Thursday, November 21, 2024

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಯ ಅಧಿಕಾರ ಬಳಸಿ ಗುಂಡಿ ಮುಚ್ಚಿದ ಮರವಂತೆ ಗ್ರಾಮ ಪಂಚಾಯಿತಿ


ಬೈಂದೂರು : ಮರವಂತೆಯ ಶಿವರಾಮ ಕಾರಂತ ಮಾರ್ಗದಲ್ಲಿ ಖಾಸಗಿ ಸ್ಥಳದಲ್ಲಿ ಸಾರ್ವಜನಿಕರಿಗೆ ಅಪಾಯಕಾರಿ ಮತ್ತು ಅನಾರೋಗ್ಯಕರ ಆಗಿದ್ದ ಗುಂಡಿಯನ್ನು ಗ್ರಾಮ ಪಂಚಾಯಿತಿ ಶನಿವಾರ ಮಣ್ಣು ಸುರಿದು ಮುಚ್ಚಿದೆ.


ಮಾರ್ಗದಿಂದ ಏನೂ ಅಂತರ ಬಿಡದೆ ಗುಂಡಿತೋಡಿ ಅದರಲ್ಲಿ ಸೆಗಣಿ ತುಂಬಲಾಗುತ್ತಿತ್ತು. ಅದು ಭರ್ತಿಯಾಗಿ ರಸ್ತೆಯ ಮೇಲೂ ಹರಿಯುತ್ತಿತ್ತು. ಮಳೆಗಾಲದಲ್ಲಿ ಅದರಲ್ಲಿ ಶೇಖರಣೆ ಆಗುವ ನೀರು ಆ ಭಾಗದ ರಸ್ತೆಯನ್ನು ಮುಳುಗಿಸುತ್ತಿತ್ತು. ಈ ಗುಂಡಿ ಅಸಹ್ಯ ಹುಟ್ಟಿಸುತ್ತಿದ್ದುದಲ್ಲದೆ, ಅನಾರೋಗ್ಯಕರವಾಗಿತ್ತು. ರಸ್ತೆಯಲ್ಲಿ ಚಲಿಸುವ ವೃದ್ಧರಿಗೆ ಮತ್ತು ಮಕ್ಕಳಿಕೆ ತೀರ ಅಪಾಯಕಾರಿಯಾಗಿತ್ತು. ಇದನ್ನು ಮುಚ್ಚಿಸಬೇಕು ಎಂದು ಸಾರ್ವಜನಿಕರು ಲಿಖಿತ ಮನವಿ ನೀಡಿದ್ದರು. ಮಕ್ಕಳ ಗ್ರಾಮಸಭೆಯಲ್ಲಿಯೂ ಅದೇ ಒತ್ತಾಯ ಮಾಡಲಾಗಿತ್ತು. ಅದನ್ನು ಅನುಸರಿಸಿ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ದೂರಿನ ವಿಚಾರಗಳು ವಾಸ್ತವ ಎಂದು ಆಡಳಿತಾಧಿಕಾರಿ ಜ್ಯೋತಿ ಬೈಂದೂರು ಅವರಿಗೆ ವರದಿ ನೀಡಿದ್ದರು. ಅವರೂ ಸ್ಥಳಕ್ಕೆ ಬಂದು ಸತ್ಯಸ್ಥಿತಿಯನ್ನು ಮನಗಂಡು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಯ ೭೫ನೆ ಪ್ರಕರಣದಿಂದ ಲಭ್ಯವಾದ ಅಧಿಕಾರ ಬಳಸಿ, ಗುಂಡಿ ಮುಚ್ಚಬೇಕು, ತಪ್ಪಿದರೆ ಗ್ರಾಮ ಪಂಚಾಯಿತಿಯೇ ಅದನ್ನು ಮುಚ್ಚಿ ಅದರ ವೆಚ್ಚವನ್ನು ತೆರಿಗೆ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡುವುದು ಎಂದು ಸ್ಥಳದ ಮಾಲೀಕರಿಗೆ ಆದೇಶ ನೀಡಿದ್ದರು. ಅವರು ಇದಕ್ಕೆ ಸ್ಪಂದಿಸದ ಕಾರಣ ಅಂತಿಮವಾಗಿ ಗ್ರಾಮ ಪಂಚಾಯಿತಿಯೇ ಮಾಲೀಕರ ಪ್ರತಿರೋಧದ ನಡುವೆ ಪೊಲೀಸ್ ರಕ್ಷಣೆಯಲ್ಲಿ ಅದನ್ನು ಮುಚ್ಚಿ, ಸಾರ್ವಜನಿಕರಿಗೆ ಆಗುತ್ತಿದ್ದ ಅಪಾಯ ಮತ್ತು ಕಿರಿಕಿರಿಯನ್ನು ದೂರಮಾಡಿದೆ.


ಕಾರ್ಯಾಚರಣೆಯಲ್ಲಿ ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್, ಕಾರ್ಯದರ್ಶಿ ದಿನೇಶ ಶೇರುಗಾರ್, ತೆರಿಗೆ ಸಂಗ್ರಾಹಕ ಶೇಖರ ಮರವಂತೆ, ಸಿಬ್ಬಂದಿ ಪ್ರಭಾಕರ ನೀರೋಣಿ, ನಿತಿನ್, ಪೊಲೀಸ್ ಸಿಬ್ಬಂದಿ ಚಂದ್ರ ಭಾಗವಹಿಸಿದ್ದರು.

ಮರವಂತೆ ಗ್ರಾಮ ಪಂಚಾಯಿತಿ ಹಿಂದೊಮ್ಮೆ, ನೆರೆಯವರಿಗೆ ಅಪಾಯಕಾರಿಯಾಗಿದ್ದ ಮರವೊಂದನ್ನು ಕಾಯಿದೆಯ ಇದೇ ಪ್ರಕರಣ ಬಳಸಿ, ನ್ಯಾಯಾಲಯದ ವರೆಗೂ ಹೋಗಿ ಕಡಿಸಿ, ಅಪಾಯ ದೂರಮಾಡಿ ರಾಜ್ಯ ಪಂಚಾಯತ್ ರಾಜ್ ವಲಯದ ಗಮನ ಸೆಳೆದಿತ್ತು.

” ಗ್ರಾಮ ಪಂಚಾಯಿತಿಗೆ ಖಾಸಗಿ ಜಮೀನಿನಲ್ಲಿರುವ ಅಪಾಯಕಾರಿ ಕಟ್ಟಡ, ಮರ ತೆಗೆಸುವ, ಗುಂಡಿಗಳನ್ನು ಮುಚ್ಚಿಸುವ ಅಧಿಕಾರ ಇದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಅದನ್ನು ಜಾರಿಗೊಳಿಬೇಕಾಗುತ್ತದೆ” -ರಿಯಾಜ್ ಅಹಮದ್, ಅಭಿವೃದ್ಧಿ ಅಧಿಕಾರಿ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!