spot_img
Saturday, October 31, 2026
spot_img

ಬಡಗುತಿಟ್ಟಿನ ಹಿರಿಯ ಭಾಗವತ ಹಾಗೂ ಯಕ್ಷಗುರು ಹೇರಂಜಾಲು ಗೋಪಾಲ ಗಾಣಿಗರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕುಂದಾಪುರ: ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ನಾಲ್ಕೂವರೆ ದಶಕಗಳಿಂದ ನಿರಂತರವಾಗಿ ಕಲಾಸೇವೆ ಸಲ್ಲಿಸುತ್ತಾ, ಭಾಗವತಿಕೆ, ಗುರುಸೇವೆ ಹಾಗೂ ಯಕ್ಷಗಾನ ಸಾಹಿತ್ಯದ ಸಂರಕ್ಷಣೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಹಿರಿಯ ಭಾಗವತ ಹಾಗೂ ಯಕ್ಷಗುರು ಹೇರಂಜಾಲು ಗೋಪಾಲ ಗಾಣಿಗ ಅವರಿಗೆ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಉಡುಪಿ ಜಿಲ್ಲೆಯ ಹೇರಂಜಾಲು ಗ್ರಾಮದವರಾದ ಗೋಪಾಲ ಗಾಣಿಗ ಅವರು ತಮ್ಮ ಸುಮಧುರ ಕಂಠಸಿರಿ, ರಾಗತಾಳಗಳ ಮೇಲಿನ ಹಿಡಿತ, ಲಯಬದ್ಧ ಭಾಗವತಿಕೆ ಹಾಗೂ ಸಂಪ್ರದಾಯಬದ್ಧ ಹಾಡುಗಾರಿಕೆಯ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಲಯಬ್ರಹ್ಮ, ಸಂಪ್ರದಾಯ ಭಾಗವತ ಹಾಗೂ ಯಕ್ಷಗಾನದ ದಶಾವತಾರಿ ಎಂದೇ ಕಲಾಭಿಮಾನಿಗಳಿಂದ ಗುರುತಿಸಿಕೊಂಡಿದ್ದಾರೆ.
೧೯೬೩ರಲ್ಲಿ ಕುಂದಾಪುರ ತಾಲೂಕಿನ ನಾಗೂರಿನಲ್ಲಿ ಜನಿಸಿದ ಯಕ್ಷಗಾನದ ವಾತಾವರಣದಲ್ಲೇ ಬೆಳೆದರು. ತಂದೆ ರಾಜ್ಯ ಪ್ರಶಸ್ತಿ ಪುರಸ್ಕೃತ ಹೆರಂಜಾಲು ವೆಂಕಟರಮಣ ಗಾಣಿಗರು ಉಡುಪಿ ಯಕ್ಷಗಾನ ಕೇಂದ್ರದ ಗುರುಗಳಾಗಿ, ಕಲಾವಿದರಾಗಿ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿದವರು. ಹೆರೆಂಜಾಲು ಕುಟುಂಬಕ್ಕೆ ಸುಮಾರು ನಾಲ್ಕು ಶತಮಾನಗಳ ಯಕ್ಷಗಾನದ ನಂಟಿದೆ. ಹೀಗಾಗಿ ಗೋಪಾಲ ಗಾಣಿಗರನ್ನು ಯಕ್ಷರಂಗ ಬೇಗನೆ ಸೆಳೆದಿತ್ತು.

