Thursday, November 21, 2024

ಎತ್ತ ಸಾಗುತ್ತಿದೆ ಗ್ರಾಮ ಸ್ವರಾಜ್ಯದ ರಥ? ಕರ್ನಾಟಕದಲ್ಲಿ ಗ್ರಾಮ ಸ್ವರಾಜ್ಯವೆಂಬುದು ಕಾಯ್ದೆಗೆ ಮಾತ್ರ ಸೀಮಿತ!

ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ತನ್ನನ್ನು ತಡೆಯುವವರಾರು ಎಂದುಕೊಂಡು ತನ್ನ ಪಾಡಿಗೆ ತಾನು ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ನಮ್ಮಲ್ಲಿ ಕೊರೋನಾ ಕಾಲಿಡುತ್ತಿರುವಾಗಲೇ ಲಾಕ್ಡೌನ್ ಮಾಡಿದ್ದು ಅದರ ಹರಡುವಿಕೆಯನ್ನು ತಕ್ಕಮಟ್ಟಿಗೆ ತಡೆಯಲು ಸಹಕಾರಿಯಾಯಿತು. ಗ್ರಾಮೀಣ ಭಾಗಕ್ಕೆ ಹರಡುವಿಕೆಯ ನಿಯಂತ್ರಣವೂ ಆಗಿದ್ದರಿಂದ ಗ್ರಾಮೀಣ ಕರ್ನಾಟಕ ಸುರಕ್ಷಿತವಾಗಿತ್ತು. ಆದರೆ ಅದೇ ಪರಿಸ್ಥಿತಿ ಈಗ ಇಲ್ಲ. ನಿಯಂತ್ರಣಕ್ಕೆ ಸಿಗದಿರುವಷ್ಟರ ಮಟ್ಟಿಗೆ ತಲುಪಿದೆ. ಪ್ರಸ್ತುತ ಸ್ಥಿತಿಯ ನಿರ್ವಹಣೆಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳ ಬಗ್ಗೆ ಸರಕಾರ ಲಾಕ್ಡೌನ್ ಸಮಯದಲ್ಲಿ ತಯಾರಿಗಳನ್ನು ನಡೆಸಿದ್ದರೆ ಇಂದು ರಾಜ್ಯದ ಜನರನ್ನು ಈ ಸಂಕಷ್ಟದಿಂದ ಪಾರು ಮಾಡಬಹುದಿತ್ತು.

ಕೊರೋನಾ ಪರಿಸ್ಥಿತಿ ನಿಭಾವಣೆಯು ಕೇವಲ ಕೇಂದ್ರ/ರಾಜ್ಯ ಸರ್ಕಾರಗಳೆರಡರಿಂದಲೇ ಸಾಧ್ಯವಿಲ್ಲವೆನ್ನುವುದು ನೀತಿ ಸತ್ಯ. ಗ್ರಾಮೀಣ ಭಾಗದಲ್ಲಿ ಕೊರೋನಾ ನಿಯಂತ್ರಣದಲ್ಲಿ ಸ್ಥಳೀಯ ಸರ್ಕಾರದ ಪಾತ್ರ ಗಣನೀಯವಾಗಿತ್ತು. ಇದಕ್ಕೆ ಗ್ರಾಮ ಸರಕಾರದ ಮುಂದಾಳತ್ವದಲ್ಲಿ ಕೈಗೊಂಡ ಮುಂಜಾಗ್ರತ ಕ್ರಮಗಳು ಹಾಗೂ ಸಮಯದ ಮಿತಿಯಿಲ್ಲದೇ ಗ್ರಾಮದ ಜನರ ಸೇವೆಗೆಂದು ಟೊಂಕಕಟ್ಟಿ ನಿಂತ ಗ್ರಾಮ ಸರ್ಕಾರದ ಪ್ರತಿನಿಧಿಗಳ ನಿರಂತರ ಪರಿಶ್ರಮವೇ ಕಾರಣ. ಸ್ಥಳೀಯ ಸರ್ಕಾರವಾದ ಗ್ರಾಮ ಪಂಚಾಯತ್ ಕಾರ್ಯಪಡೆಯ ಮೂಲಕ ಗ್ರಾಮೀಣ ಮಟ್ಟದ ವಿವಿಧ ಇಲಾಖೆಯಗಳನ್ನು ಸಂಯೋಜಿಸಿ ಕೊರೋನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಜನರಿಗೆ ಗರಿಷ್ಟ ಮಟ್ಟದಲ್ಲಿ ಸ್ಪಂದಿಸಿತು.

