spot_img
Tuesday, April 28, 2026
spot_img

ಮಾಧ್ಯಮಗಳ ಗಮನ ಬೇರೆಡೆ ಸೆಳೆಯಲು ಸಿಎಂ ಬದಲಾವಣೆಯ ವಿಚಾರ ಸ್ವತಃ ಕಾಂಗ್ರೆಸ್‌ನವರೇ ಮುನ್ನೆಲೆಗೆ ತಂದಿದ್ದಾರೆ : ಬಿಜೆಪಿ  

ಜನಪ್ರತಿನಿಧಿ ವಾರ್ತೆ : ರಾಜ್ಯ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಸರಣಿ ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ವೈಫಲ್ಯದ ಬಗ್ಗೆ ಆಕ್ರೋಶ ಹೊರ ಹಾಕಿದೆ.

ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವೈಫಲ್ಯಗಳಿಗೆಲ್ಲಾ ಕೇಂದ್ರ ಸರ್ಕಾರವನ್ನು ಬೊಟ್ಟು ಮಾಡುವ ತಮ್ಮ ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ಬರ ಪರಿಸ್ಥಿತಿ ವಿವರಣೆಗೆ ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷಗಳ ನಿಯೋಗ ಕಟ್ಟಿಕೊಂಡು ಹೋಗುವ ಮಾತುಗಳನ್ನಾಡಲು ಶುರು ಮಾಡಿದ್ದಾರೆಂದು ಜರೆದಿದೆ.  

ಸರ್ವಪಕ್ಷಗಳ ನಿಯೋಗಕ್ಕಿಂತಲೂ ಮೊದಲು, ನೀವು ಕೊಡಿಸಿದ ಹೊಸ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿರುವ ನಿಮ್ಮ ಶಾಸಕರಿಗೆ ಎಸಿ ಕಾರಿನಿಂದ ಕೆಳಗಿಳಿದು ಬಿಸಿಲು ಹೇಗಿದೆ ಎಂದಾದರೂ ನೋಡಲು ಹೇಳಿ.

ಕರ್ನಾಟಕ ಸರ್ಕಾರದ ದುರಾಡಳಿತದಿಂದ ಕಾನೂನು ಸುವ್ಯವಸ್ಥೆ ಈಗಾಗಲೇ ನಗರಗಳಲ್ಲಿ ಸಂಪೂರ್ಣ ಹದಗೆಟ್ಟಿದೆ. ಬರದ ಬೇಗೆಯಿಂದಾಗಿ ಹಳ್ಳಿಗಳಲ್ಲೂ ಕಳ್ಳತನ-ಸುಲಿಗೆ ನಡೆಯುವ ಮೊದಲು ಎಚ್ಚೆತ್ತುಕೊಂಡು ನಿಮ್ಮ ಜವಾಬ್ದಾರಿ ನಿರ್ವಹಿಸಿ. ಮುಂದಿನ ಮುಂಗಾರು ಚುರುಕಾಗುವವರೆಗಾದರೂ ನಿಮ್ಮ ಕಲೆಕ್ಷನ್‌ ವ್ಯವಹಾರಕ್ಕೆ ಬ್ರೇಕ್‌ ಹಾಕಿ ಎಂಬುದು ನಮ್ಮ ಕಳಕಳಿಯ ಕೋರಿಕೆ ಎಂದು ಬರೆದುಕೊಂಡಿದೆ.  

ಇನ್ನು, ಬರಗಾಲ ಪರಿಸ್ಥಿತಿಯಿಂದ ಮಾಧ್ಯಮಗಳ ಗಮನವನ್ನು ಬೇರೆಡೆ ಸೆಳೆಯಲು, ಎರಡು ವರ್ಷಗಳ ನಂತರ ನಡೆಯಲಿರುವ ಸಿಎಂ ಬದಲಾವಣೆಯ ವಿಚಾರವನ್ನು ಸ್ವತಃ ಕಾಂಗ್ರೆಸ್‌ ನಾಯಕರೇ ಮುನ್ನೆಲೆಗೆ ತಂದಿದ್ದಾರೆ.

ವರ್ಗಾವಣೆ ಹಾಗೂ ಕಲೆಕ್ಷನ್‌ ಹಂಚಿಕೆಯಲ್ಲಿ ಗೊಂದಲ ಉಂಟಾದ ಕೂಡಲೇ ಬೆಳಗಾವಿಗೆ ಸ್ವತಃ ಹೋಗಿ ಪರಿಸ್ಥಿತಿ ತಿಳಿಗೊಳಿಸುವ ಡಿ. ಕೆ. ಶಿವಕುಮಾರ್‌ ಅವರು ಇದುವರೆಗೂ ರೈತರನ್ನಾಗಲಿ, ನೇಕಾರರನ್ನಾಗಲಿ ಭೇಟಿ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಡಿನ್ನರ್‌, ಬ್ರೇಕ್‌ಫಾಸ್ಟ್‌ ಎಂದು ಟೈಂ ಪಾಸ್‌ ಮಾಡುವುದರಲ್ಲೇ ತೊಡಗಿದ್ದಾರೆ ಎಂದು ಟೀಕಿಸಿದೆ.

ಇನ್ನು, ಇಂಧನ ಸಚಿವ ಕೆ.ಜೆ ಜಾರ್ಜ್‌ ಅವರನ್ನೂ ತರಾಟೆಗೆ ತೆಗೆದುಕೊಂಡ ರಾಜ್ಯ ಬಿಜೆಪಿ, ಇಂಧನ ಇಲಾಖೆಯ ಜವಾಬ್ದಾರಿ ಹೊತ್ತಿರುವ ಕೆ. ಜೆ ಜಾರ್ಜ್‌ ರೈತರು, ನೇಕಾರರು ಮತ್ತು ಉದ್ಯಮಿಗಳ ಬದುಕನ್ನು ಮೂರಾಬಟ್ಟೆ ಮಾಡಿ ಸದ್ದಿಲ್ಲದೆ ಓಡಾಡಿಕೊಂಡಿದ್ದಾರೆ.

