Sunday, September 8, 2024

ಮಹಿಳಾ ಕ್ರಿಕೆಟ್ ಕ್ಷಿತಿಜದ ‘ಹೊಸ ತಾರೆ’ ಶೆಫಾಲಿ ವರ್ಮ


(ಎಸ್.ಜಗದೀಶಚಂದ್ರ ಅಂಚನ್ ಸೂಟರ್ ಪೇಟೆ)
ಭಾರತದ ಕ್ರಿಕೆಟ್ ರಂಗದಲ್ಲಿ ಇತ್ತೀಚೆಗೆ ವಿಶ್ವದರ್ಜೆಯ ಹಲವು ಪ್ರತಿಭಾವಂತ ಆಟಗಾರರು ಮೂಡಿ ಬರುತ್ತಿದ್ದಾರೆ. ವಿಶಿಷ್ಟವೆಂದರೆ ಮಹಿಳಾ ಕ್ರಿಕೆಟಿನಲ್ಲೂ ಉದಯೋನ್ಮುಖ ಆಟಗಾರ್ತಿಯರು ಹೊರ ಹೊಮ್ಮುತ್ತಿದ್ದಾರೆ. ಹೌದು, ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆಗೈದ ಭಾರತದ ಯುವ ಆಟಗಾರ್ತಿ ಶೆಫಾಲಿ ವರ್ಮ ತನ್ನ ಚೊಚ್ಚಲ ಪಂದ್ಯದಲ್ಲೇ ಗಮನಾರ್ಹ ಸಾಧನೆ ಮೂಲಕ ಗಮನ ಸೆಳೆದಾಕೆ. ಅನನ್ಯ ಪ್ರತಿಭೆಯೊಂದಿಗೆ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟ ಶೆಫಾಲಿ ವರ್ಮ ಇದೀಗ ಮಹಿಳಾ ಕ್ರಿಕೆಟಿನ ಆಶಾಕಿರಣ.


ಹದಿನೇಳರ ಹರೆಯದ ಈಕೆ ಕ್ರಿಕೆಟ್ ಆಟಗಾರ್ತಿಯಾಗಿ ರೂಪುಗೊಳ್ಳಲು ’ಕ್ರಿಕೆಟ್ ಲೆಜೆಂಡ್’ ಸಚಿನ್ ತೆಂಡೂಲ್ಕರ್ ಸ್ಪೂರ್ತಿಯಾಗಿದ್ದಾರೆ. ೨೦೧೩ರಲ್ಲಿ ಸಚಿನ್ ತೆಂಡೂಲ್ಕರ್ ಕೊನೆಯ ಬಾರಿಗೆ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯವನ್ನು ಆಡಿದ್ದರು. ಅದೂ ಶೆಫಾಲಿ ತವರು ತಂಡ ಹರ್ಯಾಣ ತಂಡದ ವಿರುದ್ದ. ಆಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಅಪ್ಪನ ತೊಡೆಯಲ್ಲಿ ಕುಳಿತಿದ್ದ ಪುಟಾಣಿ ಶೆಫಾಲಿ ’ಸಚಿನ್ .. ಸಚಿನ್ ..’ ಎಂದು ಚಿಯರ್ ಮಾಡುತ್ತಿದ್ದಳಂತೆ. ಹೀಗೆ ಸಚಿನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ನಿಂದ ಆಕರ್ಷಿತರಾದ ಈಕೆ ತನ್ನ ಎಂಟನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದಳು.


