Sunday, September 8, 2024

ಕೊರೋನಾ ಸಂಕಷ್ಟದಲ್ಲಿ ಧೀರ ಸೇನಾನಿ ಮಾತೃಹೃದಯಿ ಶ್ರುತಿ ಪೂಜಾರಿ ತುಂಬ್ರಿ


“ಎಸ್.ಒ.ಎಸ್.ಟಾಸ್ಕ್ ಫೋರ್ಸ್ ಬೆಂಗಳೂರು ” ಮೂಲಕ ಸದ್ದಿಲ್ಲದೆ ಸೇವೆ ನೀಡುತ್ತಿರುವ ಯುವ ತಂಡ

“ಕಣ್ಣೀರು ಒರೆಸುವ ಕೈಗಳು ಯಾವತ್ತೂ ಜಗತ್ತಿನ ಮೇಲ್ಪಂಕ್ತಿಯಲ್ಲಿ ಅಭಿಷಕ್ತ ದೊರೆಯಾಗಿ ಕಾಣಸಿಗುತ್ತಾರೆ” ಎಂಬ ಇಂಗ್ಲೀಷ್ ವಾಣಿಯು ಜಗಜನಿತವಾಗಿದೆ.
ಜಗತ್ತಿನ ಪ್ರಾರಂಭ ಮತ್ತು ಅಂತ್ಯ ನಾವು ಯಾರು ಊಹಿಸಲಾಗದ ಮತ್ತು ಕಲ್ಪನೆಗೆ ನಿಲುಕದ ವ್ಯುಹಾತ್ಮಕ ಪ್ರಕ್ರಿಯೆ..! ಇದರ ನಡುವೆ ಒಂದಿಷ್ಟು ಬದುಕುವ ಹಕ್ಕನ್ನು ನಮಗೆ ಮೇಲೊಬ್ಬ ನೀಡಿದ್ದಾನೆ..!


ಕೊರೋನ ಸಂಕಷ್ಟದ ಸಮಯದಲ್ಲಿ ಅದೆಷ್ಟೋ ವ್ಯಕ್ತಿಗಳು ಬಡತನದ ಬೇಗೆಯಲ್ಲಿ ಬಳಲುತ್ತ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.ಅದೆಷ್ಟೋ ಜೀವಗಳು ಕೊರೋನಕ್ಕೆ ತುತ್ತಾಗಿ ಆಕ್ಸಿಜನ್, ಬೆಡ್ ಸಿಗದೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಈ ದೃಶ್ಯಗಳನ್ನು ಕಂಡು, ಮರುಗಿ ಈ ಸಮಾಜಕ್ಕೆ ತನ್ನಿಂದ ಅಳಿಲು ಸೇವೆಯಾದರೂ ಮಾಡಬೇಕೆಂಬ ಉದ್ದೇಶದಿಂದ, ತನ್ನದೇ ಮಿತ್ರಬಳಗವನ್ನು ಕಟ್ಟಿಕೊಂಡು ೫೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯಹಸ್ತ ನೀಡಿದ ದಿಟ್ಟ ಹುಡುಗಿ ಶ್ರುತಿ ಪೂಜಾರಿ.
“ಎಸ್.ಒ.ಎಸ್.ಟಾಸ್ಕ್ ಫೋರ್ಸ್ ಬೆಂಗಳೂರು ” ತಂಡದ ಮೂಲಕ ಇಡೀ ರಾಷ್ಟಕ್ಕೆ ಮಾದರಿಯಾಗಿ ನಿಂತ ಹುಡುಗಿಯೇ “ಶ್ರುತಿ ಪೂಜಾರಿ .”


ಪ್ರಸ್ತುತ ಬೆಂಗಳೂರಿನಲ್ಲಿ ಪಿ.ಆರ್.ಮ್ಯಾನೇಜರ್ ಆಗಿ ದುಡಿಯುತ್ತಿರುವ ಶ್ರುತಿ ತುಂಬ್ರಿಯವರಿಗೆ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಬಡವರ ಕಣ್ಣೀರು ಒರೆಸುವ ಪುಟ್ಟ ಕೈಗಳು ತನ್ನದಾಗಬೇಕೆಂಬ ಪಣ ತೊಟ್ಟು ಗಿರೀಶ್ ಆಳ್ವ ರವರ ಪ್ರೇರಣೆಯಂತೆ, 2020ರ ಕೋವಿಡ್ ಸಮಯದಲ್ಲಿ “ಎಸ್.ಒ.ಎಸ್.ಕೋರೋನ ” ಎಂಬ ಸ್ವಯಂಸೇವಕ ಸಂಘದೊಂದಿಗೆ ಸೇರಿ ಸಾವಿರಾರು ಜನರಿಗೆ ಅಗತ್ಯವಸ್ತುಗಳ ಪೂರೈಕೆ ಮಾಡಿರುತ್ತಾರೆ.