ಆದರೆ ದೂರದೃಷ್ಟಿಯಿಲ್ಲದ ಕೇಂದ್ರ – ರಾಜ್ಯ ಸರ್ಕಾರದ ನಿಲುವುಗಳು ಗ್ರಾಮೀಣ ಭಾಗದ ಚಿತ್ರಣವನ್ನೇ ಬದಲಾಯಿಸಿ ಸಮಸ್ಯೆ, ಸಂಕಟ ಮತ್ತು ಗೊಂದಲಗಳ ಬೀಡನ್ನಾಗಿಸಿತು. ನಗರಗಳಲ್ಲಿ ಮಾತ್ರ ಆರ್ಭಟಿಸುತ್ತಿದ್ದ ಕೋರೋನಾ ಲಾಕ್ಡೌನ್ ಸಡಿಲಿಕೆಯ ನಂತರದಲ್ಲಿ ತನ್ನ ಕಬಂಧ ಬಾಹುಗಳನ್ನು ಹಳ್ಳಿ – ಹಳ್ಳಿಗಳಿಗೂ ಚಾಚುತ್ತಿದೆ. ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಇಂತಹ ಸಂದಿಗ್ದ ಪರಿಸ್ಥಿತಿಯನ್ನು ಇಲ್ಲಿಯವರೆಗೂ ಸಮರ್ಥವಾಗಿ ನಿರ್ವಹಿಸಿದ ಸ್ಥಳೀಯ ಸರಕಾರ ಈಗ ಇಲ್ಲದಿರುವುದು ಪರಿಸ್ಥಿತಿ ಇನ್ನಷ್ಟು ಹಡಗೆಡಲು ನೇರ ಕಾರಣವಾಗಿದೆ.

ನಮ್ಮ ಹಳ್ಳಿಗಳು ಇಂದಿಗೂ ಸಹ ತನ್ನ ವ್ಯಾಪ್ತಿಯ ಜನರನ್ನು ಪೊರೆಯುವಷ್ಟು ಸ್ವಾವಲಂಬಿಯಾಗಿಲ್ಲ ಇಂತಹ ಸಂದರ್ಭದಲ್ಲಿ ಹಳ್ಳಿಯನ್ನು ನಂಬಿಕೊಂಡು ಅಲ್ಲಿಯೇ ಇರುವ ಗ್ರಾಮಸ್ಥರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ಶ್ರಮಿಸುತ್ತಿರುವಾಗಲೇ ಒಮ್ಮೆಲೇ ಲಾಕ್ಡೌನ್ ಎದುರಾಯಿತು. ಆಗ ಹಳ್ಳಿಯೂ ಕೆಲ ಕಾಲ ಸ್ಥಬ್ದವಾಯಿತು. ಎಲ್ಲ ಚಟುವಟಿಕೆಗಳು ನಿಂತವು. ಜನರು ಮನೆಯಿಂದ ಹೊರಬರಲಾರದೆ ಕಷ್ಟಪಟ್ಟರು. ಈ ಸಮಯದಲ್ಲಿ ಕೇಂದ್ರ ಸರಕಾರ ಉಚಿತವಾಗಿ ಮತ್ತು ಹೆಚ್ಚುವರಿ ಪಡಿತರವನ್ನು ವಿತರಿಸುವುದಾಗಿ ಘೋಷಿಸಿತು. ಕರ್ನಾಟಕದಲ್ಲಿ ಸರಕಾರ ಈ ಹಿಂದಿನಿಂದಲೂ ಉಚಿತ ಪಡಿತರದ ವ್ಯವಸ್ಥೆ ಜಾರಿಯಲ್ಲಿತ್ತು. ಹೆಚ್ಚುವರಿ ಪಡಿತರ ಸಿಗುವ ಬದಲಿಗೆ ಪ್ರತಿ ಕಾರ್ಡಿನ ಪ್ರತಿ ಸದಸ್ಯರಿಗೆ ಸಿಕ್ಕಿರುವ ಪಡಿತರವು ಮೊದಲು ಪಡೆಯುತ್ತಿದ್ದ ಪಡಿತರಕ್ಕಿಂತ ಕಡಿಮೆಯೇ ಆಗಿತ್ತು. ಜೊತೆಗೆ ಹಲವರು, ದಾಖಲೆಯ ಕೊರತೆ, ನಿಗಧಿತ ಸಮಯದ ಮಿತಿ, ಪಡಿತರ ಕೊರತೆ, ಪಡಿತರ ವಿತರಣೆಯಲ್ಲಿ ಅವ್ಯವಹಾರ ಮುಂತಾದ ಕಾರಣಗಳಿಂದ ಪಡಿತರದಿಂದ ವಂಚಿತರಾದರು.

ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಇತರ ಕೆಲಸಗಳೊಂದಿಗೆ ಉದ್ಯೋಗ ಖಾತ್ರಿಯ ಕೆಲಸವೂ ನಿಂತಿತು. ಕೆಲಸವಿಲ್ಲದ ಪರಿಸ್ಥಿತಿ ಒಂದೆಡೆಯಾದರೆ; ಇಲ್ಲಿಯವರೆಗೆ ಉದ್ಯೋಗ ಖಾತ್ರಿಯಲ್ಲಿ ಮಾಡಿದ ಕೆಲಸದ ಕೂಲಿಯೂ ದೊರೆಯದೇ ಇದ್ದಾಗ ಜನರು ಇನ್ನೂ ಕಂಗಾಲಾದರು. ಆ ಕೂಲಿಯನ್ನು ಪಡೆಯಲು ಗ್ರಾಮದಿಂದ ರಾಜ್ಯ ಮಟ್ಟದ ವಿವಿಧ ಸ್ಥರಗಳಲ್ಲಿ ಹಲವು ಬಗೆಯಲ್ಲಿ ಒತ್ತಾಯ ಮಾಡಬೇಕಾಯಿತು. ಕೂಲಿ ಬಂದಾಗ ಬ್ಯಾಂಕಿಗೆ ಹೋಗಿ ಹಣ ಪಡೆಯಲು ಮತ್ತೆ ಪರದಾಡಿದರು. ಬೇರೆ ಬೇರೆ ಹಂತಗಳಲ್ಲಿನ ಸಿಬ್ಬಂದಿಗಳ – ಅಧಿಕಾರಿಗಳ ನಿರ್ಲಕ್ಷ ಮತ್ತು ಬೇಜವಾಬ್ದಾರಿ; ಸರ್ಕಾರದ ಸಂಕೀರ್ಣ ನಿಯಮಗಳಿಂದ ಕೆಲಸದ ಕೂಲಿ ಸಿಗದೇ ಇದ್ದಾಗ, ತಮ್ಮದಲ್ಲದ ಇನ್ಯಾವುದೋ ಖಾತೆಗೆ ಕೂಲಿ ಜಮೆಯಾದಾಗ, ಎಲ್ಲಿ ಜಮೆಯಾಗಿದೆ ಎನ್ನುವುದನ್ನು ಹುಡುಕುವಲ್ಲಿ ಮತ್ತು ಅದನ್ನು ಪಡೆಯಲು ಅವರು ಮಾಡಿದ ಅಲೆದಾಟ ಲೆಕ್ಕವಿಲ್ಲದಷ್ಟು. ಗ್ರಾಮದ ಜನರಿಗೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ಕೊಡಬೇಕೆಂಬ ಆದೇಶವಿದ್ದರೂ, ಅಧಿಕಾರಿಗಳ ಬದ್ಧತೆಯ ಕೊರತೆ ಮತ್ತು ತಾಂತ್ರಿಕ ಕಾರಣದಿಂದಾಗಿ ಕೆಲಸ ಪಡೆಯಲು ಹೋರಾಟವೇ ಮಾಡಬೇಕಾಯಿತು. ಸಣ್ಣ ಸಣ್ಣ ಗುಂಪುಗಳಲ್ಲಿ ನರೆಗಾ ಕೆಲಸ ಆರಂಭಕ್ಕೆ ಚಾಲನೆ ದೊರೆತರೂ ಕೂಡ ಆರಂಭಿಸಿದ ಕೆಲವೇ ವಾರಗಳ ನಂತರ ದೊಡ್ಡ ಸಂಖ್ಯೆಯಲ್ಲಿರುವ ಜನರಿಗೆ ಯಾವ ಕೆಲಸ ಕೊಡಬೇಕೆನ್ನುವ ಸ್ಪಷ್ಟ ಯೋಜನೆಯ ಕೊರತೆಯಿಂದಾಗಿ ಮತ್ತೆ ಕೆಲಸ ಸಿಗದೇ ಜನರು ಪರದಾಡುವಂತಾಯಿತು.
ಇದರ ಜೊತೆಗೆ ಬದುಕನ್ನು ಅರಸಿ ವಿವಿಧ ಜಿಲ್ಲೆ, ರಾಜ್ಯಗಳಿಗೆ ಹೋದ ವಲಸಿಗರು ಈಗ ‘ನಮ್ಮ ಊರಿಗೆ ಹೋದರೆ ಹೇಗಾದರೂ ಬದುಕಬಹುದೆನ್ನುವ’ ಭರವಸೆಯಿಂದ ಹಳ್ಳಿಗಳಿಗೆ ಹಿಂದಿರುಗಿದವರೂ ಕೂಡ ಈ ಪರದಾಟ ಅನುಭವಿಸಿದರು. ಕಾರಣ ನಮ್ಮ ಗ್ರಾಮಗಳು ಅಲ್ಲಿನ ಜನರಿಗೆ, ಅವರ ಜೀವನ ನಿರ್ವಹಣೆಗೆ ಪೂರಕವಾಗುವಂತೆ ಎಲ್ಲರಿಗೂ ಕೆಲಸ ಕೊಡುವಷ್ಟು ಸ್ವಾವಲಂಬಿ ಆಗಿಲ್ಲ ಎನ್ನುವುದೇ ಆಗಿದೆ. ಈಗಲೂ ಹಳ್ಳಿಗಳತ್ತ ತಮ್ಮ ಸಮಸ್ಯೆಗಳ ಮೂಟೆಗಳೊಂದಿಗೆ ಹಿಂತಿರುಗುತ್ತಿರುವ ಜನರೊಂದಿಗೆ ಕೊರೋನಾವೂ ಜೊತೆಯಾಗಿದೆ. ಇದರಿಂದಾಗಿ ನಿರುದ್ಯೋಗದ ಸಮಸ್ಯೆ ಸಂಕಷ್ಟದ ಸ್ಥಿತಿ ತಲುಪುವ ಭೀತಿಯೊಂದಿಗೆ ಕೋರೋನಾಂತನಕವೂ ನಮ್ಮ ಹಳ್ಳಿಗಳನ್ನು ಕಂಗಾಲಾಗಿಸಿದೆ.

