Sunday, September 8, 2024

‘ನಂ ನಮ್ನಿ’ ಕುಂದಾಪುರ ಕನ್ನಡದ ಯಕ್ಷಗಾನ ಪ್ರಸಂಗ ಬಿಡುಗಡೆ


ಯಕ್ಷಗಾನ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಮನ್ನಣೆ ಪಡೆಯಲಿ- ಉಪನ್ಯಾಸಕ ಸುಜಯೀಂದ್ರ ಹಂದೆ
ತೆಕ್ಕಟ್ಟೆ: ಕನ್ನಡ ಸಾಹಿತ್ಯದಲ್ಲಿ ಯಕ್ಷಗಾನ ಪ್ರಸಂಗಕ್ಕೆ ವಿಶೇಷವಾದ ಸ್ಥಾನ ಮಾನ ಸಿಕ್ಕಿಲ್ಲ. ಯಕ್ಷಗಾನ ಸಾಹಿತ್ಯದ ಪ್ರಭುತ್ವವನ್ನು ಅರ್ಥೈಸಿಕೊಳ್ಳಬೇಕಾದದ್ದು ಯಕ್ಷಗಾನೇತರ ಸಾಹಿತ್ಯ ವಲಯಯದವರು. ಎಷ್ಟೋ ಜನ ಕವಿಗಳಾಗಿ, ಕಥೆಗಾರರಾಗಿ, ವಿದ್ವಾಂಸರಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿದ್ದಾರೆ. ಅವರನ್ನು ಮಾತ್ರ ಸಾಹಿತಿಗಳು ಎಂಬ ಪಟ್ಟದಲ್ಲಿ ನಾವು ಗುರುತಿಸುತ್ತಾ ಇದ್ದೇವೆ. ಆದರೆ ಯಕ್ಷಗಾನ ಸಾಹಿತ್ಯ ಕೂಡ ಅಷ್ಟೇ ಪ್ರಭುದ್ಧವಾದದ್ದು. ವಸ್ತು, ತಂತ್ರ, ನಿರೂಪಣಾ ಶೈಲಿ, ಛಂದಸ್ಸು, ಕವಿತ್ವ ಇವೆಲ್ಲ ಇರುವುದು ಯಕ್ಷಗಾನದ ಸಾಹಿತ್ಯದಲ್ಲಿ. ಇಂತಹ ಪ್ರಭುದ್ಧ ಯಕ್ಷಗಾನ ಸಾಹಿತ್ಯಕ್ಕೆ ಕರ್ನಾಟಕದಲ್ಲಿ ಅಗ್ರಮಾನ್ಯ ಪಂಕ್ತಿ ಸಿಗಲಿಲ್ಲವಾದದ್ದು ಬೇಸರದ ಸಂಗತಿ. ಅನೇಕ ಪ್ರಸಂಗಕರ್ತರು ಈಗಾಗಲೇ ಆಗಿ ಹೋಗಿದ್ದಾರೆ. ಈಗಿನ ಯುವ ಪ್ರಸಂಗಕರ್ತರು ಸಾಹಿತ್ಯದ ಸುಗ್ಗಿಯನ್ನು ಮತ್ತಷ್ಟು ಮತ್ತಷ್ಟು ಮಾಡುತ್ತಾ ಇರುವುದು ಸಂತಸದ ಸಂಗತಿ. ಕುಂದಾಪುರ ಕನ್ನಡದ ದಿನಾಚರಣೆಗೆ ಪ್ರತೀ ವರ್ಷ ವಿಶೇಷವಾದ ಕೊಡುಗೆ ಪ್ರಸಾದ ಕುಮಾರ್ ಮೊಗೆಬೆಟ್ಟು ಕೊಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹ ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ನಂನಮ್ನಿ ಕುಂದಾಪುರ ಕನ್ನಡದ ಯಕ್ಷಗಾನ ಪ್ರಸಂಗವನ್ನು ಬಿಡುಗಡೆ ಮಾಡಿ ಮಾತನಾಡಿದರು.

ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಕ್ಷದೀಪ ಕಲಾ ಟ್ರಸ್ಟ್ ಮಲ್ಯಾಡಿ, ಯಶಸ್ವಿ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಪ್ರಸಾದ ಕುಮಾರ್ ಮೊಗೆಬೆಟ್ಟು ವಿರಚಿತ ‘ನಂ ನಮ್ನಿ’ ಯಕ್ಷಗಾನ ಪ್ರಸಂಗ ಬಿಡುಗಡೆ, ಹಾಗೂ ಕೋಟ ರಾಮಚಂದ್ರ ಆಚಾರ್ ಸಂಸ್ಮರಣಾ ಕಾರ್ಯಕ್ರಮ ಜರುಗಿತು.


