spot_img
Friday, January 30, 2026
spot_img

ಏನಿದು ‘ಯಂತ್ರಶ್ರೀ’? ಯಾಂತ್ರಿಕೃತ ಶ್ರೀ ಪದ್ಧತಿ ಭತ್ತ ಬೇಸಾಯ ಪದ್ದತಿ

 

 

 

 

ಇವತ್ತು ಭತ್ತ ಬೇಸಾಯ ಹಳ್ಳಿ ಹಳ್ಳಿಗಳಿಂದ ವಿದಾಯ ಪಡೆಯುತ್ತಿದೆ. ಭೂಮಿ ಹಡಿಲು ಬೀಳುತ್ತಿದೆ. ಒಂದೆಡೆ ಬೆಳೆದ ಬೆಳೆಗೆ ಸರಿಯಾದ ಧಾರಣೆ ಸಿಗದೇ ಇರುವುದು, ಇನ್ನೊಂದೆಡೆ ಕೃಷಿ ಕಾರ್ಮಿಕರ ಕೊರತೆ ಮತ್ತು ದುಬಾರಿಯಾದ ವೇತನದಿಂದ ರೈತ ಭತ್ತ ಬೇಸಾಯವನ್ನು ಒಲ್ಲದ ಮನಸ್ಸಿನಿಂದ ಬಿಟ್ಟು ಬಿಡುವ ಹಂತಕ್ಕೆ ಬಂದಿದ್ದಾನೆ. ವರ್ಷದಿಂದ ವರ್ಷಕ್ಕೆ ಕರಾವಳಿಯ ಅನ್ನದ ಬಟ್ಟಲುಗಳು ಬರಿದಾಗುತ್ತಿವೆ. ಸಾಂಪ್ರಾದಾಯಿಕ ಕೃಷಿ ಪದ್ದತಿ ನೆನಪಿನ ಪುಟ ಹಿಡಿದಿದೆ. ಈ ನೆಲದ ಕೃಷಿ ಸಂಸ್ಕøತಿಯಾಗಿರುವ ಭತ್ತ ಬೇಸಾಯವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಫಲಿತಾಂಶ ಮಾತ್ರ ನಿರೀಕ್ಷಿತ ಹಂತಕ್ಕೆ ಸಿಗುತ್ತಿಲ್ಲ.

ಇವತ್ತು ಭತ್ತ ಬೇಸಾಯವನ್ನು ಲಾಭದಾಯಕವಾಗಿ ಮಾಡಲು ಸಾಧ್ಯವಿದೆ. ಯಾಂತ್ರೀಕೃತ ಕೃಷಿ ಪದ್ದತಿಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಬೆರಳೆಣಿಕೆ ಕೃಷಿ ಕಾರ್ಮಿಕರ ಮೂಲಕ ಉತ್ತಮ ಭತ್ತ ಬೇಸಾಯ ಮಾಡಲು ಸಾಧ್ಯ ಎನ್ನುವ ಸಿದ್ಧಾಂತದೊಂದಿಗೆ ಯಂತ್ರಶ್ರೀ ಎನ್ನುವ ಹೊಸ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿಸಿ ಟ್ರಸ್ಟ್ ಧರ್ಮಸ್ಥಳ ಕಾರ್ಯರೂಪಕ್ಕೆ ತಂದಿದೆ.

ಈಗಾಗಲೇ ಭತ್ತದ ಬೇಸಾಯಕ್ಕೆ ರೂಪುಗೊಳಿಸಲಾಗಿರುವ ಯಂತ್ರಗಳ ಸಮರ್ಪಕ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಕೊಳ್ಳುವುದೇ ಈ ಯಂತ್ರಶ್ರೀಯ ಮೂಲ ಉದ್ದೇಶ. ಇವತ್ತು ಗದ್ದೆ ಉಳುಮೆ, ನಾಟಿ, ಕಳೆ ನಿರ್ವಹಣೆ, ಕೊಯ್ಲು ಮತ್ತು ಒಕ್ಕಣೆ ಕೆಲಸಗಳಿಗೆ ಯಂತ್ರಗಳನ್ನೇ ಉಪಯೋಗಿಸಿಕೊಳ್ಳಬಹುದಾಗಿದೆ. ಈ ಎಲ್ಲ ಕೆಲಸಗಳಿಗೆ ಕಾರ್ಮಿಕರನ್ನು ಅವಲಂಬಿಸುವುದು ತಪ್ಪುತ್ತದೆ. ಕ್ರಮಬದ್ಧವಾಗಿ ಮಾಡಿದರೆ ಯಾಂತ್ರೀಕೃತ ಕೃಷಿ ಲಾಭದಾಯಕವಾಗುತ್ತದೆ.