ಇದರೊಂದಿಗೆ ಮಳೆಯ ಆರ್ಭಟ ಅಂಬೆಗಾಲಿಡುತ್ತ ಸಾಗುತ್ತಿದೆ. ಈ ಸಮಯದಲ್ಲಿ ಸಂಭವಿಸಬಹುದಾದ ನೆರೆ/ಪ್ರವಾಹ, ಭೂಕುಸಿತ, ಕಡಲ್ಕೊರೆತ, ರಸ್ತೆ, ಚರಂಡಿಗಳ ಅಸಮರ್ಪಕ ನಿರ್ವಹಣೆಯಿಂದುಂಟಾಗಬಹುದಾದ ಸಮಸ್ಯೆಗಳು ಮತ್ತು ಕಿರು ಸೇತುವೆ, ಕಾಲುಸಂಕ, ಕೆರೆ, ಮದಗ ಮುಂತಾದ ಜಲಾಶಯಗಳಿಂದ ಸಂಭವಿಸಬಹುದಾದ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸುರಕ್ಷತಾಕ್ರಮಗಳ ಬಗ್ಗೆ ಮುತುವರ್ಜಿ ವಹಿಸಬೇಕಾದ ತುರ್ತು ಈಗ ಪಂಚಾಯಿತಿಗಳಿಗಿದೆ. ಕೊರೋನಾ ಆತಂಕಗಳನ್ನು ನಿಭಾಯಿಸುವ ಜವಾಬ್ದಾರಿಗಳೊಂದಿಗೆ ಮಳೆಗಾಲದ ಅಪಾಯಗಳನ್ನೂ ತಡೆಯಬೇಕಾದ ಕರ್ತವ್ಯ ಗ್ರಾಮ ಸರ್ಕಾರಗಳದ್ದಾಗಿದೆ.

