Sunday, September 8, 2024

ವಂಡ್ಸೆ ಸ.ಮಾ.ಹಿ.ಪ್ರಾ ಶಾಲೆಯ ವಿಚಾರದಲ್ಲಿ ಶಿಕ್ಷಣ ಇಲಾಖೆ ಧೋರಣೆ ಬಗ್ಗೆ ಕೆಡಿಪಿ ಸಭೆಯಲ್ಲಿ ತೀವ್ರ ಅಸಮಾಧಾನ : ಸಮಸ್ಯೆ ಸರಿಪಡಿಸುವಂತೆ ವಿದ್ಯಾಂಗ ಉಪನಿರ್ದೇಶಕರಿಗೆ ಆಗ್ರಹ


ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯಿತಿಯ 2021-22ನೇ ಸಾಲಿನ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.


ಸಭೆಯಲ್ಲಿ ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿಚಾರದಲ್ಲಿ ಇಲಾಖೆ ಅನುಸರಿಸುತ್ತಿರುವ ದ್ವಂದ್ವ ನೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಲಾಯಿತು. ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ 1ರಿಂದ 7ನೇ ತರಗತಿ ತನಕ 296 ವಿದ್ಯಾರ್ಥಿಗಳಿದ್ದು, ಪ್ರಸ್ತುತ ದೈಹಿಕ ಶಿಕ್ಷಣ ಶಿಕ್ಷಕರು ಸೇರಿ 6 ಜನ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಅನುಪಾತಕ್ಕೆ ಅನುಗುಣವಾಗಿ 4 ಹುದ್ದೆಗಳು ಖಾಲಿ ಇರುತ್ತದೆ. ಆದರೆ ಶಿಕ್ಷಣ ಇಲಾಖೆ 2 ಖಾಲಿ ಹುದ್ದೆಗಳನ್ನು ಮಾತ್ರ ತೋರಿಸಿದೆ. ಕಳೆದ ವರ್ಷದ ಶೈಕ್ಷಣಿಕ ಸಾಲಿನಲ್ಲಿ 263 ವಿದ್ಯಾರ್ಥಿಗಳಿದ್ದು ಎರಡೂ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ಪರಿಗಣಿಸಿದರೂ ಕೂಡಾ ನಾಲ್ಕು ಶಿಕ್ಷಕರ ಅವಶ್ಯಕತೆ ಇರುತ್ತದೆ. ಶಿಕ್ಷಕರ ವರ್ಗಾವಣೆಯ ಸಂದರ್ಭದಲ್ಲಿ ಇಲಾಖೆಯ ನಿಯಮಾನುಸಾರ ಶಿಕ್ಷಕರನ್ನು ನೀಡುವಂತೆ ಡಿಡಿಪಿ‌ಐ ಅವರಿಗೆ ಕೋರಲಾಯಿತು.


ವಂಡ್ಸೆ ಮಾದರಿ ಶಾಲೆಯಲ್ಲಿ ಪದವಿಧರೇತರ ಮುಖ್ಯೋಪಾಧ್ಯಾಯ ಹುದ್ದೆಯಾಗಿದ್ದು, ಈಗ ವಿದ್ಯಾರ್ಥಿಗಳ ಸಂಖ್ಯೆ 296 ಇದ್ದು, ಪದವಿಧರೇತರ ಮುಖ್ಯೋಪಾಧ್ಯಾಯ ಹುದ್ದೆಯ ಬದಲಿಗೆ ಅವೈಜ್ಞಾನಿಕವಾಗಿ ಕೆಡರ್ ಮುಖ್ಯೋಪಾಧ್ಯಾಯ ಹುದ್ದೆ ಕಾಣಿಸುವ ಮೂಲಕ ಒಂದು ಹಂತ ಹಿಂದಕ್ಕೆ ತಳ್ಳಲಾಗಿದೆ. ಇಲಾಖೆಯ ಈ ಕ್ರಮ ಸರಿಪಡಿಸುವಂತೆ ಕೋರಲಾಯಿತು. ಹಾಗೆಯೇ ವಂಡ್ಸೆ ಗ್ರಾಮದ ಆತ್ರಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 9 ವಿದ್ಯಾರ್ಥಿಗಳಿದ್ದು ಇಬ್ಬರು ಶಿಕ್ಷಕರಿದ್ದಾರೆ. ವಂಡ್ಸೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಒಬ್ಬರು ಶಿಕ್ಷಕರನ್ನು ವಂಡ್ಸೆ ಶಾಲೆಗೆ ನಿಯೋಜನೆ ಮಾಡುವಂತೆ ನಿರ್ಣಯಿಸಲಾಯಿತು.


ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರು ಖಾಯಂ ವೈದ್ಯರು, ಇನ್ನೊಬ್ಬರು ನಿಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ದಿನಪೂರ್ತಿ ವೈದ್ಯರ ಸೇವೆ ಸಿಗುತ್ತಿಲ್ಲ. ಖಾಲಿ ಇರುವ ಹುದ್ದೆ ಭರ್ತಿ ಮಾಡಿ, ಸಮಸ್ಯೆ ಸರಿಪಡಿಸುವಂತೆ ಡಿ‌ಎಚ್‌ಓ ಅವರಿಗೆ ಕೋರಲಾಯಿತು. ಕೋವಿಡ್ ಲಸಿಕೆ ಈಗ ನೀಡುತ್ತಿರುವ ಪ್ರಮಾಣ ತೀರಾ ಕಡಿಮೆಯಾಗುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಒದಗಿಸುವಂತೆ ಮನವಿ ಮಾಡಲಾಯಿತು. ವಂಡ್ಸೆಯಲ್ಲಿ ರೇಬಿಸ್ ನಿಯಂತ್ರಣ ಚುಚ್ಚುಮದ್ದು ಹಾಗೂ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಶಿಬಿರ ಆಯೋಜಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಯಿತು. ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆಗಳಿಗೆ ಟೆಂಡರ್ ಆಗುತ್ತಿದ್ದರೂ ಚರಂಡಿ ಹೂಳೆತ್ತುವುದು, ರಸ್ತೆ ಇಕ್ಕೆಲದ ಪೊದೆ ಸ್ವಚ್ಛಗೊಳಿಸುವ ಕಾರ್ಯವಾಗುತ್ತಿಲ್ಲ. ಇದನ್ನು ಅಧಿಕಾರಿಗಳು ಗಮನಿಸುವಂತೆ ತಿಳಿಸಲಾಯಿತು. ವಂಡ್ಸೆ ಸಿ‌ಎ ಬ್ಯಾಂಕ್ ಅಧೀನದ ನ್ಯಾಯಬೆಲೆ ಅಂಗಡಿಯಲ್ಲಿ ಡಿಜಿಟಲ್ ತೂಕ ಮಾಫಕ ಆಳವಡಿಸುವಂತೆ ಸೂಚಿಸಲಾಯಿತು.


ಸಭೆಯಲ್ಲಿ ಗ್ರಾ.ಪಂ, ಉಪಾಧ್ಯಕ್ಷೆ ಗೀತಾ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸುಬ್ಬು, ಪಿಡಿ‌ಓ ರೂಪಾ ಗೋಪಿ, ಕಾರ್ಯದರ್ಶಿ ಶಂಕರ ಆಚಾರ್ಯ, ವಂಡ್ಸೆ ಸಮೂಹ ಸಂಪನ್ಮೂಲ ಕೇಂದ್ರದ ನಾಗರಾಜ ಶೆಟ್ಟಿ, ವಂಡ್ಸೆ ಶಾಲಾ ಮುಖ್ಯೋಪಾಧ್ಯಾಯ ಚಂದ್ರ ನಾಯ್ಕ್, ವಿ.ಎ ವಿಘ್ನೇಶ್, ಮೆಸ್ಕಾ ಜೆ‌ಇ ಪ್ರಕಾಶ್, ಪಶು ಇಲಾಖೆಯ ಪ್ರಮೋದಚಂದ್ರ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿ ಹೇಮಾ, ಅಂಗನವಾಡಿ ಮೇಲ್ವಿಚಾರಕಿ ಸುಮ, ಆರೋಗ್ಯ ಸಹಾಯಕಿ ಪಾರ್ವತಿ ಪಟಗಾರ್, ಕೆ‌ಆರ್‌ಐಡಿ‌ಎಲ್‌ನ ದೀಲಿಪ್, ಸಿ.ಎ ಬ್ಯಾಂಕ್‌ನ ಸುಚಿತ್ ಕುಮಾರ್ ಶೆಟ್ಟಿ, ಗ್ರಂಥಾಲಯ ಮೇಲ್ವಿಚಾರಕಿ ಸಂಗೀತಾ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!