Sunday, September 8, 2024

ವಾರಾಹಿ ನೀರಾವರಿ ನಿಗಮದ ಅಭಿವೃದ್ದಿ ಅನುದಾನ ಅಚ್ಚುಕಟ್ಟು ಪ್ರದೇಶಕ್ಕೆ ಮೀಸಲಾಗಿರಲಿ-ಪ್ರತಾಪಚಂದ್ರ ಶೆಟ್ಟಿ


ವಾರಾಹಿ ಎಡದಂಡೆ ನೀರಾವರಿ ಯೋಜನೆಯ ಬೀಜಾಡಿ, ಕೋಟೇಶ್ವರ ವಲಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರ ಸಭೆ

ಕುಂದಾಪುರ, ಜು.24: ವಾರಾಹಿ ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿಗೆ ನೀಡಬೇಕಾಗಿರುವ ರಸ್ತೆ ಅಭಿವೃದ್ದಿ ಅನುದಾನವನ್ನು ಬೇರೆ ಜಿಲ್ಲೆಗಳಿಗೆ ನೀಡುವುದರಿಂದ ಅಚ್ಚುಕಟ್ಟು ಪ್ರದೇಶಕ್ಕೆ ಅನ್ಯಾಯವಾಗುತ್ತದೆ. ವಾರಾಹಿ ನೀರಾವರಿ ಯೋಜನೆಯ ಮೂಲಕ ನೀಡುವ ಅನುದಾನ ಅಚ್ಚುಕಟ್ಟು ಪ್ರದೇಶಕ್ಕೆ ಮೊದಲ ಆದ್ಯತೆ ನೀಡಬೇಕು. ಪ.ಜಾತಿ., ಪ.ಪಂಗಡಗಳಿಗೆ ನೀಡುವ ನಿರ್ದಿಷ್ಟ ಅನುದಾನ ಹಾಗೂ ನೀರು ನೀಡುವ ವಿಚಾರದಲ್ಲಿ ಆದ್ಯತೆಯ ಮೇಲೆ ಪರಿಗಣಿಸಿಬೇಕು ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.


ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ಬೀಜಾಡಿ ಮತ್ತು ಕೋಟೇಶ್ವರ ವಲಯ ವ್ಯಾಪ್ತಿಯ ವಾರಾಹಿ ಎಡದಂಡೆ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಈ ವಾರಾಹಿ ಎಡದಂಡೆ ನೀರಾವರಿ ಯೋಜನೆಯ ಕಾಲುವೆ ಮತ್ತು ಉಪ ಕಾಲುವೆಗಳು ಯಾವ ಸರ್ವೇ ನಂಬರ್ ಗಳ ಮೂಲಕ ಹಾದು ಹೋಗುತ್ತದೆ ಮತ್ತು ಯಾವ ಸರ್ವೇ ನಂಬರ್ ಗಳ ಅಚ್ಚುಕಟ್ಟು ಪ್ರದೇಶಗಳಿಗೆ ನೀರನ್ನು ಒದಗಿಸಲಾಗುತ್ತದೆ ಎನ್ನುವ ಅನಿಶ್ಚಿತತೆಯು ರೈತರ ಮನದಲ್ಲಿರಿರುವುದರಿಂದ ಆಯಾಯ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುವ ಕಾಲುವೆಯ ನಕ್ಷೆಯನ್ನು ಕೂಡಲೆ ಪಂಚಾಯಿತಿಗಳಿಗೆ ಒದಗಿಸಬೇಕು. ಮೂಲ ಯೋಜನೆಯಲ್ಲಿರುವ ಯಾವ ಭೂಮಿಗೂ ಅನ್ಯಾಯವಾಗಬಾರದು. ವಡೇರಹೋಬಳಿ, ಬೀಜಾಡಿ, ಗೋಪಾಡಿ, ಕುಂಭಾಶಿ ಗ್ರಾಮಗಳಿಗೆ ನೀರು ಒದಗಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ರೈಲ್ವೆ ಮಾರ್ಗ, ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಮಾಡುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಬಾರದು. ಏತ ನೀರಾವರಿ, ಕೆರೆ ತುಂಬಿಸುವುದು ಸಮಸ್ಯೆಗಳಿಗೆ ಪರಿಹಾರವಲ್ಲ, ಕಾಲುವೆಯ ಮೂಲಕ ನೀರು ನೀಡಲು ಗರಿಷ್ಠ ಪ್ರಯತ್ನ ಮಾಡಬೇಕು, ಕೆರೆಗೆ ನೀರು ಬಿಡುವುದಕ್ಕೆ ಅಭ್ಯಂತರವಿಲ್ಲ, ಮೊದಲ ಆಧ್ಯತೆ ಮೂಲ ಯೋಜನೆಯಲ್ಲಿರುವಂತೆ ಮಾಡಿ ಎಂದ ಅವರು, ಗುಣಮಟ್ಟದ ಕಾಮಗಾರಿ ನಡೆಯದಿರುವುದು, ಕಾಮಗಾರಿ ನಿರ್ವಹಣೆಯಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದರು.

ವಾರಾಹಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಪ್ರವೀಣ್ ಮಾಹಿತಿ ನೀಡಿ, ವಾರಾಹಿ ನೀರಾವರಿ ನಿಗಮದ 44.5 ಕಿ.ಮೀ ಕಾಲುವೆಯ 38 ಕಿ.ಮೀ ಪೂರ್ಣಗೊಂಡಿದೆ. 6 ಕಿ.ಮೀ ಗೆ ಟೆಂಡರ್ ಆಗಿದೆ. 38ನೇ ಕಿ.ಮೀ ರೈಲ್ವೆ ಮಾರ್ಗ ಇರುವುದರಿಂದ ಕೊಂಕಣ ರೈಲ್ವೆಯ ಅನುಮೋದನೆ ಸಿಗಬೇಕು. ಮುಖ್ಯ ಕಾಲುವೆಯಾದ ಬಳಿಕ ಉಪ ಕಾಲುವೆಗಳ ಕೆಲಸ ಪೂರ್ಣವಾಗುತ್ತದೆ. ಕಂದಾವರ 20 ಎಕರೆ ಪ್ರದೇಶದ ಹೇರಿಕೆರೆ ನೀರು ಬಿಡುವುದರಿಂದ ಕೆಳಭಾಗದ ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಬೀಜಾಡಿಯ ಕೆರೆ, ವರುಣತೀರ್ಥ ಕೆರೆಗಳಿಗೆ ತುಂಬಿಸುವುದರಿಂದ ನೀರು ನೀಡಲು ಸಾಧ್ಯವಿದೆ. ಈಗಾಗಲೇ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಆಯಾ ಆಯಾ ಗ್ರಾಮ ಪಂಚಾಯತಿಗಳಿಗೆ ಪಂಚಾಯತಿ ವ್ಯಾಪ್ತಿಯ ಹಾದು ಹೋಗುವ ಕಾಲುವೆ, ಸರ್ವೇನಂಬರ್ ಗಳ ಮಾಹಿತಿಯನ್ನು ಆಗಸ್ಟ್ 2ನೇ ವಾರದ ಒಳಗೆ ನೀಡಲಾಗುವುದು ಎಂದರು.


ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, 1979ರಲ್ಲಿ ತಯಾರಾದ ಮೂಲ ಯೋಜನೆಯಂತೆ 15 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಮೊದಲು ನೀರು ಸಿಗಬೇಕು. ಬಳಿಕ ಎಲ್ಲಿಗೆ ಬೇಕಾದರೂ ನೀರನ್ನು ತಗೆದುಕೊಂಡು ಹೋಗಿ, ಅದಕ್ಕೆ ರೈತ ಸಂಘದ ಅಭ್ಯಂತರವಿಲ್ಲ, ಆದರೆ ನಿಜವಾದ ಫಲಾನುಭವಿಗೆ ಅನ್ಯಾಯವಾಗಬಾರದು, ವಾರಾಹಿ ಕಾಲುವೆಗೆ ಭೂಮಿ ಕಳೆದುಕೊಂಡವರಿಗೆ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಬೇಸರ ರೈತರಲ್ಲಿದೆ, ವಾರಾಹಿ ಯೋಜನೆಯಡಿ ರಸ್ತೆ ಕಾಮಗಾರಿಗಳು ವಾರಾಹಿ ಯೋಜನೆಗೆ ಸಂಬಂಧವಿಲ್ಲದ ಪ್ರದೇಶಗಳಿಗೆ ಹೋಗುತ್ತಿದೆ, ವಾರಾಹಿ ಅಚ್ಚುಕಟ್ಟು ಪ್ರದೇಶಕ್ಕೆ ಅದು ಸಿಗುವಂತಾಗಬೇಕು, ಆ ನಿಟ್ಟಿನಲ್ಲಿ ರೈತ ಸಂಘ ಪಕ್ಷಾತೀತವಾಗಿ ಹೋರಾಟ ನಡೆಸಲಿದೆ ಎಂದರು.