ಆದರೆ ಈಗ ಕರ್ನಾಟಕದಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸರಕಾರವೇ ಇಲ್ಲ.! ಜನಾದೇಶವಿರುವ ಚುನಾಯಿತ ಪ್ರತಿನಿಧಿಗಳು ತಮ್ಮ 5 ವರ್ಷಗಳ ಅವಧಿ ಮುಗಿಸಿ ನಿರ್ಗಮಿಸಿದ್ದಾರೆ. ಪ್ರತಿನಿಧಿಗಳ 5 ವರ್ಷಗಳ ಅಧಿಕಾರಾವಧಿ ಮುಗಿಯುವ ಮುಂಚೆ ಗ್ರಾಮ ಪಂಚಾಯಿತಿಗಳಿಗೆ ಕಡ್ಡಾಯ ಚುನಾವಣೆ ನಡೆಸಬೇಕಾಗಿದ್ದ ರಾಜ್ಯ ಚುನಾವಣಾ ಆಯೋಗವು ತನ್ನ ಕರ್ತವ್ಯ ಮರೆತಿದೆ. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡ ರಾಜ್ಯ ಸರಕಾರವು ಕುತಂತ್ರದ ನಡೆ ಅನುಸರಿಸಿ ಅಧಿಕಾರ ಕೇಂದ್ರೀಕರಣಕ್ಕೆ ಅಡಿಪಾಯ ಹಾಕುತ್ತಿದೆ. ವಿಕೇಂದ್ರೀಕರ್ಣವನ್ನು ಎತ್ತಿ ಹಿಡಿದ ಗ್ರಾಮ ಸ್ವರಾಜ್ ಕಾಯ್ದೆಯ ಅಂಶಗಳನ್ನು ತಿರುಚಿ ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಬಗ್ಗೆ ಸರಕಾರವು ಜಿಲ್ಲಾಧಿಕಾರಿಗಳಿಗೆ ಸೂಚಿಸಿತು.

