ಮನೋವೈದ್ಯನಾಗಿ ಬಹಳ ಬೇಸರವಾಗಿ ದಿನವೊಂದು ಎಂದರೆ ಪ್ರದೀಪ್ (ಹೆಸರು ಬದಲಾಯಿಸಲಾಗಿದೆ) ಇನ್ನಿಲ್ಲ ಎಂದು ತಿಳಿದಾಗ. ಪ್ರದೀಪ್ ಸೂಪರ್ ಸ್ಪೆಶಲಿಸ್ಟ್ ವೈದ್ಯರಿಬ್ಬರ ಮಗ. ಈತ ಬೈಪೋಲಾರ್ ಡಿಸಾರ್ಡರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ. ಈತ ಕೂಡ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ. ಬಹುಶಃ ಒಂದನೇ ಎಂಬಿಬಿಎಸ್ ಇರುವಾಗ ಅಂತ ಕಾಣುತ್ತದೆ ಈತನಿಗೆ ಈ ಕಾಯಿಲೆ ಮೊದಲು ಪ್ರಾರಂಭವಾಯಿತು. ಇದ್ದಕ್ಕಿದ್ದಂತೆ ನಿದ್ರೆ ಕಡಿಮೆ ಅಯಿತು, ಬಹಳ ಮಾತನಾಡಲು ಶುರು ಮಾಡಿದ. ದೊಡ್ಡ ದೊಡ್ಡ ಮಾತುಗಳನ್ನು ಆಡಲಾರಂಭಿಸಿದ. ದೇವರ ಬಗ್ಗೆ ಅತಿಯಾದ ಭಕ್ತಿ ಪ್ರಾರಂಭಿಸಿದ. ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಈತ ಎಲ್ಲರೊಡನೆ ಕಾಲು ಕೆದರಿ ಜಗಳ ಮಾಡಲು ಆರಂಭಿಸಿದ. ವಾರ್ಡನ್ ಈತನ ನಡವಳಿಕೆಗಳನ್ನು ಗಮನಿಸಿ ಈತನನ್ನು ಮನೋವೈದ್ಯರ ಹತ್ತಿರ ಕಳಿಸಿದರು. ಮನೋವೈದ್ಯರು ಈತನು “ಮೇನಿಯಾ” ಎಂಬ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ನಿರ್ಧರಿಸಿದರು. ಮನೋ ವೈದ್ಯರ ಅಭಿಪ್ರಾಯದ ಮೇರೆಗೆ ಈತನನ್ನು ಕಾಲೇಜಿನಿಂದ ಮನೆಗೆ ಕಳಿಸಲಾಯಿತು. ಆತ ಕಾಯಿಲೆ ಗುಣಪಡಿಸಿಕೊಂಡು ಕಾಲೇಜಿಗೆ ಬರಬೇಕು ಎಂದು ತಾಕೀತು ಮಾಡಲಾಯಿತು.
ಸೂಪರ್ ಸ್ಪೆಶಲಿಸ್ಟ್ ವೈದ್ಯರುಗಳಾಗಿದ್ದ ತಾಯಿತಂದೆಗೆ ಮನೋವೈದ್ಯರ ಅಭಿಪ್ರಾಯ ಸರಿ ಕಾಣಲಿಲ್ಲ. ನನ್ನ ಪರಿಚಯಸ್ಥರಾಗಿದ್ದರಿಂದ ನನ್ನಲ್ಲಿ ಆತನನ್ನು ಕರೆದುಕೊಂಡು ಬಂದರು. ಆತನೊಡನೆ ಸುಮಾರು ಅರ್ಧ ಗಂಟೆ ಮಾತನಾಡಿದ ಮೇಲೆ ಆತನ ಕಾಲೇಜಿನಲ್ಲಿ ಮನೋವೈದ್ಯರು ಏನು ಹೇಳಿದ್ದರೊ “ಮೇನಿಯಾ” ಕಾಯಿಲೆಯೆಂದು, ಅದೇ ಮಾತನ್ನು ನಾನು ಕೂಡ ದೃಢೀಕರಿಸಿದೆ. ಒಲ್ಲದ ಮನಸ್ಸಿನಲ್ಲಿ ತಾಯಿ ತಂದೆ ನನ್ನ ಮಾತುಗಳನ್ನು ಒಪ್ಪಿ ಈ ಹಿಂದೆ ಪ್ರಾರಂಭ ಮಾಡಿದ್ದ ಮಾತ್ರೆಗಳನ್ನು ಕೊಡಲು ನಿರ್ಧರಿಸಿದರು. ಮಾತ್ರ ತೆಗೆದುಕೊಳ್ಳುತ್ತಾ ಪ್ರದೀಪ್ ಗುಣಮುಖನಾದ. ಒಂದೆರಡು ತಿಂಗಳಲ್ಲಿ ಪುನಃ ಹೋಗಿ ಕಾಲೇಜ್ ಸೇರಿದ.
