






ಬಾರಕೂರು: ಯಾಂತ್ರೀಕೃತ ಭತ್ತ ಬೇಸಾಯ, ಹಡಿಲು ಭೂಮಿ ಪುನಶ್ಚೇತನ ಯೋಜನೆಗಳಿಗೆ ಚಾಲನೆ
ಬ್ರಹ್ಮಾವರ, ಜೂ.28: ಈ ಭೂಮಿಯ ಮೇಲೆ ಅನ್ನ ತಿನ್ನಬೇಕೇ ಹೊರತು ಚಿನ್ನ ಬೆಳ್ಳಿ ತಿನ್ನಲು ಸಾಧ್ಯವಿಲ್ಲ. ಹಾಗಾಗಿ ಕೃಷಿ ಜೀವನದ ಅವಿಭಾಜ್ಯ ಅಂಗ. ಭೂಮಿಯನ್ನು ರಕ್ಷಿಸದಿದ್ದರೆ ಮುಂದೆ ಭವಿಷ್ಯವಿಲ್ಲ. ತಂದೆ ತಾಯಿಗಳು ಮಕ್ಕಳಿಗೆ ವಿದ್ಯೆಯನ್ನು ನೀಡುವುದರ ಜೊತೆಗೆ ಕೃಷಿಯ ಬಗ್ಗೆಯೂ ಆಸಕ್ತಿ ಮೂಡಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಬಾರಕೂರು ಕೂಡ್ಲಿ ಉಡುಪರ ಮನೆ ವಠಾರದಲ್ಲಿ ಜರಗಿದ ಶ್ರೀ ಕ್ಷೇ.ಧ.ಗ್ರಾ.ಯೋಜನೆ 2022-23ನೇ ಸಾಲಿನಲ್ಲಿ ರಾಜ್ಯದ 20000 ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ ಯಾಂತ್ರೀಕೃತ ಭತ್ತ ಬೇಸಾಯ (ಯಂತ್ರಶ್ರೀ) ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆಗಳಿಗೆ ಚಾಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಐದಾರು ವರ್ಷಗಳ ಹಿಂದೆ ಭತ್ತದ ಬೆಳೆ ಲಾಭದಾಯಕವಲ್ಲ ಎನ್ನುವ ಹಂತಕ್ಕೆ ರೈತರು ತಲುಪಿದ್ದರು. ಆದರೆ ಯಾಂತ್ರೀಕೃತ ಬೇಸಾಯ ಪದ್ದತಿ ಅನುಷ್ಟಾನದ ಬಳಿಕ ಭತ್ತದ ಬೇಸಾಯವೂ ಭರವಸೆ ಮೂಡಿಸಿದೆ. ವ್ಯವಸ್ಥಿತವಾಗಿ, ಕ್ರಮಬದ್ದವಾಗಿ ಬೇಸಾಯ ಮಾಡಿದರೆ ಅದು ಲಾಭದಾಯಕವಾಗಿ ಪರಿಣಮಿಸುತ್ತದೆ. ಕೃಷಿಯಲ್ಲಿ ಆಸಕ್ತಿ, ಶ್ರದ್ದೆ, ಪರಿಶ್ರಮ, ಹೊಸ ಹೊಸ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳುವ ಜಾಣ್ಮೆಯನ್ನು ಕೃಷಿಕರು ಹೊಂದಬೇಕು ಎಂದರು.
ಇವತ್ತು ಸರ್ಕಾರ, ಇಲಾಖಾ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳಿವೆ. ಅದನ್ನು ಅಧಿಕಾರಯುತವಾಗಿ ಕೇಳಬೇಕು. ಯಾಂತ್ರೀಕೃತ ಕೃಷಿ ಪದ್ದತಿ ಅಳವಡಿಸಿ ಹಡಿಲು ಭೂಮಿಯ ಅಭಿವೃದ್ದಿಗೆ ಮುಂದಾಗಬೇಕು. ಪ್ರತಿಯೊಂದು ಯಶಸ್ಸಿನ ಹಿನ್ನೆಲೆಯಲ್ಲಿ ದೇವರ ಆಶೀರ್ವಾದದೊಂದಿಗೆ ಮನುಷ್ಯ ಪ್ರಯತ್ನವೂ ಅತೀ ಅಗತ್ಯವಾಗಿದೆ ಎಂದರು.
