Sunday, September 8, 2024

ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಗ್ರಾಮ ಸಭೆಯಲ್ಲಿ ಒತ್ತಾಯ

ಗಂಗೊಳ್ಳಿ : ವಿವಿಧ ಇಲಾಖೆಯ ಅಧಿಕಾರಿಗಳ ಗೈರು ಹಾಜರಾತಿ, ಸ್ಮಶಾನಗಳ ಅಭಿವೃದ್ಧಿ, ಚರಂಡಿ ಸ್ವಚ್ಛತೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಕೆ ವಿಷಯ ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಬುಧವಾರ ಜರಗಿದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ 2021-22ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಪ್ರಸ್ತಾಪಗೊಂಡಿತು.

ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಕೃಷಿ ಇಲಾಖೆ ಅಧಿಕಾರಿ ಗೋಪಾಲ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆ ಆರಂಭವಾಗುತ್ತಿದ್ದಂತೆಯೇ ಗಂಗೊಳ್ಳಿ ಮಲ್ಯರಬೆಟ್ಟು ಸಾರ್ವಜನಿಕ ರುದ್ರಭೂಮಿಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಿದ ವಿಷಯ ಪ್ರಸ್ತಾಪಿಸಿದ ನವೀನ್ ಗಂಗೊಳ್ಳಿ, ಗ್ರಾಮ ಪಂಚಾಯತ್‌ನ ಎಲ್ಲಾ ಅನುದಾನದ ಮೇಲೆ ಕಣ್ಣು ಹಾಕಿರುವವರು ಸ್ಮಶಾನಕ್ಕೆ ಮೀಸಲಿಟ್ಟ ಅನುದಾನದ ಮೇಲೂ ಕಣ್ಣು ಹಾಕಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಆಡಳಿತ ವ್ಯವಸ್ಥೆ ಮೇಲೆ ಜನರಿಗೆ ನಂಬಿಕೆ ಕಡಿಮೆಯಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಸ್ಮಶಾನ ಅಭಿವೃದ್ಧಿಗೆ ಸ್ಥಳೀಯಾಡಳಿತ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ವೆಂಕಟೇಶ ಗಂಗೊಳ್ಳಿ, ಯಶವಂತ ಗಂಗೊಳ್ಳಿ, ರಾಘವೇಂದ್ರ ಬಾವಿಕಟ್ಟೆ ಮತ್ತಿತರರು ದನಿಗೂಡಿಸಿದರು.

ಗಂಗೊಳ್ಳಿ ಗ್ರಾಮದಲ್ಲಿನ ಮಲ್ಯರಬೆಟ್ಟು ಮತ್ತು ದುರ್ಗಿಕೇರಿಯಲ್ಲಿ ಸಾರ್ವಜನಿಕ ಹಿಂದು ರುದ್ರಭೂಮಿಯನ್ನು ಗ್ರಾಮ ಪಂಚಾಯತ್ ಸುರ್ಪದಿಗೆ ತೆಗೆದುಕೊಳ್ಳಲು ಕ್ರಮಕೈಗೊಳ್ಳಬೇಕು. ಪ್ರತಿವರ್ಷ ಲಕ್ಷಾಂತರ ರೂ.ಗಳನ್ನು ಚರಂಡಿ ಸ್ವಚ್ಚತೆಗೆ ವ್ಯಯಿಸುವ ಬದಲು ಶಾಶ್ವತ ಚರಂಡಿ ನಿರ್ಮಿಸಲು ಯೋಜನೆ ರೂಪಿಸಬೇಕು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ದಿನದ 24 ಗಂಟೆ ಕಾರ್ಯನಿರ್ವಹಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ನವೀನ್ ಗಂಗೊಳ್ಳಿ, ವೆಂಕಟೇಶ ಗಂಗೊಳ್ಳಿ, ರಾಘವೇಂದ್ರ ಗಾಣಿಗ, ರಾಘವೇಂದ್ರ ಬಾವಿಕಟ್ಟೆ ಮತ್ತಿತರರು ಆಗ್ರಹಿಸಿದರು.

ಗ್ರಾಮಸಭೆಗೆ ಗೈರು ಹಾಜರಾದ ಪ್ರಮುಖ ಗ್ರಾಮ ಮಟ್ಟದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಶಿಫಾರಸ್ಸು ಮಾಡಬೇಕು. ಕಳೆದ ಗ್ರಾಮಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯ ಮತ್ತು ನಿರ್ಣಯ ಅನುಷ್ಠಾನದ ಬಗ್ಗೆ ಮಾಹಿತಿ ನೀಡುವಂತೆ ಯಶವಂತ ಗಂಗೊಳ್ಳಿ ಒತ್ತಾಯಿಸಿದರೆ, ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆಯಡಿ ಜನಸಾಮಾನ್ಯರಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಮಣಿಪಾಲ ಆಸ್ಪತ್ರೆಯಲ್ಲಿ ದಿನಕ್ಕೆ 25 ರೋಗಿಗಳಂತೆ ಅವರಿಗೆ ಬೇಕಾದವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಬಡವರಿಗೆ ತುಂಬಾ ಅನ್ಯಾಯವಾಗುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮಕೈಗೊಂಡು ಬಡವರಿಗೆ ಇದರ ಪ್ರಯೋಜನ ದೊರೆಯುವಂತೆ ಮಾಡಬೇಕು ಎಂದು ನವೀನ್ ಗಂಗೊಳ್ಳಿ ಆಗ್ರಹಿಸಿದರು.

ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗ್ರಾಪಂ. ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ, ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಗ್ರಾಮ ಕರಣಿಕ ಮಾಧವ ಕೊಠಾರಿ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತಾ, ಮೆಸ್ಕಾಂ ಗಂಗೊಳ್ಳಿ ಶಾಖಾಧಿಕಾರಿ ರಾಘವೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಭಾವತಿ ಶೆಡ್ತಿ, ಶಿಕ್ಷಣ ಇಲಾಖೆ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.

ಗ್ರಾಪಂ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶೇಖರ್ ಜಿ. ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!