spot_img
Friday, April 24, 2026
spot_img

ಮಕ್ಕಳ ಸಮ್ಮುಖದಲ್ಲಿ ಹೆತ್ತವರು ಆಡಿ ನಲಿದರು… ವಂಡ್ಸೆ ಶಾಲೆಯಲ್ಲೊಂದು ವಿನೂತನ ಕಾರ್ಯಕ್ರಮ


ಕುಂದಾಪುರ: ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ, ಹಳೆ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಆಯೋಜಿಸುವುದು ಸರ್ವೇ ಸ್ವಾಭಾವಿಕ. ಆದರೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆಯಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೂ ಕ್ರೀಡಾಕೂಟವನ್ನು ಆಯೋಜಿಸುವ ಗಮನ ಸಳೆದಿದೆ.

ವಂಡ್ಸೆ ಶಾಲೆ ಸರ್ಕಾರಿ ಶಾಲೆಯಾದರೂ ಕೂಡಾ ಖಾಸಗಿ ಶಾಲೆಗೆ ಸರಿಸಮಾನವಾಗಿ ಬೆಳೆದಿದೆ. ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಸುಮಾರು 8 ವರ್ಷಗಳ ಹಿಂದೆಯೇ ಆಂಗ್ಲಮಾಧ್ಯಮ ವಿಭಾಗ, ಪೂರ್ವಪ್ರಾಥಮಿಕ ಶಿಕ್ಷಣ ವಿಭಾಗವನ್ನು ಆರಂಭಿಸಿ ಗಮನ ಸಳೆದಿದೆ. ಪ್ರಸ್ತುತ ಎಲ್.ಕೆಜಿಯಿಂದ 7ನೇ ತರಗತಿಯ ತನಕ ಕನ್ನಡ ಹಾಗೂ ಆಂಗ್ಲಮಾಧ್ಯಮ ವಿಭಾಗದಲ್ಲಿ 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಂಡ್ಸೆ ಗ್ರಾಮ ಮಾತ್ರವಲ್ಲದೆ ಸುತ್ತ ಹತ್ತಾರು ಕಿಮೀ ವ್ಯಾಪ್ತಿಯ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪಾಠ-ಪಾಠೇತರ ಚಟುವಟಿಕೆಗಳಲ್ಲಿ ಹೊಸತನಕ್ಕೆ ಈ ಶಾಲೆ ತೆರೆದುಕೊಂಡಿದೆ. ಪ್ರಯೋಗಶೀಲತೆಗಳಿಂದ ಗಮನ ಸಳೆದಿದೆ. ಗುಣಾತ್ಮಕ ಶಿಕ್ಷಣಕ್ರಮದಿಂದ ಪೋಷಕರ ಮನಗೆದ್ದಿದೆ. ಇದಕ್ಕೆಲ್ಲ ಪೂರಕವಾಗಿ ಡಿ.28ರಂದು ನಡೆಯುವ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಮಕ್ಕಳ ಹೆತ್ತವರಿಗೂ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿತ್ತು. ಹೆತ್ತವರಿಗೂ ಅವಕಾಶ ಕಲ್ಪಿಸಬೇಕು, ತಮ್ಮ ಮಕ್ಕಳ ಮುಂದೆ ಹೆತ್ತವರು ಆಟೋಟಗಳಲ್ಲಿ ಪಾಲ್ಗೊಳ್ಳಬೇಕು ಎನ್ನುವ ನೆಲೆಯಲ್ಲಿ ಶನಿವಾರ ನಡೆದ ಹೆತ್ತವರ ಕ್ರೀಡಾಕೂಟ ಯಶಸ್ವಿಯಾಗಿ ಸಂಪನ್ನಗೊಂಡಿತು.

ಮಕ್ಕಳ ಕ್ರೀಡಾ ಚಟುವಟಿಕೆಗಳನ್ನು ಹೆತ್ತವರು ಪ್ರೋತ್ಸಾಹಿಸಿ ಹುರಿದುಂಬಿಸುವುದು ಸಹಜ. ಆದರೆ ಇಲ್ಲಿ ತಂದೆ-ತಾಯಿಯಂದಿರು ವಿವಿಧ ಆಟೋಟಗಳಲ್ಲಿ ಪಾಲ್ಗೊಂಡರೆ ಮಕ್ಕಳು ಹುರಿದುಂಬಿಸುತ್ತಿದ್ದರು. ಹೆತ್ತವರಿಗಿಂತ ಮಕ್ಕಳ ಉತ್ಸಾಹ, ತಂದೆತಾಯಿಯನ್ನು ಹುರಿದುಂಬಿಸುವುದು ಗಮನ ಸಳೆಯಿತು. ವೃತ್ತಿ, ಸಾಂಸಾರಿಕ ಜಂಜಡದ ನಡುವೆಯೂ ಒಂದಿಷ್ಟು ವಿರಾಮ ತಗೆದುಕೊಂಡು ಆಟೋಟದಲ್ಲಿ ಪಾಲ್ಗೊಂಡರು. ಕೆಲವರು ಶಾಲಾಜೀವನದ ಬಳಿಕ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಇದೇ ಮೊದಲು. ವಂಡ್ಸೆ ಶಾಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಂಥಹದ್ದೊಂದು ಪರಿಕಲ್ಪನೆ ಅನಾವರಣಗೊಂಡು ಮೊದಲ ಯಶಸ್ಸು ಮುಂದಿನ ದಿನಗಳಲ್ಲಿ ನಿರಂತರತೆಗೆ ಹುಮ್ಮಸ್ಸು ನೀಡಿತು.

