spot_img
Wednesday, January 22, 2025
spot_img

ಜಯಪ್ರಕಾಶ್ ಶೆಟ್ಟಿಯವರ ವಿಮರ್ಶಾ ಕೃತಿ ‘ಪಂಪನೋದು’ ಬಿಡುಗಡೆ

ಉಡುಪಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಕನ್ನಡ ವಿಭಾಗ ಹಾಗೂ ಐಕ್ಯೂ‌ಎಸಿ ಘಟಕಗಳ ಸಹಯೋಗದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್‍ಯಕ್ರಮದಲ್ಲಿ ಚಳುವಳಿಗಳ ಸಂಗಾತಿ ಎಂದೇ ನಾಡಿಗೆ ಪರಿಚಿತರಾದ ೨೦೨೩ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ, ನಾಟಕಕಾರ, ಸಂಸ್ಕೃತಿ ಚಿಂತಕ ಲಕ್ಷ್ಮೀಪತಿ ಕೋಲಾರ ಅವರು ಜಯಪ್ರಕಾಶ್ ಶೆಟ್ಟಿಯವರ ಇತ್ತೀಚೆಗಿನ ವಿಮರ್ಶಾ ಕೃತಿ ಪಂಪನೋದುವನ್ನು ಬಿಡುಗಡೆಗೊಳಿಸಿದರು.

ಕೃತಿಯ ಕುರಿತು ಮಾತನಾಡಿದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಸಂಸ್ಥೆ ಮೈಸೂರು ಇದರ ನಿಕಟಪೂರ್ವ ಯೋಜನಾ ನಿರ್ದೇಶಕ ಪ್ರೊ. ಶಿವರಾಮ ಶೆಟ್ಟಿಯವರು, ಪಠ್ಯ ಹಾಗೂ ಪಠ್ಯದ ಓದುಗಳನ್ನು ಅನುಲಕ್ಷಿಸಿಕೊಂಡ ಓದಿನ ಓದಾಗಿರುವ ಪಂಪನೋದು ಕನ್ನಡಕ್ಕೊಂದು ಭಿನ್ನ ಮಾದರಿಯ ಕೃತಿಯಷ್ಟೇ ಅಲ್ಲ, ಪಂಪನನ್ನು ಈಗಾಗಲೇ ಓದಿರುವ ಮಾದರಿಗಳ ಜೊತೆಗೆ ಓದಬಹುದಾದ ಸಾಧ್ಯತೆಗಳನ್ನೂ ಮುಂದಿಟ್ಟು ಸೈದ್ಧಾಂತಿಕ ಚರ್ಚೆಗಿಳಿಯುವ ಮೂಲಕ ಓದುಗಲೋಕಕ್ಕೆ ಈವರೆಗೆ ದೊರೆತ ಪಂಪನ ಆಕೃತಿಗಳ ಆಳದಲ್ಲಿರುವ ಸಾಂಸ್ಕೃತಿಕ ರಾಜಕಾರಣವನ್ನು ಪರಿಚಯಿಸುವ ಕೃತಿಯೂ ಆಗಿದೆ ಎಂದರು. ಜೊತೆಗೆ ಪ್ರಾಚೀನ ಎನ್ನಲಾಗುವ ಪಠ್ಯವನ್ನು ಸಮಕಾಲೀನಗೊಳಿಸಿಕೊಂಡು ಓದುವ ಮೂಲಕ ಪಡೆಯಬಹುದಾದ ಇರವಿನ ಅರಿವಿಗೆ ಸಾಕ್ಷಿಯಾಗುವ ಕೃತಿಯೂ ಆಗಿದೆ ಎಂದರು.

ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಸುರೇಶ್‌ರೈ ಕೆ. ವಹಿಸಿದ್ದರು. ತೆಂಕನಿಡಿಯೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕಿ ರತ್ನಮಾಲಾ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥರು, ಪಂಪನೋದುವಿನ ಲೇಖಕರೂ ಆದ ಪ್ರೊ.ಜಯಪ್ರಕಾಶ್ ಶೆಟ್ಟಿಯವರು ಪುಸ್ತಕದ ಕುರಿತ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಶರಿತಾ ವಂದಿಸಿದ ಈ ಕಾರ್‍ಯಕ್ರಮವನ್ನು ಕನ್ನಡ ಸಹಪ್ರಾಧ್ಯಾಪಕ ರಾಧಾಕೃಷ್ಣ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!