ಕುಂದಾಪುರ ತಾಲೂಕಿನಲ್ಲಿ ಈ ಮುಂಗಾರು ಹಂಗಾಮಿನಲ್ಲಿ 300ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಯಂತ್ರಶ್ರೀ ಅನುಷ್ಠಾನ ನಡೆಯಲಿದೆ. ಈಗಾಗಲೇ ಮಣ್ಣು ಟ್ರೇಗಳಲ್ಲಿ ನರ್ಸರಿ ತಯಾರಿಸುವ ಪ್ರಕ್ರಿಯೆ ನಡೆಯುತ್ತಿದೆ. ಅತ್ಯಧಿಕ ತೆಂಡೆಯೊಡೆಯುವ ಸಾಮರ್ಥ್ಯ ಹೊಂದಿರುವ ಹಾಗೂ ಈ ಭೂ ಭಾಗಕ್ಕೆ ಒಗ್ಗಿಕೊಳ್ಳುವ ಎಂ-4 ಭತ್ತದ ತಳಿಯನ್ನು ಬಳಸಿಕೊಳ್ಳಲಾಗುತ್ತಿದೆ.

ನಾಟಿ ಯಂತ್ರ ಬಳಕೆ: ಕೈಯಿಂದ ನಾಟಿ ಮಾಡುವ ಪದ್ಧತಿಯೂ ಭತ್ತದಲ್ಲಿ ಇತ್ತೀಚಿನವರೆಗೆ ನಡೆದುಕೊಂಡು ಬಂದಿರುವುದು ಸಾಂಪ್ರದಾಯಿಕ ಪದ್ಧತಿ. ಇಂದು ಕಾಲ ಬದಲಾಗಿದೆ ಕೃಷಿಯು ಯಾಂತ್ರಿಕರಣದತ್ತ ಸಾಗುತ್ತಿರುವುದು ಕೂಲಿಗಾರರ ಮೇಲಿನ ಅವಲಂಬನೆ ಕಡಿಮೆ ಮಾಡುವುದರ ಜೊತೆಗೆ ಬೇಸಾಯದ ಖರ್ಚನ್ನು ಕಡಿಮೆ ಮಾಡಿ ಆಹಾರ ಉತ್ಪಾದನೆಯಲ್ಲಿ ಗಣನೀಯವಾಗಿ ಬದಲಾವಣೆ ಮಾಡಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ನಾಟಿ ಮಾಡಲು ಕೂಡಾ ಈಗ ಸರಳವಾದ ಯಂತ್ರ ಬಂದಿದೆ. ಏಕಕಾಲಕ್ಕೆ ನಾಲ್ಕು ಸಾಲುಗಳಲ್ಲಿ ನಾಟಿ ಮಾಡುತ್ತದೆ.
ಕ್ರಮಬದ್ಧ ರೀತಿಯಲ್ಲಿ ಬತ್ತದ ಸಸಿಗಳನ್ನು ಬೆಳೆಸಿ ಕೊಟ್ಟರೆ ಸಾಕು ನಾಟಿ ಯಂತ್ರವು 2ಗಂಟೆಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಕೆಲಸವನ್ನು ಮಾಡಿ ಮುಗಿಸುತ್ತದೆ. ನಾಟಿ ಯಂತ್ರ ಈಗಾಗಲೇ ರೈತರಿಗೆ ಚಿರಪರಿಚಿತವಾಗಿದೆ. ನಾಟಿ ಕಾರ್ಮಿಕರ ಕೊರತೆಯನ್ನು ಈ ಯಂತ್ರ ನೀಗಿಸಿದೆ.

ಯಾಂತ್ರೀಕೃತ ಬೇಸಾಯ ಪದ್ದತಿಯಲ್ಲಿ ಸಸಿಗಳ ತಯಾರಿ ಅತ್ಯಂತ ಮುಖ್ಯವಾದುದು. ಸಾಂಪ್ರಾದಾಯಿಕ ಕೃಷಿ ಪದ್ದತಿಯಲ್ಲಿ ನೇಜಿ ತಯಾರಿಸಿದಂತಲ್ಲ. ಈ ನಾಟಿ ಯಂತ್ರದ ಬಳಕೆ ಮಾಡುವುದರಿಂದ ಸಸಿ ಮಡಿಗಳನ್ನು ಮಾಡಿ ಅಲ್ಲಿ ನೇಜಿ ತಯಾರಿಸಿಕೊಂಡಿರಬೇಕು. ಒಂದು ಎಕರೆ ಸಸಿಮಡಿ ಬೆಳೆಸಲು 40 ಅಡಿ ಉದ್ದ 4 ಅಡಿ ಅಗಲ ಜಾಗ ಸಾಕು ಮನೆಮುಂದಿನ ಕಾಂಕ್ರೇಟಿಕೃತ ಸ್ಥಳ, ಮಣ್ಣಿನಲ್ಲಿ ಸಹ ಬೆಳೆಸಬಹುದು.