ಈ ಸೂಚನೆ ಬಂದಿದ್ದೇ ತಡ, ಅದಕ್ಕಾಗಿಯೇ ಕಾಯುತ್ತಿದ್ದವರಂತೆ ವರ್ತಿಸಿದ ಜಿಲ್ಲಾಧಿಕಾರಿಗಳು, ಕಾಯ್ದೆಯ ಅಂಶಗಳನ್ನು ಉಲ್ಲಂಘಿಸುವ ಸೂಚನೆಯನ್ನು ತಿಳಿದೂ ತಿಳಿಯದವರಂತೆ, ಅದನ್ನೇ ಆದೇಶವೆಂಬಂತೆ ಪಾಲಿಸಿ ಆಡಳಿತಾಧಿಕಾರಿಗಳ ನೇಮಕದ ಅಧಿಸೂಚನೆ ಹೊರಡಿಸಿದ್ದಾರೆ. ಚುನಾವಣೆಯಾದ ನಂತರ ಉಂಟಾಗಬಹುದಾದ, ಕಾಯ್ದೆಯಲ್ಲಿ ಹೇಳಿರುವ ಬೇರೆ ಬೇರೆ ಕಾರಣಗಳಿಗೆ ಆಡಳಿತಾಧಿಕಾರಿ ನೇಮಿಸುವುದು ತಮ್ಮ ಶಾಸನಬದ್ಧ ಅಧಿಕಾರವೇ ಹೊರತು ರಾಜ್ಯ ಸರ್ಕಾರದ್ದಲ್ಲ ಎನ್ನುವುದನ್ನು ಜಿಲ್ಲಾಧಿಕಾರಿಗಳು ಮರೆತಂತೆ ನಟಿಸಿದ್ದಾರೆ. ಸರಕಾರ ಹಾಗೂ ಚುನಾವಣಾ ಆಯೋಗದ ಕುತಂತ್ರದ ನಡೆಗೆ ಹೆಗಲು ಕೊಟ್ಟವರಂತೆ ಕಾಯ್ದೆಯ ಅಂಶಗಳ ಉಲ್ಲಂಘನೆಗೆ ನೇರ ಹೊಣೆಯಾಗಿದ್ದಾರೆ. ಚುನಾವಣಾ ಆಯೋಗವು ಚುನಾವಣೆಯನ್ನು ನಡೆಸದೇ ಇರುವುದರಿಂದ ಜನರ ಹಕ್ಕಿನ ಹರಣವಾದರೆ, ಕಾಯ್ದೆಯನ್ನು ಉಲ್ಲಂಘಿಸಿ ಆಡಳಿತಾಧಿಕಾರಿ ನೇಮಕಕ್ಕೆ ರಾಜ್ಯ ಸರಕಾರ ನೀಡಿದ ಸೂಚನೆ ಗಾಯದ ಮೇಲೆ ಬರೆ ಎಳೆದಂತಾಯಿತು. ಈ ಸೂಚನೆಯನ್ನು ಪಾಲಿಸಿದ ಜಿಲ್ಲಾಧಿಕಾರಿಗಳ ನಡೆ ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತಾಯಿತು. ಉದ್ದೇಶಪೂರ್ವಕವಾಗಿ ಇಟ್ಟಂತಹ ಈ ಮೂರೂ ಹೆಜ್ಜೆಗಳು ಗ್ರಾಮ ಸ್ವರಾಜ್ಯ ರಥದ ಪಥ ತಪ್ಪಿಸಿ ಅಧಿಕಾರಶಾಹಿ ರಾಜ್ಯದತ್ತ ನಡೆಸುತ್ತಿದೆ.