ಬಾಲ್ಯದಲ್ಲಿಯೇ ತಂದೆಯಿಂದ ನೃತ್ಯಾಭ್ಯಾಸ ಕಲಿತು ಅಭಿಮನ್ಯು, ಪ್ರಹ್ಲಾದ, ಕೃಷ್ಣ, ವೃಷಸೇನ ಮೊದಲಾದ ಬಾಲಪಾತ್ರಗಳಲ್ಲಿ ಕಾಣಿಸಿಕೊಂಡು ಹಂತ-ಹಂತವಾಗಿ ಬೆಳೆದರು. ಮುಂದೆ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿ ನೀಲಾವರ ರಾಮಕೃಷ್ಣಯ್ಯರಿಂದ ಭಾಗವತಿಕೆ, ಮಹಾಬಲ ಕಾರಂತರಿಂದ ಮದ್ದಳೆ, ತಂದೆಯಿಂದ ನೃತ್ಯಾಭ್ಯಾಸ ಪಡೆದು ಬಹುಮುಖ ಕಲಾವಿದರಾಗಿ ರೂಪುಗೊಂಡರು. ಅನಂತರ ಮಾರಣಕಟ್ಟೆ, ಅಮೃತೇಶ್ವರೀ, ಮಂದಾರ್ತಿ, ಸಾಲಿಗ್ರಾಮ, ಕಮಲಶಿಲೆ, ಸಿರಸಿ, ಸೌಕೂರು ಹೀಗೆ ಹಲವು ಪ್ರಸಿದ್ಧ ಮೇಳಗಳಲ್ಲಿ ೪೫ವರ್ಷಗಳ ಕಲಾಯಾನವನ್ನು ನಡೆಸಿದ್ದಾರೆ. ವಿಶೇಷವಾಗಿ ಸಾಲಿಗ್ರಾಮ ಮೇಳದಲ್ಲಿ ಇವರ ಭಾಗವತಿಕೆಯ ಈಶ್ವರಿ ಪರಮೇಶ್ವರಿ, ಶಂಕರಿ ಶಿವಶಂಕರಿ, ರಂಗನಾಯಕಿ ಮೊದಲಾದ ಪ್ರಸಂಗಗಳು ಹೊಸ ಮನ್ವಂತರವನ್ನೇ ಸೃಷ್ಟಿಸಿದ್ದವು. ಪ್ರಸಂಗದ ಆಶಯಕ್ಕೆ ತಕ್ಕ ರಂಗತಂತ್ರ. ರಾಮಾಯಣದ ಪಾರ್ಥಿಸುಬ್ಬ ವಿರಚಿತ ಪ್ರಸಂಗಗಳು, ಮಹಾಭಾರತದ ಗಂಭೀರ ಕಥಾವಸ್ತುಗಳು, ಭಾಗವತದ ಭಕ್ತಿಪ್ರಧಾನ ಸಂದರ್ಭಗಳು ಪ್ರತಿಯೊಂದನ್ನು ಸಮರ್ಥವಾಗಿ ನಿರೂಪಿಸುವ ಕಲೆ ಇವರಲ್ಲಿದೆ. ಯಕ್ಷಗಾನ ರಂಗದ ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳಲ್ಲಿ ಹೆರೆಂಜಾಲು ಶೈಲಿ ಎನ್ನುವ ಹೊಸದೊಂದು ಶೈಲಿಯನ್ನೇ ಭಾಗವತಿಕೆ ಕ್ಷೇತ್ರದಲ್ಲಿ ಇವರು ರೂಪಿಸಿದ್ದಾರೆ.

ಗುರುವಾಗಿ, ಭಾಗವತರಾಗಿ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಇವರ ಕೊಡುಗೆ ಇದೆ. ಖರದೂಷಣ ಕಾಳಗ’, ’ಚೂಡಾಮಣಿ’, ’ವಾಲಿ ಸುಗ್ರೀವ’ ಹಾಗೂ ’ಇಂದ್ರಜಿತು’ ಇವರ ಪ್ರಕಟಿತ ಗ್ರಂಥಗಳಾಗಿವೆ. ಮುದ್ದಣ ಕವಿಯ ’ರತ್ನಾವತಿ ಕಲ್ಯಾಣ’ ಸೇರಿದಂತೆ ಇತರ ಪ್ರಸಂಗಗಳ ಅರ್ಥಸಹಿತ ಗ್ರಂಥಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿಯೂ ನಿರತರಾಗಿದ್ದಾರೆ. ಈ ಮೂಲಕ ಯಕ್ಷಗಾನದ ಸಾಹಿತ್ಯಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ವದ ಪ್ರಯತ್ನ ನಡೆಸುತ್ತಿದ್ದಾರೆ.

ಯಕ್ಷಗಾನ ಕಲೆಯು ಮುಂದಿನ ಪೀಳಿಗೆಗೂ ನಿರಂತರವಾಗಿ ಹರಿದುಹೋಗಬೇಕು ಎಂಬ ಆಶಯದಿಂದ ಹೇರಂಜಾಲು ಯಕ್ಷಗಾನ ಪ್ರತಿಷ್ಠಾನ (ರಿ.) ಮೂಲಕ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. ಭಾಗವತಿಕೆ, ತಾಳ, ಲಯ, ಸಾಹಿತ್ಯ ಸೇರಿದಂತೆ ಯಕ್ಷಗಾನದ ವಿವಿಧ ಆಯಾಮಗಳಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾ ಹೊಸ ಪ್ರತಿಭೆಗಳನ್ನು ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಲ್ಲಿಯೂ ಯಕ್ಷಗಾನ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಸುದೀರ್ಘ ಕಲಾಸೇವೆ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಈಗಾಗಲೇ ಜಾನಪದ ಲೋಕ ಪ್ರಶಸ್ತಿ, ೨೦೨೫ನೇ ಸಾಲಿನ ಯಕ್ಷಧ್ರುವ ಕಲಾ ಗೌರವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಇದೀಗ ಕರ್ನಾಟಕ ಸರಕಾರ ಕೊಡಮಾಡುವ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!