










ಉಡುಪಿ ಜಿಲ್ಲಾ ರೈತ ಸಂಘ ವಂಡ್ಸೆ ವಲಯ ರೈತ ಸಮಾವೇಶ, ಸಾಧಕ ರೈತರಿಗೆ ಸನ್ಮಾನ
ಕುಂದಾಪುರ, ನ.26: 2020ರಲ್ಲಿ ಖಾಸಗೀಕರಣ ವಿಧೇಯಕ ರಾಜ್ಯದಲ್ಲಿ ಅನುಷ್ಟಾನ ಕಷ್ಟ ಎನ್ನುವ ಅಭಿಪ್ರಾಯವನ್ನು ಅಂದಿನ ಸರ್ಕಾರ ವ್ಯಕ್ತಪಡಿಸಿತ್ತು. ಆದರೆ ಈ ವಿಚಾರದಲ್ಲಿ ಬಹುಸಂಖ್ಯಾ ರಾಜ್ಯಗಳ ಒಲವು ಅಂತಿಮವಾಗುತ್ತದೆ ಎನ್ನುವ ಭಯ ರೈತರಲ್ಲಿದೆ. ವಿದ್ಯುತ್ ರಾಜ್ಯ ಸರ್ಕಾರದ ಅಧೀನದಲ್ಲಿರುವುದರಿಂದ ತಮ್ಮ ಆಕ್ಷೇಪ ಸಲ್ಲಿಕೆಗೆ ಅವಕಾಶವಿದೆ. ಇಲ್ಲದಿದ್ದರೆ ವಿದ್ಯುತ್ ಖಾಸಗೀಕರಣ ಮುಂದೆ ರೈತರಿಗೆ ಖಂಡಿತಾ ಸಮಸ್ಯೆಯಾಗಲಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲಾ ರೈತ ಸಂಘ ರಿ., ಇದರ ವಂಡ್ಸೆ ವಲಯದ ವತಿಯಿಂದ ಚಿತ್ತೂರು ಸಕಲ ಕನ್‌ವೆನ್ಷನ್ ಹಾಲ್‌ನಲ್ಲಿ ನಡೆದ ವಂಡ್ಸೆ ವಲಯ ರೈತ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡೀಮ್ಡ್ ಫಾರೆಸ್ಟ್ ಸಮಸ್ಯೆ ಇವತ್ತು ಇಷ್ಟೊಂದು ಜಟಿಲವಾಗಲು ಮೂರು ಸರ್ಕಾರಗಳು ಕಾರಣ. ಈಗ ಡೀಮ್ಡ್ ಫಾರೆಸ್ಟ್‌ನಿಂದ ನಿರ್ದಿಷ್ಟ ಪ್ರದೇಶವನ್ನು ವಿನಾಯತಿಗೊಳಿಸಲಾಗಿದೆ ಎನ್ನಲಾಗುತ್ತಿದೆ. ಹಾಗಾದರೆ ತಾಲೂಕು ಕಛೇರಿಗಳಲ್ಲಿ ಇನ್ನೂ 2-3ಸಾವಿರ ಅಕ್ರಮ ಸಕ್ರಮದ ಹಕ್ಕುಪತ್ರಗಳು ಉಳಿದಿರುವುದು ಏಕೆ? ಫಲಾನುಭವಿಗಳಿಗೆ ಹಕ್ಕುಪತ್ರ ಕೊಟ್ಟಾಗಲೇ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇತ್ಯರ್ಥವಾಯಿತು ಎಂದು ಭಾವಿಸಿಕೊಳ್ಳಬಹುದು ಎಂದರು.
ವೆಂಟೆಡ್ ಡ್ಯಾಂಗಳ ನಿರ್ಮಾಣದ ಪ್ರಾರಂಭ ಹಂತದಲ್ಲಿ ರೈತರು ಎಚ್ಚರಿಕೆ ವಹಿಸಬೇಕು. ಕಾಟಾಚಾರಕ್ಕೆ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಬಾರದು. ಸರ್ಕಾರದ ಅನುದಾನದಿಂದ ನಿರ್ಮಾಣವಾಗುವ ವೆಂಟೆಡ್ ಡ್ಯಾಂಗಳು ರೈತರ ಅನುಕೂಲತೆಗೆ ಬರಬೇಕು. ತೆಂಗು ದರ ನಿಗದಿಯ ಬಗ್ಗೆ ಅನಿಶ್ಚಿತತೆ ಇದೆ. ಈ ಬಗ್ಗೆ ಸರ್ಕಾರಗಳು ಗಮನ ಹರಿಸಬೇಕು ಎಂದರು.