ಟ್ರೇ ಸಸಿ ಮಡಿ: ಎಕರೆ ಒಂದರ 70ರಿಂದ 80 ಟ್ರೇ ಗಳು ಅವಶ್ಯಕತೆ ಇರುತ್ತದೆ. ಒಂದು ಎರಡು ಅಡಿ ಉದ್ದವಿರುತ್ತದೆ ಫಲವಾಗಿ ಮಾಡಿದ ಗದ್ದೆಯ ಮಣ್ಣನ್ನು ಒಂದು ಇಂಚು ದಪ್ಪಕ್ಕೆ ಮಣ್ಣನ್ನು ಟ್ರೇ ಗಳಿಗೆ ತುಂಬಿಸುವುದು ಉಪಚಾರ ಮಾಡಿದ ಭತ್ತದ ಬಿತ್ತನೆ ಬೀಜಗಳನ್ನು ತೆಳುವಾಗಿ ಮತ್ತು ಸಮನಾಗಿ ಬಿತ್ತನೆ ಮಾಡುವುದು ಬಿತ್ತಿದ ಬೀಜಗಳ ಮೇಲೆ ಜರಡಿ ಮಾಡಿದ ಮಣ್ಣನ್ನು ತೆಳುವಾಗಿ ಹರಡುವುದು ಟ್ರೇಗಳನ್ನು ಶೇಡ್ ನೆಟ್ ಅಥವಾ ಒಣ ಹುಲ್ಲಿನಿಂದ ವೇದಿಕೆ ಮಾಡುವುದು ವಾತಾವರಣಕ್ಕೆ ಹೊಂದಿಕೊಂಡು ಅಗತ್ಯ ನೀರನ್ನು ಸಿಂಪರಣೆ ಮಾಡುವುದು ಆರು ಎಂಟು ದಿನಗಳ ಅವಧಿಯಲ್ಲಿ ಹೊದಿಕೆಯನ್ನು ತೆಗೆದು 15 ರಿಂದ 20 ದಿನಗಳ ಅಂತರದಲ್ಲಿ ಮುಖ್ಯ ಗದ್ದೆಗೆ ನಾಟಿ ಮಾಡಬೇಕು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮ ಮಟ್ಟದಲ್ಲಿ ಭತ್ತ ಬೆಳೆಗಾರರ ಒಕ್ಕೂಟವನ್ನು ಸ್ಥಾಪಿಸಿ ಯಂತ್ರಶ್ರೀ ಯಾಂತ್ರಿಕೃತ ಶ್ರೀ ಪದ್ಧತಿ ಭತ್ತ ಬೇಸಾಯ ಬಗ್ಗೆ ಜಾಗೃತಿ ಮೂಡಿಸಿದೆ. ಇದಕ್ಕೆ ಮಾಹಿತಿ ಜೊತೆಗೆ ಯಂತ್ರಗಳನ್ನು ಒದಗಿಸುವುದಲ್ಲದೆ, ಯಂತ್ರಶ್ರೀ ಅಳವಡಿಸಿಕೊಂಡ ಕುಟುಂಬಗಳಿಗೆ ಪ್ರಗತಿ ನಿಧಿಯನ್ನು ಹಾಗೂ ಅನುದಾನವನ್ನು ನೀಡಲಾಗುವುದು. ವಿಶೇಷವಾಗಿ ಆಧುನಿಕ ತಂತ್ರಜ್ಞಾನಗಳನ್ನು, ಸಾವಯವ, ಸುಸ್ಥಿರ ಕೃಷಿ, ಭತ್ತದ ಬೇಸಾಯದ ಲಾಭದಾಯಕ ಮಾಡಲು ಮಾಹಿತಿ ನೀಡಲಾಗುತ್ತಿದೆ.