ಕರಾವಳಿ ಭಾಗದ ಸಾಧಕ, ಹಲವಾರು ಸಂಘ ಸಂಸ್ಥೆಗಳಿಗೆ ಸಹಕಾರಿಯಾಗಿ, ಸಮಾಜಮುಖಿಯಾಗಿ ಬೆಳೆದ ಕೋಟ ರಾಮಚಂದ್ರ ಆಚಾರ್ ನಿಧನರಾದದ್ದು ಸಮಾಜಕ್ಕೆ ಬಹಳ ನಷ್ಟ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ರಾಮಚಂದ್ರ ಆಚಾರ್ ನೂರಾರು ಸಮ್ಮಾನವನ್ನು ಪಡೆದವರು. ಇಂತಹ ವ್ಯಕ್ತಿ ಸಮಾಜಕ್ಕೆ ಮಾದರಿಯಾದವರು. ಇವರ ಸ್ಮರಣೆ ಮಾಡಬೇಕಾದ ದುಃಸ್ತರ ಸ್ಥಿತಿಯನ್ನು ಸ್ಮರಿಸಿ ಕೊಮೆ ಕೊರವಡಿ ವಿವಿದೋದ್ಧೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಮಾತನಾಡಿದರು.


ಮಾತೃಭಾಷೆಯ ಶಕ್ತಿಯನ್ನು ಹಬ್ಬದ ರೂಪದಲ್ಲಿ ಆಚರಿಸುವಂತಹ ಯೋಗ ನಮ್ಮ ಪಾಲಿಗೆ ಇತ್ತೀಚೆಗಷ್ಟೇ ಒದಗಿದೆ. ಇಂತಹ ಹಬ್ಬದಲ್ಲಿ ನನ್ನ ಸಾಹಿತ್ಯದ ಹೂರಣವನ್ನು ಯಕ್ಷಗಾನದ ವಿಭಿನ್ನ ಕಲ್ಪನೆಯೊಂದಿಗೆ ಹೋಳಿಗೆ ಮಾಡುವ ಉಭಯ ಸಂಸ್ಥೆಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ವ್ಯಕ್ತಪಡಿಸಿದರು.


ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಅಧ್ಯಕ್ಷತೆ ವಹಿಸಿದರು. ಖ್ಯಾತ ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ, ಸುರೇಶ್ ಶೆಟ್ಟಿ ಭಾರತೀಯ ಸ್ಟೇಟ್ ಬ್ಯಾಂಕ್, ಕುಂದಾಪುರ, ಶಿವರಾಮ ಶೆಟ್ಟಿ ಮಲ್ಯಾಡಿ, ಯಶಸ್ವಿ ಕಲಾವೃಂದದ ಸಂಚಾಲಕ ವೆಂಕಟೇಶ್ ವೈದ್ಯ ತೆಕ್ಕಟ್ಟೆ, ಪ್ರಶಾಂತ್ ಮಲ್ಯಾಡಿ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಬಳಿಕ ‘ನಂ ನಮ್ನಿ’ ಕಾರ್ಯಕ್ರಮದಲ್ಲಿ ಸಂದರ್ಶಕರಾಗಿ ಮನು ಹಂದಾಡಿ, ಸಂಕಥನದಲ್ಲಿ ಪ್ರಾಚಾರ್ಯ ಕೆ.ಪಿ. ಹೆಗಡೆ, ಸುರೇಶ್ ಶೆಟ್ಟಿ ಶಂಕರನಾರಾಯಣ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಲಂಬೋದರ ಹೆಗಡೆ, ಕೂಡ್ಲಿ ದೇವದಾಸ್ ರಾವ್, ಕೋಟ ಶಿವಾನಂದ, ರಾಘವೇಂದ್ರ ಹೆಗಡೆ ಯಲ್ಲಾಪುರ, ಭರತ್ ಚಂದನ್, ಡಾ. ವೈಕುಂಠ ಹೇರ್ಳೆ, ಸುಜಯೀಂದ್ರ ಹಂದೆ, ಶಶಿಕಾಂತ್ ಶೆಟ್ಟಿ ಕಾರ್ಕಳ, ಪ್ರಸಾದ್ ಭಟ್ಕಳ, ಹೆನ್ನಾಬೈಲ್ ವಿಶ್ವನಾಥ, ಸತೀಶ್ ಶೆಟ್ಟಿ ಮೂಡುಬಗೆ, ಡಾ. ಜಗದೀಶ್ ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!