spot_img
Tuesday, April 14, 2026
spot_img

ಮನುಷ್ಯರನ್ನು ಜಾತಿ-ಧರ್ಮದ ಆಧಾರದಲ್ಲಿ ದ್ವೇಷಿಸುವುದು ಅಮಾನವೀಯ : ಮುಖ್ಯಮಂತ್ರಿ ಸಿದ್ದರಾಮಯ್ಯ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : “ಸಬ್ ಕಾ ಸಾಥ್-ಸಬ್ ಕಾ ವಿಕಾಸ್” ಎಂದು ಬಾಯಲ್ಲಿ ಹೇಳಿ ಆಚರಣೆಯಲ್ಲಿ ಧರ್ಮ ತಾರತಮ್ಯ ಮಾಡುವುದು ಇವತ್ತು ನಡೆಯುತ್ತಿದೆ. ಆದರೆ ಬಸವಾದಿ ಶರಣರು ಜಾತಿ-ಧರ್ಮ ಆಧಾರದಲ್ಲಿ ಮನುಷ್ಯರನ್ನು ವಿಭಜಿಸಲಿಲ್ಲ. ಮನುಷ್ಯರನ್ನು ಜಾತಿ-ಧರ್ಮದ ಆಧಾರದಲ್ಲಿ ದ್ವೇಷಿಸುವುದು ಅಮಾನವೀಯವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು, ರವೀಂದ್ರ ಕಲಾಕ್ಷೇತ್ರದಲ್ಲಿ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಸಿದ್ದರಾಮೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವೈಚಾರಿಕ – ವೈಜ್ಞಾನಿಕ ಸಮ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರು ಹೋರಾಡಿದ್ದರು. ಶರಣರು ನುಡಿದಂತೆ ನಡೆದರು. ಹೇಳಿದಂತೆಯೇ ತಮ್ಮ ಬದುಕನ್ನು ಆಚರಿಸಿದರು. ಮೌಡ್ಯ, ಕಂದಾಚಾರ, ಕರ್ಮ ಸಿದ್ಧಾಂತವನ್ನು ಒಪ್ಪಬಾರದು. ಅವಕಾಶ ಸಿಕ್ಕವರು ಮುಂದೆ ಬಂದರು, ಅವಕಾಶ ಇಲ್ಲದವರು ಹಿಂದುಳಿದರು. ಹಣೆಬರಹ ಎನ್ನುವುದೆಲ್ಲಾ ಬೋಗಸ್. ನಮ್ಮ ಊರಿನ ಶಾನುಬೋಗರು ನಮ್ಮ ಜಾತಿಯವರು ಕಾನೂನು ಓದಬಾರದು ಎಂದು ನನ್ನ ಅಪ್ಪನಿಗೆ ಒಪ್ಪಿಸಿಬಿಟ್ಟಿದ್ದರು. ಆದರೆ ನಾನು ಹಠ ತೊಟ್ಟು ಕಾನೂನು ಪದವಿ ಪಡೆದೆ. ಈಗ ಮುಖ್ಯಮಂತ್ರಿ ಕೂಡ ಆಗಿದ್ದೇನೆ. ಶಾನುಬೋಗರ ಮಾತು ಕೇಳಿದ್ದರೆ ನಾನು ಕುರಿ ಕಾಯ್ಕೊಂಡು ಇರಬೇಕಾಗಿತ್ತು. ಇಂಥವರು ನಿಮ್ಮ ದಾರಿ ತಪ್ಪಿಸಿತ್ತಾರೆ. ಈ ಬಗ್ಗೆ ಎಚ್ಚರದಿಂದಿರಿ ಎಂದು ಅವರ ಅಭಿಪ್ರಾಯ ಪಟ್ಟಿದ್ದಾರೆ.

ಕಲ್ಲು ಒಡೆಯೋರು ನೀವು, ಗುಡಿ ಕಟ್ಟೋರು ನೀವು, ವಿಗ್ರಹ ಹೊರುವವರು ನೀವು. ಆದರೆ, ದೇವಸ್ಥಾನ ಪ್ರವೇಶಕ್ಕೆ ಮಾತ್ರ ಭೋವಿಗಳಿಗೆ ಅವಕಾಶ ಇಲ್ಲ ಎಂದರೆ ಅದನ್ನು ಒಪ್ಪಿಕೊಳ್ಳಬೇಕಾ? ಇದಕ್ಕೆ ನಾರಾಯಣಗುರುಗಳು ಹೇಳಿದ ಮಾರ್ಗ ಅನುಸರಿಸಬೇಕು. ನಿಮ್ಮನ್ನು ಒಳಗೆ ಸೇರಿಸದ ದೇವಸ್ಥಾನಗಳನ್ನು ನೀವೇ ತಿರಸ್ಕರಿಸಿ ನಿಮ್ಮದೇ ದೇವಸ್ಥಾನ ನಿರ್ಮಿಸಿಕೊಳ್ಳಿ.  ಯಾವ ಕೆಲಸವೂ ಮೇಲು ಅಲ್ಲ, ಕೀಳೂ ಅಲ್ಲ. ಈ ಕಾರಣಕ್ಕೇ ಕಾಯಕವೇ ಕೈಲಾಸ ಎಂದು ಶರಣರು ಹೇಳಿದ್ದಾರೆ. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ವಿತರಣೆ. ಎಲ್ಲರೂ ಉತ್ಪಾದನೆಯಲ್ಲಿ ಭಾಗವಹಿಸಬೇಕು, ಅದನ್ನು ಎಲ್ಲರಿಗೂ ವಿತರಿಸಬೇಕು ಎನ್ನುವುದು ಬಸವಾದಿ ಶರಣರ ಆಶಯವಾಗಿತ್ತು. ನಮ್ಮ ಸರಕಾರದ ಕಾರ್ಯಕ್ರಮಗಳೂ ಈ ಆಶಯಕ್ಕೆ ಪೂರಕವಾಗಿವೆ ಎಂದರು.

ಸಾಮಾಜಿಕ, ಆರ್ಥಿಕ ಚಟುವಟಿಕೆಗಳು ಎಲ್ಲಾ ಸಮುದಾಯಕ್ಕೆ ಸಿಕ್ಕರೆ ಮಾತ್ರ ಜಾತಿಗ್ರಸ್ಥ ಸಮಾಜ ಚಲನಶೀಲವಾಗುತ್ತದೆ. ಇಲ್ಲವಾದರೆ ಸ್ಥಗಿತಗೊಂಡ ಸಮಾಜ ಆಗುತ್ತದೆ. ಭೋವಿ ಸಮುದಾಯದ ಬೇಡಿಕೆಯಂತೆ ಅಧ್ಯಯನ ಪೀಠ ಸ್ಥಾಪನೆ ಸೇರಿ ನನ್ನ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್ ತಂಗಡಗಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಶಾಸಕರಾದ ಎಂ.ಚಂದ್ರಪ್ಪ, ರಾಘವೇಂದ್ರ ಹಿಟ್ನಾಳ್ ಸೇರಿ ಹಲವು ಗಣ್ಯರು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!