ತಂದೆಯೇ ಮೊದಲ ಕೋಚ್:
೨೦೦೪ರ ಜನವರಿ-೨೮ರಂದು ಹರ್ಯಾಣದ ರೋಹ್ಟಕ್‌ನಲ್ಲಿ ಜನಿಸಿದ ಶೆಫಾಲಿಗೆ ಅವರ ತಂದೆಯೇ ಮೊದಲ ಕೋಚ್. ತಂದೆಯೊಂದಿಗೆ ಟೆನಿಸ್ ಚೆಂಡಿನೊಂದಿಗೆ ಮೊದಲು ಬ್ಯಾಟಿಂಗ್ ಅಭ್ಯಾಸವನ್ನು ಪ್ರಾರಂಭಿಸಿದ ಈಕೆ ಚೆಂಡನ್ನು ಸರಾಗವಾಗಿ ಸಿಕ್ಸರ್ ಗೆ ಅಟ್ಟುತ್ತಿದ್ದರು. ಇದನ್ನು ಗಮನಿಸಿ ಇವರ ತಂದೆ ಸ್ಥಳೀಯ ಕ್ರಿಕೆಟ್ ಮೈದಾನಕ್ಕೆ ಈಕೆಯನ್ನು ಕರೆದೊಯ್ಯುದ್ದು ಸಿಕ್ಸರ್ ಬಾರಿಸುವುದಕ್ಕೆ ಉತ್ತೇಜನವನ್ನು ನೀಡಿದರು. ಈಕೆ ಬಾರಿಸುವ ಪ್ರತಿ ಸಿಕ್ಸರ್‌ಗೆ ೫ ರೂಪಾಯಿ ಬಹುಮಾನವನ್ನು ತಂದೆ ನೀಡುತ್ತಿದ್ದರು. ಆರಂಭಿಕ ಹಂತದಲ್ಲೇ ತಂದೆಯ ಬೆಂಬಲ ಶೆಫಾಲಿಯ ಕ್ರಿಕೆಟ್ ಬದುಕಿಗೆ ಯಾವುದೇ ಅಡೆತಡೆಯಾಗಲಿಲ್ಲ. ವಯಸ್ಸಿಗೂ ಮೀರಿದ ಅದ್ಭುತ ಕೌಶಲ್ಯದ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಈಕೆ ೧೫ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದು ವಿಶೇಷ.


ಟ್ವೆಂಟಿ-೨೦ ಕ್ರಿಕೆಟಿಗೆ :
೨೦೧೯ರ ಸಪ್ಟೆಂಬರ್-೨೪ರಂದು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಶೆಫಾಲಿ ಟ್ವೆಂಟಿ-೨೦ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆಗೈದಿದ್ದರು. ನಂತರ ವೆಸ್ಟ್ ಇಂಡೀಸ್ ವಿರುದ್ಧ ೪೯ಎಸೆತಗಳಲ್ಲಿ ೭೩ರನ್ ಬಾರಿಸಿ, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೇ ಮೀರಿ ನಿಂತರು. ಸಚಿನ್ ತೆಂಡೂಲ್ಕರ್ ಅವರ ಆರಾಧಕಿಯಾಗಿ ತಾನೂ ಕೂಡ ಕ್ರಿಕೆಟ್ ರಂಗದಲ್ಲಿ ಸಾಧನೆ ಮಾಡಬೇಕೆಂಬ ತುಡಿದಲ್ಲಿರುವ ಶೆಫಾಲಿ ವರ್ಮ, ಸಚಿನ್ ತೆಂಡೂಲ್ಕರ್ ಅವರಂತೆ ಆರಂಭಿಕ ಆಟಗಾರ್ತಿಯಾಗಿ ಭಾರತ ಮಹಿಳಾ ತಂಡದಲ್ಲಿ ಇಂದು ಮಿಂಚುತ್ತಿದ್ದಾರೆ. ಈಕೆ ಬಿರುಸಿನ ಹೊಡೆತಗಳ ಆಟಗಾರ್ತಿ. ಸೀಮಿತ ಓವರ್ ಗಳ ಪಂದ್ಯವಿರಲಿ ಅಥವಾ ಟೆಸ್ಟ್ ಪಂದ್ಯವಿರಲಿ ಶೆಫಾಲಿ ಮಾತ್ರ ತಮ್ಮ ಹೊಡಿಬಡಿಯ ಬ್ಯಾಟಿಂಗ್ ಶೈಲಿಯಿಂದಲೇ ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಈಕೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ತೋರಿದ ನಿರ್ಭೀತ ಬ್ಯಾಟಿಂಗ್ ನೋಡಿ ಕ್ರಿಕೆಟ್ ದಿಗ್ಗಜರು ಸೇರಿದಂತೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.