ಕೊನೆಯ ವರ್ಷದ ಎಂಬಿಬಿಎಸ್ ಮಾಡುವಾಗ ಪ್ರದೀಪ್ ಒಮ್ಮೆಲೆ ಖಿನ್ನನಾದ. ಮಿತ್ರರೊಂದಿಗೆ ಬೆರೆಯುವುದನ್ನು ನಿಲ್ಲಿಸಿದ. ಕಾರಣ ಇಲ್ಲದೆ ಅಳುತ್ತಾ ಇದ್ದ. ತನಗೆ ಜೀವನದಲ್ಲಿ ಜಿಗುಪ್ಸೆ ಸಾಯಬೇಕು ಎಂದು ಹೇಳತೊಡಗಿದ. ಒಂದೆರಡು ಬಾರಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಪ್ರಯತ್ನ ಮಾಡಿದ. ಪ್ರದೀಪನನ್ನು ಪುನ: ಚಿಕಿತ್ಸೆಗೆ ಕಳುಹಿಸಲಾಯಿತು. ಈ ಬಾರಿ ರೋಗ ಪ್ರಕಟಗೊಂಡ ರೀತಿ ಬೇರೆ ರೀತಿ ಇತ್ತು. ವೈದ್ಯ ದಂಪತಿಗಳು ಇಬ್ಬರನ್ನು ಕೂರಿಸಿಕೊಂಡು ಕಾಯಿಲೆಯ ಬಗ್ಗೆ ಬಿಡಿಸಿ ಹೇಳಿದೆ. ಈ ಹಿಂದೆ ಮೇನಿಯಾ ಕಾಯಿಲೆಯಿಂದ ಬಳಲುತ್ತಿದ್ದ, ಈಗ ಅದರ ತದ್ವಿರುದ್ಧ ಅಂದರೆ ಡಿಪ್ರೆಷನ್ ಅಥವಾ ಖಿನ್ನತೆಯಿಂದ ಬಳಲುತ್ತಿದ್ದಾನೆ, ಈ ರೀತಿ ಅವಧಿಗೊಮ್ಮೆ ಬರುವ ಈ ಕಾಯಿಲೆಗೆ ಬೈಪೋಲಾರ್ ಡಿಸಾರ್ಡರ್ ಎಂದು ಕರೆಯುತ್ತಾರೆ. ಕೆಲವರಿಗೆ ಬಹಳಷ್ಟು ಅವಧಿಗಳಲ್ಲಿ ಮೇನಿಯಾ ಕಾಯಿಲೆ ಬರುತ್ತದೆ, ಮಧ್ಯ ಮಧ್ಯದಲ್ಲಿ ಖಿನ್ನತೆ ಅಥವಾ ಡಿಪ್ರೆಷನ್ ಕೂಡ ಬರಬಹುದು. ಈತ ವೃತ್ತಿಪರ ವೈದ್ಯನಾಗುವ ಕಾರಣದಿಂದ ಈತನಿಗೆ ಬದಲಾಗುವ ಈತನ ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿ ಇಡಲು “ಮೂಡ್ ಸ್ಟೆಬಿಲೈಜರ್” ಎಂಬ ಮಾತ್ರೆಗಳು ಬೇಕು ಎಂದು ತಿಳಿಸಿದೆ. ವೈದ್ಯನಾಗುವ ಕಾರಣದಿಂದ ಇದನ್ನು ಜೀವನಪರ್ಯಂತ ಮುಂದುವರಿಸಬೇಕು ಎಂದು ಸ್ಪಷ್ಟವಾಗಿ ತಿಳಿ ಹೇಳಿದೆ. ಪ್ರದೀಪ್ ನಾನು ಹೇಳಿದ್ದು ಸರಿ ಎಂದು ಒಪ್ಪಿಕೊಂಡ. ಆದರೆ ತಾಯಿ ತಂದೆಯರಿಗೆ ನನ್ನ ಮಾತಿನ ಬಗ್ಗೆ ಖುಷಿಯಾಗಿರಲಿಲ್ಲ. ಅವರ ಮುಖದಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು.
ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಂಡ ಪ್ರದೀಪ್ ಎಂಬಿಬಿಎಸ್ ಪದವೀಧರನಾದ. ತಾನು anaesthesia ಅಥವಾ ಅರವಳಿಕೆ ತಜ್ಞ ಆಗಬೇಕು ಎಂದು ಆಸೆ ಪಟ್ಟಿದ್ದ. ಆಲ್ ಇಂಡಿಯಾ ಪಿಜಿ ಪರೀಕ್ಷೆಗೆ ಓದುತ್ತ ಇದ್ದ. ನಾವು ನಿಗದಿ ಮಾಡಿದ ದಿನದಂದು ಬಂದು ತಪ್ಪದೆ ಚಿಕಿತ್ಸೆ ಪಡೆಯುತ್ತಿದ್ದ.
ವೈದ್ಯ ದಂಪತಿಗಳು ಹೇಗಾದರೂ ಮಗನ ಮಾತ್ರೆಯನ್ನು ನಿಲ್ಲಿಸಬೇಕು ಎಂದು ಒತ್ತಡ ಹೇರುತ್ತಿದ್ದರು. ವೈಜ್ಞಾನಿಕ ದೃಷ್ಟಿಕೋನದಿಂದ ಯೋಚಿಸಿ ನಾನು ಅದಕ್ಕೆ ಸಮ್ಮತಿಸಲಿಲ್ಲ. ಮಧ್ಯ ಮಧ್ಯದಲ್ಲಿ ದೇವರು, ಸ್ವಾಮಿಗಳು, ಬಾಬಾಗಳು ಎಂದು ವೈದ್ಯ ದಂಪತಿಗಳಿಬ್ಬರೂ ಮಗನನ್ನು ಕರೆದುಕೊಂಡು ಹೋಗುತ್ತಿದ್ದರು. ಪ್ರದೀಪ್ ಆಗಾಗ ತಾಯಿತಂದೆಯರ ಈ ಮೌಢ್ಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದ.
ಸೂಪರ್ ಸ್ಪೆಶಲಿಸ್ಟ್ ವೈದ್ಯರಿಗೂ ಮೌಡ್ಯ ಬಿಡಲಿಲ್ಲ. ಇದ್ದಕ್ಕಿದ್ದಂತೆ ಪ್ರದೀಪ್ ಚಿಕಿತ್ಸೆಗೆ ಬರುವುದನ್ನೇ ನಿಲ್ಲಿಸಿದ್ದ. ಬಹಳ ಪ್ರತಿಭಾವಂತ ವೈದ್ಯನಾಗಿದ್ದ ಈತ ಚಿಕಿತ್ಸೆಗೆ ಬರಲಿಲ್ಲ ಎಂದು ಸ್ವಲ್ಪ ಬೇಸರವಾಯಿತು. ಆಮೇಲೆ ಸುದ್ದಿ ಇರಲಿಲ್ಲ.
ಆತನು ಸತ್ತು ಹೋಗಿದ್ದಾನೆ ಎಂಬ ಸುದ್ದಿ ಪೇಪರಿನಲ್ಲಿ ಓದಿ ದಿಗ್ಬ್ರಮೆಗೊಂಡೆ. ಆಗ ತಿಳಿದ ವಿಷಯವೇನೆಂದರೆ ತಾಯಿ ತಂದೆಯರು ಆತನನ್ನು ಯಾವುದೋ ಒಂದು ದರ್ಶನ ಸೇವೆಗೆ ಕರೆದುಕೊಂಡು ಹೋಗಿದ್ದರಂತೆ. ಅಲ್ಲಿ ತಮ್ಮ ಮಗನ ಕಾಯಿಲೆಯ ಬಗ್ಗೆ ತಾಯಿ ತಂದೆ ದುಃಖ ತೋಡಿಕೊಂಡರು. ತಾಯಿ ತಂದೆಯರ ದುಃಖತಪ್ತ ಕತೆಯನ್ನು ಕೇಳಿದ ದರ್ಶನ ಪಾತ್ರಿ ಪ್ರದೀಪನಿಗೆ ಯಾವುದೇ ಕಾಯಿಲೆ ಇಲ್ಲ, ಇದು ಕೇವಲ ವಯೋಸಹಜವಾದ ಸಮಸ್ಯೆ. ಹದಿಹರೆಯದಿಂದ ಆತನ ಮನಸ್ಸು ಚಂಚಲವಾಗಿತ್ತು . ಆ ಕೂಡಲೇ ಮಾತ್ರೆಯನ್ನು ನಿಲ್ಲಿಸಿ, ಆತನಿಗೆ ಯೋಗ ಪ್ರಕೃತಿ ಚಿಕಿತ್ಸೆ ಮಾಡಿದಲ್ಲಿ ಗುಣಮುಖನಾಗುತ್ತಾನೆ ಎಂದು ತಿಳಿಸಿದರು.
