
ಸಿರಿಬಾಗಿಲು: ಗಡಿನಾಡು ಕಾಸರಗೋಡಿನ ಪ್ರಸಿದ್ಧ ಸಂಸ್ಥೆಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಮುಂದಿನ ಸಾರ್ವಜನಿಕ ಲೋಕಾರ್ಪಣೆಯ ತನಕ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರ ಕಲಾ-ಸಾಂಸ್ಕೃತಿಕ- ಸಾಹಿತ್ಯ ವೈಭವ ಕಾರ್ಯಕ್ರಮಗಳನ್ನು ಧರ್ಮದರ್ಶಿಗಳಾದ ಹರಿಕೃಷ್ಣ ಪುನರೂರು ಜೂ. ೨೬ ರಂದು ಉದ್ಘಾಟಿಸಿದರು.
ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ, ಆ ನಿಟ್ಟಿನಲ್ಲಿ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಪ್ರಯತ್ನಿಸುತ್ತಿರುವು ಶ್ಲಾಘನೀಯ ವಿಷಯ. ಪ್ರತಿಯೊಬ್ಬರೂ ಈ ಮಹತ್ಕಾರ್ಯಕ್ಕೆ ಸಹಕರಿಸಬೇಕೆಂದು ಹರಿಕೃಷ್ಣ ಪುನರೂರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ ಯಕ್ಷಗಾನ ಕಲೆಯ ಸಂರಕ್ಷಣೆ ಚಿಂತನೆ ಪ್ರತಿಷ್ಠಾನ ನಡೆಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ನಮ್ಮಲ್ಲಿ ಸಾಧಕರಿಗೆ ಬರವಿಲ್ಲ, ಆದರೆ ಹೆಚ್ಚಿನ ಕಲಾವಿದರ ಬಗ್ಗೆ ಅವರ ಸಾಧನೆಯ ಬಗ್ಗೆ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಕಲಾವಿದರ ಜೀವನ ಸಾಧನೆ ಬಗ್ಗೆ ದಾಖಲಾತಿ ಅತಿ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಗಡಿನಾಡು ಕಾಸರಗೋಡಿನಲ್ಲಿ ಕನ್ನಡಪರ ಸಾಂಸ್ಕೃತಿಕ ಚಟುವಟಿಕೆ ನಡೆಸುವರೆ ಸಿರಿಬಾಗಿಲು ಪ್ರತಿಷ್ಠಾನವು ಕೈಗೊಂಡ ಕಾರ್ಯ ಮೆಚ್ಚುವಂತದ್ದು ಎಂದರು.
ಪ್ರಸಂಗಕರ್ತರಾದ ಶ್ರೀಧರ ಡಿ. ಎಸ್. ಮಾತನಾಡಿ, ಕಲಾವಿದ ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ನೀಡುತ್ತಿರುವುದು ಅವರ ಆತ್ಮ ಸಂತೋಷ ಹೆಚ್ಚಿಸುತ್ತದೆ. ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಾನುಗ್ರಹ ವಾಟ್ಸಾಪ್ ಬಳಗವು ಕಳೆದ ಲಾಕ್ಡೌನ್ ಸಮಯದಲ್ಲಿ ಆರಂಭಿಸಿದ ಕೀರ್ತಿಶೇಷ ಕಲಾವಿದರ ಸಂಸ್ಮರಣೆ ಮರೆಯಲಾಗದ ಮಹಾನುಭಾವರು ಅಂಕಣ 200 ವರೆಗೇ ತಲುಪಿರುವುದು ಬಳಗದ, ಪ್ರತಿಷ್ಠಾನದ ಮಹಾನ್ ಸಾಧನೆ. ಯಾವ ವಿಶ್ವವಿದ್ಯಾಲಯಕ್ಕೂ ಅಸಾಧ್ಯವಾದ, ಮಾಡದಿರುವ ಮಹತ್ಕಾರ್ಯವನ್ನು ಪ್ರತಿಷ್ಠಾನ ನಡೆಸುತ್ತಿದೆ ಎಂದರು.
ರಂಗಸ್ಥಳ ಫೌಂಡೇಶನ್ ಪ್ರಸ್ತುತ ಅಧ್ಯಕ್ಷರಾದ ವಿ. ರಾಘವೇಂದ್ರ ಉಡುಪ, ನೇರಳಕಟ್ಟೆ, ಕುಂದಾಪುರ ಅವರು ಮಾತನಾಡಿ, ಪ್ರತಿಷ್ಠಾನವು ಯಕ್ಷಗಾನ ಕಲಾಸಕ್ತರ ವಾಟ್ಸಪ್ ಗ್ರೂಪ್ ರಚಿಸಿ ಇನ್ನೂರಕ್ಕೂ ಅಧಿಕ ಕಲಾವಿದರ ಸಂಪೂರ್ಣ ಮಾಹಿತಿ ಹಾಕಿದ್ದು, ಅದನ್ನು ಪುಸ್ತಕ ರೂಪದಲ್ಲಿ ಸಿರಿಬಾಗಿಲು ಸಾಂಸ್ಕೃತಿಕ ಭವನದ ಲೋಕಾರ್ಪಣೆಗಯ ಸಂದರ್ಭದಲ್ಲಿ ಬಿಡುಗಡೆಗೊಳಿಸಲು ಇದ್ದೇವೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಮುಂದಿನ ದಿನಗಳಲ್ಲಿ ಯಕ್ಷಗಾನ ಕಲೆಯ ಪ್ರದರ್ಶನ ಜೊತೆಗೆ ಯಕ್ಷಗಾನದ ಗ್ರಂಥಾಲಯ ಹಾಗೂ ಮ್ಯೂಸಿಯಂ ನಿರ್ಮಿಸಲು ಚಿಂತನೆ ನಡೆಸಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.
ಶ್ರೀ ರಾಜ ರಾಮರಾವ್ ಮಿಯಪದವು ನಿರೂಪಿಸಿ, ಜಗದೀಶ ಕೆ. ಕೂಡ್ಲು ವಂದಿಸಿದರು. ಬಳಿಕ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದವರಿಂದ ಶ್ರೀರಾಮ ಪಟ್ಟಾಭಿಷೇಕ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.