ಡೆಬ್ಯು ಟೆಸ್ಟ್ ದಾಖಲೆಗೆ:
ಶೆಫಾಲಿ ವರ್ಮ ಇಂಗ್ಲೆಂಡ್ ವಿರುದ್ಧ ಆಡಿದ ಡೆಬ್ಯು ಟೆಸ್ಟೇ ದಾಖಲೆ ಪುಟಕ್ಕೆ ಸೇರಿದೆ . ಹೊಸ ಚೆಂಡಿನ ಎದುರು ಈಕೆ ತನ್ನ ವಿವೇಚನೆಯ ಬ್ಯಾಟಿಂಗ್ ನಡೆಸಿದ್ದು ಮೆಚ್ಚುಗೆಯ ಸಂಗತಿ. ತನ್ನ ಬ್ಯಾಟಿಂಗ್ ಬತ್ತಳಿಕೆಯಲ್ಲಿ ವೈವಿಧ್ಯತೆಯ ಹೊಡೆತಗಳಿಂದ ರಂಜಿಸಿದ ಶೆಫಾಲಿ ಮೊದಲ ಇನ್ನಿಂಗ್ಸ್ ನಲ್ಲಿ ಶತಕದ ಅಂಚಿನಲ್ಲಿ ಔಟಾದರು. ಕೇವಲ ನಾಲ್ಕು ರನ್ನಿನಿಂದ ಶತಕ ವಂಚಿತರಾದ (೯೬ರನ್) ಇವರು ಎರಡನೇ ಇನ್ನಿಂಗ್ಸ್ ನಲ್ಲೂ ಪ್ರಬುದ್ಧ ಆಟವಾಡಿ ೬೩ರನ್ ಗಳ ಕೊಡುಗೆ ನೀಡಿದರು. ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿದ ಅತಿ ಕಿರಿಯ ಆಟಗಾರ್ತಿ ಎನ್ನುವ ಹಿರಿಮೆಗೆ ಶೆಫಾಲಿ ಪಾತ್ರರಾದರು. ಈಕೆಯ ಬ್ಯಾಟಿಂಗ್ ಕಲೆ ಇದೀಗ ಕ್ರಿಕೆಟ್ ವಲಯದಲ್ಲಿ ಸಂಚಲನವನ್ನು ಮೂಡಿಸಿದೆ.


ಹಾಗೆ ನೋಡಿದರೆ , ಶೆಫಾಲಿ ವರ್ಮ ಮೂಲತಃ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಗಳ ಆಟಗಾರ್ತಿ. ಈಕೆಗೆ ವಯಸ್ಸು ೧೭ ಆಗಿದ್ದರೂ ೨೨ ಟ್ವೆಂಟಿ -೨೦ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಷ್ಟೇ ಅವರ ಅನುಭವ. ಈಕೆ ಆಡಿರುವ ೨೨ ಟ್ವೆಂಟಿ-೨೦ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ೨೯.೩೮ರ ಸರಾಸರಿಯಲ್ಲಿ ೩ ಅರ್ಧಶತಕಗಳ ನೆರವಿನಿಂದ ೬೧೭ರನ್ ಗಳಿಸಿದ್ದಾರೆ. ಟ್ವೆಂಟಿ-೨೦ ಕ್ರಿಕೆಟ್ ಮಾದರಿಯಲ್ಲಿ ಈಗಾಗಲೇ ಸ್ಫೋಟಕ ಶೈಲಿಯ ಆಟಗಾರ್ತಿ ಎಂಬ ಹೆಸರು ಪಡೆದಿರುವ ಶೆಫಾಲಿ, ಆಕ್ರಮಣ ಮತ್ತು ರಕ್ಷಣಾತ್ಮಕ ಆಟದ ಮೂಲಕ ವಿಕೆಟ್ ಉಳಿಸುತ್ತ ರನ್ ಸೇರಿಸಿ ಟೆಸ್ಟ್ ಕ್ರಿಕೆಟ್‌ಗೂ ಸೈ ಎಂಬುದನ್ನು ಸಾಬೀತು ಪಡಿಸಿದ್ದಾಳೆ. ಈಕೆ ಒತ್ತಡದ ಪರಿಸ್ಥಿತಿಯನ್ನು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ನಿಭಾಯಿಸಿದ ರೀತಿ ಬಹು ಪ್ರಶಂಸೆಗೆ ಪಾತ್ರವಾಯಿತು. ಈಕೆಯ ದಿಟ್ಟತನದ ಬ್ಯಾಟಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಂದುಕೊಟ್ಟಿತು.