ತಾಯಿತಂದೆಯರಿಗೂ ಕೂಡ ಇದೇ ಬೇಕಾಗಿತ್ತು. ಪ್ರದೀಪನ ಮನವೊಲಿಸಿ ಮಾತ್ರೆ ನಿಲ್ಲಿಸಿದ್ದರಂತೆ. ಆ ಪಾತ್ರಿ ಹೇಳಿದಂತೆ ಆತನಿಗೆ ಪುರಾತನ ವೈದ್ಯಕೀಯ ವಿಜ್ಞಾನದಂತೆ ಕೆಲವು ಯೋಗ ಪ್ರಕೃತಿ ಚಿಕಿತ್ಸೆಗಳನ್ನು ಮಾಡಿಸಿದ್ದರು. ಈ ಮದ್ಯದಲ್ಲಿ ಪುನಃ ಖಿನ್ನತೆಯ ಅವಧಿ ಬಂದುಬಿಟ್ಟಿತು. ಖಿನ್ನತೆಯ ಕಾರಣದಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಮೌಢ್ಯದ ಉರುಳು ಪ್ರತಿಭಾನ್ವಿತ ವೈದ್ಯನನ್ನು ಮುಗಿಸಿತ್ತು.
ignorance is bliss ಎಂಬ ಮಾತು ಪದೇ ಪದೇ ಮನಸ್ಸಿಗೆ ಬರುತ್ತಿತ್ತು. ಸೂಪರ್ ಸ್ಪೆಶಲಿಸ್ಟ್ ವೈದ್ಯರ ಇಬ್ಬರಿಗೆ ಆಧುನಿಕ ವೈದ್ಯವಿಜ್ಞಾನದ ಚಿಕಿತ್ಸೆಯ ಬಗ್ಗೆ ನಂಬಿಕೆ ಇಲ್ಲದೆ ಅನ್ಯಾಯವಾಗಿ ತಮ್ಮದೇ ಮಗುವನ್ನು ಅವರು ಕಳೆದುಕೊಂಡಿದ್ದರು. ಈ ಮೌಡ್ಯದ ಉರುಳು ನಾನೆಂದೂ ಮರೆಯಲಾರೆ.
ಮೌಢ್ಯಚರಣೆಗೆ ಯಾವುದೇ ಮಿತಿಯಿಲ್ಲ. ಹಲವು ವಿಜ್ಞಾನಿಗಳು, ವೈದ್ಯರು, ಇಂಜಿನಿಯರುಗಳು, ಶಿಕ್ಷಕರು ಮೌಢ್ಯಕ್ಕೆ ಬಲಿಯಾಗುತ್ತಾರೆ. ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಂಡು ಮಾನಸಿಕ ಸಮಸ್ಯೆಗಳ ಬಗ್ಗೆ ಸಮಾಜ ಯೋಚಿಸಬೇಕು. ವೈದ್ಯರುಗಳೇ ಈ ರೀತಿಯಾದರೆ ಸಾಮಾನ್ಯ ಜನರ ಪಾಡೇನು?.
ಆಗಸ್ಟ್ 20 ಪ್ರತಿ ವರುಷ ಈ ಮೂಢನಂಬಿಕೆಗಳ ವಿರುದ್ಧ ಹೋರಾಡಿ ಸಂಪ್ರದಾಯವಾದಿಗಳಿಂದ ಹತ್ಯೆಗೆ ಒಳಗಾದ ವೈದ್ಯ ನರೇಂದ್ರ ಧಾಬೋಲ್ಕರ್ ಹತ್ಯೆ ಆದ ದಿನ. ಇದನ್ನು ವೈಜ್ಞಾನಿಕ ಮನೋಭಾವ ದಿನಾಚರಣೆ ಎಂದು ಆಚರಿಸುತ್ತೇವೆ.
ಮೂಡ ನಂಬಿಕೆ ತ್ಯಜಿಸಿ, ವೈಜ್ಞಾನಿಕ ಮನೋಭಾವ ಬೆಳೆಸಿ.