ಈಗಲೂ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್‌ ಅವರು ಸೇರಿದಂತೆ ರಾಜ್ಯದ ಇತರೆ ಕಾಂಗ್ರೆಸ್‌ ನಾಯಕರೆಲ್ಲಾ ಕರ್ನಾಟಕದ #ATMSarkara ಕಲೆಕ್ಷನ್‌ ಮಾಡಿದ ಹಣ ಹಂಚಲು ತೆಲಂಗಾಣದ ಕಡೆಗೆ ಓಡಿದ್ದಾರೆ ಎಂದು ವ್ಯಂಗ್ಯವಾಡಿದೆ.

ಇನ್ನು, ಕರ್ನಾಟಕದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗುತ್ತಿದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ವಿದ್ಯುತ್‌ ಅಭಾವದಿಂದ ನೇಕಾರರ ಬದುಕು ಬೀದಿಗೆ ಬಿದ್ದಿವೆ. ಕೃಷಿ ಕಾರ್ಮಿಕರು ಮಾತ್ರವಲ್ಲದೆ ಉದ್ಯಮಗಳೂ ಕರ್ನಾಟಕದಿಂದ ಗುಳೆ ಹೋಗುತ್ತಿವೆ. ಹೂಡಿಕೆ ಮಾಡಲು ಆಕರ್ಷಣೆಯ ಕೇಂದ್ರವಾಗಿದ್ದ ಬೆಂಗಳೂರು ಈಗ ತನ್ನೆಲ್ಲಾ ಹಿರಿಮೆ ಕಳೆದುಕೊಳ್ಳುತ್ತಿದೆ. 2,000 ಹೊಸ ಉದ್ಯೋಗಗಳ ನೇರ ಸೃಷ್ಟಿಗೆ ಕಾರಣವಾಗಬೇಕಿದ್ದ ಕೇಯ್ನೆಸ್‌ ಟೆಕ್ನಾಲಜಿಸ್‌ನ ₹2,800 ಕೋಟಿ ಹೂಡಿಕೆ ಹೈದರಾಬಾದ್‌ಗೆ ಹೋಗಿರುವುದು ಕಾಂಗ್ರೆಸ್ ಸರ್ಕಾರದ ಅಸಾಮರ್ಥ್ಯಕ್ಕೆ ಸಾಕ್ಷಿ.

ಇಷ್ಟೆಲ್ಲಾ ಆಗುತ್ತಿದ್ದರೂ, ತೆಲಂಗಾಣದ ಕಡೆಗೆ ಓಡುವ ಪುರುಸೊತ್ತಿರುವ ಕಾಂಗ್ರೆಸ್‌ ನಾಯಕರು ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಬರಗಾಲ ಬಂದಿರುವಾಗಲೂ ಕಾಂಗ್ರೆಸ್ ಸರ್ಕಾರ ದುಂದುವೆಚ್ಚ ಮತ್ತು ಅಧಿಕಾರದ ಮೇಲಾಟದಲ್ಲಿ ಕಾಲಹರಣ ಮಾಡುತ್ತಿದೆಯೇ ಹೊರತು ರೈತರಿಗೆ-ಜನಸಾಮಾನ್ಯರಿಗಾಗಿ ಏನನ್ನೂ ಮಾಡುತ್ತಿಲ್ಲ.

ಬರದ ಕುರಿತಂತೆ ಬಿಜೆಪಿ ರಾಜ್ಯಾದ್ಯಂತ ಪ್ರವಾಸ ಮಾಡಿ ಅಧ್ಯಯನ ಕೈಗೊಳ್ಳುತ್ತಿದೆ. ಆದರೆ ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಲು ವಿಪಕ್ಷಗಳು ಹೋಗಬೇಕಾಗಿ ಬಂದಿರುವುದು ಸಿದ್ದರಾಮಯ್ಯ ಅವರ ಸರ್ಕಾರದ ವೈಫಲ್ಯದ ಪರಿಣಾಮ.

ರಾಜ್ಯದ ರೈತರು ಬೆಳೆದ ಬೆಳೆಗೆ ನೀರು ಒದಗಿಸುವ ಬದಲು, ಸ್ಟಾಲಿನ್‌ ನಾಡಿನಲ್ಲಿ ಹೆಚ್ಚುವರಿ ಪ್ರದೇಶದಲ್ಲಿ ಬೆಳೆದ ಬೆಳಗೆ ನೀರು ಒದಗಿಸಲಾಯಿತು. ಏಕೆಂದರೆ ಕಾಂಗ್ರೆಸ್‌ ಸರ್ಕಾರಕ್ಕೆ ಕರ್ನಾಟಕದ ರೈತರ ಹಿತಕ್ಕಿಂತಲೂ ಹೆಚ್ಚಾಗಿ ಸ್ಟಾಲಿನ್‌ ಅವರ ಜತೆಗಿನ ಮೈತ್ರಿಯೇ ಅತಿಮುಖ್ಯ ಎಂದು ಕಾವೇರಿ ನದಿ ನೀರು ಹಂಚಿಕೆ ವಿಚಾರವನ್ನೂ ಕೂಡ ಪ್ರಸ್ತಾಪಿಸಿ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದೆ.

ಮಾತ್ರವಲ್ಲದೆ #CongressFailsKarnataka ಹ್ಯಾಶ್‌ ಟ್ಯಾಗ್‌ ಅಡಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನದ ಮೂಲಕ ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಸಮರ ಸಾರಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!