕರನಾರಾಯಣ ಸ.ಪ.ಪೂಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡದರು. ವಿದ್ಯಾರ್ಥಿದಿಸೆಯಲ್ಲಿ ಒಳ್ಳೆಯ ಕ್ರೀಡಾಪಟುವಾಗಿದ್ದ ಬಾಲಕೃಷ್ಣ ಶೆಟ್ಟರು ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವ ಸಂಕಲ್ಪ ಮಾಡಿ ಧಾರವಾಡದ ದೈಹಿಕ ಶಿಕ್ಷಣ ಕೇಂದ್ರವಾದ ಎಂ.ವಿ.ಎ.ಎಸ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ತರಬೇತಿ ಪಡೆದರು.

ದಿನಾಂಕ 16.8.1983ರಲ್ಲಿ ಅಂಪಾರು ಸಂಜಯಗಾಂಧಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಆರಂಭಿಸಿದ ಬಾಲಕೃಷ್ಣ ಶೆಟ್ಟರು ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳನ್ನು ಮಿನುಗಿಸುವುದರ ಜೊತೆಗೆ ಕ್ರೀಡೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಂಡರು. ವಿದ್ಯಾರ್ಥಿಗಳ ಶ್ರಮದಾನದ ಮೂಲಕ ಉತ್ತಮ ಕ್ರೀಡಾಂಗಣ ನಿರ್ಮಾಣ, ಸುಮಾರು 800-1000 ಜನ ಕುಳಿತು ವೀಕ್ಷಿಸಬಹುದಾದ ಗ್ಯಾಲರಿ ನಿರ್ಮಾಣ, ಮಿನಿ ಜಿಮ್ ಒಳಗೊಂಡಂತೆ ಕ್ರೀಡೆಗೆ ಅಗತ್ಯವಾದ ಎಲ್ಲಾ ಸಲಕರಣೆಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಟ್ಟಿದ್ದಾರೆ.

ಕ್ರೀಡೆಯಲ್ಲಿ ಇವರ ಸಿದ್ಧಗೊಳಿಸಿದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 94 ಕ್ರೀಡಾಪಟುಗಳು ಭಾಗವಹಿಸಿದ್ದರು. ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ 9 ಕ್ರೀಡಾಪಟುಗಳು ಭಾಗವಹಿಸಿ 2 ಚಿನ್ನ. 3 ಕಂಚಿನ ಪದಕ ಪಡೆದ ಸಾಧನೆ ಮಾಡಿದ್ದಾರೆ. ಇದುವರೆಗೆ 25 ಬಾರಿ ಕುಂದಾಪುರ ತಾಲೂಕು ಕ್ರೀಡಾಕೂಟದ ಸಮಗ್ರ ತಂಡ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರ ನೇತೃತ್ವದ ತಂಡಕ್ಕಿದೆ.

ಇವರ ಸೇವಾಸಾಧನೆಗೆ 2006ರಲ್ಲಿ ಉಡುಪಿ, ಮಂಗಳೂರು ಮತ್ತು ಕೊಡಗು ಜಿಲ್ಲಾ ಕ್ರೀಡಾಕೂಟದಲ್ಲಿ ಉತ್ತಮ ತರಬೇತುದಾರ ಪ್ರಶಸ್ತಿ, 2007ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2008ರಲ್ಲಿ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, 2009ರಲ್ಲಿ ಉಡುಪಿ ಜಿಲ್ಲಾ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನ ಗೌರವಗಳು ಇವರಿಗೆ ಲಭಿಸಿದೆ.

ಅಶಿಸ್ತನ್ನು ಸಹಿಸದ, ನಿಷ್ಠೂರತೆ, ಕ್ರೀಡಾಂಗಣದ ಶಿಸ್ತನ್ನು ಎತ್ತಿ ಹಿಡಿಯುವ ಬದ್ಧತೆ, ಮೈದಾನದಲ್ಲಿ ಆಡುವ ವಿದ್ಯಾರ್ಥಿಯಲ್ಲಿ ಸುಪ್ತವಸ್ಥೆಯಲ್ಲಿರುವ ಕ್ರೀಡಾ ಪ್ರತಿಭೆಯನ್ನು ತಿದ್ದಿ ತೀಡಿ ಬೆಳೆಸುವಲ್ಲಿ ಇವರ ಪ್ರಯತ್ನ ಅನನ್ಯ. ಯೋಗ-ವ್ಯಾಯಾಮ-ಕಸರತ್ತು ಹೀಗೆ ವಿದ್ಯಾರ್ಥಿಯನ್ನು ದೈಹಿಕವಾಗಿ, ಮಾನಸಿಕವಾಗಿ ಸಜ್ಜುಗೊಳಿಸಿ ಅಖಾಡಕ್ಕಿಳಿಸುವ ಜಾಣ್ಮೆ ಇವರದ್ದು.

ಪತ್ನಿ ಜ್ಯೋತಿ ಬಿ.ಶೆಟ್ಟಿ, ಪುತ್ರಿ ಸಹನ ಅಭಿಜಿತ್ ಶೆಟ್ಟಿ, ಇಬ್ಬರು ಮೊಮ್ಮಕ್ಕಳೊಂದಿಗಿನ ಸಂತೃಪ್ತ ಸಂಸಾರ ಇವರದ್ದು. ವೃತ್ತಿ ಬದುಕಿನ ಸಾರ್ಥಕ ಸೇವೆಯನ್ನು ಸಲ್ಲಿಸಿ ನಿವೃತ್ತರಾಗುತ್ತಿರುವ ಬಾಲಕೃಷ್ಣ ಶೆಟ್ಟಿ ವೃತ್ತಿ ಬದುಕಿನಿಂದ ನಿವೃತ್ತಿಯಾದರೂ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವಂತೂ ಅವರು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ ಎನ್ನುವುದು ಅವರ ಶಿಷ್ಯವೃಂದದವರ ಆಶಯವಾಗಿದೆ.

♦ನಾಗರಾಜ್ ವಂಡ್ಸೆ

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!