ಕೃಷಿಯಲ್ಲಿ ಅವಕಾಶಗಳ ನಿರ್ಮಾಣ ಮಾಡಿಕೊಡುವುದು, ಆಸಕ್ತಿ, ಕುತೂಹಲ ಮೂಡಿಸುವುದು, ಶ್ರಮ ಪಡುವವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಧ.ಗ್ರಾ ಯೋಜನೆ ಮಾಡುತ್ತಿದೆ. ಯೋಜನೆ ರೂಪಿಸಲು ಯೋಚನಾಶಕ್ತಿ ಬೆಳೆಯಬೇಕು. ರೈತರ ಉತ್ಪಾದನೆ ವೃದ್ದಿಸಲು, ಮಿತವ್ಯಯದಿಂದ ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಯಂತ್ರಶ್ರೀ ಕಾರ್ಯಕ್ರಮ ರಾಜ್ಯದಾದ್ಯಂತ ಅನುಷ್ಠಾನಗೊಳ್ಳುತ್ತಿದೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ದೇಶಕ್ಕೆ ಮಾದರಿ: ಶೋಭಾ ಕರಂದ್ಲಾಜೆ
ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮ ಉದ್ಘಾಟಿಸಿ, ದೇಶಕ್ಕೆ ಮಾದರಿಯಾಗಿ ಇವತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮುಂಚೂಣಿಯಲ್ಲಿ ನಿಂತು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸರಕಾರೇತರ ಸಂಸ್ಥೆಯಾಗಿ ಗ್ರಾಮಾಭಿವೃದ್ದಿ ಯೋಜನೆ ಸಮರ್ಪಕ ಕಾರ್ಯಕ್ರಮಗಳ ಅನುಷ್ಠಾನಗಳ ಮೂಲಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ. ಕೃಷಿಕರನ್ನು ಪ್ರೋತ್ಸಾಹಿಸಲು ಕೇಂದ್ರ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿವೆ. ರೈತರ ಉತ್ಪನ್ನಗಳಿಗೆ ಉತ್ತಮ ಧಾರಣೆ ನೀಡಲು, ಕೂಲಿಯಾಳುಗಳ ಸಮಸ್ಯೆ ನಿವಾರಿಸಲು ಬಾಡಿಗೆ ಸೇವಾಕೇಂದ್ರಗಳ ಮೂಲಕ ಯಂತ್ರೀಕೃತ ಕೃಷಿಗೆ ಉತ್ತೇಜಿಸುವ ಕೆಲಸ, ಸಣ್ಣ ರೈತರನ್ನು ಸಂಘಟಿತಗೊಳಿಸುವುದು, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕಾರ್ಯಗಳು ನೆಡೆಯುತ್ತಿವೆ ಎಂದರು.
ಹಡಿಲು ಭೂಮಿ ಅಭಿವೃದ್ದಿ, ಯಂತ್ರಶ್ರೀ ಕಾರ್ಯಕ್ರಮಗಳ ಮೂಲಕ ಭತ್ತ ಬೇಸಾಯವನ್ನು ಉತ್ತೇಜಿಸಲಾಗುತ್ತಿರುವುದು ಶ್ಲಾಘನೀಯ. ಇಲ್ಲಿ ಬೆಳೆಯುವ ಭತ್ತವನ್ನು ಸ್ಥಳೀಯ ಪಡಿತರವಾಗಿ ವಿತರಿಸಲು ಯೋಜನೆಗಳನ್ನು ಹಿಂದೆ ರೂಪಿಸಲಾಗಿತ್ತು. ಈ ಬಾರಿ ಬೇಗನೆ ಆ ಬಗ್ಗೆ ಯೋಜನೆ ರೂಪಿಸಿ ಕುಚ್ಚಲಕ್ಕಿ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ನರ್ಸರಿ ಟ್ರೇ ವಿತರಿಸಿದರು. ಉಡುಪಿ ವಿಧಾನಸಭಾ ಕ್ಷೇತ್ರದ ಸಾಸಕ ಕೆ.ರಘುಪತಿ ಭಟ್ ಯಂತ್ರಶ್ರೀ ಮಾಹಿತಿ ಪತ್ರ ಬಿಡುಗಡೆ ಮಾಡಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬೈಂದೂರು ಭತ್ತ ಬೆಳೆಗಾರರ ಒಕ್ಕೂಟಕ್ಕೆ ಅನುದಾನ ಪತ್ರ ವಿತರಿಸಿದರು. ಉಡುಪಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ.ಹೆಚ್.ಕೆಂಪೇಗೌಡ ಭತ್ತ ನರ್ಸರಿ ಮಾಡಿದ ರೈತರಿಗೆ ಸನ್ಮಾನ ನೆರವೇರಿಸಿದರು.
ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ದೇವಾಡಿಗ, ರಾಜ್ಯೋತ್ಸವ ಕೃಷಿ ಪ್ರಶಸ್ತಿ ಪುರಸ್ಕ್ರತರಾದ ಬಿ.ಶಾಂತಾರಾಮ ಶೆಟ್ಟಿ, ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಕೆ.ವೆಂಕಟರಮಣ ಉಡುಪ, ಜನಜಾಗೃತಿ ವೇದಿಕೆ ಕುಂದಾಪುರ ಸ್ಥಾಪಕ ಅಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ, ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ ಕುಂದರ್, ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್ ರಂಗನಕೆರೆ ಬಾರಕೂರು, ಧ,ಗ್ರಾ ಯೋಜನೆಯ ಸಂಪತ್ ಸಾಮ್ರಾಜ್ಯ, ನವೀನ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ಯಂತ್ರಶ್ರೀ ಭತ್ತ ಬೇಸಾಯದಲ್ಲಿ ಸಾಧನೆ ಮಾಡಿದ ನಾಗಭೂಷಣ ಜೈನ್, ಅಶೋಕ್ ಮರಾಠಿ ಹೈಕಾಡಿ, ಹಡಿಲು ಭೂಮಿಯನ್ನು ಅಭಿವೃದ್ದಿ ಪಡಿಸಿದ ಭೀಮ ನಾಯ್ಕ್ ಕೊಕ್ಕರ್ಣೆ, ಪುರುಷ ನಾಯ್ಕ್ ಅವರನ್ನು ಗೌರವಿಸಲಾಯಿತು. ರೈತ ಮಹಿಳೆ ಸವಿತಾ ನಾಯಕ್, ಯಂತ್ರಶ್ರೀತಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹೂವಿನಹಡಗಲಿ ತಾಲೂಕು ಕೃಷಿ ಮೇಲ್ವಿಚಾರಕ ಅರುಣ್ ಎಂ.ಕೆ., ದ್ವಿತೀಯ ಸ್ಥಾನ ಪಡೆದ ಬೈಂದೂರು ತಾಲೂಕು ಕೃಷಿ ಮೇಲ್ವಿಚಾರಕ ಮಂಜುನಾಥ, ಹೂವಿನಹಡಗಲಿ ಯಂತ್ರಶ್ರೀ ಪ್ರಬಂಧಕ ಚೇತನ್ ಎಸ್.ಬೆಟಗೆರಿ, ಬೈಂದೂರು ಯಂತ್ರಶ್ರೀ ಪ್ರಬಂಧಕ ರಾಜೇಶ ಕೆ ಅವರಿಗೆ ಪ್ರಮಾಣ ಪತ್ರ ನೀಡಿ ಸನ್ನಾನಿಸಲಾಯಿತು. ಬೈಂದೂರು ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟಕ್ಕೆ ಧರ್ಮಸ್ಥಳದಿಂದ ರೂ.5 ಲಕ್ಷದ ಚೆಕ್ ವಿತರಿಸಲಾಯಿತು. ಸಸಿಮಡಿ ತಯಾರಿಯಲ್ಲಿ ಸಾಧನೆ ಮಾಡಿದ ಶ್ರೀನಿವಾಸ ಉಡುಪ ಕೂಡ್ಲಿ, ಜಯಲಕ್ಷ್ಮೀ ಬಿ ಹೆಗ್ಡೆ ಹಿರಿಯಡಕ, ಸುಜಿತ್ ಕುಮಾರ್ ಹೆಗ್ಡೆ ಕಾಳಾವರ, ಕೃಷ್ಣ ನಾಯ್ಕ್ ಬೆಳ್ವೆ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ನೂತನ ಪ್ರಗತಿಬಂಧು ಸ್ವಸಹಾಯ ಸಂಘಗಳಿಗೆ ಚಾಲನೆ ನೀಡಲಾಯಿತು. ನೂತನ ಭಜನಾ ತಂಡಕ್ಕೆ ತಾಳ ಹಸ್ತಾಂತರಿಸುವ ಮೂಲಕ ಹೆಗ್ಗಡೆಯವರು ಉದ್ಘಾಟಿಸಿದರು. ನಿವೃತ್ತರಾದ ಕೃಷಿ ಅಧಿಕಾರಿ ಚಂದ್ರಶೇಖರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕ ಶಿವರಾಯ ಪ್ರಭು ಮೊದಲಾದವರು ಹಾಜರಿದ್ದರು.
ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್.ಮಂಜುನಾಥ ಸ್ವಾಗತಿಸಿದರು. ಲತಾ ಮತ್ತು ಸಂಗಡಿಗರು ರೈತಗೀತೆ ಹಾಡಿದರು. ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ದಿನೇಶ ಶೇರೆಗಾರ್ ವಂದಿಸಿದರು. ಸಿ.ಎಚ್.ಸಿ ಶಿವಮೊಗ್ಗ ಇದರ ನಿರ್ದೇಶಕ ದಿನೇಶ ಮತ್ತು ಕೇಂದ್ರ ಕಛೇರಿ ಧರ್ಮಸ್ಥಳ ಇಲ್ಲಿನ ಕೃಷಿ ಅಧಿಕಾರಿ ಸುದೀರ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಸಚಿವೆ ಶೋಭಾ ಕರಂದ್ಲಾಜೆ ರೈತರೊಂದಿಗೆ ಸಂವಾದ ನಡೆಸಿದರು.