ಈ ವರ್ಷ ತಾನೇ ಖುದ್ದಾಗಿ ನಿಂತು ತನ್ನೆಲ್ಲಾ ಗೆಳೆಯರನ್ನು, ಸಹಾಯಹಸ್ತ ನೀಡುವ ಕೈಗಳನ್ನು ಜೊತೆ ಸೇರಿಸಿ ಒಂದು ವಾಟ್ಸಾಪ್ಪ್ ಸಂಘ ರಚಿಸಿರುತ್ತಾರೆ. ಆ ತಂಡಕ್ಕೆ ” ಎಸ್.ಒ.ಎಸ್. ಟಾಸ್ಕ್ ಫೋರ್ಸ್ ಬೆಂಗಳೂರು ” ಎಂದು ಹೆಸರಿಟ್ಟು ತನ್ನ ಗೆಳೆಯರಾದ ಶಿಶಿರ್, ದೀಪಕ್ ಜೈನ್, ರಕ್ಷಿತ್, ಚಿನ್ಮಯ್, ಗಿರೀಶ್ ಆಳ್ವ,ಪೂರ್ಣ, ಗಗನ್, ಶಾಲಿನಿ, ತಿಲಕ್ ಹೀಗೆ ಹಲವಾರು ಜನರ ಬೆಂಬಲದೊಂದಿಗೆ ಸುಮಾರು ೫೫೦ಕ್ಕೂ ಹೆಚ್ಚು ಕೊರೋನ ಕೇಸ್ ಗಳನ್ನು ಎದುರಿಸಿ ೧೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಸಾಂತ್ವನ ತುಂಬುತ್ತ ಅವರ ಪಾಲಿಗೆ ಮಾತೃಹೃದಯಿಯಾಗಿದ್ದಾರೆ.


ಕೊರೋನದಿಂದ ತತ್ತರಿಸಿದ್ದ ವ್ಯಕ್ತಿಗಳಿಗೆ ಅಗತ್ಯ ಸಮಯದಲ್ಲಿ ಬೆಡ್, ಆಕ್ಸಿಜನ್, ಪ್ಲಾಸ್ಮಾ, ರಕ್ತ, ದಿನಸಿ ಸಾಮಗ್ರಿಗಳ ಪೂರೈಕೆ ಹೀಗೆ ಅನೇಕ ಬೇಡಿಕೆಗಳನ್ನು ಪೂರೈಸುವ ಕಾರ್ಯ ಈ ತಂಡ ಮಾಡುತ್ತಿದೆ. ಪ್ರತಿದಿನ ರಾತ್ರಿ ಬರುವ ಕೇಸಸ್ ಗಳನ್ನು ಎದುರಿಸುವ ಕಾರ್ಯದಲ್ಲೇ ತೊಡಗುವ ಶ್ರುತಿ ಮಲಗುವುದು ರಾತ್ರಿ ೩ಗಂಟೆಯ ನಂತರವಷ್ಟೇ.
ಶ್ರುತಿ ತಂಡ ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗದೆ ಇಡೀ ಭಾರತದ ಉದ್ದಗಲಕ್ಕೆ ವ್ಯಾಪಿಸಿದೆ. “ಇಷ್ಟೆಲ್ಲಾ ಕಾರ್ಯಗಳು ನನ್ನಿಂದ ಒಬ್ಬಳಿಂದ ಸಾಧ್ಯವಾಗಿಲ್ಲ. ನನ್ನವರೆಲ್ಲರ ಬೆಂಬಲ ಸಹಕಾರದಿಂದಲೇ ಅವರೊಳಗೊಂದಾಗಿ ನಾನೂ ದುಡಿಯುತ್ತಿರುವೆ.” ಎಂಬುದನ್ನು ಮನಪೂರ್ವಕವಾಗಿ ಹೇಳುತ್ತಾರೆ.


ಹಿರಿಯ ಯಕ್ಷಗಾನ ಕಲಾವಿದರಾದ ತುಂಬ್ರಿ ಭಾಸ್ಕರ ಬಿಲ್ಲವ ಹಾಗೂ ಜಯಶ್ರೀ ಅವರ ಮಗಳಾಗಿ ಜನಿಸಿದ ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಳೂರು ಗ್ರಾಮದವರು. ಪ್ರಸ್ತುತ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ನಿವಾಸಿ.