ಪಂಚಾಯತ್ ಸಿಬ್ಬಂದಿಗಳು, ಅಧಿಕಾರಿಗಳೇ ಒಂದು ಸರ್ಕಾರವಾಗುತ್ತಾರೆ ಎಂದಾದರೆ ಜನರಿಂದ ಆಯ್ಕೆಯಾಗುವ ಪ್ರತಿನಿಧಿಗಳು ಎಲ್ಲಾ ಹಂತದ ಸರ್ಕಾರದಲ್ಲಿ ಯಾಕೆ ಬೇಕು? ಎಲ್ಲೆಡೆಯೂ ಅಧಿಕಾರಶಾಹಿಯೇ ಸರ್ಕಾರವಾಗಬಹುದಲ್ಲವೇ? ಎಲ್ಲವನ್ನೂ ಅಧಿಕಾರಿಗಳೇ ನಿರ್ವಹಿಸುತ್ತಾರೆ ಎಂದಾದರೆ ಕೊರೋನಾ ಸಂಕಷ್ಟ ಪರಿಸ್ಥಿತಿ ಎದುರಿಸಲೆಂದೇ ಗ್ರಾಮ ಸರ್ಕಾರದ ಮುಂದಾಳತ್ವದಲ್ಲಿ ರಚಿಸಿದ ಕಾರ್ಯಪಡೆ ಕೇವಲ ಅಧಿಕಾರಿಗಳ ಕಾರ್ಯಪಡೆಯಾಗಿದ್ದರೆ ಸಾಕಿತ್ತಲ್ಲವೇ? ಜನಾದೇಶವಿರುವ ಸರ್ಕಾರದ ಆಗತ್ಯತೆಯೇ ಇಲ್ಲವೆಂದಾದರೆ ಸಂವಿಧಾನದತ್ತ ಹಕ್ಕನ್ನು ಚಲಾಯಿಸಿ ಪ್ರತಿನಿಧಿಗಳನ್ನು ಆರಿಸುವ ಪ್ರಜಾತಂತ್ರ ವ್ಯವಸ್ಥೆಯೇ ಪ್ರಶ್ನಾರ್ಹವಲ್ಲವೇ? ರಾಜ್ಯದಲ್ಲಿ ಸರಕಾರ ರಚಿಸುವಾಗ ಜನಾದೇಶವಿರಬೇಕು ಎಂದು ಬೊಬ್ಬಿಟ್ಟವರು, ಗ್ರಾಮ ಸರಕಾರವೂ ಜನಾದೇಶದಿಂದಲೇ ರಚನೆಯಾಗಬೇಕು ಎಂಬುದನ್ನು ಮರೆತರೆ?

ಗ್ರಾಮದ ಪ್ರತಿನಿಧಿಗಳು ತಮ್ಮ ಜನರಿಗೆ ಆಹಾರ ಪೂರೈಕೆ, ಆರೋಗ್ಯ-ನೈರ್ಮಲ್ಯದ ಜೊತೆಗೆ ಎಲ್ಲಾ ರೀತಿಯ ತುರ್ತು ಆಗತ್ಯತೆಗಳನ್ನು ಒದಗಿಸುವಲ್ಲಿ ಸಮಯದ ಮಿತಿಯಿಲ್ಲದೇ ಕಾರ್ಯನಿರ್ವಹಿಸಿ, ಉತ್ತರದಾಯಿತ್ವ ಸಾಬೀತುಪಡಿಸಿದ್ದನ್ನು ಮರೆತಂತಾಗಿಲ್ಲವೇ? ಇಂತಹ ಬದ್ಧತೆಯನ್ನು, ಉತ್ತರದಾಯಿತ್ವವನ್ನು ಅಧಿಕಾರಿಗಳು ಅಥವಾ ಪಂಚಾಯಿತಿ ಸಿಬ್ಬಂದಿಗಳ ಆಡಳಿತದಲ್ಲಿ ಜನರು ನಿರೀಕ್ಷಿಸಲು ಸಾಧ್ಯವೇ? ಅಧಿಕಾರಿಗಳ ಬದ್ಧತೆಯೆನಿದ್ದರೂ ಅವರ ಮೇಲಿನ ಅಧಿಕಾರಿಗಳಿಗೆ ಅಥವಾ ಇಲಾಖೆಗೆ ಎಂಬುದನ್ನು ಕಾನೂನು ಉಲ್ಲಂಘನೆ ಮಾಡಿಯಾದರೂ ಆಡಳಿತಾಧಿಕಾರಿ ನೇಮಿಸಿದ ಜಿಲ್ಲಾಧಿಕಾರಿಗಳ ನಡೆಯಿಂದ ಸಾಬೀತಾಗುವುದಿಲ್ಲವೇ?.
ಗ್ರಾಮ ಪಂಚಾಯತ್ ವ್ಯವಸ್ಥೆಯ, ಗ್ರಾಮ ಸರ್ಕಾರದ ಗಂಧಗಾಳಿಯೇ ಇರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿ ಅವರನ್ನೇ ಗ್ರಾಮ ಸರ್ಕಾರವೆಂದು ಪರಿಗಣಿಸಿದರೆ, ಈಗಾಗಲೇ ನಿರುದ್ಯೋಗ, ಕೊರೋನಾತಂಕ, ಆಹಾರದ ಸಮಸ್ಯೆ, ಮಳೆಗಾಲದ ಭೀತಿ ಎದುರಿಸುತ್ತಿರುವ ಗ್ರಾಮಗಳು ಇವರ ಆಡಳಿತದಲ್ಲಿ ಎತ್ತ ಸಾಗಿಯಾವು? ಪ್ರಸ್ತುತ ಪರಿಸ್ಥಿತಿ ನಿಭಾವಣೆಯಲ್ಲಿ ಜನರಿಗೆ ಹತ್ತಿರವಾಗಿರುವ ಜನರೇ ಆಯ್ಕೆ ಮಾಡಿದ ಪ್ರತಿನಿಧಿಗಳ ಪಾತ್ರ ಗಣನೀಯವಾಗಿದೆ. ಹೀಗಾಗಿ ರಾಜ್ಯ ಸರಕಾರವು ತನ್ನ ದುರಾಲೋಚನೆ ಬಿಟ್ಟು ದೂರಾಲೋಚನೆ ಮಾಡುವ ಅಗತ್ಯತೆ ಈಗ ಇದೆ.

