Sunday, September 8, 2024

ಎಚ್. ಸುಜಯೀಂದ್ರರ ‘ರುರು ಪ್ರಮದ್ವರಾ’ ಯಕ್ಷಗಾನ ಪ್ರಸಂಗ ಬಿಡುಗಡೆ


ಕುಂದಾಪುರ: ಪ್ರಸಂಗ ಸಾಹಿತ್ಯ ಮೂಲತಃ ಕಥನ ಕಾವ್ಯ. ಯಕ್ಷಗಾನವು ಗಾನಪ್ರಬಂಧವಾಗಿದ್ದು ಮತ್ತೆ ಅದು ವಿಕಾಸ ಹೊಂದುತ್ತಾ ಪ್ರದರ್ಶನ ಕಲೆಯಾಗಿದೆ. ಸಂಸ್ಕೃತ ಪೌರಾಣಿಕ ಮಹಾ ಕಾವ್ಯಗಳು ಯಕ್ಷಗಾನ ಪ್ರಸಂಗದ ಮೂಲಕ ಜನ ಸಾಮಾನ್ಯರನ್ನು ತಲುಪಿವೆ. ಕಾಲ್ಪನಿಕ ಪ್ರಸಂಗಗಳ ಆಯುಷ್ಯ ಕಡಿಮೆ. ಪೌರಾಣಿಕ ಪ್ರಸಂಗಗಳ ಪಾತ್ರಗಳು ಆಳವಾಗಿ ವಿಸ್ತಾರವಾಗಿ ಬೆಳೆಯಬಲ್ಲವಾದ್ದರಿಂದಲೇ ಅವು ನಿತ್ಯ ನೂತನವಾಗಿವೆ. ಕಥಾ ವಸ್ತು, ಸಾಹಿತ್ಯ, ತಂತ್ರ, ಪದರಚನಾ ಕೌಶಲ್ಯ, ಸಾಂದರ್ಭಿಕವಾದ ಛಂದೋಬಂಧಗಳು ಮತ್ತು ಪ್ರದರ್ಶನದ ಪರಿಣಾಮದ ದೃಷ್ಡಿಯಿಂದ ಯಾವುದೇ ಯಕ್ಷಗಾನ ಪ್ರಸಂಗ ಮೌಲ್ಯವನ್ನು ಪಡೆಯಬಲ್ಲುದು. ಈ ಎಲ್ಲಾ ನಿಟ್ಟಿನಲ್ಲಿ ಸುಜಯೀಂದ್ರರ ರುರು ಪ್ರಮದ್ವರಾ ಯಕ್ಷಗಾನ ಪ್ರಸಂಗವು ಯಶಸ್ವಿಯಾಗುವಲ್ಲಿ ನಿಸ್ಸಂದೇಹ ಎಂದು ಯಕ್ಷಗಾನ ವಿದ್ವಾಂಸ, ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ ಹೇಳಿದರು.


ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ, ಮಲ್ಯಾಡಿ ಲೈವ್ ಡಾಟ್ ಕಾಮ್ ಮತ್ತು ಸಾಲಿಗ್ರಾಮ ಮಕ್ಕಳ ಮೇಳ ಜಂಟಿಯಾಗಿ ಜುಲೈ 24 ರಂದು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಉಪನ್ಯಾಸಕ ಸುಜಯೀಂದ್ರ ಹಂದೆಯವರ ಯಕ್ಷಗಾನ ಪ್ರಸಂಗ ರುರು ಪ್ರಮದ್ವರಾ ಕೃತಿ ಅನಾವರಣ ಮಾಡಿದ ಐತಾಳರು, ರುರು ಪ್ರಮದ್ವರಾ ಪ್ರಸಂಗವು ಒಂದು ಪ್ರೇಮ ಕಾವ್ಯ. ಪ್ರೀತಿ ಪ್ರೇಮ ಎಂಬುದು ಮಾನವನಿಗೆ ಹುಟ್ಟಿನಿಂದ ಅಂಟಿಕೊಂಡದ್ದು. ಯಾವುದೇ ಸಿನೆಮಾ, ನಾಟಕ, ಸಾಹಿತ್ಯವನ್ನು ಗಮನಸಿದರೂ ಅಲ್ಲಿ ಪ್ರೇಮ ಎಂಬುದು ಸಹಜವಾದ ವಸ್ತುವಾಗಿ ಮೂಡಿಬಂದಿದೆ. ಸುಜಯೀಂದ್ರರು ತಮ್ಮ ಕೃತಿಯಲ್ಲೂ ಪ್ರೇಮ ಎಂಬುದನ್ನು ಅಮರ ಕಾವ್ಯವಾಗಿ ಚಿತ್ರಿಸಿದ್ದಾರೆ ಎಂದು ನುಡಿದರು.

ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಗುರು ಪೂರ್ಣಿಮೆಯ ಅಂಗವಾಗಿ ಯಕ್ಷಗಾನ ಪ್ರಾಚಾರ್ಯರಾದ ಕೆ.ಪಿ. ಹೆಗಡೆ ಮತ್ತು ಸದಾನಂದ ಐತಾಳರನ್ನು ಸಂಮಾನಿಸಿ ಗೌರವಿಸಿಲಾಯಿತು. ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಬೆಂಗಳೂರಿನ ಯಕ್ಷದೇಗುಲದ ಸುದರ್ಶನ ಉರಾಳ, ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಜನಾರ್ದನ ಹಂದೆ, ಭಾಗವತ ಲಂಬೋದರ ಹೆಗಡೆ, ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.


ಸುಜಯೀಂದ್ರ ಹಂದೆ ಪ್ರಾಸ್ಥಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಶಾಂತ ಮಲ್ಯಾಡಿ ವಂದಿಸಿ, ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು.


ಬಳಿಕ ಭಾಗವತರಾದ ಕೆ.ಪಿ. ಹೆಗಡೆ, ಲಂಬೋದರ ಹೆಗಡೆ, ಪ್ರಸಾದ ಕುಮಾರ ಮೊಗೆಬೆಟ್ಟು, ಮದ್ದಳೆವಾದಕ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆವಾದಕರಾದ ಕೋಟ ಶಿವಾನಂದ ಮತ್ತು ಸುದೀಪ ಉರಾಳರ ಹಿಮ್ಮೇಳದಲ್ಲಿ ರುರು ಪ್ರಮದ್ವರಾ ಪ್ರಸಂಗದ ಗಾನ ಸುಧಾ ಕಾರ್ಯಕ್ರಮ ನೆರವೇರಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!