ಸೆಹ್ವಾಗ್ ಪ್ರತಿರೂಪ :
ಶೆಫಾಲಿ ವರ್ಮ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ಕಂಡಿರುವ ಕ್ರಿಕೆಟ್ ಪಂಡಿತರು ಈಕೆಯನ್ನು ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಬ್ಯಾಟ್ ಬೀಸುವ ಶೈಲಿಯಲ್ಲೂ ಸೆಹ್ವಾಗ್ ಅವರನ್ನೇ ಹೋಲುವ ಶೆಫಾಲಿ, ವಿಶೇಷವಾಗಿ ಮೊಣಕಾಲು ಎತ್ತರದಲ್ಲಿ ಆಫ್‌ಸೈಡ್‌ನಿಂದ ಹೊರಹೋಗುವ ಚೆಂಡನ್ನು ಸ್ಟಿಯರ್ ಮಾಡಿ ಥರ್ಡ್‌ಮ್ಯಾನ್ ಕಡೆಯಿಂದ ಬೌಂಡರಿಗೆ ಅಟ್ಟುವುದನ್ನು ನೋಡುವುದೇ ಖುಷಿ. ಈ ಶೈಲಿಯಲ್ಲಿ ಈಕೆ ಸೆಹ್ವಾಗ್ ಅವರನ್ನೇ ಹೋಲುತ್ತಾರೆ ಎಂದು ವೀಕ್ಷಕ ವಿವರಣೆಕಾರ ಹರ್ಷ ಬೋಗ್ಲೆ ಗುರುತಿಸಿದ್ದಾರೆ. ಭಾರತ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ರೀಸ್‌ನಲ್ಲಿರುವ ಜೊತೆ ಆಟಗಾರ್ತಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು, ದಾಳಿ ನಡೆಸುವ ಎದುರಾಳಿಗಳ ತಂತ್ರಗಳನ್ನೂ ಗಮನದಲ್ಲಿಟ್ಟುಕೊಂಡು ಸಮರ್ಥವಾದ ಪ್ರತಿತಂತ್ರ ಹೂಡುವ ಬ್ಯಾಟಿಂಗ್ ಕಲೆ ಶೆಫಾಲಿಯ ವಯಸ್ಸು ಮತ್ತು ಅನುಭವವನ್ನು ಮೀರಿದ ಪ್ರಬುದ್ಧತೆಯನ್ನು ತೋರಿಸುತ್ತದೆ.


ಶೆಫಾಲಿ ವರ್ಮ ಬಾರಿಸುವ ಕೆಲವೊಂದು ಹೊಡೆತಗಳು ಕೂಡ ವೀರೇಂದ್ರ ಸೆಹ್ವಾಗ್ ಹೊಡೆತಗಳಿಗೆ ಹೋಲಿಕೆಯಾಗುತ್ತಿದೆ. ವೇಗದ ಬೌಲರ್‌ಗಳ ಎಸೆತವನ್ನು ಒಂದು ಹೆಜ್ಜೆ ಮುಂದಿಟ್ಟು ನಿರಾಯಾಸವಾಗಿ ಡ್ರೈವ್ ಮಾಡುವಾಗಲೂ, ಫುಲ್ ಲೆಂಗ್ತ್ ಎಸೆತಗಳನ್ನು ನಿಂತಲ್ಲಿಂದಲೇ ಬೌಂಡರಿಗೆ ಅಟ್ಟುವಾಗಲೂ, ಚೆಂಡು ಪುಟಿಯುವುದಕ್ಕೂ ಮೊದಲೇ ಮುಂದೆ ಬಂದು ನುಗ್ಗಿ ಲಾಫ್ಟ್ ಮಾಡಿ ಬೌಂಡರಿ ಬಾರಿಸುವಾಗಲೂ, ಲೆಗ್‌ಸ್ಟಂಪ್ ಮೇಲೆ ನುಗ್ಗಿಬರುವ ಚೆಂಡನ್ನು ಕಲಾತ್ಮಕವಾಗಿ ಫ್ಲಿಕ್ ಮಾಡುವಾಗಲೂ, ಸ್ಪಿನ್ನರ್‌ಗಳ ಎಸೆತವನ್ನು ಬ್ಯಾಕ್‌ಫೂಟ್‌ನಲ್ಲಿ ನಿಂತು ಕಟ್ ಮಾಡುವಾಗಲೂ, ಮಿಡಲ್ ಸ್ಟಂಪ್‌ನತ್ತ ತೂರಿಬರುವ ಚೆಂಡನ್ನು ಮೋಹಕ ಪಾದಚಲನೆಯ ಮೂಲಕ ಪಂಚ್ ಮಾಡುವಾಗಲೂ ಸೆಹ್ವಾಗ್ ಪ್ರತಿರೂಪವನ್ನು ಶೆಫಾಲಿ ಬ್ಯಾಟಿಂಗ್ ನಲ್ಲಿ ಕಾಣಬಹುದು. ಅಂತೂ ಭಾರತ ಮಹಿಳಾ ಕ್ರಿಕೆಟ್ ತಂಡದ ಭರವಸೆಯ ಆರಂಭಿಕ ಆಟಗಾರ್ತಿಯಾಗಿ ಸದ್ದು ಮಾಡುತ್ತಿರುವ ಶೆಫಾಲಿ ವರ್ಮ ಮಹಿಳಾ ಕ್ರಿಕೆಟ್ ಕ್ಷಿತಿಜದ ’ಹೊಸ ತಾರೆ ’ ಯಾಗಿ ಮಿನುಗುದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!