ಹೆತ್ತವರಿಗೆ ನೂರು ಮೀಟರ್ ಓಟ, ಗುಂಡೆಸೆತ, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಮೊದಲಾದ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಹೆತ್ತವರ ಸಕ್ರಿಯ ಭಾಗವಹಿಸುವಿಕೆಯಿಂದ ಉತ್ತೇಜಿತರಾದ ಶಿಕ್ಷಕ ವೃಂದ ಹಾಗೂ ಎಸ್.ಡಿ.ಎಂ.ಸಿ ಮುಂದಿನ ಸಾಲಿನಿಂದ ಇನ್ನಷ್ಟು ಸ್ಪರ್ಧೆಗಳನ್ನು ಇರಿಸಿ, ಪ್ರತಿಯೋರ್ವ ಹೆತ್ತವರನ್ನು ಭಾಗವಹಿಸುವಂತೆ ಮಾಡುವ ಹುಮ್ಮಸ್ಸು ತಾಳಿತು.

ಶಾಲಾ ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಣೆಗೆ ಹೆಚ್ಚು ಸಮಯ ತಗಲುತ್ತದೆ. ಇದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಬಂದವರಿಗೆ ಬೇಸರವಾಗುತ್ತದೆ. ಹಾಗಾಗಿ ವಂಡ್ಸೆ ಶಾಲೆಯಲ್ಲಿ ವಿದ್ಯಾರ್ಥಿಗಳ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಪ್ರತಿಭೋತ್ಸವದ ದಿನದಂದೇ ಬಹುಮಾನ ವಿತರಣೆ ಮಾಡಲಾಗುತ್ತದೆ. ಅದೇ ಮಾದರಿಯಲ್ಲಿ ಹೆತ್ತವರ ಕ್ರೀಡಾಕೂಟದ ಬಹುಮಾನ ವಿತರಣೆಯನ್ನು ಕ್ರೀಡಾಕೂಟದ ವಿಜಯ ವೇದಿಕೆಯಲ್ಲಿ ನೀಡಲಾಯಿತು. ಹೆತ್ತವರ ಕ್ರೀಡಾಕೂಟದಲ್ಲಿಯೂ ವಿಜೇತರಾದವರು ವಿಜಯ ವೇದಿಕೆಯಲ್ಲಿ ತಮ್ಮ ಮಕ್ಕಳ ಜೊತೆಯಲ್ಲಿ ಬಹುಮಾನ ಸ್ವೀಕರಿಸಿದರು.
ಸ್ಪರ್ಧಾ ವಿಜೇತರಿಗೆ ಕಿರೀಟ, ಪದಕ, ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿಜೇತರ ಮಕ್ಕಳು ಕೂಡಾ ವಿಜಯ ವೇದಿಕೆಯಲ್ಲಿ ಹಾಜರಿದ್ದು ಬಹುಮಾನ ಸ್ವೀಕರಿಸಿದ್ದು ವಿಶೇಷ.

ಬಹುಮಾನ ವಿತರಣೆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಸದಾಶಿವ ಕೆಂಚನೂರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾಜು, ಎಸ್,ಡಿ.ಎಂ.ಸಿ ಸದಸ್ಯರು, ಶಿಕ್ಷಕವೃಂದದವರು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್ ಹಾಗೂ ಶಿಕ್ಷಕ ವೃಂದದವರು ಆಟೋಟ ಸ್ಪರ್ಧೆಯ ಮೇಲುಸ್ತುವಾರಿ ವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿನಲ್ಲಿ ಶಿಕ್ಷಕರು ಪೂರ್ಣ ಪರಿಶ್ರಮ, ಎಸ್.ಡಿ.ಎಂ.ಸಿ ಸಹಕಾರ, ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್‌ನ ಮಾರ್ಗದರ್ಶನವಿತ್ತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!