ಒಂದು ಆಶಾವಾದ: ಪ್ರಜಾತಂತ್ರ ಹಾಗೂ ವಿಕೇಂದ್ರೀಕೃತ ವ್ಯವಸ್ಥೆಗೆ ಬದ್ಧತೆಯಿರುವ ಮತ್ತು ಸ್ಥಳೀಯ ಸರ್ಕಾರದಲ್ಲಿ ನಂಬಿಕೆ ಇರುವವರು ಸರಕಾರ ಹಾಗೂ ರಾಜ್ಯ ಚುನಾವಣಾ ಆಯೋಗದ ಈ ನಡೆಯನ್ನು ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ಸ್ಥಳೀಯ ಸರ್ಕಾರದ ಉಳಿವಿಗಾಗಿ ರಾಜ್ಯಾದ್ಯಂತ ನಡೆಸಿದ ವಿವಿಧ ರೀತಿಯ ಹಕ್ಕೊತ್ತಾಯ ಹಾಗೂ ಪ್ರತಿಭಟನೆಗಳಿಗೂ ಮನ್ನಣೆ ಸಿಗದಿದ್ದಾಗ ಕಾನೂನಾತ್ಮಕ ಹೋರಾಟಕ್ಕೆ ಇಳಿದಿದ್ದಾರೆ. ಈಗ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇಡೀ ಗ್ರಾಮೀಣ ಕರ್ನಾಟಕದ ಭವಿಷ್ಯ ನಿಂತಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯು ಕಾನೂನಿನ ಚೌಕಟ್ಟಿನೊಂದಿಗೆ ಗ್ರಾಮೀಣ ಭಾಗದ ಈಗಿನ ಸಂದಿಗ್ಧತೆ ಹಾಗೂ ನೈಜ ಅಗತ್ಯತೆಯ ಆಧಾರದಲ್ಲಿ ಗ್ರಾಮ ಸಭೆಯ ಅಧಿಕಾರವನ್ನು ಎತ್ತಿ ಹಿಡಿಯುವಂತ ತೀರ್ಪು ನೀಡಿ ನ್ಯಾಯಾಂಗದ ಮೇಲಿನ ಜನರ ಭರವಸೆಯನ್ನು ಹುಸಿಗೊಳಿಸದೆ ಇನ್ನೂ ಗಟ್ಟಿಗೊಳಿಸುತ್ತದೆ ಎಂಬುದೇ ಈಗಿರುವ ಆಶಾವಾದ.

ಸುರೇಶ್ ಎಸ್. ಜಿ. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಹಾಗೂ ದಿ ಕನ್ಸರ್ನ್ಡ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಕಾರ್ಯಕರ್ತರು
ಸುರೇಶ್ ಎಸ್. ಜಿ.                                        ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಹಾಗೂ ದಿ ಕನ್ಸರ್ನ್ಡ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಕಾರ್ಯಕರ್ತರು

 

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!