spot_img
Saturday, March 28, 2026
spot_img

ಫೆ.27ಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ವಕ್ವಾಡಿಯಲ್ಲಿ ಹುಟ್ಟೂರ ಸನ್ಮಾನ

ಕುಂದಾಪುರ: ಅಪ್ಪಟ ಕನ್ನಡಾಭಿಮಾನಿ, ಯಶಸ್ವಿ ಉದ್ಯಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಹುಟ್ಟೂರಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿಕೊಂಡು ಈ ರಾಜ್ಯೋತ್ಸವ ಪ್ರಶಸ್ತಿಯನ್ನು ವಕ್ವಾಡಿಯ ಸಮಸ್ತ ನಾಗರೀಕರು ಒಟ್ಟಾಗಿ ಸೇರಿ ಸಂಭ್ರಮಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಫೆ.27 ಆದಿತ್ಯವಾರ ವಕ್ವಾಡಿಯಲ್ಲಿ ಹುಟ್ಟೂರ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ವಕ್ವಾಡಿ ಇದರ ಅಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ಅವರು ಫೆ.18ರಂದು ವಕ್ವಾಡಿಯ ಫಾರ್ಚುನ್ ವಿಲೇಜ್ ಹೋಟೆಲ್‌ನ ಕನಕ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಹುಟ್ಟೂರ ಸನ್ಮಾನ ಕಾರ್ಯಕ್ರಮವನ್ನು ಅರ್ಥಪೂರ್ಣವನ್ನಾಗಿಸುವ ದೃಷ್ಟಿಯಿಂದ ಇಡೀ ದಿನದ ಕಾರ್ಯಕ್ರಮ ರೂಪಿಸಲಾಗಿದೆ. ಆ ದಿನ ಬೆಳಿಗ್ಗೆ 9 ಗಂಟೆಯಿಂದ ಉಡುಪಿ ಪ್ರಸಾದ್ ನೇತ್ರಾಲಯದ ತಜ್ಞ ವೈದ್ಯರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ. ಅಗತ್ಯವುಳ್ಳವರಿಗೆ ಉಚಿತ ಕನ್ನಡಕ, ಶಸ್ತ್ರಚಿಕಿತ್ಸೆ ಅಗತ್ಯವುಳ್ಳವರಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಅದೇ ಸಂದರ್ಭದಲ್ಲಿ ಕುಂದಾಪುರ ರೂರಲ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಅಪರಾಹ್ನ 2 ಗಂಟೆಗೆ ಆಹ್ವಾನಿತ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ವಿಜೇತ ತಂಡಕ್ಕೆ ಫಲಕ, ನಗದು ಬಹುಮಾನ ನೀಡಲಾಗುವುದು ಎಂದರು.

ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭ ನಡೆಯಲಿದ್ದು, ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಧಾರ್ಮಿಕ, ರಾಜಕೀಯ, ಗಣ್ಯರು, ಚಲನಚಿತ್ರ ನಟರು ಭಾಗವಹಿಸಲಿದ್ದಾರೆ. ರಾತ್ರಿ 8.30ಕ್ಕೆ ಆಳ್ವಾಸ್ ಪ್ರತಿಷ್ಠಾನ ಮೂಡಬಿದ್ರೆ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಸಾಮೂಹಿಕ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.

ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ಕಾರ್ಯದರ್ಶಿ ವಕ್ವಾಡಿ ವೇಣುಗೋಪಾಲ ಹೆಗ್ಡೆ ಮಾತನಾಡಿ, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟರ ಸಾಧನೆ, ಅವರು ಹುಟ್ಟೂರಿಗೆ ನೀಡಿದ ಕೊಡುಗೆ ಅಪಾರವಾದುದು. ಮುಖ್ಯವಾಗಿ ಉಲ್ಲೇಖಿಸುವುದಾದರೆ ವಕ್ವಾಡಿಯ ಗ್ರಾಮದೇವತೆ ಮಹಾಲಿಂಗೇಶ್ವರ ದೇವಸ್ಥಾನ ಇವರ ನೇತೃತ್ವದಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ 2012ರಲ್ಲಿ ಜೀರ್ಣೋದ್ದಾರಗೊಂಡಿತ್ತು. ವೈಯಕ್ತಿಕವಾಗಿ ಅವರು 25 ಲಕ್ಷ ರೂ ದೇಣಿಗೆ ನೀಡಿದ್ದರು. ವಕ್ವಾಡಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹೊಸ ಕಟ್ಟಡಕ್ಕಾಗಿ ರೂ.5 ಲಕ್ಷ ನೀಡಿದ್ದಾರೆ. ವಕ್ವಾಡಿಯಲ್ಲಿ ಬಸ್ ನಿಲ್ದಾಣ, ಅಂಚೆ ಕಛೇರಿಗೆ ಹೊಸ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳೆರಡಕ್ಕೂ ಅಗತ್ಯ ಮೂಲಭೂತ ಸೌಕರ್ಯಗಳಿಗಾಗಿ ದೇಣಿಗೆ ನೀಡಿದ್ದಾರೆ. ವಕ್ವಾಡಿ ಪ್ರಾಥಮಿಕ ಶಾಲೆಗೆ ಉಚಿತ ವಾಹನದ ವ್ಯವಸ್ಥೆ ಅಲ್ಲದೇ ವಕ್ವಾಡಿಯ ಯಾವುದೇ ವ್ಯಕ್ತಿ ಕಷ್ಟ ಎಂದಾಗ ಉದಾರವಾಗಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ತನ್ನ ಉದ್ಯಮ ಕ್ಷೇತ್ರದ ಮೂಲಕವೂ ಹಲವಾರು ಮಂದಿ ಸ್ಥಳೀಯರಿಗೇ ಉದ್ಯೋಗವಕಾಶಗಳನ್ನು ನೀಡಿದ್ದಾರೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಪ್ರವೀಣ್ ಕುಮಾರ ಶೆಟ್ಟಿಯವರನ್ನು ಅಭಿನಂದಿಸಬೇಕೆನ್ನುವ ಗ್ರಾಮಸ್ಥರ ಆಸೆಯಂತೆ ಹುಟ್ಟೂರ ಸನ್ಮಾನ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬಿ. ಅಪ್ಪಣ್ಣ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಉದ್ಯಮಿ ಆನಂದ ಸಿ.ಕುಂದರ್ ಗೌರವಾಧ್ಯಕ್ಷರಾಗಿರುವ ಈ ಸಮಿತಿ ಆನೇಕ ಉಪಸಮಿತಿಗಳು ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಪ್ರವೃತ್ತವಾಗಿವೆ. ಕಾರ್ಯಕ್ರಮಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಆ ಹಿನ್ನೆಲೆಯಲ್ಲಿ ಸಿದ್ಧತೆಗಳು ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಪ್ರಚಾರ ಸಮಿತಿ ಸಂಚಾಲಕ ಡಾ.ಸುಧಾಕರ ನಂಬಿಯಾರ್, ಹುಟ್ಟೂರ ಸನ್ಮಾನ ಸಮಿತಿಯ ಬಾಲಕೃಷ್ಣ ಶೆಟ್ಟಿ, ದಿನಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಸತೀಶ್ ಪೂಜಾರಿ ವಕ್ವಾಡಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!