ಕಾಡು ಪ್ರಾಣಿಗಳಿಂದ ಬೆಳೆಹಾನಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸುವುದು ಸರಿಯಲ್ಲ. ಕಾಡು ಪ್ರಾಣಿಗಳು ರಸ್ತೆಯಲ್ಲಿ ವಾಹನಗಳಿಗೆ ಅಡ್ಡ ಬಂದು ಅಪಘಾತಕ್ಕಿಡಾದರೆ ವಾಹನ ಸವಾರರ ಮೇಲೆ ಕೇಸು ದಾಖಲಿಸುವುದು ಅಧಿಕಾರಿಗಳ ವಿಕಾರತನವಾಗಿದೆ. ಇದು ವಿವೇಚನೆಯ ವಿಚಾರವಾಗಿದೆ. ಉದ್ದೇಶಪೂರ್ವಕವಾಗಿ ಕಾಡುಪ್ರಾಣಿಗೆ ಢಿಕ್ಕಿ ಹೊಡೆದರೆ ಅದು ಬೇರೆ ವಿಚಾರ. ಆಕಸ್ಮಿಕ ಸಂಭವಿಸಿದ ಘಟನೆಗೆ ವ್ಯಕ್ತಿಯನ್ನು ಗುರಿ ಮಾಡುವುದು ಸರಿಯಲ್ಲ ಎಂದರು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ವೈಜ್ಞಾನಿಕ ಕೃಷಿ ಪದ್ದತಿ ಅಳವಡಿಕೆಯಿಂದ ಮಾತ್ರ ಇವತ್ತು ಯಶಸ್ಸು ಪಡೆಯಲು ಸಾಧ್ಯ. ತಂತ್ರಜ್ಞಾನ-ವಿಜ್ಞಾನವನ್ನು ಕೃಷಿಯಲ್ಲಿ ಬಳಕೆ ಮಾಡಬೇಕು. ಕೃಷಿಯಲ್ಲಿ ವ್ಯವಹಾರಿಕ ಚಿಂತನೆ ಬೆಳೆಸಿಕೊಂಡು ಕೃಷಿ ಸಂಶೋಧನಾ ಕೇಂದ್ರಗಳಿಂದ ಮಾಹಿತಿ ಪಡೆದುಕೊಂಡು ಕೃಷಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ನೈಲಾಡಿ ಶಿವರಾಮ ಶೆಟ್ಟಿ, ಸಾವಯಕ ಕೃಷಿಕ ಶಂಭು ಶೆಟ್ಟಿ, ಹೈನುಗಾರರಾದ ವನಜ ಅಶೋಕ್ ಶೆಟ್ಟಿ ಕಾನ್‌ಬೇರು ಹೊಸೂರು ಇವರನ್ನು ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ ಕಿಣಿ ಬೆಳ್ವೆ, ಜಿಲ್ಲಾ ಕೋಶಾಧಿಕಾರಿ ಬೋಜ ಕುಲಾಲ್ ಹೆಬ್ರಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ರೈತ ಸಂಘದ ವಿಶೇಷ ಆಹ್ವಾನಿತರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಹಾಪ್‌ಕಾಮ್ಸ್ ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ, ರೈತ ಸಂಘದ ಕಾವ್ರಾಡಿ ವಲಯ ಅಧ್ಯಕ್ಷ ಶರತ್‌ಚಂದ್ರ ಶೆಟ್ಟಿ, ಕೋಟೇಶ್ವರ ವಲಯ ಅಧ್ಯಕ್ಷ ಕೃಷ್ಣದೇವ ಕಾರಂತ, ತ್ರಾಸಿ ವಲಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಬೈಂದೂರು ವಲಯ ಅಧ್ಯಕ್ಷ ವಸಂತ ಹೆಗ್ಡೆ, ಸಿದ್ಧಾಪುರ ವಲಯ ಅಧ್ಯಕ್ಷ ಸದಾಶಿವ ಶೆಟ್ಟಿ ಶಂಕರನಾರಾಯಣ, ಹಾಲಾಡಿ ವಲಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮರಾತ್ತೂರು, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ಕುಂದನಾಡು ರೈತ ಕಂಪೆನಿ ಅಧ್ಯಕ್ಷ ಸಂತೋಷ ಶೆಟ್ಟಿ ಬಲಾಡಿ, ನ್ಯಾಯವಾದಿ ಉಮೇಶ ಶೆಟ್ಟಿ ಶಾನ್ಕಟ್ಟು, ನಾರಾಯಣ ನಾಯಕ್ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ರೈತ ಸಂಘದ ವಲಯ, ಮಂಡಲ, ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸಂದೇಶ ಶೆಟ್ಟಿ ಅಡಿಕೆಕೊಡ್ಲು ಪದಾಧಿಕಾರಿಗಳ ಪಟ್ಟಿ ವಾಚಿಸಿದರು.
