Thursday, March 28, 2024

ನಡುತಿಟ್ಟಿನ ಅಪ್ರತಿಮ ಪುರುಷ ವೇಷಧಾರಿ ಮಜ್ಜಿಗೆಬೈಲು ಆನಂದ ಶೆಟ್ಟಿ ವಿಧಿವಶ

ಕುಂದಾಪುರ: ಬಡಗುತಿಟ್ಟು ಪರಂಪರೆಯ ಹಿರಿಯ ಪುರುಷವೇಷಧಾರಿ ಮಜ್ಜಿಗೆಬೈಲು ಆನಂದ ಶೆಟ್ಟಿ (78ವ) ಜುಲೈ 10 ರವಿವಾರ ರಾತ್ರಿ ಸ್ವಗೃಹ ಯಡಾಡಿಯಲ್ಲಿ ನಿಧನರಾದರು.

ಲಂಕಾದಹನದ ಸುಂದರರಾವಣನ ವೇಷದಿಂದ ಬಯಲಾಟ ಪ್ರೇಕ್ಷಕರ ಮನೆಮಾತಾದ ಹಿರಿಯ ಕಲಾವಿದ ದಿ.ಮಜ್ಜಿಗೆಬೈಲು ಚಂದಯ್ಯ ಶೆಟ್ಟಿ ಮತ್ತು ಚಂದಮ್ಮ ಶೆಡ್ತಿಯವರ ಪುತ್ರರಾದ ಆನಂದ ಶೆಟ್ಟರು ಪಾರಂಪರಿಕ ವರ್ಚಸ್ಸಿನ ಪ್ರಾತಿನಿಧಿಕರಾಗಿ ಗುರುತಿಸಿಕೊಂಡವರು. ಸುಮಾರು 78 ವರ್ಷದ ಈ ಹಿರಿಯ ಕಲಾವಿದರು ನಡುಬಡಗಿನ ವೇಷವೈವಿದ್ಯದಲ್ಲಿ ತನ್ನದೇ ಛಾಪು ಮೂಡಿಸಿ ಸಮಕಾಲಿನ ರಂಗಭೂಮಿಗೆ ಒಗ್ಗಿಕೊಳ್ಳದೆ ಸನಾತನ ಕಲಾಸಾರವನ್ನೇ ಗಂಬೀರವಾಗಿ ಹೀರಿಕೊಂಡ ಶಿಷ್ಟ ಕಲಾವಿದರು.

ಡೇರೆಮೇಳಗಳ ಹೊಸ ಪ್ರಸಂಗಗಳು ಯಕ್ಷಗಾನಕ್ಕೇ ಲಗ್ಗೆ ಇಟ್ಟಾಗಲೂ ತನ್ನ ತನದೊಂದಿಗೆ ರಾಜಿ ಮಾಡಿಕೊಳ್ಳದೇ ಮುಂದುವರಿದವರು. ಗತ್ತು ಗಾಂಭೀರ್ಯದ ನೆಡೆ, ಪ್ರೌಢ ಸಾಹಿತ್ಯ, ಯಕ್ಷಗಾನೀಯ ಸೊಗಡು ಮೈವೆತ್ತ ಅವರ ವೇಷಗಳಲ್ಲಿ ನಡುತಿಟ್ಟಿನ ಎರಡು ಶೈಲಿಗಳನ್ನು ಗುರುತಿಸಬಹುದಾಗಿದೆ. ಕರ್ಣ, ಜಾಂಬವ, ಭೀಷ್ಮ, ವಿಬೀಷಣ ಮುಂತಾದ ಎರಡನೇ ವೇಷಗಳಲ್ಲಿ ಹಾರಾಡಿ ಶೈಲಿಯ ಜಾಪು ಕಣ್ಣು ಹೊರಳಿಕೆ ಸುದನ್ವ ಅರ್ಜುನ, ತಾಮ್ರದ್ವಜ, ಪುಷ್ಕಳ, ದೇವವೃತ ಮುಂತಾದ ಪುರುಷವೇಷಗಳಲ್ಲಿ ಮಟಪಾಡಿ ಶೈಲಿಯ ಕಿರುಹೆಜ್ಜೆಯನ್ನು ಗುರುತಿಸಬಹುದಾಗಿದೆ.ಬಹುಕಾಲ ಮೊಳಹಳ್ಳಿ ಹೆರಿಯ ನಾಯ್ಕರೊಂದಿಗಿನ ಅವರ ಪುರುಷವೇಷ ಶ್ರೀ ಮಂದಾರ್ತಿ ಮೇಳದ ರಂಗಸ್ಥಳವನ್ನು ತುಂಬಿಸಿತ್ತು