ತನ್ನ ಪ್ರಾಥಮಿಕ ಶಿಕ್ಷಣವನ್ನು ಮಾರಲಗೋಡುವಿನಲ್ಲಿ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಶ್ರೀ ಮೂಕಾಂಬಿಕಾ ಇನ್ಸ್ಟಿಟ್ಯೂಷನ್ ನಲ್ಲಿ ಮುಗಿಸಿದರು. ಹಾಗೆಯೇ ಕೋಟೇಶ್ವರದಲ್ಲಿ ಬಿ.ಬಿ.ಎಮ್. ಪದವಿಯನ್ನು ಪಡೆದರು.ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಬಹಳ ಆಸಕ್ತಿಯಿದ್ದ ಶ್ರುತಿಗೆ ಕಬ್ಬಡ್ಡಿ ಇಷ್ಟದ ಆಟ. ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಲು ಹಾಗೆಯೇ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡಿದ್ದು ಅವರ ಗುರುಗಳಾದ ಆಂಜನೇಯಪ್ಪ ಎಂದು ಪ್ರೀತಿಯಿಂದ ಹೇಳಿಕೊಳ್ಳುತ್ತಾರೆ ಶ್ರುತಿ.
ಗುರುಗಳಾದ ಸಚಿನ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನೆಟ್‌ಬಾಲ್ ಕಲಿತು 10ನೇ ತರಗತಿಯಲ್ಲಿ “ನ್ಯಾಷನಲ್ ಸ್ಕೂಲ್ ಆಫ್ ಗೇಮ್ಸ್ ” ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ,ರಾಷ್ಟ್ರ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಹೆಗ್ಗಳಿಕೆ ಇವರದ್ದು.


ಹಾಗೆಯೇ ಪ್ರಥಮ ಪಿ.ಯು.ಸಿ.ಯಲ್ಲಿ ಗುರುಗಳಾದ ಸುಕೇಶ್ ಶೆಟ್ಟಿಯವರ ಮಾರ್ಗದರ್ಶನದೊಂದಿಗೆ “ಅಮೆಚ್ಚೂರ್ ನೆಟ್ ಬಾಲ್ ” ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ತಂದು ಕೊಟ್ಟ ಹೆಮ್ಮೆಯ ಕ್ರೀಡಾಪಟು ಶ್ರುತಿ ತುಂಬ್ರಿ.
ಇವರ ತಂದೆ “ತುಂಬ್ರಿ ಭಾಸ್ಕರ್ ಬಿಲ್ಲವ ” ಅವರು ಸಾಲಿಗ್ರಾಮ ಮೇಳದಲ್ಲಿ ಬಡಗುತಿಟ್ಟು ಯಕ್ಷಗಾನ ಕಲಾವಿದರಾಗಿ ಚಿರಪರಿಚಿತರು. ಶ್ರುತಿ ಇಂದು ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸಿನ ಚಿತ್ತಾರವಾಗಲು ತಂದೆಯ ಸಾಧನೆಗಳೇ ರಂಗನ್ನು ಹಚ್ಚಿವೆ.


ಕಾಲೇಜಿನ ಸಮಯದಲ್ಲಿ “ಸ್ವಚ್ಚಭಾರತ ಅಭಿಯಾನ “ದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಉತ್ತರ-ಕರ್ನಾಟಕದಲ್ಲಿ ನೆರೆಯ ಸಮಯದಲ್ಲಿ 4 ದಿನಗಳ ಕಾಲ ಅಲ್ಲೇ ಇದ್ದು ನಿರಾಶ್ರಿತರ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಪೂರೈಸುವುದರ ಜೊತೆಗೆ ನೆರೆಯಿಂದ ತತ್ತರಿಸಿದ ಶಾಲೆಗಳಲ್ಲಿ ತುಂಬಿಕೊಂಡಿದ್ದ ಕೆಸರು ಮಣ್ಣನ್ನು ತೆರವು ಮಾಡುವ ಕೆಲಸ ಮಾಡಿದ್ದಾರೆ.


ಸ್ವಚ್ಚ ಭಾರತ್, ಉತ್ತರ ಕರ್ನಾಟಕದಲ್ಲಿ ತಲೆದೋರಿದ ನೆರೆ ಮತ್ತು ಕಳೆದ ಎರಡು ವರುಷದಿಂದ ಹಬ್ಬಿದ ಮಹಾಮಾರಿಯ ಸಂದರ್ಭದಲ್ಲಿ ಮಾಡಿದ ಕಾರ್ಯಗಳಿಗೆ ಈಕೆಗೆ ನಾವು ವಂದನೆ ಸಲ್ಲಿಸಲೇ ಬೇಕು..!
-ಚೈತ್ರ ಕಬ್ಬಿನಾಲೆ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!