ಈ ಬಾರಿ ಹಲವಾರು ರೈತರು ಯಂತ್ರಶ್ರೀಯತ್ತ ಆಸಕ್ತಿ ವಹಿಸಿದ್ದಾರೆ. ಕೊರೊನಾ ಮಹಾಮಾರಿ ಇಲ್ಲದಿರುವುತ್ತಿದ್ದರೆ 2500 ಎಕ್ರೆಯಷ್ಟು ಭತ್ತದ ಗದ್ದೆಯಲ್ಲಿ ಯಂತ್ರಶೀ ಹಸನಾಗುತ್ತಿತ್ತು. ಹೊಸ ಪ್ರಯೋಗವೊಂದು ರೈತಸ್ನೇಹಿಯಾಗಿ ಮೂಡಿ ಬರಲಿ. ಹಡಿಲು ಬೀಳಿಸುವ ಪರಂಪರೆಗೊಂದು ಕಡಿವಾಣ ಬೀಳಲಿ.

◊ಯಂತ್ರ ನಾಟಿ ಉಪಯೋಗಗಳು:
ಎಕರೆಗೆ ಬೇಕಾಗುವ ಸಸಿಗಳನ್ನು ಬೆಳೆಸಲು ಕಾಲ ಗುಂಟೆ ಜಾಗ ಸಾಕು ಮನೆ ಮುಂದೆ ಅಥವಾ ಕಾಣದ ಮನೆಯ ಅಂಗಳದಲ್ಲಿ ಸಸಿಮಡಿ ತಯಾರಿಸಬಹುದು. ಎಕರೆಗೆ 13 ರಿಂದ 16 ಕೆಜಿ ಬಿತ್ತನೆ ಬೀಜ ಸಾಕಾಗುತ್ತದೆ. 15ರಿಂದ 18 ದಿನಗಳ ಸಸಿಗಳನ್ನು ನಾಟಿ ಮಾಡಬಹುದು. ಸಾಲು ನಾಟಿ ಜೊತೆಗೆ ಸಸಿಯಿಂದ ಸಸಿಗೆ ಅಂತರ ಮತ್ತು ಪ್ರತಿ ಗುಳಿಗೆ ನಾಟಿ ಮಾಡುವ ಸಸಿಗಳ ಸಂಖ್ಯೆಯನ್ನು ಬದಲಿಸಿಕೊಳ್ಳಬಹುದು. ಸಸಿಮಡಿ ತಯಾರಿಸಲು 3-4ಜನ, ಸಸಿಗಳನ್ನು ಕೇಳಲು ಒಬ್ಬ ಕೂರಲಿಕ್ಕೆ ಒಬ್ಬ ಮತ್ತು ನಾಟಿ ಮಾಡಲು ಒಬ್ಬ ನುರಿತ ಯಂತ್ರ ಚಾಲಕರಂತೂ ಒಟ್ಟಾರೆಯಾಗಿ 5-6 ಜನ ಒಂದು ದಿನದಲ್ಲಿ ಮೂರು ಎಕರೆ ನಾಟಿ ಮುಗಿಸಬಹುದು ಅಂದರೆ ಎಕರೆಗೆ ಎರಡರಿಂದ ಮೂರು ಜನ ಕೂಲಿ ಕಾರ್ಮಿಕರು ಸಾಕು. ಕೋನೋ ವೀಡರ್ ಬಳಸಿ ಕಳೆ ತೆಗೆಯಲು ಎಕರೆಗೆ ಇಬ್ಬರು ಮತ್ತು ಸಾಲುಗಳ ಮಧ್ಯೆ ಇರುವ ಕಳೆ ತೆಗೆಯಲು ಇಬ್ಬರಂತೆ ಒಟ್ಟು ನಾಲ್ಕುಜನ ಬೇಕಾಗುತ್ತದೆ. ರೈತಬಾಂಧವರು ಸಾಂಪ್ರದಾಯಿಕ ಪದ್ಧತಿಗಿಂತ ನಾಟಿ ಯಂತ್ರದ ಮೂಲಕ ಉತ್ತಮ ಇಳುವರಿ ಮತ್ತು ಬೇಸಾಯದ ಖರ್ಚನ್ನು ಕಡಿಮೆಗೊಳಿಸಬಹುದು.