ಡೀಮ್ಡ್ ಫಾರೆಸ್ಟ್, ಕಾಡುಪ್ರಾಣಿಗಳ ಹಾವಳಿ-ಕೃಷಿ ನಾಶ-ಸರಕಾರದಿಂದ ಪರಿಹಾರ ನೀಡುವಲ್ಲಿ ವಿಳಂಬ, ವಿದ್ಯುತ್ ಇಲಾಖೆಯ ಖಾಸಗೀಕರಣ, ವಿದ್ಯುತ್ ಬಿಲ್ಲಿನಲ್ಲಿ ಸ್ವೇಚ್ಛಾಚಾರ, ಅಡಿಕೆ ಆಮದು-ಅಡಿಕೆ ಬೆಲೆ ಕುಸಿತದ ಭೀತಿ, ತೆಂಗಿನ ಬೆಲೆ ಕುಸಿತ-ಬೆಂಬಲ ಬೆಲೆಗೆ ಆಗ್ರಹ, ಬೆಂಬಲ ಬೆಲೆ-ಭತ್ತ ಖರೀದಿ ವಿಳಂಬ, ದರ ನಿಯಂತ್ರಣವಿಲ್ಲದ ಯಾಂತ್ರೀಕೃತ ಕೃಷಿ, ನೀರು ನಿಲ್ಲದ ಕಿಂಡಿ ಅಣೆಕಟ್ಟುಗಳು, ಅಕ್ರಮ ಸಕ್ರಮ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಡಾ.ಅತುಲ್ ಅತುಲ್ ಕುಮಾರ್ ಶೆಟ್ಟಿ, ಸೀತಾರಾಮ ಗಾಣಿಗ, ಸಂಪಿಗೇಡಿ ಸಂಜೀವ ಶೆಟ್ಟಿ, ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ, ಗುಂಡು ಪೂಜಾರಿ ಹರವರಿ, ಉಮೇಶ ಶೆಟ್ಟಿ ಶಾನ್ಕಟ್ಟು, ಸತೀಶ ಶೆಟ್ಟಿ ಹಕ್ಲಾಡಿ ವಿಷಯ ಮಂಡಿಸಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಧನಂಜಯ ಸಮಗ್ರ ಕೃಷಿ ಪದ್ದತಿಯ ಬಗ್ಗೆ ಮಾಹಿತಿ ನೀಡಿದರು.
ರೈತ ಸಂಘದ ವಂಡ್ಸೆ ವಲಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವಂಡ್ಸೆ ಸ್ವಾವಲಂಬನಾ ಕೇಂದ್ರದ ಸದಸ್ಯೆಯರು ರೈತಗೀತೆ ಹಾಡಿದರು. ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾ.ಪಂ. ಮಾಜಿ ಸದಸ್ಯ ಉದಯ ಪೂಜಾರಿ ವಂದಿಸಿದರು. ಗುಂಡು ಪೂಜಾರಿ ಹರವರಿ, ಗೋವರ್ದನ್ ಜೋಗಿ, ಅರುಣ್ ಕುಮಾರ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಪ್ರಭಾಕರ ಆಚಾರ್ಯ ಚಿತ್ತೂರು ಕಾರ್ಯಕ್ರಮ ನಿರ್ವಹಿಸಿದರು.