Sunday, September 8, 2024

ಗ್ರಾಮ ಪಂಚಾಯತ್ ಪ್ರತಿನಿಧಿಗಳನ್ನು ಕೊರೋನಾ ವಾರಿಯರ್ಸ್ ಆಗಿ ಪರಿಗಣಿಸುವಂತೆ ಪಂಚಾಯತ್ ರಾಜ್ ಒಕ್ಕೂಟದಿಂದ ಮುಖ್ಯಮಂತ್ರಿಗಳಿಗೆ ಮನವಿ


ಕುಂದಾಪುರ: ಕೋವಿಡ್-19 ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಟಾಸ್ಕ್‌ಪೋರ್ಸ್ ಸಮಿತಿಯಲ್ಲಿದ್ದುಕೊಂಡು ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಗ್ರಾಮ ಪಂಚಾಯಿತಿ ಸದಸ್ಯರನ್ನು ಕೊರೋನಾ ವಾರಿಯರ್ಸ್ ಆಗಿ ಪರಿಗಣಿಸುವಂತೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.


ಕೋವಿಡ್ -19 ಟಾಸ್ಕ್‌ಪೋರ್ಸಗೆ ಹೆಚ್ಚು ಬಲವನ್ನು ನೀಡಿ ಹಣಕಾಸಿನ ನೆರವಿನೊಂದಿಗೆ ಗ್ರಾಮ ಪಂಚಾಯತ್‌ನ ಕೆಲವೊಂದು ಅನುದಾನವನ್ನು ಬಳಸಿಕೊಳ್ಳಲು ಸಹ ಅವಕಾಶ ಮಾಡಿಕೊಟ್ಟಿದೆ. ಆರೋಗ್ಯ ಇಲಾಖೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡುವ ಅವಕಾಶ ನೀಡಿದೆ. ಗ್ರಾಮಪಂಚಾಯತ್ ಸಹ ಇದನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ.


ಹಲವು ಇಲಾಖೆಗಳನ್ನು ಸರ್ಕಾರ ಈಗಾಗಲೇ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಸೌಲಭ್ಯ ಹಾಗೂ ಭದ್ರತೆಯನ್ನು ಒದಗಿಸಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯನ್ನು ಇತ್ತೀಚಿಗಷ್ಟೇ ಗ್ರಾಮ ಪಂಚಾಯತ್ ನೌಕರರನ್ನು ಕೊರೋನಾ ವಾರಿಯರ್ಸ್ ಆಗಿ ಪರಿಗಣಿಸಿದೆ. ಆದರೆ ವಾಸ್ತವವಾಗಿ ಯಾವುದನ್ನಾದರೂ ಸಾಧಿಸುವ, ನಿಯಂತ್ರಿಸುವ, ಕಾರ್ಯಾಚರಿಸುವ ಸಾಮರ್ಥ್ಯವಿರುವುದು ಸ್ಥಳೀಯ ಸರಕಾರಗಳಿಗೆ ಮಾತ್ರ. ಅದೇ ಸ್ಥಳೀಯ ಸರಕಾರದ ಪ್ರತಿನಿಧಿಗಳಾದ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸದೇ ಇರುವುದು ವಿಷಾದಕರ ಸಂಗತಿಯಾಗಿದೆ.


ರಾಜ್ಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಜೀವದ ಹಂಗು ತೋರೆದು ಸೇವೆ ನೀಡುತ್ತಿದ್ದಾರೆ. ಕನಿಷ್ಟ ಶೇ. 25ರಷ್ಟು ಗ್ರಾಮ ಪಂಚಾಯತ್ ಸದಸ್ಯರಾದರೂ ಈ ಕಾರ್ಯದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ತನ್ಮೂಲಕ ಅನೇಕರಿಗೆ ಕೋವಿಡ್ ಸೋಂಕು ಸಹ ತಗುಲಿದೆ. ರಾಜ್ಯದಲ್ಲಿ ಅನೇಕ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಇದರಿಂದಾಗಿ ಪ್ರಾಣ ತೆತ್ತಿದ್ದಾರೆ. ಆದರೂ ಅವರಿಗಾಗಲಿ ಅವರ ಕುಟುಂಬಕ್ಕಾಗಲೀ ಯಾವುದೇ ರಕ್ಷಣೆ ಭದ್ರತೆಗಳಿಲ್ಲ.


ಕೆಲಸ ಮಾಡಲು ನಾವು ಬದ್ದರಿದ್ದೇವೆ. ಆದರೆ ನಮಗೆ ರಕ್ಷಣೆ ನೀಡುವುದು ಸರಕಾರದ ಜವಾಬ್ದಾರಿ. ಮುಖ್ಯಮಂತ್ರಿಗಳು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ವಾಸ್ತವತೆಯನ್ನು ಅರಿತು ಪಂಚಾಯತ್ ಸದಸ್ಯರನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಅವರ ಚಿಕಿತ್ಸಾ ವೆಚ್ಚವನ್ನು ಭರಿಸುವುದರ ಜೊತೆಗೆ ಕೊರೋನಾದಿಂದ ಮೃತಪಟ್ಟ ಸಂದರ್ಭದಲ್ಲಿ ಸರಕಾರಿ ನೌಕರರಿಗೆ ನೀಡುವಂತೆ ಪರಿಹಾರ ಮೊತ್ತ ನೀಡುವ ಮೂಲಕ ಅವರಿಗೂ ಹಾಗೂ ಅವರ ಕುಟುಂಬಕ್ಕೂ ಭದ್ರತೆ ನೀಡಬೇಕೆಂದು ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರ ಪರವಾಗಿ ಉಡುಪಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಉದಯ ಕುಮಾರ್ ಶೆಟ್ಟಿ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!