-6.1 C
New York
Saturday, January 22, 2022

Buy now

spot_img

ಹುಷಾರ್!! ಸ್ನೇಹಿತರ ಸೋಗಿನಲ್ಲಿ ಹಣ ಪೀಕುತ್ತಾರೆ!!

ಕಾಲ ಕೆಟ್ಟು ಕುಂತಿದೆ! ಸರ್ವವೂ ಡಿಜಿಟೆಲ್ ಆಗಿರುವ ಈ ಕಾಲದಲ್ಲಿ ನಾವು ಮೈಯೆಲ್ಲಾ ಕಣ್ಣಾಗಿರಬೇಕಿದೆ!. ಸ್ವಲ್ಪ ಯಾಮಾರಿದರೂ, ಸಮಯ ಕಾದು ಕುಳಿತಿರುವ ಕಳ್ಳರು ಮೋಸದ ಜಾಲ ಹೆಣೆದು, ಹಣ ಸುಲಿದು ಬಿಡುತ್ತಾರೆ!


ಹೌದು! ಈ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣದ ಅಗ್ರ ಪಂಕ್ತಿಯ ಫೇಸ್ಬುಕ್ ನಮ್ಮ ಬದುಕಿನಲ್ಲಿ ಬಹುದೊಡ್ಡ ಮಟ್ಟದಲ್ಲಿ ನಮ್ಮನ್ನು ಆಕರ್ಷಿಸಿ, ಆವರಿಸಿಕೊಂಡಿದೆ. ಯಾರ್ಯಾರೋ ಇನ್ಯಾರದ್ದೋ ಹೆಸರಲ್ಲಿ ನಕಲಿ ಖಾತೆ ತೆರೆದು ದುರ್ಬಳಕೆ ಮಾಡಿಕೊಂಡು ಸಭ್ಯಸ್ಥರ ಮಾನ ಹಾನಿಮಾಡುತ್ತಾ ಕಣ್ಣು ತಪ್ಪಿಸಿ ಕಳ್ಳಾಟವಾಡುತ್ತಿರುತ್ತಾರೆ.! ಒಂದಷ್ಷು ಕಳ್ಳರು ನಿಮ್ಮ ಹೆಸರಲ್ಲಿ ಹೆಣ್ಣು ಮಕ್ಕಳ ಜೊತೆ ಚಾಟು, ಚೆಲ್ಲಾಟ ಆಡುತ್ತಾರೆ.! ಕೆಲವರು ನಿಮ್ಮಹೆಸರಿನ ಸಿಂಪತಿ ಬಳಸಿ ಹಣ ಕೀಳುವ ದಂಧೆ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಹಣ ಕೇಳುವ ನಕಲಿ ಖಾತೆದಾರರೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಇಲ್ಲಿ ಇವರಿಂದ ಮೋಸ ಹೋಗುವವರಲ್ಲಿ ಹೆಚ್ಚಿನವರು ಸಣ್ಣ ಮೊತ್ತವೆಂದು ಸುಮ್ಮನಾಗುತ್ತಿರುವುದು ಕಳ್ಳರ ಪಾಲಿನ ಪ್ಲಸ್ ಪಾಯಿಂಟ್!!ಇರಲಿ, ಈಗ ಆ ಹಣ ಪೀಕುವ ಖದೀಮರ ವಿಷಯಕ್ಕೆ ಬರೋಣ. ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಸೆಂಟಿಮೆಂಟ್ ಅಸ್ತ್ರ ಪ್ರಯೋಗಿಸಿ ಹಣ ಕೀಳುವ ಮೋಸಗಾರರು, ಮೊದಲಿಗೆ ಬಹು ಮುಖ್ಯವಾಗಿ ಅವರು ಆಯ್ಕೆ ಮಾಡಿಕೊಂಡ ಬಕರಾಗಳ ಫೇಸ್ಬುಕ್ ಖಾತೆಯನ್ನು ನಕಲು ಮಾಡುತ್ತಾರೆ. ಅವರದೇ ಎಂಬಂತೆ ಯತಾವತ್ತು ವಿನ್ಯಾಸ ಮಾಡಿ, ಫೋಟೋ ಬಳಸಿ ಫೇಸ್ಬುಕ್ ಖಾತೆ ತೆರೆಯುತ್ತಾರೆ. ಮುಂದೆ ಖದೀಮರು ಅಸಲಿ ಖಾತೆದಾರನ ಫ್ರೆಂಡ್ ಲೀಸ್ಟ್ ನೋಡಿಕೊಂಡು, ಇವರು ತೆರೆದಿರುವ ನಕಲಿ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಹಿಂದೆ ಮುಂದೆ ನೋಡದೆ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿದವರನ್ನು ಟಾರ್ಗೆಟ್ ಮಾಡಿ, ಸ್ವಲ್ಪ ದಿನ ಖಾತೆಯ ಆಗ-ಹೋಗು ಗಮನಿಸಿ, ಸಮಯ ಕಾದು ಜಾಲ ಹಾಕುತ್ತಾರೆ! ಇಲ್ಲಿ ಇಂತವರ ಕಳ್ಳ ಕಾರ್ಯಾಚರಣೆ ಹೆಚ್ಚಾಗಿ ಮಧ್ಯೆ ರಾತ್ರಿಯ ಹೊತ್ತಲ್ಲಿ ನಡೆಯುತ್ತೆ. ತಮ್ಮ ನಕಲಿ ಖಾತೆಯ ಫ್ರೆಂಡ್ ಗಳಲ್ಲಿ ಆನ್ಲೈನ್ ಇದ್ದವರನ್ನೇ ಟಾರ್ಗೆಟ್ ಮಾಡಿ, ನಕಲಿ ಖಾತೆಯಿಂದ ಮೆಸೇಜ್ ಬಿಡುತ್ತಾರೆ. ರಿಪ್ಲೈ ಕೊಟ್ಟರೆ ಮುಗೀತು! ತಡಮಾಡದೆ ಬೆನ್ನುಬೆನ್ನಿಗೆ ಮೆಸೇಜುಗಳು ಮೆಸೆಂಜರ್ನಲ್ಲಿ ತುಂಬಿಕೊಳ್ಳುತ್ತದೆ! ತನ್ನ ಸಂಬಂಧಿಕರನ್ನು ಏಕಾ-ಏಕಿ ಹುಷಾರಿಲ್ಲದೆ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸುತ್ತಾರೆ.! ಪರ್ಸ್ ತರಲಿಲ್ಲ ಅಡ್ಮಿಷನ್ ಅದು-ಇದು ನೆಪ ಹೇಳಿ ಅರ್ಜೆಂಟಾಗಿ ಹಣ ಬೇಕಾಗಿದ್ದು ವಾಪಸ್ಸು ಕೊಡುವುದಿಗಿ ತಿಳಿಸಿ, ಅಕೌಂಟ್ ನಂಬರ್ ಕಳುಹಿಸಿ ಅಂಗಲಾಚುತ್ತಾರೆ. ಟೆನ್ಶನ್ ನಲ್ಲಿ ಮೊಬೈಲ್ ಮನೆಯಲ್ಲೇ ಬಿಟ್ಟು ಬಂದಿರುವುದಾಗಿ ನಂಬಿಸಿ, ಅಸಲಿಯವನಿಗೆ ಕರೆ ಮಾಡದಂತೆ ಕತೆಕಟ್ಟುತ್ತಾರೆ. ಇವರ ಈ ನವರಂಗಿ ಕತೆಗೆ ಮಾರು ಹೋಗಿ ಹಿಂದೆ-ಮುಂದೆ ಯೋಚಿಸದ ಕೆಲವರು, ಮೋಸಗಾರನ ಅರಿವಿಲ್ಲದೆ, ಸ್ನೇಹಿತನ ಕಷ್ಟಕ್ಕೆ ಆಗಬೇಕೆಂದು ಅವರು ಕೇಳಿದ ಹಣವನ್ನು ಅವರು ಹೇಳಿದ ಅಕೌಂಟಿಗೆ ಜಮಾ ಮಾಡುತ್ತಾರೆ. ಪಾಪ! ಬೆಳಿಗ್ಗೆಯೋ ಅಥವಾ ಸ್ನೇಹದ ಸಂಕೋಚದಲ್ಲಿ ಇನ್ಯಾವತ್ತೋ ಅಸಲಿಯವನಿಗೆ ಕರೆ ಮಾಡಿದಾಗಲೇ ಈ ನಕಲಿಗಳ ಅಸಲಿಯತ್ತು ಅರಿವಿಗೆ ಬರೋದು! ಅಷ್ಟು ಹೊತ್ತಿಗಾಗಲೇ ಹಣ ಪಡೆದ ಆಸಾಮಿ, ಅಕೌಂಟ್ ಬ್ಲಾಕ್ ಮಾಡಿ ಮುಂದಿನ ಬಕರಾಗೇ ಗಾಳ ಹಾಕುತ್ತಾ ಕಣ್ತಪ್ಪಿಸಿ ಕೊಂಡಿರುತ್ತಾನೆ. ನಂತರದಲ್ಲಿ ಇವರುಗಳ ಜಾಡು ಹಿಡಿಯೋದು ಅಸಾಧ್ಯದ ಮಾತು!! ಇಲ್ಲಿ ನಾವು ಕೊಟ್ಟಿರುವ ಆಸ್ಪತ್ರೆಯ ರೀಸನ್ ಏನಿದೆ, ಇದು ಮೋಸಗಾರರ ಒಂದು ನೆಪವಷ್ಟೆ; ಹೀಗೆ ಸಮಯಕ್ಕೆ ತಕ್ಕಂತೆ ಮುಂದಿರುವವನ ಮನ ಕರಗುವಂತಹ, ಹತ್ತು ಹಲವು ಕಾರಣ ಹೇಳಿಕೊಂಡು ತಂತ್ರ ಮಾಡುತ್ತಾರೆ.! ಪಾಪ ನಂಬುವ ಅಮಾಯಕರಿಂದ ಹಣ ದೋಚುತ್ತಾರೆ ಖದೀಮರು!! ಮುಂದೆ ಹರೋಹರ!!