ಹೆರಿಯಣ್ಣ ಚಾತ್ರಬೆಟ್ಟು ಮಾತನಾಡಿ, ಬೀಜಾಡಿ ಭಾಗಕ್ಕೆ ನೀರು ಲಿಪ್ಟ್ ಮಾಡುವ ಯೋಜನೆ ಅಷ್ಟೊಂದು ಪರಿಣಾಮಕಾರಿಯಾಗಲಾರದು. ಕಾಲುವೆಯ ಮೂಲಕವೇ ನೀರು ಕೊಡಬೇಕು, ಹೂಳು ತುಂಬಿರುವ ಕೆರೆಗೆ ನೀರು ಹಾಯಿಸಿದರೆ ಪ್ರಯೋಜನವಿಲ್ಲ, ಬೀಜಾಡಿ ಕೆರೆ ಹೂಳು ತುಂಬಿದೆ. ಹೂಳು ತೆಗೆಯಲು ಯೋಜನೆ ರೂಪಿಸಬೇಕು, ಎಂದರು.


ರೈತ ಸಂಘದ ಸದಾನಂದ ಶೆಟ್ಟಿ ಕೆದೂರು ಮಾತನಾಡಿ, ನೀರು ಲಿಪ್ಟ್ ಮಾಡುವುದು ಅಷ್ಟೊಂದು ಸಮರ್ಪಕವಾಗಲಾರದು, ಕಾಲುವೆ ಮೂಲಕವೇ ನೀರುವ ನೀಡಲು ಪ್ರಯತ್ನಿಸಿ, ಇದು ಹೆಚ್ಚು ಅನುಕೂಲವಾಗುತ್ತದೆ ಎಂದರು.


ರೈತ ಸಂಘದ ಕೃಷ್ಣದೇವ ಕಾರಂತ ಕೋಣಿ ಮಾತನಾಡಿ, ವಡೇರಹೋಬಳಿಯಿಂದ ತೆಕ್ಕಟ್ಟೆಯ ತನಕ ಕರಾವಳಿ ಭಾಗದ ರೈತರ ನೀರಿನ ಸಮಸ್ಯೆ ಈ ಯೋಜನೆಯ ಮೂಲಕ ಪರಿಹಾರವಾಗಬೇಕು. ಮೂಲ ಯೋಜನೆಯಂತೆ ಹೆದ್ದಾರಿಯ ಪಶ್ಚಿಮ ಭಾಗದಲ್ಲಿರುವ ರೈತರಿಗೆ ನೀರು ಸಿಗಬೇಕು ಎಂದು ಆಗ್ರಹಿಸಿದರು.


ಪತ್ರಕರ್ತ ಚಂದ್ರಶೇಖರ ಬೀಜಾಡಿ ಮಾತನಾಡಿ, ಮೂಲ ಯೋಜನೆಯಲ್ಲಿ ಬೀಜಾಡಿ 244.04 ಹೆಕ್ಟೇರ್ ಪ್ರದೇಶದ ಗುರಿ ಇತ್ತು. ಅಷ್ಟೂ ಪ್ರದೇಶಕ್ಕೆ ನೀರು ಸಿಗಬೇಕು. ನೀರನ್ನು ಹೆದ್ದಾರಿಯಿಂದ ಪಶ್ಚಿಮ ಭಾಗಕ್ಕೆ ತರುವುದು ಸಮಸ್ಯೆಯಾಗಬಾರದು. ಸ್ವಾಭಾವಿಕವಾಗಿ ಮಳೆ ನೀರು ಹೆದ್ದಾರಿಯ ಪಶ್ಚಿಮ ಭಾಗಕ್ಕೆ ಹರಿಯುತ್ತದೆ. ಹಾಗಿರುವಾಗ ಕಾಲುವೆ ಮಾಡಲು ತೊಂದರೆ ಏನು? ಎಂದು ಪ್ರಶ್ನಿಸಿದರು.


ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ ಮುಖ್ಯ ಕಾಲುವೆ ಎಲ್ಲಿ ಮುಕ್ತಾಯವಾಗುತ್ತದೆ? ಕೊಮೆ ಕೊರವಡಿ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರೈತರಿದ್ದು ನೀರಿನ ಅವಶ್ಯಕತೆ ಇದೆ. ಯಾವುದೇ ಕಾರಣಕ್ಕೂ ವಾರಾಹಿ ನೀರಾವರಿ ಯೋಜನೆಯಲ್ಲಿ ತೆಕ್ಕಟ್ಟೆ ಗ್ರಾ.ಪಂ ಕಳೆದು ಹೋಗಬಾರದು ಎಂದರು.


ಸಭೆಯಲ್ಲಿ ವಾರಾಹಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ಪ್ರಸನ್ನ ಕುಮಾರ್, ಎನ್.ಜಿ ಭಟ್, ವಿಜಯ ಶೆಟ್ಟಿ ಮತ್ತು ಶಾಖಾಧಿಕಾರಿಗಳು ಉಪಸ್ಥಿತರಿದ್ದರು.
ರೈತ ಸಂಘದ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾ.ಪಂ.ಗಳ ಅಧ್ಯಕ್ಷರು, ಸದಸ್ಯರು, ರೈತರು ಸಭೆಯಲ್ಲಿ ಭಾಗವಹಿಸಿದ್ದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!