♦ಬಳಕೆ ಮಾಡಬಹುದಾದ ಯಂತ್ರಗಳು
ಹಸಿರೆಲೆ ಗೊಬ್ಬರ: ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ನೇಗಿಲು.
ಭೂಮಿ ತಯಾರಿ: ಟ್ರ್ಯಾಕ್ಟರ್ ಚಾಲಿತ ಕಲ್ಟಿವೇಟರ್, ಟಿಲ್ಲರ್
ನರ್ಸರಿ ತಯಾರಿ: ಟ್ರೇಗಳು
ಸಸಿಗಳ ನಾಟಿ: ನಾಟಿ ಯಂತ್ರ
ಕಳೆ ನಿರ್ವಹಣೆ : ಮಾನವ ಚಾಲಿಯ ಅಥವಾ ಯಾಂತ್ರಕೃತ ಕೋನೋ ವೀಡರ್
ಕೊಯ್ಲು: ರೀಪರ್ ಅಥವಾ ಕಂಬೈಂಡ್ ಹಾರ್ವೆಸ್ಟರ್
ಒಕ್ಕಣಿ: ಒಕ್ಕಣಿ ಯಂತ್ರ


“ಈ ಹಿಂದೆ ಕುಂದಾಪುರ ತಾಲ್ಲೂಕಿನಲ್ಲಿ 2500 ಎಕ್ರೆಯಲ್ಲಿ ಯಂತ್ರಶ್ರೀ ಕಾರ್ಯಕ್ರಮ ಅನುಷ್ಠಾನ ಮಾಡುವ ಗುರಿಯನ್ನು ಹೊಂದಿದ್ದು, ಆದರೆ ಪ್ರಸ್ತುತ ಕೋವಿಡ್ 19 ಇದ್ದ ಕಾರಣ ತಾಲ್ಲೂಕಿನಲ್ಲಿ 302 ಎಕ್ರೆಯಲ್ಲಿ ಯಂತ್ರ ಶ್ರೀ ಕಾರ್ಯಕ್ರಮದ ಮೂಲಕ ಭತ್ತ ನಾಟಿ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಈಗಾಗಲೇ 137 ರೈತರಲ್ಲಿ ನಾಟಿಗೆ ಭತ್ತದ ಬೀಜ ಖರೀದಿ, ಮಣ್ಣು (ಜರಡಿ ಹಿಡಿದ) ಸಂಗ್ರಹಣೆ ಮಾಡಲಾಗಿದೆ. ಪ್ರಸ್ತುತ ಅಮಾವಾಸೆಬೈಲು, ಹೈಕಾಡಿ ,ಕಾಳಾವರ, ಉಪ್ಪಿನಕುದ್ರು, ಬೀಜಾಡಿ, ಬಸ್ರೂರು, ಹಾಲಾಡಿ ಮುಂತಾದ ಭಾಗಗಳಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಯೋಜನೆ ವತಿಯಿಂದ ಒಂದು ಎಕ್ರೆ ಪ್ರದೇಶದಲ್ಲಿ ಯಂತ್ರ ಶ್ರೀ ನಾಟಿಗೆ ರೂ 20,000/- ಪ್ರಗತಿನಿಧಿ ಯನ್ನು ಪೂಜ್ಯರು ಮಂಜೂರು ಮಾಡಿದ್ದಾರೆ. ವಿಶೇಷವಾಗಿ ರೂ 500/- ನ್ನು ಗೌರವಧನವಾಗಿ ನೀಡಲಿದ್ದು, ಈ ಪ್ರಗತಿನಿಧಿ ಸಾಲವನ್ನು ಆರು ತಿಂಗಳಿಗೆ ನೀಡಲಿದ್ದು ವಾರಕ್ಕೆ ಕಡಿಮೆ ಕಂತು (200/-) ಹಾಗೂ ಭತ್ತ ಕಟಾವಿನ ನಂತರ 26ನೇ ವಾರದ ನಂತರ ಉಳಿಕೆಯಾದ ಪೂರ್ಣ ಹಣವನ್ನು ಮರುಪಾವತಿಸಬಹುದು. ಪ್ರಸ್ತುತ ಕ್ರಿಯಾ ಯೋಜನೆಯಲ್ಲಿ ಇದಕ್ಕಾಗಿ ರೂ. 55ಲಕ್ಷ ಪ್ರಗತಿನಿಧಿಯನ್ನು ಹಾಗೂ ರೂ.5 ಲಕ್ಷ ಅನುದಾನವನ್ನು ಮೀಸಲಿಡಲಾಗಿದೆ”

-ಚೇತನ್ ಕುಮಾರ್, ಕುಂದಾಪುರ ತಾಲೂಕು ಕೃಷಿ ಅಧಿಕಾರಿ.


(ಬರೆಹ-ನಾಗರಾಜ್ ವಂಡ್ಸೆ)

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!