ಕೇವಲ ಐದನೇ ತರಗತಿ ವಿದ್ಯಾಭ್ಯಾಸ ಪಡೆದ ಇವರಿಗೆ ತಂದೆಯೇ ಯಕ್ಷಗಾನದ ಗುರು. ಆ ಕಾಲದಲ್ಲಿ ತಂದೆಗೆ ಹೆಸರು ತಂದ ಬಂಡಿಭೀಮ ಸುಂದರರಾವಣ ವಲಲ ಮುಂತಾದ ಪಾತ್ರಗಳು ಇವರನ್ನು ಯಕ್ಷಗಾನದತ್ತ ಸೆಳೆಯಿತು. ಆನೆಗುಡೆ ವಿನಾಯಕ ದೇವಸ್ಥಾನದಲ್ಲಿ ಗೆಜ್ಜೆ ಕಟ್ಟಿದ ಇವರು ತಂದೆಯೊಂದಿಗೆ ಆಗಿನ ಕೊಡವೂರು ಮೇಳಕ್ಕೆ ಸೇರಿದರು. ಬಳಿಕ ಪೆರ್ಡೂರು ಗೋಳಿಗರಡಿ ಅಮ್ರತೇಶ್ವರಿ, ಸಾಲಿಗ್ರಾಮ ಮಾರಣಕಟ್ಟೆ ಮೇಳಸೇರಿ ದೀರ್ಘಕಾಲ ಬೋಜರಾಜ ಹೆಗ್ಡೆಯವರ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ಜಾನುವಾರುಕಟ್ಟೆ ಬಾಗವತರು, ಮರಿಯಪ್ಪಾಚಾರ್, ಉಡುಪಿ ಬಸವ ಕೋಡಿ ಶಂಕರ ಗಾಣಿಗ, ಮೊಳಹಳ್ಳಿ ಹೆರಿಯ ಹೆರಂಜಾಲು ಸುಬ್ಬಣ್ಣ ಮತ್ಯಾಡಿ ನರಸಿಂಹ ಶೆಟ್ಟಿಯವರ ಒಡನಾಟದ ಮಂದಾರ್ತಿ ಮೇಳದ ತಿರುಗಾಟ ಶೆಟ್ಟರ ಯಕ್ಷಗಾನ ಬದುಕಿನ ಸುವರ್ಣಯುಗ. ಪೆರ್ಡೂರು ಮೇಳದಲ್ಲಿ ನಗರ ಜಗನ್ನಾಥ ಶೆಟ್ಟಿ ಮತ್ತು ಐರೋಡಿ ಗೋವಿಂದಪ್ಪನವರೊಂದಿಗಿನ ಪೌರಾಣಿಕ ಪ್ರಸಂಗದ ಇವರ ವೇಷಗಳು ಜನಮನ್ನಣೆ ಪಡೆದಿದ್ದವು. ಬಯಲಾಟದ ಜೋಡಾಟದಲ್ಲಿ ಇವರನ್ನು ಮಂಡಿ ಹಾಕುವುದರಲ್ಲಿ ಸೋಲಿಸುವವರೇ ವಿರಳವಾಗಿತ್ತು.

ಸುಮಾರು 50 ವರ್ಷ ಬಡಗುತಿಟ್ಟಿನ ರಂಗಸ್ಥಳವನ್ನು ಶ್ರೀಮಂತಗೊಳಿಸಿದ ಶೆಟ್ಟರು ಅರ್ಜುನ ಪುಷ್ಕಳ ಸುದನ್ವ ಮುಂತಾದ ಪುರುಷವೇಷಗಳಿಗೆ ಜೀವತುಂಬಿ ತಿರುಗಾಟದ ಕೊನೆಯಲ್ಲಿ ಹಲವು ವರ್ಷ ಮಂದಾರ್ತಿ ಮೇಳದಲ್ಲಿ ಎರಡನೇ ವೇಷದಾರಿಯಾಗಿ ಭಡ್ತಿ ಹೊಂದಿ ಕರ್ಣ ಜಾಂಬವ ಮಾರ್ತಾಂಡತೇಜ ಮುಂತಾದ ಪ್ರದಾನ ವೇಷಗಳಿಗೆ ನ್ಯಾಯ ಒದಗಿಸಿದ ಶೆಟ್ಟರು ಸದ್ಯ ಅನಾರೋಗ್ಯದಿಂದ ಮಂದಾರ್ತಿ ಮೇಳದಿಂದಲೇ ನಿವೃತ್ತಿ ಹೊಂದಿದ್ದಾರೆ.

ಸುಮಾರು 40 ವರ್ಷದ ಹಿಂದೆಯೇ ಇವರ ವೇಷ ನೋಡಿದ ಮಸ್ಕತ್ತ್‌ನ ರಂಜಿತ್ ಗುಪ್ತ ಎನ್ನುವವರು ಇವರನ್ನು ಅಲ್ಲಿಗೆ ಕರೆಸಿ ಸನ್ಮಾನಿಸಿದ್ದರು.

ತಿರುಗಾಟದ ಸುಮಾರು 25 ವರ್ಷ ಮಂದಾರ್ತಿ ಮೇಳವೊಂದರಲ್ಲೇ ಕಳೆದ ಇವರಿಗೆ ಶ್ರೀ ಕ್ಷೇತ್ರದ ಹಾರಾಡಿ ರಾಮಗಾಣಿಗ ಪ್ರಶಸ್ತಿ ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಬೋಜಪ್ಪ ಸುವರ್ಣ ಪ್ರಶಸ್ತಿ ಸಹಿತ ಅನೇಕ ಸನ್ಮಾನಗಳು ಸಂದಿವೆ.

ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ ಮಣಿಪಾಲ

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!