ಇನ್ನು ಈ ಬಗ್ಗೆ ಸೈಬರ್ ಕ್ರೈಂ ಠಾಣೆಗಳಲ್ಲಿ ಬಂಡಲ್ಲುಗಟ್ಟಲೆ ಕೇಸುಗಳು ದಾಖಲಾಗುತ್ತಿವೆಯಾದರೂ, ಲಗಾಮಿಲ್ಲದ ಫೇಸ್ಬುಕ್ ಕಳ್ಳರು ಚಳ್ಳೇಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ.!! ಸಾವಿರ ಕಳ್ಳರ ಪೈಕಿ ಒಬ್ಬಿಬ್ಬರು ಸಿಕ್ಕದರೆ ಅದೇ ದೊಡ್ಡ ಸಾಧನೆ! ಮೋಸ ಹೋಗುವವರಲ್ಲಿ ಹೆಚ್ಚಿನವರು “ಕಳೆದುಕೊಂಡ ಹಣಕ್ಕಿಂತ ಪೊಲೀಸರು ಹೆಚ್ಚು ಹಣ, ಸಮಯ ತಿನ್ನುತ್ತಾರೆ” ಎಂದು ಹೆದರಿಕೊಂಡು, ಠಾಣೆಯ ಕಡೆ ಹೋಗೋದೇ ಇಲ್ಲ! ಹಣ ದೇವರ ಹುಂಡಿಗೆ ಹಾಕಿದೆ ಎಂದು ಕೈ ಹಿಸುಕಿಕೊಂಡು ಸುಮ್ಮನಾಗಿ ಬಿಡುತ್ತಾರೆ. ಅಸಲಿಗೆ ಈ ಫೇಸ್ಬುಕ್ ಖದೀಮರು ಅರ್ಜೆಂಟ್ ಅಂತ ಕೇಳೋದು ಐದರಿಂದ ಹತ್ತು ಸಾವಿರ ಮಾತ್ರ!. ಹಾಗಾಗಿ ಕಳೆದುಕೊಂಡದ್ದು ಸಣ್ಣ ಮೊತ್ತ ಎಂದು ಕೊಳ್ಳುವವರು ಸುಮ್ಮನಾಗುವುದರಿಂದ, ಆ ನಕಲಿತನದ ಸೋಗಲಾಡಿಗಳಿಗೆ ಇದು ವರವಾಗಿ ಪರಿಣಮಿಸಿದೆ. ಸದ್ಯ ಈ ದಂಧೆ ಫೇಸ್ಬುಕ್ ನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ! ಈಗಂತೂ ಲಾಕ್ಡೌನಿನ ಲಾಭ ಪಡೆಯುತ್ತಿರುವ ಐನಾತಿಗಳು, ಸ್ನೇಹಿತರ ಸೋಗಿನಲ್ಲಿ ಹಣ ಲಪಟಾಯಿಸುತ್ತಿದ್ದಾರೆ.! ಅರಿವಿಲ್ಲದ ಅಮಾಯಕರು ನಂಬಿ ನಾಮ ತಿಕ್ಕಿಸಿಕೊಳ್ಳುತ್ತಿದ್ದಾರೆ.!!!


ಹಾಗೆಯೇ ಹುಷಾರು.. ನಿಮಗೂ ರಿಕ್ವೆಸ್ಟ್ ಬಂದೀತು!! ಸೆಂಟಿಮೆಂಟ್‌ಗೆ ಒಳಗಾಗಿ, ಎಚ್ಚರ ತಪ್ಪಿ ಹಣ ಕಳೆದುಕೊಂಡೀರಿ ಹುಷಾರ್!!!
Any way Be Carefull..!


ನಾಗರಾಜ್ ಅರೆಹೊಳೆ
(ಚಲನಚಿತ್ರ ನಿರ್ದೇಶಕ & ಪತ್ರಕರ್ತ)

Related Articles

Stay Connected

21,961FansLike
3,126FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!